ಕಾನೂನು ಬಾಹಿರ ಚಟುವಟಿಕೆ ಗಳನ್ನು ಸಹಿಸುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ


ಬೆಂಗಳೂರು, ಅಕ್ಟೋಬರ್ 02 : ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಧಕ್ಕೆ ತರುವುದು, ಕಲ್ಲು ತೂರುವುದು ಕಾನೂನು ಬಾಹಿರ. ಇಂಥ ಚಟುವಟಿಕೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಅದನ್ನು ಹತ್ತಿಕ್ಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದಾರೆ. ಪೊಲೀಸರ ಮೇಲೂ ಕಲ್ಲು ಎಸೆದಿದ್ದು, ಅನಿವಾರ್ಯವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಗಲಾಟೆಗೆ ಕಾರಣಕರ್ತರಾಗಿರುವ 43 ದುಷ್ಕರ್ಮಿಗಳನ್ನು ಬಂದಿಸಿದ್ದು ಅವರ ಮೇಲೆ ಮೊಕದ್ದಮೆಗಳನ್ನು ಹೂಡಲಾಗುತ್ತಿದೆ. ಶಿವಮೊಗ್ಗ ಸಂಪೂರ್ಣ ನಿಯಂತ್ರಣದಲ್ಲಿದೆ. ಪೊಲೀಸರು ಕ್ರಮ ಕೈಗೊಂಡು, ಶಿವಮೊಗ್ಗದಲ್ಲಿ ಶಾಂತಿ ನೆಲೆಸಿದೆ. ಶಾಂತಿ ಕಾಪಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಕಲ್ಲು ತೂರಾಟ
ಈದ್‌ ಮೆರವಣಿಗೆ ಸಂದರ್ಭ ರಾಗಿಗುಡ್ಡದಲ್ಲಿ ಕಲ್ಲು ತೂರಾಟವಾಗಿದೆ. ಸಂಜೆ ವೇಳೆ ಘಟನೆ ಸಂಭವಿಸಿದೆ. ವಾಹನಗಳು, ಮನೆಗಳು, ಪೊಲೀಸರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಈ ಹಿನ್ನೆಲೆ ರಾಗಿಗುಡ್ಡದಲ್ಲಿ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. ಕಲ್ಲು ತೂರಾಟ ಸಂಬಂಧ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.

ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಘಟನೆ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ (Prohibitory) ಜಾರಿಗೊಳಿಸಲಾಗಿದೆ. ಈ ಮಧ್ಯೆ ಮುನ್ನೆಚ್ಚರಿಕೆ ಕ್ರಮವಾಗಿ ಗಾಂಧಿ ಬಜಾರ್‌ನಲ್ಲಿ (Gandhi Bazaar) ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗಿದೆ.

ಗಾಂಧಿ ಬಜಾರ್‌ನಲ್ಲಿ (Gandhi Bazaar) ಎಂದಿನಂತೆ ಬೆಳಗ್ಗೆಯಿಂದ ವ್ಯಾಪಾರ, ವಹಿವಾಟು ಆರಂಭವಾಗಿತ್ತು. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿದರು. ಪೊಲೀಸ್ ವಾಹನಗಳಲ್ಲಿ ಮೈಕ್ ಮೂಲಕ ಅಂಗಡಿ ಬಂದ್ ಮಾಡುವಂತೆ ಅನೌನ್ಸ್ ಮಾಡಲಾಗುತ್ತಿದೆ.
ಇನ್ನು ನೆಹರೂ ರಸ್ತೆಯಲ್ಲು ಅಂಗಡಿ ಮುಂಗಟ್ಟು ಬಂದ್ ಆಗಿವೆ. ಕೆಲವೆ ಅಂಗಡಿಗಳ ಬಾಗಿಲು ತೆಗೆಯಲಾಗಿದೆ. ಉಳಿದಂತೆ ದುರ್ಗಿಗುಡಿ, ಕುವೆಂಪು ರಸ್ತೆ, ಜೈಲ್ ರಸ್ತೆ ಸೇರಿದಂತೆ ಉಳಿದೆಡೆ ವ್ಯಾಪಾರ ವಹಿವಾಟು ಸಹಜ ಸ್ಥಿತಿಯಲ್ಲಿದೆ.

Leave a Reply

Your email address will not be published. Required fields are marked *