ಬೆಂಗಳೂರು ನ.5- ಮನೆಗೆ ನುಗ್ಗಿ ಸರಕಾರಿ ಮಹಿಳಾ ಅಧಿಕಾರಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಶನಿವಾರ ತಡರಾತ್ರಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಕೆ ಎಸ್ (37) ಕೊಲೆಯಾದವರು.ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಅಧಿಕಾರಿ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬೆಂಗಳೂರಿನ ಗ್ರಾಮಾಂತರ ಭೂಗರ್ಭ ಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿಮಾ ದೊಡ್ಡಕಲ್ಲಸಂದ್ರದ ಕುವೆಂಪು ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದರು. ಪತಿ ಮತ್ತು ಮಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೆಲೆಸಿದ್ದಾರೆ. ಕಳೆದ ರಾತ್ರಿ ಈ ಕೃತ್ಯ ನಡೆದಿದೆ.
ನಡೆದ ಘಟನೆಯೇನು?: ನಿನ್ನೆ ಶನಿವಾರ ರಾತ್ರಿ 8 ಗಂಟೆಗೆ ಪ್ರತಿಮಾ ಅವರನ್ನು ಕಛೇರಿಯಿಂದ ಮನೆಗೆ ಚಾಲಕ ಡ್ರಾಪ್ ಮಾಡಿ ತೆರಳಿದ ಬಳಿಕ ಹಂತಕರು ಬಂದು ಕೊಲೆ ಮಾಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಮನೆಯ ಒಳಗೆ ಬಂದು ಕೊಲೆ ಮಾಡಿ ಹೋಗಿರುವ ಕಾರಣ ಮೇಲ್ನೋಟಕ್ಕೆ ಇದು ಪಕ್ಕಾ ಯೋಜಿತ ಕೃತ್ಯವಾಗಿದ್ದು ಪರಿಚಿತರೇ ಇದನ್ನು ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ರಾತ್ರಿ ಪ್ರತಿಮಾ ಅವರಿಗೆ ಅವರ ಅಣ್ಣ ಕರೆ ಮಾಡಿದ್ದ, ಆದರೆ ಕರೆ ಸ್ವೀಕರಿಸಿರಲಿಲ್ಲ. ಬೆಳಿಗ್ಗೆ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ. ಹೀಗಾಗಿ ಇದೊಂದು ಪೂರ್ವ ನಿಯೋಜಿತ ಹತ್ಯೆ ಎಂಬುದು ಸ್ಪಷ್ಟವಾಗಿದೆ. ಪರಿಚಿತರಿಂದಲೇ ಕೊಲೆಯಾಗಿರುವ ಅನುಮಾನ ಇರುವ ಹಿನ್ನೆಲೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮನೆಯಲ್ಲಿ ಡಿಸಿಪಿ ರಾಹುಲ್ ಶಹಪುರವಾಡ್ ಪರಿಶೀಲನೆ ನಡೆಸಿದ್ದಾರೆ.
ಒಂಟಿಯಾಗಿ ವಾಸಿಸುತ್ತಿದ್ದ ಪ್ರತಿಮಾ: ಪ್ರತಿಮಾ ಅವರ ಪತಿ ಮತ್ತು ಮಗ ತೀರ್ಥಹಳ್ಳಿಯ ತುಡುಕಿ ಗ್ರಾಮದಲ್ಲಿ ವಾಸವಿದ್ದಾರೆ. 18 ವರ್ಷಗಳ ಹಿಂದೆ ಪ್ರತಿಮಾ ಹಾಗೂ ಸತ್ಯನಾರಾಯಣ ವಿವಾಹವಾಗಿದ್ದರು. ಮದುವೆಯಾದ ಸ್ವಲ್ಪ ದಿನಗಳಲ್ಲೇ ಪ್ರತಿಮಾಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ನೌಕರಿ ಸಿಕ್ಕಿತು. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವರ್ಗವಾಗಿದ್ದರು. ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಇವರಿಗೆ 15 ವರ್ಷದ ಎಸ್ ಎಸ್ ಎಲ್ ಸಿ ಓದುವ ಮಗನಿದ್ದಾನೆ.
ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ ಕೊಲೆ ಪ್ರಕರಣದ ತನಿಖೆ- ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಈಗಷ್ಟೇ ಮಾಹಿತಿ ತಿಳಿಯಿತು. ಅವರು ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದು ಅವರ ಪತಿ ಪರವೂರಿನಲ್ಲಿದ್ದರಂತೆ. ಅವರ ಕೊಲೆ ಹೇಗಾಯ್ತು, ಯಾಕಾಯ್ತು ಎಂದು ತನಿಖೆ ಮಾಡಿಸಲಾಗುವುದು ಎಂದರು.
ಗಣಿ ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಯಾಗಿದ್ದ ಪ್ರತಿಮಾ ತೀರ್ಥಹಳ್ಳಿ ಮೂಲದವರಾಗಿದ್ದು, ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರ ಬಳಿಕ ಕುವೆಂಪು ನಗರದ ಅಪಾರ್ಟ್ ಮೆಂಟಿನಲ್ಲಿ ಬಾಡಿಗೆಗೆ ಒಬ್ಬರೇ ವಾಸವಾಗಿದ್ದರು. ಕಳೆದ ರಾತ್ರಿ ಅವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ರಾತ್ರಿ 8 ಗಂಟೆ ವೇಳೆಗೆ ಅವರನ್ನು ಡ್ರೈವರ್ ಕಚೇರಿಯಿಂದ ಮನೆಗೆ ಬಿಟ್ಟು ಬಂದಿದ್ದರು. ಇಂದು ಬೆಳಗ್ಗೆ 8 ಗಂಟೆಗೆ ಪ್ರತಿಮಾ ಸಹೋದರ ಕರೆ ಮಾಡಿದರೂ ಅದನ್ನು ಸ್ವೀಕರಿಸಿರಲಿಲ್ಲ. ಬಳಿಕ ಫ್ಲ್ಯಾಟ್ ಬಳಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.