Sangolli-Rayanna ಕುರುಬ  ಎನ್ನದೆ ರಾಯಣ್ಣನ ದೇಶಪ್ರೇಮಕ್ಕಾಗಿ ಸ್ಮರಿಸಿ, ಗೌರವಿಸಿ

Sangolli-Rayanna
Sangolli-Rayanna ನಮ್ಮವರ ಕುತಂತ್ರ-ಪಿತೂರಿಯಿಂದಲೇ ಬ್ರಿಟಿಷರು 400 ವರ್ಷ ಭಾರತ ಆಳಿದರು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಜ 26: ನಮ್ಮವರ ಕುತಂತ್ರ-ಪಿತೂರಿಯಿಂದಲೇ ಬ್ರಿಟಿಷರು 400 ವರ್ಷ ಭಾರತ ಆಳಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಖೋಡೆ ವೃತ್ತದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪುಣ್ಯ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಬದಲಾವಣೆಗೆ ಒಪ್ಪದ, ಸಮಾನ ಅವಕಾಶಗಳನ್ನು ಒಪ್ಪದ, ಅಸಮಾನತೆಯನ್ನು ಪೋಷಿಸಬೇಕು ಎನ್ನುವವರು ಈಗಲೂ ನಮ್ಮ ನಡುವೆಯೇ ಇದ್ದಾರೆ. ಇಂಥವರು ಬಹಳ ಅಪಾಯಕಾರಿ. ಇವರ ಬಗ್ಗೆ ಎಚ್ಚರದಿಂದ ಇರಿ ಎಂದು ಕರೆ ನೀಡಿದರು.

ಸ್ವಾತಂತ್ರ ಪ್ರೇಮಿ, ದೇಶ ಪ್ರೇಮಿ ಸಂಗೊಳ್ಳಿರಾಯಣ್ಣನನ್ನು ನಮ್ಮವರ ಕುತಂತ್ರದಿಂದಲೇ ಬ್ರಿಟಿಷರಿಗೆ ಹಿಡಿದು ಕೊಡಲಾಯಿತು. ರಾಯಣ್ಣ ಕುರುಬ ಸಮುದಾಯದವರು ಎನ್ನುವ ಕಾರಣಕ್ಕೆ ನಾವು ಗೌರವಿಸುವುದಲ್ಲ, ಬದಲಿಗೆ ರಾಯಣ್ಣನ ದೇಶಪ್ರೇಮ ಮತ್ತು ತ್ಯಾಗದ ಕಾರಣದಿಂದಾಗಿ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು, ಗೌರವಿಸಬೇಕು. ಪ್ರತೀ ಮನೆಗಳಲ್ಲೂ ರಾಯಣ್ಣ ಜನಿಸಬೇಕು ಎಂದರು.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಕೆಂಪೇಗೌಡ ಪ್ರಾಧಿಕಾರ ಮಾಡಿದ್ದು ನಾವೇ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಗೆ ಶಿಫಾರಸ್ಸು ಮಾಡಿದ್ದು ಕೂಡ ನಾವೆಯೇ. ಕೆಂಪೇಗೌಡ, ರಾಯಣ್ಣ, ಬಸವಣ್ಣ, ಕುವೆಂಪು, ಕನಕದಾಸ, ಮಹಾತ್ಮಗಾಂಧಿ, ವಿವೇಕಾನಂದ ಎಲ್ಲ ಮಹಾತ್ಮರ ಆಶಯಗಳು ಸ್ಪೂರ್ಥಿಯಾಗಲಿ ಎನ್ನುವ ಕಾರಣಕ್ಕೆ ಅವರ ಹೆಸರುಗಳನ್ನು ಇಡಲಾಗುತ್ತದೆ ಎಂದರು.

ಆದರೆ ಇವರ ಆಶಯಗಳು ನಾಶ ಆಗಬೇಕು, ಸಂವಿಧಾನ ಇರಬಾರದು, ಅಸಮಾನತೆ ಮುಂದುವರೆಯಬೇಕು, ಯಾರೋ ದುಡಿದಿದ್ದನ್ನು ತಾವು ಕುಳಿತು ತಿನ್ನಬೇಕು ಎಂದು ಬಯಸುವವರು ಈಗಲೂ ನಮ್ಮ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸುತ್ತಿದ್ದಾರೆ. ಅವರ ಬಗ್ಗೆ ತೀವ್ರ ಎಚ್ಚರದಿಂದ ಇರಬೇಕು ಎಂದು ಕರೆ  ನೀಡಿದರು.

ನಮ್ಮಲ್ಲಿ ಒಬ್ಬ ರಾಜನನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ. ಈ ಒಡಕನ್ನು ಬಳಸಿಕೊಂಡು ಘಜ್ನಿ ಮಹಮದ್ ಮತ್ತು ಬ್ರಿಟಿಷರು, ಫ್ರೆಂಚರು ಮುಂತಾದವರು ದಾಳಿ ಮಾಡಿದರು ಎಂದರು.

ದೇಶದ ಅವಕಾಶಗಳು ಸಮಾಜದ ಎಲ್ಲಾ ವರ್ಗದವರಿಗೆ ಹಂಚಿಕೆ ಆಗಬೇಕು, ಸಂಪತ್ತಿನ ಹಂಚಿಕೆ ಆಗಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯ. ಬಸವಣ್ಣನವರ ಆಶಯವೂ ಅದೇ ಆಗಿತ್ತು. ಕುವೆಂಪು ಅವರ ಆಶಯವೂ ಆಗಿತ್ತು. ಈ ಎಲ್ಲರ ಆಶಯ ರಾಯಣ್ಣನ ಹೋರಾಟದಲ್ಲೂ ಇತ್ತು ಎಂದು ವಿವರಿಸಿದರು.

ಆದಿ ಚುಂಚನಗಿರಿ ಮಹಾ ಸಂಸ್ಥಾನದ ಧರ್ಮಗುರು ನಿರ್ಮಲಾನಂದ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *