KappathaGudda:ಕಪ್ಪತ್ತಗುಡ್ಡ ರಕ್ಷಿಸೋಣ ಅಭಿಯಾನಕ್ಕೆ ಚಾಲನೆ

Kappathagudda

KappathaGudda:ಚಿನ್ನ ಸೇರಿದಂತೆ ಖನಿಜ ಸಂಪತ್ತಿನ ಅಗರ, ವನ್ಯ ಜೀವಿಗಳ ನೆಚ್ಚಿನ ತಾಣ, ಪ್ರವಾಸಿಗರ ಸ್ವರ್ಗ “ಕಪ್ಪತ್ತಗುಡ್ಡ” ರಕ್ಷಿಸೋಣ ಅಭಿಯಾನ

ಸಚಿತ್ರ ವರದಿ : ಸತೀಶ್ ಕಾಪಿಕಾಡ್

ಗದಗ : ತೋಂಟದಾರ್ಯ ಮಠದ ಶ್ರೀಗಳಾದ ಡಾ.ಸಿದ್ದರಾಮ ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದಂತಹ ಪತ್ರಕರ್ತರಿಂದ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಪ್ರಖ್ಯಾತವಾಗಿರುವ ಗದಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಕಪ್ಪತ್ತಗುಡ್ಡ (KappathaGudda) ಉಳಿಸಿ, ರಕ್ಷಿಸೋಣ ಎಂಬ ಅಭಿಯಾನಕ್ಕೆ ಆಗಸ್ಟ್ 11ರಂದು ಭಾನುವಾರ ಕಪ್ಪತ್ತಗುಡ್ಡದ ಮೇಲೆ ಚಾಲನೆ ನೀಡಲಾಯಿತು.

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಪ್ರಖ್ಯಾತವಾಗಿರುವ ಕಪ್ಪತಗುಡ್ಡ ಗದಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರವಾಸಿಗರನ್ನು ಕೈಬೀಸಿ ಕರೆವ ಕಪ್ಪತ್ತಗುಡ್ಡಕ್ಕೆ ದಿನನಿತ್ಯ ನೂರಾರು ಪ್ರವಾಸಿಗರು ಆಗಮಿಸಿ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮೈಮರೆಯುತ್ತಾರೆ. ನೈಋತ್ಯ ಮುಂಗಾರು ಮಳೆ ಅವಧಿಯಲ್ಲಿ ಸಾವಿರಾರು ಜನರು ಕಪ್ಪತಗುಡ್ಡ ಪ್ರವಾಸಕ್ಕೆ ಹೋಗುತ್ತಾರೆ. ಕಪ್ಪತಗುಡ್ಡ ಚಾರಣಕ್ಕೆ ನೂರಾರು ಮಂದಿ ಆಗಮಿಸುತ್ತಿದ್ದು, ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

Kappatha gudda

ಗದಗ ಜಿಲ್ಲೆಯಲ್ಲಿ ಉತ್ತರ ಕರ್ನಾಟಕದ ಪಶ್ಚಿಮಘಟ್ಟ ಮತ್ತು ಮಧ್ಯ ಕರ್ನಾಟಕದ ಹೃದಯ ಭಾಗ ಎಂದು ಖ್ಯಾತಿ ಪಡೆದ ಗದಗ ತಾಲೂಕು ಬಿಂಕದ ಕಟ್ಟೆ ಗ್ರಾಮದಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರ ಕ್ಷೇತ್ರ – ಬಳ್ಳಾರಿ ಜಿಲ್ಲಾ ಹೋವಿನ ಹಡಗಲಿಯವರೆಗೆ ಉತ್ತರದಿಂದ ದಕ್ಷಿಣಕ್ಕೆ 80 ಸಾವಿರ ವಿಸ್ತಿರ್ಣದ 63 ಕಿಲೋ ಮೀಟರ್ ಉದ್ದದ ಸುತ್ತಲೂ ಹಸಿರಿನಿಂದ ಕೂಡಿರುವ ಚಿಕ್ಕ-ದೊಡ್ಡ ಗುಡ್ಡದ ಸಾಲುಗಳೇ ಕಪ್ಪತ್ತಗುಡ್ಡಗಳು.

Kappathagudda

ಡೋಣಿ ಗ್ರಾಮದಿಂದ 4 ಕಿ.ಮೀ ಗಳಷ್ಟು ಅಂತರದಲ್ಲಿ ಬೃಹದಾಕಾರದ ಶಿಖರಗಳನ್ನೊಳಗೊಂಡು ಬೆಟ್ಟಗಳ ಸಮ್ಮುಚ್ಛಯವಾದ ಕಪ್ಪತಗುಡ್ಡ ಖನಿಜ ಸಂಪತ್ತಿನ ಅಗರ. ಈ ಮಣ್ಣಿನಲ್ಲಿ ಚಿನ್ನವಿದೆ. ಮ್ಯಾಂಗನೀಜ್ , ಕಬ್ಬಿಣದ ಅದಿರು, ತಾಮ್ರ, ಕ್ಯಾಲ್ಸಿಯಂ ಮುಂತಾದ 18 ಪ್ರಕರದ ಅಮೂಲ್ಯವಾದ ಖನಿಜ ಸಂಪತ್ತು ಇದೆ. ಇಂತಹ ಖನಿಜ ಭರಿತ ಭೂಮಿಯಲ್ಲಿ 300ಕ್ಕೂ ಹೆಚ್ಚು ಜಾತಿಯ ಔಷಧಿ ಸಸ್ಯಗಳು ಇವೆ. ಇದನ್ನು ರಾಷ್ಟ್ರೀಯ ಅಯುರ್ವೇದಿಕ ಸಂಶೋಧನ ಸಂಸ್ಥೆ ಜಯನಗರ, ಬೆಂಗಳೂರು ಇದು ವರದಿ ಮಾಡಿದೆ. ಆದರೇ ಸ್ಥಳಯರ ಪ್ರಕಾರ ಇಲ್ಲಿ 800ಕ್ಕೂ ಹೆಚ್ಚು ಜಾತಿಯ ಔಷಧಿ ಸಸ್ಯಗಳು ಇವೆ ಎನ್ನಲಾಗಿದೆ.

ಮಾತ್ರವಲ್ಲದೇ ಕೆರೆಗಳು, ಹಳ್ಳಗಳು, ಝರಿಗಳು, ಕೊಳ್ಳಗಳು ಇಲ್ಲಿ ಜನ್ಮ ತಾಳಿದ್ದು, ಇವುಗಳು ಅಂತ್ಯದಲ್ಲಿ ತುಂಗಭದ್ರ ನದಿ ಸೇರುತ್ತವೆ. ಈ ಗುಡ್ಡದಲ್ಲಿ ವಿವಿಧ ಪ್ರಭೇಧದ ಪ್ರಾಣಿ ಪಕ್ಷಿಗಳು ಸೇರಿದಂತೆ ಕೃಷ್ಣ ಮೃಗ, ಕಾಡುಕುರಿ, ಚುಕ್ಕೆ ಜಿಂಕೆ, ಕರಡಿ, ತೋಳ, ನರಿ, ಕತ್ತೆ ಕಿರುಬ, ಕಾಡ ಬೆಕ್ಕು, ಈ ರೀತಿ ಅನೇಕ ರೀತಿಯ ವನ್ಯ ಜೀವಿಗಳು ಇವೆ. ಮಾತ್ರವಲ್ಲದೇ ಈ ಭಾಗದಲ್ಲಿ 700 ರಿಂದ 1000 ವರೆಗೆ ನವಿಲುಗಳು, ಹೈನಾ, ಸಾರಾಂಗ, ಮತ್ತು ಅಸಂಖ್ಯಾತ ದನಕರುಗಳು, ಕುರಿಗಳು ಇರುತ್ತವೆ. ಮುಖ್ಯವಾಗಿ ಇಲ್ಲಿ ವಿದ್ಯುತ್ ಇದೆ. ಇಡೀ ರಾಜ್ಯದಲ್ಲೇ ಈ ಗುಡ್ಡದಲ್ಲಿ ಮಾತ್ರ ಶುದ್ಧ ಗಾಳಿ ಇದೆ ಎಂದು ಪ್ರಮಾಣೀಕರಿಸಲಾಗಿದೆ.Kappathagudda

