Youth Congress ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ.
ಯೂತ್ ಕಾಂಗ್ರೆಸ್ ಚುನಾವಣಾ ವ್ಯವಸ್ಥೆಯೇ ಸರಿ ಇಲ್ಲ
ಯೂತ್ ಕಾಂಗ್ರೆಸ್ ಪದಾಧಿಕಾರಿಗಳಾಗುತ್ತಿರುವ ಮೋದಿ ಪರಿವಾರದ ಯುವಕರು
ಕಾಂಗ್ರೆಸ್ ಪಕ್ಷದೊಳಗೆ ಸಂಘ ಪರಿವಾರದವರು ನುಸುಳುವುದು ಹೊಸತೇನು ಅಲ್ಲ
ರಮೇಶ್ ಎಸ್ ಪೆರ್ಲ
ಮಂಗಳೂರು, ಆಗಸ್ಟ್ 23- (www.kannadadhvani.com ) ಕರ್ನಾಟಕ ರಾಜ್ಯದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಸಂಘಟನೆ ದುರ್ಬಲವಾಗಿದ್ದು, ಚುನಾವಣೆಯಲ್ಲಿ ಗೆಲ್ಲಲಾಗದೆ ಭ್ರಮನಿರಸನ ಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ನಡೆಯುತ್ತಿದೆ. ಯುವ ಕಾಂಗ್ರೆಸ್ ಘಟಕದ ಸಂಘಟನೆ ಹೇಗೆ ಆಗುತ್ತಿದೆ ಅಂದರೆ 18ರಿಂದ 35ರ ಹರೆಯದವರು ಯುವ ಕಾಂಗ್ರೆಸ್ ಸದಸ್ಯರಾಗಿ ಯಾವುದೇ ಸೈದ್ಧಾಂತಿಕ ತರಬೇತಿ, ನಾಯಕತ್ವ ತರಬೇತಿ, ಸಂವಹನ ತರಬೇತಿ ಇಲ್ಲದೆ ನೇರವಾಗಿ ಪದಾಧಿಕಾರಿಯಾಗಬಹುದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಪದಾಧಿಕಾರಿಗಳ ಸ್ಥಾನಕ್ಕೆ ಸ್ಪರ್ಧಿಗಳು ನಾಮಪತ್ರ ಸಲ್ಲಿಸುತ್ತಿದ್ದು, ಹೇಳಿ ಕೇಳಿ ಹಿಂದೂತ್ವದ ಪ್ರಯೋಗ ಶಾಲೆ ಎಂದು ಕರೆಯಲಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿ ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದವರ ಹಿನ್ನೆಲೆ ಬಗ್ಗೆ ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.
Youth Congress ಆಯಕಟ್ಟಿನ ಜಾಗದೊಳಗೆ ಸಂಘ ಪರಿವಾರ
ಕಾಂಗ್ರೆಸ್ ಪಕ್ಷದ ಆಯಕಟ್ಟಿನ ಜಾಗದೊಳಗೆ ಸಂಘ ಪರಿವಾರದವರು ನುಸುಳುವುದು ಹೊಸತೇನು ಅಲ್ಲ. ಕಾಂಗ್ರೆಸ್ ಪಕ್ಷದ ಆಯಕಟ್ಟಿನ ಜಾಗದಲ್ಲಿ ಮೋದಿ ಪರಿವಾರ ಅಥವ ನಮೋ ಬ್ರಿಗೇಡ್ ಜನ ಇದ್ದಾರೆ ಎಂಬುದನ್ನು ಇಂದಿರಾ ಭವನದ ಗೋಡೆಗಳು ಹೇಳುತ್ತವೆ.
ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಚುನಾವಣೆಗಳಲ್ಲಿ ಸೋಲುತ್ತಲೇ ಬಂದಿದೆ. ಕೇವಲ ಲೋಕಸಭಾ ಚುನಾವಣೆಯಲ್ಲಿ ಮಾತ್ರವಲ್ಲ ಗ್ರಾಮ ಪಂಚಾಯತು ಚುನಾವಣೆಗಳಲ್ಲಿ ಕೂಡ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಕಳೆದ ಲೋಕಸಭಾ ಚುನಾವಣೆಯ ಸೋಲಿನ ಪರಾಮರ್ಶೆ ಈಗಲೂ ನಡೆಯುತ್ತಿದೆ. ಮುಂದಿನ ಲೋಕಸಭಾ ಚುನಾವಣೆಗೆ ತನಕವೂ ನಡೆಯಬಹುದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಎಲ್ಲ ಅವಕಾಶ ಇತ್ತು. ದೇಶದಲ್ಲೇ ಬದಲಾವಣೆಯ ಗಾಳಿ ಬೀಸಿತ್ತು, ಪ್ರಧಾನಿ ಮೋದಿ ವಿರುದ್ಧ ವಾದ ಅಭಿಪ್ರಾಯವಿತ್ತು. ಅದಕ್ಕು ಹೆಚ್ಚಾಗಿ ಪರಿವಾರದ ಸಂಘಟನೆಗಳು ಚುನಾವಣೆಯಲ್ಲಿ ಸಕ್ರಿಯರಾಗಿರಲಿಲ್ಲ. ಗುಂಪುಗಾರಿಕೆ ಇತ್ತು. ಇದ್ಯಾವುದರ ಲಾಭವನ್ನು ಪಡೆಯಲು ಕಾಂಗ್ರೆಸ್ ವಿಫಲವಾಗುವುದರಲ್ಲಿ ನಾಯಕತ್ವದ ಹೊಣೆ ಎಂಬ ಆಪಾದನೆಗಳು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು. ಅಂದು ಮಿಥುನ್ ರೈಯನ್ನು ಸೋಲಿಸಿದ ಮುಖಂಡರೇ ಇಂದು ಪದ್ಮರಾಜ್ ಪೂಜಾರಿಗೂ ಕೈಕೊಟ್ಟರು ಎಂಬುದು ವಾಸ್ತವ.
ಯೂತ್ ಕಾಂಗ್ರೆಸ್ ಸಂಘಟಿಸುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವ ಹೊಣೆಗಾರಿಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರಿಗಿದೆ. ಹುದ್ದೆಯ ವರ್ಕಿಂಗ್ ಪದವನ್ನು ತೆಗೆದರೆ ಅವರು ಕೆಪಿಸಿ ಅಧ್ಯಕ್ಷರೇ ಆಗಿರುತ್ತಾರೆ. ಮಂಜುನಾಥ ಭಂಡಾರಿ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಕಾಂಗ್ರೆಸ್ ಪಕ್ಷದಲ್ಲಿ ಇದೆ ಏಕೆಂದರೆ ಅದಕ್ಕೆ ಎರಡು ಕಾರಣಗಳಿವೆ.
ಮೊದಲನೇಯದಾಗಿ ಜಿಲ್ಲಾ ಕಾಂಗ್ರೆಸ್ ಧ್ಯಕ್ಷರು ಯಾವುದೇ ಕ್ಷಣದಲ್ಲಿ ತನ್ನ ಹುದ್ದೆ ಬಿಟ್ಟು ಕೊಡುವುದಕ್ಕೆ ರೆಡಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಹೆಚ್ಚಿನ ಗಮನ ಹರಿಸುವ ಸಾಧ್ಯತೆಗಳಿಲ್ಲ. ಗ್ರೂಪಿಸಂಗೆ ಬಲಿಯಾಗಿರುವ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಬಿ. ರಮಾನಾಥ ರೈ ಅವರಿಗೆ ಯುವ ಕಾಂಗ್ರೆಸ್ ಸಂಘಟನೆಗೆ ಕೈ ಹಾಕು ಸಾಧ್ಯತೆಗಳಿಲ್ಲ.
ಎರಡನೇಯದಾಗಿ, ಮಂಜುನಾಥ ಭಂಡಾರಿ ಯವರ ಹೊಣಗಾರಿಕೆ ಹೆಚ್ಚಿದೆ ಅದೇ ರೀತಿ ನಿರೀಕ್ಷೆ ಕೂಡ ಜಾಸ್ತಿ ಇದೆ ಏಕೆಂದರೆ ಇದೇ ಜಿಲ್ಲೆಯಲ್ಲಿ ಯೂತ್ ಕಾಂಗ್ರೆಸ್ ನಿಂತ ನೀರಾಗಿದ್ದಾಗ ಸಕ್ರಿಯ ರಾಜಕಾರಣದಲ್ಲಿಲ್ಲದ ಮಂಜುನಾಥ ಭಂಡಾರಿಯವರ ಒಂದು ಸಣ್ಣ ಕೆಲಸ ಕರಾವಳಿ ಕಾಂಗ್ರೆಸ್ಸಿನಲ್ಲಿ ಸಂಚಲನ ಮೂಡಿಸಿತ್ತು.
Youth Congress ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಳ್ಳಿಗೆ ತಾರನಾಥ ಶೆಟ್ಟಿ
ಉಡುಪಿ ದಕ್ಷಿಣ ಕನ್ನಡ ಅವಿಭಜಿತ ಜಿಲ್ಲೆಯಾಗಿದ್ದಾಗ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಳ್ಳಿಗೆ ತಾರನಾಥ ಶೆಟ್ಟಿ ಅವರು ಹಲವು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಮುಂದುವರಿದಿದ್ದರು. ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಅತ್ಯಂತ ಆಪ್ತರಾಗಿದ್ದ ಕಾರಣಕ್ಕೆ ಕಳ್ಳಿಗೆ ತಾರನಾಥ ಶೆಟ್ಟಿ ಅವರನ್ನು ಹುದ್ದೆಯಿಂದ ಕದಲಿಸುವ ದಿಟ್ಟತನ ಯಾರಿಗೂ ಇರಲಿಲ್ಲ. ಆಗ ರಮಾನಾಥ ರೈ, ವಿನಯಕುಮಾರ ಸೊರಕೆ, ಬ್ಲೇಸಿಯಸ್ ಡಿ. ಸೋಜ, ಶುಂಟಿಕೊಪ್ಪ ಇಬ್ರಾಹಿಂ, ವಿಜಯಕುಮಾರ್ ಶೆಟ್ಟಿ ಮುಂತಾದ ಮುಖಂಡರು ತಮ್ಮದೇ ಆದ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗುವ ಅಭ್ಯರ್ಥಿಗಳನ್ನು ರೆಡಿ ಮಾಡಿದ್ದರು ಬದಲಾವಣೆಗೆ ಧೈರ್ಯ ಮಾಡಿರಿಲಿಲ್ಲ.
ಇಂತಹ ಸಂದರ್ಭದಲ್ಲಿ 2001ರ ಒಂದು ಶುಭ ಪ್ರಭಾತದಲ್ಲಿ ದೆಹಲಿಯ ಸೌತ್ ಬ್ಲಾಕಿನ ಅಕ್ಬರ್ ರೋಡಿನಲ್ಲಿ ಎದುರಾದ ಬಂಟ್ವಾಳದ ಯುವಕನನ್ನು ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಭಂಡಾರಿ ಶಿಫಾರಸು ಮಾಡಿದ ಪರಿಣಾಮ ಹೊಸ ನಾಯಕತ್ವ ಕಾಂಗ್ರೆಸ್ಸಿನಲ್ಲಿ ಚಿಗುರಲು ಸಾಧ್ಯವಾಯಿತು. ಹಾಗೇ ಮುಂದಿನ 9 ವರ್ಷಗಳ ಕಾಲ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬೊಂಡಾಲ ಜಗನ್ನಾಥ ಶೆಟ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸ್ವಲ್ಪ ಅಂತರದಲ್ಲಿ ಸೋತರೂ ಕೂಡ ಹಲವು ಮಂದಿ ಯುವಕರು ಕಾಂಗ್ರೆಸ್ ಗರಡಿಯಲ್ಲಿ ಪಳಗಲು ಸಹಾಯವಾಯ್ತು.
ಇದೇ ರೀತಿಯಲ್ಲಿ ಮಂಜುನಾಥ ಭಂಡಾರಿ ದಕ್ಷಿಣ ಕನ್ನಡ ಯೂತ್ ಕಾಂಗ್ರೆಸ್ಸಿನಲ್ಲಿ ಮತ್ತೊಮ್ಮೆ ಹೊಸ ಸಂಚಲನ ಮೂಡಿಸಬೇಕಾಗಿದೆ ಎಂಬುದು ಹಲವರ ನಿರೀಕ್ಷೆ. ಮೊದಲನೇಯದಾಗಿ ಚುನಾವಣೆ ಹೆಸರಿನಲ್ಲಿ ಯೂತ್ ಕಾಂಗ್ರೆಸ್ ಪದಾಧಿಕಾರಿಗಳಾಗುತ್ತಿರುವ ಮೋದಿ ಪರಿವಾರದ ಯುವಕರನ್ನು ಮತ್ತು ಅದೇ ರೀತಿಯಾಗಿ ಎಸ್ ಡಿಪಿಐ ಯುವಕರನ್ನು ನಿಯಂತ್ರಿಸುವ ಅನಿವಾರ್ಯತೆ ಇದೆ. ಆ ಕೆಲಸ ಮಾಡದೇ ಹೋದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎನ್ನುವುದು ಎಲ್ಲರ ಅಭಿಮತ.
ಎರಡನೇಯದಾಗಿ ಯೂತ್ ಕಾಂಗ್ರೆಸ್ ಚುನಾವಣಾ ವ್ಯವಸ್ಥೆಯೇ ಸರಿ ಇಲ್ಲ ಎಂಬುದನ್ನು ಏಐಸಿಸಿ ಅಧ್ಯಕ್ಷರಾದ ಮಲ್ಲಿ ಕಾರ್ಜುನ ಖರ್ಗೆ ಅವರಿಗೆ ಮನವರಿಕೆ ಮಾಡುವುದು ಆ ಮೂಲಕ ರಾಹುಲ್ ಗಾಂಧಿಗೂ ಮನವರಿಕೆ ಮಾಡಬಲ್ಲ ಏಕೈಕ ವ್ಯಕ್ತಿ ಮಂಜುನಾಥ ಭಂಡಾರಿ.