Mysore dasara ಮೈಸೂರು ದಸರಾ ವೈಶಿಷ್ಟ್ಯಪೂರ್ಣವಾಗಿದ್ದು ಐತಿಹಾಸಿಕ ಜಂಬೂಸವಾರಿಗೆ ಇನ್ನು ಮೂರೇ ದಿನ ಬಾಕಿಯಿದೆ. ಈಗಾಗಲೇ ಗಜಪಡೆ ಜಂಬೂಸವಾರಿಗೆ ಸರ್ವ ರೀತಿಯಲ್ಲಿಯೂ ತಯಾರಿಗೊಂಡಿದೆ. ಕಳೆದ ಎರಡು ತಿಂಗಳ ಕಾಲ ಜಂಬೂಸವಾರಿಗೆ ಬೇಕಾದ ತಾಲೀಮು ಹಂತಹಂತವಾಗಿ ನಡೆದಿದ್ದು, ಬುಧವಾರ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವುದರೊಂದಿಗೆ ಐತಿಹಾಸಿಕ ಮೈಸೂರು ದಸರಾ ಸಂಪನ್ನಗೊಳ್ಳಲಿದೆ.
ಶ್ರೀರಂಗಪಟ್ಟಣ ಜಂಬೂ ಸವಾರಿ ಮೆರವಣಿಗೆ; ಮಹೇಂದ್ರ ಆನೆಯ ಗಾಂಭೀರ್ಯ ನಡೆ ಶ್ರೀರಂಗಪಟ್ಟಣ ಜಂಬೂ ಸವಾರಿ ಮೆರವಣಿಗೆ; ಮಹೇಂದ್ರ ಆನೆಯ ಗಾಂಭೀರ್ಯ ನಡೆ
ಮೈಸೂರು ದಸರಾದಲ್ಲಿ ಜಂಬೂಸವಾರಿ ಬಹುಮುಖ್ಯ ಆಕರ್ಷಣೆಯಾಗಿದ್ದು, ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸಾಗುವುದನ್ನು ಕಣ್ತುಂಬಿಸಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಾರೆ. ಆದರೆ ಆ ಜಂಬೂಸವಾರಿ ಯಶಸ್ವಿಯಾಗಿ ಮತ್ತು ನಿರ್ವಿಘ್ನವಾಗಿ ನಡೆಯ ಬೇಕಾದರೆ ಬರೀ ತಾಲೀಮು ಮಾತ್ರವಲ್ಲ, ಹಲವು ವಿಧಿವಿಧಾನ ಮತ್ತು ಪೂಜಾ ಕಾರ್ಯಗಳು ನಡೆಯುತ್ತವೆ. ಅದರಲ್ಲೊಂದು ಗಜಪಡೆಗೆ ದರ್ಗಾದಲ್ಲಿ ಪೂಜೆ.
ಸಾಮಾನ್ಯವಾಗಿ ಮೈಸೂರು ದಸರಾ ಆರಂಭವಾಗುವುದು ಚಾಮುಂಡಿಬೆಟ್ಟದಲ್ಲಿ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದರೊಂದಿಗೆ ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಿದ ನಂತರ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪ್ರತಿ ದಿನವೂ ಪೂಜೆ ಸಲ್ಲಿಸಲಾಗುತ್ತದೆ. ಜತೆಗೆ ಜಂಬೂಸವಾರಿಯ ದಿನ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಯಾವುದೇ ತೊಂದರೆಗಳು ಬಾರದಂತೆ ಯಶಸ್ವಿಯಾಗಿ ಜಂಬೂಸವಾರಿ ಸಾಗುವಂತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆ ನಂತರ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯೊಂದಿಗೆ ಅರಮನೆಗೆ ಹಿಂತಿರುಗಿ ಚಾಮುಂಡೇಶ್ವರಿ ದೇಗುಲದಿಂದ ತಂದ ಪ್ರಸಾದವನ್ನು ಆನೆಗಳಿಗೆ ನೀಡಲಾಗುತ್ತದೆ.
