ಕೋಲಾರ .ನ11- ಜಿಲ್ಲೆಯ ಕುಡಿಯುವ ನೀರು ಉದ್ದೇಶದ ಯರಗೋಳು ಯೋಜನೆ 17 ವರ್ಷಗಳ ವಿಳಂಬದ ನಂತರ ಉದ್ಘಾಟನೆಯಾಗಿದ್ದು, ಯೋಜನೆಯ ವೆಚ್ಚ 160 ಕೋಟಿ ರೂಪಾಯಿಯಿಂದ , 315 ಕೋಟಿ ರೂ ಆಗಿದ್ದು, ಇದು ಕೋಲಾರ ಜಿಲ್ಲೆಯ ಮತ್ತೊಂದು ಎತ್ತಿನ ಹೊಳೆ ಯೋಜನೆ ಎಂದೆ ಹೇಳಬೇಕಾಗುತ್ತದೆ.
ಕೋಲಾರ, ಬಂಗಾರಪೇಟೆ ತಾಲ್ಲೂಕು ಗಳಿಗೆ ಕುಡಿಯುವ ನೀರನ್ನು ಒದಗಿಸುವ ಯರಗೋಳ್ ಯೋಜನೆ ಹಾಗೂ ಜಿಲ್ಲೆಯ ಒಟ್ಟು 23 ಸಾವಿರ ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯರಗೋಳು ಯೋಜನೆಗೆ 23 ಸಾವಿರ ಕೋಟಿ ರೂ ವೆಚ್ಚವಾಗಿದೆ. ಕೆ.ಸಿ.ವ್ಯಾಲಿಗೆ 1800 ಕೋಟಿ ರೂ ಹಾಗೂ ಹೆಚ್.ಎನ್.ವ್ಯಾಲಿಗೆ 800 ಕೋಟಿ ರೂ.ವೆಚ್ಚವಾಗಿದ್ದು, ಇದು ಅಭಿವೃದ್ಧಿ ಅಲ್ಲವೇ ಎಂದು ಪ್ರಶ್ನಿಸಿದರು.
ಕೋಲಾರ, ಚಿತ್ರದುರ್ಗ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಗಳು. ರಾಜಸ್ಥಾನ ಬಿಟ್ಟರೆ ಅತಿ ಹೆಚ್ಚು ಬರಗಾಲಕ್ಕೆ ತುತ್ತಾಗಿರುವ ರಾಜ್ಯ ಕರ್ನಾಟಕ. ಹೆಚ್.ಎನ್.ವ್ಯಾಲಿ, ಕೆ.ವ್ಯಾಲಿ, ಪುಷ್ಪಾವತಿ ವ್ಯಾಲಿ ಜಾರಿ ಮಾಡಿದ ನಾವು ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಲೇಬೇಕೆಂದು ಒತ್ತಾಯ ಮಾಡಿದ್ದು ಮಹಾಜನತೆ. ಯೋಜನೆ ಕಾರ್ಯಸಾಧುವಾಗಿದ್ದರೆ ಎಷ್ಟೇ ಖರ್ಚಾದರೂ ಯೋಜನೆ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಕೋಲಾರದಲ್ಲಿ ಹಣ್ಣು ತರಕಾರಿ, ರೇಷ್ಮೆ ಬೆಳೆಯುತ್ತಿದ್ದರೆ ಕೆರೆಗಳು ತುಂಬಿರುವುದರಿಂದ . 1200 ಅಡಿಗಳವರೆಗೆ ಕೊರೆದರೂ ನೀರು ಸಿಗದ ಕಾಲವೊಂದಿತ್ತು. ಆದ್ದರಿಂದ ನೀರು ತುಂಬಿ ಅಂತರ್ಜಲ ಮಟ್ಟ ಹೆಚ್ಚಾಗಬೇಕು ಎಂದು ಒತ್ತಾಯಿಸಿದ್ದರು. ಇಲ್ಲಿ ಯಾವುದೇ ಪ್ರಮುಖ ನದಿ ಇಲ್ಲದಿರುವುದರಿಂದ ಕೆರೆಗಳು ತುಂಬುವುದು ಅವಶ್ಯ. ಕುಡಿಯುವ ನೀರು ನೀಡುವುದು ಅತ್ಯಂತ ಅಗತ್ಯ ಎಂದು ಮನಗಂಡು ಮಂಜೂರು ಮಾಡಲಾಯಿತು. ಯರಗೊಳ್ ಯೋಜನೆಗೆ ಇಂದು 315 ಕೋಟಿ ರೂ.ಗಳ ವೆಚ್ಚವಾಗುತ್ತಿದೆ. ಎಲ್ಲಾ ಯೋಜನೆಗಳನ್ನು ಈ ಅವಧಿ ಮುಗಿಯುವುದರೊಳಗೆ ಪೂರ್ಣಗೊಳಿಸಲಾಗುವುದು ಎಂದರು.
ಒಂದು ಕಾಲದಲ್ಲಿ ಕೋಲಾರ, ಬಂಗಾರಪೇಟೆಯಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೀಡುವ ಪರಿಸ್ಥಿತಿ ಇತ್ತು. ಕುಡಿಯುವ ನೀರು ಸಿಗುತ್ತಿರಲಿಲ್ಲ. ಅದಕ್ಕೆ ಯೋಚಿಸಿ ಮಾರ್ಕಾಂಡೇಯ ನದಿಗೆ ಯರಗೊಳ್ ಗ್ರಾಮದ ಬಳಿ ಅಣೆಕಟ್ಟು ನಿರ್ಮಿಸಿ ನೀರು ಶೇಖರಿಸಿ ಮೂರೂ ಪಟ್ಟಣಗಳಿಗೆ ಕುಡಿಯುವ ನೀರು ಕೊಡುವ ಯೋಜನೆ ರೂಪಿಸಲಾಯಿತು. ಇದು ಇಂದು ಕಾರ್ಯಗತವಾಗುತ್ತಿರುವ ಹಿಂದೆ ಮಾಜಿ ಸಚಿವ ಶ್ರೀನಿವಾಸಗೌಡ ಅವರ ಕೊಡುಗೆಯನ್ನು ಸ್ಮರಿಸಬೇಕು ಎಂದರು. ಟೀಚರ್ ಚಂದ್ರಪ್ಪ, ನಾರಾಯಣಸ್ವಾಮಿ ಅವರನ್ನು ಸ್ಮರಿಸಬೇಕು. ಯರಗೋಳ್ ಯೋಜನೆ 2006 ರಲ್ಲಿ ಪ್ರಾರಂಭವಾದರೂ, ಕಾರ್ಯಗತವಾಗಲಿಲ್ಲ. ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಯವರು ಒತ್ತಾಯ ಮಾಡಿ ಚಾಲನೆ ನೀಡಿದರು. ಹಾಗಾಗಿ ಇದಕ್ಕೆ ಚಾಲನೆ ದೊರಕುತ್ತಿದೆ. 38.1 ಗಜ ಆಳದಲ್ಲಿ ನೀರು ನಿಲ್ಲಲಿದೆ.ಈ ಮೂರು ಪಟ್ಟಣ ಗಳಿಗೆ ನೀರು ಸಾಕಾಗುತ್ತದೆ ಎನ್ನುವುದು ನನ್ನ ಭಾವನೆ. ಕೆಜಿಎಫ್ ಶಾಸಕಿ ರೂಪ ಅವರೂ ಕೂಡ ಕೆಜಿಎಫ್ ಗೆ ಯರಗೋಳ್ ಯೋಜನೆಯಿಂದ ನೀರು ಒದಗಿಸಲು ಕೋರಿದ್ದು, ಈ ಬಗ್ಗೆ ಚರ್ಚೆ ಮಾಡಿ ನೀರು ಸಿಕ್ಕರೆ ಎಷ್ಟೇ ಖರ್ಚಾದರೂ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಕೋಲಾರ ಮಲೆನಾಡು ಆಗುವ ದಿನಗಳು ದೂರವಿಲ್ಲ
ನೀರನ್ನು ಪರೀಕ್ಷೆ ಮಾಡಿಸಿದ್ದು ಹಾನಿಕಾರಕ ಪದಾರ್ಥ ಇಲ್ಲ ಎಂದು ವಿಶ್ವಸಂಸ್ಥೆಯವರು ಭೇಟಿ ನೀಡಿ ಮೆಚ್ಚುಗೆ ನೀಡಿದ್ದಾರೆ. ಕುಮಾರಸ್ವಾಮಿ ಯವರು ಇದನ್ನು ಅರ್ಥಮಾಡಿಕೊಳ್ಳಬೇಕು. ಕೇರಳದ ಸಮಾಲೋಚಕರೂ ಕೂಡ ಇದನ್ನು ಇತರೆ ರಾಜ್ಯಗಳಲ್ಲಿ ಅನುಕರಿಸಬೇಕು ಎಂದಿದ್ದಾರೆ. ಕೇವಲ ರಾಜಕೀಯ ಕ್ಕಾಗಿ ಟೀಕೆ ಮಾಡಬಾರದು ಎಂದರು. ಪ್ರಜಾಪ್ರಭುತ್ವದ ವ್ಯವಸ್ಥೆ ಯಲ್ಲಿ ಜನರೇ ಮಾಲೀಕರು. ಜನರ ಸಮಸ್ಯೆಗಳಿಗೆ, ಜನರ ವಿರುದ್ಧವಾಗಿ, ದಾರಿತಪ್ಪಿಸುವ ಕೆಲಸವನ್ನು ಮಾಡಬಾರದು. ಕೋಲಾರ ಮಲೆನಾಡು ಆಗುವ ದಿನಗಳು ದೂರವಿಲ್ಲ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳು ಕಾರಣ.
ವಿರೋಧಿಗಳೇ ಕಣ್ತೆರೆದು ನೋಡಿ
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಳ ನಂತರ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ ಎಂದು ಟೀಕಿಸುವ ವಿರೋಧಿಗಳಿಗೆ ಕಣ್ತೆರೆದು ನೋಡುವಂತೆ ತಿಳಿಸಿದ ಮುಖ್ಯಮಂತ್ರಿಗಳು, ಕಣ್ಣು ಮುಚ್ಚಿಕೊಂಡು , ರಾಜಕೀಯ ಕಾರಣಗಳಿಗಾಗಿ ಮಾತನಾಡಬೇಡಿ ಎಂದರು. ಇದು ಸಣ್ಣ ಅನುದಾನವಲ್ಲ. ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ, ತುಮಕೂರು,ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯನ್ನು ಯಾರು ಜಾರಿಗೆ ಮಾಡಿದ್ದು? ವಿರೋಧಿಸುವವರು ಮಾಡಿಕೊಟ್ಟರೆ ಎಂದು ಪ್ರಶ್ನಿಸಿದರು. ಎತ್ತಿನಹೊಳೆ ಯೋಜನೆ ಜಾರಿಯಾಗುವುದಿಲ್ಲ ಎನ್ನುವವರಿಗೆ ಇಂದು ಉತ್ತರ ಸಿಕ್ಕಿದೆ ಎಂದು ತಿಳಿಸಿದರು.
ಟೀಕಿಸುವವರಿಗೆ ಹೊಟ್ಟೆಉರಿಯುವಂತೆ ಕೆಲಸ
ಕಳೆದ ವರ್ಷವೇ ಈ ಯೋಜನೆ ಜಾರಿಯಾಗಿದ್ದರೆ ಎಲ್ಲರಿಗೂ ನೀರು ದೊರಕುತ್ತಿತ್ತು. ನಮ್ಮ ಅವಧಿಯಲ್ಲಿ ಎತ್ತಿನಹೊಳೆ ಸಂಪೂರ್ಣ ಯೋಜನೆ ಮುಗಿಸಿ ಈ ಭಾಗದ ಜನರಿಗೆ ಕುಡಿಯುವ ನೀರನ್ನು ಕೊಟ್ಟೇಕೊಡುತ್ತೇವೆ. ನಮ್ಮನ್ನು ಟೀಕಿಸುವವರಿಗೆ ಹೊಟ್ಟೆಉರಿಯುವಂತೆ ಕೆಲಸವನ್ನು ಮಾಡುತ್ತೇವೆ ಎಂದರು.
ಕೋಲಾರ ಜಿಲ್ಲೆ ಹಸಿರಾಗಿದ್ದರೆ ಕೆರೆಗಳು ತುಂಬಿರುವುದರಿಂದ ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ, ಪುಷ್ಪಾವತಿ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ನಮ್ಮ ಕಾಲದಲ್ಲಿ ಮಂಜೂರು ಮಾಡಿದ್ದು ಎಂದು ಹೇಳಿದರು.
ಕುಮಾರಸ್ವಾಮಿಗೆ ಹೇಳಿ
ಕೆ.ಸಿ.ವ್ಯಾಲಿ ಯೋಜನೆ ಜಾರಿ ಮಾಡಬಾರದು. ಅದರ ಮೂಲಕ ಜನರಿಗೆ ವಿಷ ನೀಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳುತ್ತಾರೆ. ಯೋಜನೆಯಿಂದ ಕೆರೆಗಳು ತುಂಬಿವೆ. ದನಕರುಗಳಿಗೆ ಮೇವಾಗಿದೆ. ಈವರೆಗೆ ಜನ, ದನಕರುಗಳು ಸತ್ತ ಉದಾಹರಣೆ ಇದೆಯೇ? ಎಂದು ಮುಖ್ಯಮಂತ್ರಿ ಗಳು ಜನರನ್ನು ಕೇಳಿದಾಗ ಇಲ್ಲ ಎಂದು ಜೋರಾಗಿ ಕೂಗಿದರು. ಇದನ್ನು ಕುಮಾರಸ್ವಾಮಿಗೆ ಹೇಳಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
Kolar Yergol Dam ಯರಗೋಳ್ ಅಣೆಕಟ್ಟು
2006 ರಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದ ಯರಗೋಳ್ ಕಾಮಗಾರಿಯ ಜವಾಬ್ದಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕೋಲಾರ ವಿಭಾಗ ಹೊಂದಿದೆ. ಕಾಮಗಾರಿಗೆ 2008 ರಲ್ಲಿ ಅಂದಾಜು 160 ಕೋಟಿ ಎಂದು ಅಂದಾಜಿಸಲಾಗಿತ್ತು, ಆದರೆ ಪರಿಷ್ಕೃತ ಅಂದಾಜು ಮೊತ್ತ 240 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಮಾಡಲಾಗುತ್ತಿದೆ. 100 ಅಡಿಗಿಂತ ಹೆಚ್ಚು ಎತ್ತರದ ಡ್ಯಾಂ ನಿರ್ಮಾಣಕ್ಕಾಗಿ 160 ಕೋಟಿ ರೂಪಾಯಿ ವೆಚ್ಚ ಎಂದು ಅಂದಾಜಿಸಲಾಗಿತ್ತು.
ಇನ್ನು ಯೋಜನೆಗೆ ಸಂಬಂದಿಸಿದಂತೆ ಕೋಲಾರ, ಬಂಗಾರಪೇಟೆ, ಮಾಲೂರು ಪಟ್ಟಣಗಳಲ್ಲಿ ಕೈಗೊಂಡ ಹಲವು ಕಾಮಗಾರಿಗೆ ಮೊದಲು 79 ಕೋಟಿ ವೆಚ್ಚವೆಂದು ಅಂದಾಜಿಸಲಾಗಿತ್ತು, ಆದರೆ ಈಗ 128 ಕೋಟಿ ವೆಚ್ಚದಲ್ಲಿ ಕಾಮಗಾರಿ ಬರದಿಂದ ನಡೆಸಲಾಗಿತ್ತು ನೀರು ಪೂರೈಸಲು ಜಲಸಂಗ್ರಹಗಾರಗಳನ್ನು ನಿರ್ಮಿಸಲಾಗಿದೆ.
ಇನ್ನು ಅಣೆಕಟ್ಟು ನಿರ್ಮಾಣ ಕಾಮಗಾರಿಯು 813 ಎಂಎಂ ವ್ಯಾಸದ ಏರು ಕೊಳವೆ ಮಾರ್ಗ 9.15 ಕಿಮೀ ಕಾಮಗಾರಿ ಪೂರ್ಣಗೊಂಡಿದೆ. ಯಾರಗೋಳ್ ಡ್ಯಾಂ 500 ಎಂ.ಸಿ.ಎಪ್.ಟಿ ಸಾಮರ್ಥ್ಯವನ್ನು ಹೊಂದಿದ್ದು, ಡ್ಯಾಂ ತುಂಬಿದರೆ ಸುತ್ತಮುತ್ತಲ 375 ಎಕರೆಯಷ್ಟು ಭೂಮಿ ಮುಳುಗಡೆಯಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
2008 ರಲ್ಲಿ ಆರಂಭವಾಗಿದ್ದ ಕಾಮಗಾರಿ ತಡವಾಗಿದ್ದಕ್ಕೆ, ಗುತ್ತಿಗೆ ಪಡೆದಿರುವ ಹೈದರಾಬಾದ್ ಮೂಲದ ಇಂಜಿನಿಯರಿಗ್ ಪ್ರಾಜೆಕ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 1 ಕೋಟಿ 53 ಲಕ್ಷ ದಂಡ ವಿಧಿಸಲಾಗಿತ್ತು.
ಯೋಜನೆ ನಡೆಯುತ್ತಿರುವ ಸ್ಥಳದ ಸಮೀಪದಲ್ಲೆ ಮಾರ್ಕಂಡೇಯ ಜಲಾಶಯವಿದ್ದು, ಜಲಾಶಯ ತುಂಬಿದ ನಂತರ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿತ್ತು. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲೂ ಅಂತರ್ಜಲ ವೃದ್ದಿಯಾಗದೆ, ನೀರಾವರಿ ಸಮಸ್ಯೆ ಎದುರಾಗಿತ್ತು. ಇದೀಗ ಡ್ಯಾಂಗೆ ನೀರು ಹರಿದು ಬಂದಲ್ಲಿ ಭರ್ತಿಯಾದರೆ, ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಜೊತೆಗೆ, ಅಂತರ್ಜಲ ಮಟ್ಟವು ಏರಿಕೆಯಾಗಿ ರೈತರಿಗೆ ಅನುಕೂಲವಾಗಲಿದೆ.
ಒಟ್ಟಿನಲ್ಲಿ ಕಳೆದ 17 ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಯರಗೋಳ್ ಡ್ಯಾಂ ಕಾಮಗಾರಿ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದ್ದಾರೆ. ಅಂದಿನ ಸಿಎಂ ಯಡಿಯೂರಪ್ಪ ಅಣೆಕಟ್ಟು ಲೋಕಾರ್ಪಣೆ ಮಾಡುವರು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣ ಆಗಿರಲಿಲ್ಲ. ನೀರು ಸಂಗ್ರಹಣೆಯಾಗದರೆ, ನೀರಿನ ಬವಣೆ ನೀಗುವುದರ ಜೊತೆಗೆ, ಇದೊಂದು ಪ್ರವಾಸಿ ತಾಣವಾಗಿ ರೂಪುಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಡ್ಯಾಂ ಭರ್ತಿ ಆಗಿದೆ ಎಂದು ವರದಿಯಾಗಿದೆ.
ಯರಗೋಳ್ ಅಣೆಕಟ್ಟುಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಯರಗೋಲ್ ಗ್ರಾಮದಲ್ಲಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಇದೆ. ಬಂಗಾರಪೇಟೆ, ಮಾಲೂರು ಮತ್ತು ಕೋಲಾರ ಪಟ್ಟಣಗಳು ಮತ್ತು ಮಾರ್ಗದಲ್ಲಿರುವ 45 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವುದು ಯೋಜನೆಯ ಉದ್ದೇಶವಾಗಿದೆ.
ಯೋಜನೆಯು 414 ಮೀ ಉದ್ದದ ಕಾಂಕ್ರೀಟ್ ಗುರುತ್ವಾಕರ್ಷಣೆಯ ಅಣೆಕಟ್ಟು ಮತ್ತು ಗರಿಷ್ಠ 40 ಮೀ ಎತ್ತರವನ್ನು ಒಳಗೊಂಡಿದೆ. ಅಣೆಕಟ್ಟಿನ ಒಟ್ಟು ಸಂಗ್ರಹ ಸಾಮರ್ಥ್ಯ 500 ಮಿಲಿಯನ್ ಘನ ಅಡಿ ನೀರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯರಗೋಳ್ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದರು, ಈಗ ಅವರೇ ಡ್ಯಾಂ ಅನ್ನು ಲೋಕಾರ್ಪಣೆ ಮಾಡುತ್ತಿದ್ದಾರೆಯೇ ವಿನಃ ಇದರಲ್ಲಿ ಇತರೇ ಪಕ್ಷಗಳ ನಾಯಕರ ಪಾತ್ರ ಏನೂ ಇಲ್ಲ. ಇದು ಕಾಂಗ್ರೆಸ್ ಸರ್ಕಾರದ ಕೂಸು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸಮರ್ಥಿಸಿಕೊಂಡರು. ಪಟ್ಟಣದ ಎಸ್.ಎನ್.ರೆಸಾರ್ಟ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯರಗೋಳ್ ಡ್ಯಾಂನಿಂದ ಮೂರು ತಾಲೂಕಿನ ಜನರಿಗೆ ಶುದ್ಧವಾದ ಕುಡಿಯುವ ನೀರು ಸರಬರಾಜು ಮಾಡಲು ಸಿದ್ಧವಾಗಿರುವಾಗ ಬಿಜೆಪಿ, ಜೆಡಿಎಸ್ ನಾಯಕರು ಯರಗೋಳ್ ಡ್ಯಾಂ ನಮ್ಮ ಕಾಲದಲ್ಲಿ ನಿರ್ಮಾಣವಾದ ಯೋಜನೆ ಅದರ ಫಲ ನಮಗೆ ಸೇರಬೇಕಾಗಿದೆ ಎಂದು ಪ್ರಚಾರದಲ್ಲಿ ತೊಡಗಿದ್ದಾರೆಂದು ಖಂಡಿಸಿದರು.