ಈಗಾಗಲೇ ಈ ಗುಡ್ಡದಲ್ಲಿ ಕೆಲವು ವರ್ಷಗಳ ಹಿಂದೆ ವಿಶಾಲವಾದ ಸ್ಥಳದಲ್ಲಿ ಮೈನಿಂಗ್ ನಡೆಸಲಾಗಿದ್ದು, ಇದರಿಂದ ಈ ಪ್ರದೇಶದ ಗುಡ್ಡವೇ ಕುಸಿದು ಬೀಳುವ ಸಾಧ್ಯತೆಗಳು ಇವೆ. ಇಂತಹ ಕಪ್ಪತ್ತಗುಡ್ಡದ ಮೇಲೆ ಇದೀಗ ಮತ್ತೊಮ್ಮೆ ದುಷ್ಕರ್ಮಿಗಳ ಕಣ್ಣು ಬಿದ್ದಿದ್ದು, ಮುಖ್ಯವಾಗಿ ರಾಜಕೀಯ ಮುಖಂಡರು ಹಾಗೂ ಕೆಲವೊಂದು ಕಂಪನಿಗಳು ಈ ಗುಡ್ಡವನ್ನು ತಮ್ಮ ವಶಕ್ಕೆ ಪಡೆದು ಇಲ್ಲಿರುವ ಖನಿಜ ಸಂಪತ್ತುಗಳನ್ನು ಲೂಟಿ ಮಾಡಿ ಈ ಅಪರೂಪದ ಗುಡ್ಡವನ್ನೇ ನಾಶ ಪಡಿಸಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿಗಳು ಲಭಿಸಿದ್ದು, ಈ ಹಿನ್ನೆಲೆಯಲ್ಲಿ ತೋಂಟದಾರ್ಯ ಮಠದ ಶ್ರೀಗಳಾದ ಡಾ.ಸಿದ್ದರಾಮ ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ( KJU)ದ ಆಶ್ರಯದಲ್ಲಿ ಗದಗ ಜಿಲ್ಲಾ ಅರಣ್ಯ ಇಲಾಖೆಯ ಸಂಯೋಗದೊಂದಿಗೆ ಕಪ್ಪತ್ತಗುಡ್ಡ ಉಳಿಸಿ, ರಕ್ಷಿಸೋಣ ಎಂಬ ಅಭಿಯಾನ ಆಗಸ್ಟ್ 11ರಂದು ಬಾನುವಾರ ಕಪ್ಪತ್ತಗುಡ್ಡದ ಮೇಲೆ ನಡೆಯಿತು.

ಇದೇ ವೇಳೆ ಅಗಮಿಸಿದಂತಹ ಎಲ್ಲಾ ಪತ್ರಕರ್ತರು ಕಪ್ಪತ್ತಗುಡ್ಡದ ಮೇಲೆ ಮಾನವ ಸರಪಣಿ ನಿರ್ಮಿಸುವ ಮೂಲಕ ಕಪ್ಪತ್ತಗುಡ್ಡ ರಕ್ಷಣೆಗೆ ತಮ್ಮ ಬೆಂಬಲವಿದೆ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರಕ್ಕೆ ನೀಡಿದರು.

Kappathagudda

ಈ ವೇಳೆ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ತೋಂಟದಾರ್ಯ ಮಠದ ಶ್ರೀಗಳಾದ ಡಾ.ಸಿದ್ದರಾಮ ಸ್ವಾಮಿಜಿಯವರು, ವಿವಿಧ ಜೀವ ವೈವಿಧ್ಯತೆ ಹಾಗೂ ಪರಿಸರ ವೈವಿಧ್ಯತೆಯನ್ನು ಹೊಂದಿರುವ ಕಪ್ಪತ್ ಗುಡ್ಡವನ್ನು ರಕ್ಷಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕರ್ನಾಟಕ ಪತ್ರಕರ್ತರ ಸಂಘದಿಂದ ಇಂದು ಕಪ್ಪತ್ ಗುಡ್ಡ ವೀಕ್ಷಣೆ ಹಾಗೂ ಕಪ್ಪತ್ ಗುಡ್ಡದ ರಕ್ಷಣೆಯ ಕುರಿತಂತೆ ಆಗಮಿಸಿದಕ್ಕೆ ತುಂಬಾ ಸಂತೋಷವಾಗಿದೆ ಎಂದು ಪತ್ರಕರ್ತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಪ್ಪತ ಗುಡ್ಡವು ಪರಿಸರ ವೈವಿಧ್ಯತೆಯಿಂದ ಕೂಡಿದ್ದು ಪರಿಸರವನ್ನು ಉಳಿಸಲು ನಾವೆಲ್ಲರೂ ಪಣತೊಡಬೇಕು. ಪರಿಸರವನ್ನು ಉಳಿಸೋಣ ವನ್ಯಜೀವಿಗಳನ್ನು ಸಂರಕ್ಷಿಸೋಣ. ಕಪ್ಪತ್ ಗುಡ್ಡದಲ್ಲಿ ವಿಂಡ್ ಫ್ಯಾನುಗಳು ಬಂದಿರುವುದರಿಂದ ಹಾಗೂ ಗಣಿಗಾರಿಕೆಗಳು ನಡೆಯುತ್ತಿರುವುದರಿಂದ ಇಲ್ಲಿನ ಪರಿಸರ ಹಾಳಾಗುತ್ತಿದೆ ಇದನ್ನು ಗಮನಿಸಿ ಇಲ್ಲಿಯ ಪರಿಸರವನ್ನು ಹಾಳು ಮಾಡದಂತೆ ಕಾಪಾಡೋಣ. ಇಲ್ಲಿನ ಜನರು ಸಹ ಅರಣ್ಯವನ್ನು ನಂಬಿ ಜೀವನವನ್ನು ಸಾಗಿಸುತ್ತಾ ಅವಲಂಬಿಸಿದ್ದಾರೆ. ಆದ್ದರಿಂದ ಪತ್ರಕರ್ತರಾದ ನೀವು ನೆಲ ಜಲ ರಕ್ಷಣೆಗಾಗಿ ಜೀವದ ಹಂಗು ತೊರೆದು ಕೆಲಸವನ್ನು ಮಾಡುತ್ತೀರಿ. ಇಂತಹ ಕಪ್ಪತ ಗುಡ್ಡವನ್ನು ಉಳಿಸಿ ಬೆಳೆಸಲು ತಮ್ಮ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

Kappathagudda

ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮುರುಗೇಶ್ ಶಿವಪೂಜೆ, ಗದಗ್ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ರಮೇಶ್ ಭಜಂತ್ರಿ, ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ಕಾರ್ಯದರ್ಶಿ ಸತೀಶ್ ಕಾಪಿಕಾಡ್, ಅರಣ್ಯ ಇಲಾಖೆಯ ಅಧಿಕಾರಿಗಳು, ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳು, ವಿವಿಧ ಜಿಲ್ಲೆಯ ವರದಿಗಾರರು, ಸಂಪಾದಕರು, ಸಿಬ್ಬಂದಿಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 85ಕ್ಕೂ ಹೆಚ್ಚು ಪತ್ರಕರ್ತರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *