ಮಹಾತ್ಮಾ ಗಾಂಧೀಜಿಯವರ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಗೌರವ ಸಲ್ಲಿಸಿದ ಸಿಎಂ

 

ಗಾಂಧೀಜಿ ಹಾಗೂ ಶಾಸ್ತ್ರಿಯವರ ಮೌಲ್ಯಗಳು ನಮಗೆ ದಾರಿದೀಪ: ಮುಖ್ಯ ಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 02: ಗಾಂಧೀಜಿ ಹಾಗೂ ಶಾಸ್ತ್ರಿಯವರ ಬದುಕು ಹಾಗೂ ಮೌಲ್ಯಗಳು ನಮಗೆ ದಾರಿದೀಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವ154 ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 119 ನೇ ಜನ್ಮದಿನದ ಅಂಗವಾಗಿ ಅವರ ವಿಧಾನಸೌದಾದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ದೇಶಾದ್ಯಂತ ಗಾಂಧೀಜಿ ಹಾಗೂ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಮಹಾತ್ಮಾ ಗಾಂಧೀಜಿಯವರಿಗೆ ನಾವು ನಮನ ಸಲ್ಲಿಸಿ, ಅವರ ಹೋರಾಟದ ಬದುಕು ನಮ್ಮೆಲ್ಲರಿಗೂ ಸ್ಪೂರ್ತಿ ಯಾಗಲಿ ಎಂದು ಹೇಳಿದರು.

ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಿ. ಜೀವನದ್ದುದ್ದಕ್ಕೂ ಪ್ರಾಮಾಣಿಕವಾಗಿ ಬದುಕಿದವರು. ಅವರು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯ ನಮ್ಮೆಲ್ಲರಿಗೂ ದಾರಿದೀಪ. ಗಾಂಧೀಜಿಯವರು ಸರಳ ಜೀವನ ನಡೆಸಿದವರು. ಅಹಿಂಸಾ ಮಾರ್ಗ ಅನುಸರಿಸಿ, ಅಹಿಂಸಾತ್ಮಕ ಹೋರಾಟದಿಂದಲೇ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿ ಬದುಕಿದಂತೆ ಬದುಕಲು ಪ್ರಯತ್ನಿಸಿದರು. ಮೂರನೇ ದರ್ಜೆ ಬೋಗಿಯಲ್ಲಿ ಯಾವಾಗಲೂ ಪ್ರಯಾಣಿಸುತ್ತಿದ್ದರು. ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ 3 ನೇ ದರ್ಜೆಗಿಂತಲೂ ಕೆಳ ದರ್ಜೆಯದ್ದು ಇಲ್ಲವಾದ್ದರಿಂದ 3 ನೇ ದರ್ಜೆಯಲ್ಲಿ ಪ್ರಯಾಣಿಸುವುದಾಗಿ ಉತ್ತರಿಸಿದರು. ಅಷ್ಟರ ಮಟ್ಟಿಗೆ ಸತ್ಯ, ಅಹಿಂಸೆಯನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡವರು. ದಕ್ಷಿಣ ಆಫ್ರಿಕಾ ದಲ್ಲಿದ್ದಾಗಲೂ ಸೆರೆಮನೆ ವಾಸ ಅನುಭವಿಸಿದ್ದರು. ಭಾರತದಲ್ಲಿಯೂ ಸೆರೆಮನೆಯ ವಾಸ ಅನುಭವಿಸಿ ದೇಶಕ್ಕೆ ಅವರ ನೇತೃತ್ವದಲ್ಲಿ ಅನೇಕ ಜನರು ತ್ಯಾಗ, ಬಲಿದಾನಗಳನ್ನು ಅರ್ಪಿಸಿದರು. ಮತಾಂಧ ನಾಥೂರಾಮ್ ಗೋಡ್ಸೆ ಗುಂಡಿಗೆ ಬಲಿಯಾದರು ಎಂದು ಸ್ಮರಿಸಿದರು.

ವಿಶ್ವನಾಯಕ ಗಾಂಧಿ

ಸಮಾಜದಲ್ಲಿ ಎಲ್ಲ ಜನರೂ ಶಾಂತಿ, ನೆಮ್ಮದಿಯಿಂದ ಇರಬೇಕು. ಜಾತಿ, ಧರ್ಮ ಎಂದು ಹೊಡೆದಾಡಬಾರದು. ದೇಶ ಇಬ್ಭಾಗವಾಗಬಾರದು ಎಂದು ಹೋರಾಡಿದರು. ಜವಾಹರಲಾಲ್ ನೆಹರೂ ಅವರು ಸ್ವಾತಂತ್ರ್ಯ ನಂತರ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಕಲ್ಕತ್ತಾದಲ್ಲಿ ಸತ್ಯಾಗ್ರಹ ಮಾಡುತ್ತಿದ್ದರು. ಅಷ್ಟು ಹೊತ್ತಿಗೆ ದೇಶ ವಿಭಜನೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಅದನ್ನು ಬಗೆಹರಿಸಲು ಸತ್ಯಾಗ್ರಹ ಮಾಡಿದರು. ಜಗತ್ತಿನ 148 ದೇಶಗಳಲ್ಲಿ ಅವರ ಪ್ರತಿಮೆಗಳಿವೆ
ಅವರು ಕೇವಲ ಭಾರತದ ನಾಯಕರಾಗಿರಲಿಲ್ಲ. ಜಗತ್ತಿನಲ್ಲಿಯೇ ಗೌರವಕ್ಕೆ ಪ್ರಾತ್ರರಾದ ವಿಶ್ವನಾಯಕರು. ಅಂಥವರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದೇವೆ. ಅವರ ಹೋರಾಟ, ಸತ್ಯ, ಧರ್ಮನಿಷ್ಠೆ ಎಲ್ಲವೂ ನಮಗೆ ದಾರಿದೀಪವಾಗಲಿ ಹಾಗೂ ಸ್ಪೂರ್ತಿ ನೀಡಲಿ ಎಂದರು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಮಹಾತ್ಮ ಗಾಂಧಿ ಅಹಿಂಸೆ ಮೂಲಕವೇ ಜಗತ್ತಿನ ಮೂಲೆ ಮೂಲೆ ತಲುಪಿ ಪೂಜ್ಯರಾದರು

ದೇಶಕ್ಕೆ ಗಾಂಧಿ ಒಬ್ಬರೇ ಮಹಾತ್ಮ ಮತ್ತು ಪಿತಾಮಹ

ಬೆಂಗಳೂರು ಅ 2: ದೇಶಕ್ಕೆ ಗಾಂಧಿ ಒಬ್ಬರೇ ಮಹಾತ್ಮ ಮತ್ತು ಪಿತಾಮಹ. ಯಾವುದೇ ಪ್ರಚಾರದ ಸಾಮಾಗ್ರಿ ಮತ್ತು ತಂತ್ರಜ್ಞಾನ ಇಲ್ಲದೆ ಕೇವಲ ಅಹಿಂಸೆ ಮತ್ತು ತಮ್ಮ ಬದುಕಿನ ಸರಳತೆಯಿಂದಲೇ ಮಹಾತ್ಮಗಾಂಧಿ ವಿಶ್ವದ ಮೂಲೆ ಮೂಲೆಗೆ ತಲುಪಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಹಲವು ಇಲಾಖೆಗಳ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಮ್ಮೆ ರೈಲಿನಲ್ಲಿ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು. ಸಹ ಪ್ರಯಾಣಿಕರು, “ಏಕೆ ಮೂರನೇ ದರ್ಜೆ ಸೀಟಿನಲ್ಲಿ ಪ್ರಯಾಣಿಸುತ್ತಿದ್ದೀರಿ” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಾಂಧಿ ಅವರು, “ನಾಲ್ಕನೇ ದರ್ಜೆ ರೈಲಿನಲ್ಲಿ ಇಲ್ಲ. ಇದ್ದಿದ್ದರೆ ಅಲ್ಲೇ ಪ್ರಯಾಣಿಸುತ್ತಿದ್ದೆ. ಅದು ಇಲ್ಲದ್ದರಿಂದ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೇನೆ” ಎಂದರು. ಇಷ್ಟು ಸರಳವಾದ ವ್ಯಕ್ತಿತ್ವ ಗಾಂಧಿಯವರದ್ದಾಗಿತ್ತು ಎಂದು ಉದಾಹರಿಸಿದರು.

ನಮ್ಮ ಸರ್ಕಾರ ರೂಪಿಸುತ್ತಿರುವ ಕಾರ್ಯಕ್ರಮಗಳಲ್ಲಿ ಮಹಾತ್ಮಗಾಂಧಿ ಅವರ ಆಶಯಗಳು ಸೇರಿವೆ. ಗಾಂಧಿ ಅವರ ಆಶಯದಂತೆ ಕಟ್ಟ ಕಡೆಯ ವ್ಯಕ್ತಿಗೂ ಬದುಕುವ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಸರ್ಕಾರದ ಗುರಿ ಎಂದರು.

ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.

One Comment on “ಮಹಾತ್ಮಾ ಗಾಂಧೀಜಿಯವರ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಗೌರವ ಸಲ್ಲಿಸಿದ ಸಿಎಂ”

Leave a Reply

Your email address will not be published. Required fields are marked *