ಜಂಬೂ ಸವಾರಿಯ ಸಮಯ
ಇದರ ನಡುವೆ ಜಂಬೂಸವಾರಿಗೆ ಮುನ್ನ ದಿನ ಅಂದರೆ ಆಯುಧಪೂಜೆಯ ದಿನ ದರ್ಗಾದಲ್ಲಿ ಗಜಪಡೆಗೆ ಪೂಜೆ ನಡೆಸಲಾಗುತ್ತದೆ ಇದು ಒಂದು ರೀತಿಯ ಅಚ್ಚರಿಯ ವಿಷಯವಾದರೂ ನಿಜ. ಇಂತಹದೊಂದು ಆಚರಣೆ ನಡೆಯುತ್ತದೆ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಂತಿಲ್ಲ. ಅದು ತಿಳಿಯ ಬೇಕಾದರೆ ಸುಮಾರು ಎಂಬತೈದು ವರ್ಷಗಳ ಹಿಂದಿನ ದಿನಗಳಿಗೆ ಹೋಗಬೇಕಾಗುತ್ತದೆ. ಅದು ಸ್ವಾತಂತ್ರ್ಯ ಪೂರ್ವದ ದಿನಗಳು. ಆಗ ದಸರಾ ಆಚರಣೆಗೆ ಜಂಬೂಸವಾರಿಯೇ ಪ್ರಮುಖ ಆಕರ್ಷಣೆಯಾಗಿತ್ತು. ಈಗ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಿದರೆ ಆಗ ಸ್ವತಃ ಮಹಾರಾಜರೇ ಅಂಬಾರಿಯಲ್ಲಿ ಆಸೀನರಾಗಿ ಮೆರವಣಿಯಲ್ಲಿ ತೆರಳುತ್ತಿದ್ದರು.
ಜನರ ಅನುಕೂಲಕ್ಕೆ ಛತ್ರ ನಿರ್ಮಾಣ
ಸಾಮಾನ್ಯ ದಿನಗಳಲ್ಲಿ ಜನರಿಗೆ ಮಹಾರಾಜರನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಜಂಬೂಸವಾರಿಯ ದಿನ ಆನೆ ಮೇಲೆ ಆಸೀನರಾಗುವ ನಾಡ ಪ್ರಭುವನ್ನು ನೋಡಬಹುದು ಎಂಬ ಉದ್ದೇಶದಿಂದ ಜನರು ವಿಜಯ ದಶಮಿಯ ದಿನದಂದು ನಡೆಯುವ ಜಂಬೂಸವಾರಿಗೆ ಗ್ರಾಮೀಣ ಪ್ರದೇಶಗಳಿಂದ ಬರುತ್ತಿದ್ದರು. ಹೀಗೆ ಬರುವ ಜನರು ನಗರದಲ್ಲಿ ವಾಸ್ತವ್ಯ ಹೂಡಿ ದಸರಾ ವೀಕ್ಷಣೆಗೆ ಅನುಕೂಲವಾಗುವಂತೆ ಛತ್ರಗಳನ್ನು ಕೂಡ ಮಹಾರಾಜರು ನಿರ್ಮಿಸಿದ್ದರು.
ಇಂತಹ ಅದ್ಧೂರಿ ದಸರಾ ಸುಗಮವಾಗಿ ಸಾಗಬೇಕಾದರೆ ಜಂಬೂಸವಾರಿಯ ಗಜಪಡೆ ಸರ್ವ ರೀತಿಯಲ್ಲಿ ಶಕ್ತವಾಗಿರಬೇಕು. ಹೀಗಾಗಿಯೇ ಗಜಪಡೆಯನ್ನು ತಾಲೀಮು ಮೂಲಕ ಸಜ್ಜು ಗೊಳಿಸುವ ಕೆಲಸ ನಡೆಸಲಾಗುತ್ತಿತ್ತು. ಹೀಗೆ ಇರುವಾಗ 85 ವರ್ಷಗಳ ಹಿಂದೆ ಒಂದು ಘಟನೆ ನಡೆಯಿತು. ಇನ್ನೇನು ಜಂಬೂಸವಾರಿಗೆ ಕೆಲವೇ ದಿನಗಳು ಬಾಕಿಯಿರುವಂತೆಯೇ ದಸರಾ ಜಂಬೂಸವಾರಿಗೆ ಬಂದಿದ್ದ ಗಜಪಡೆಯ ಆನೆಯೊಂದು ಇದ್ದಕ್ಕಿದ್ದಂತೆಯೇ ಅಸ್ವಸ್ಥಗೊಂಡಿತು.
ಈಗಲೂ ನಡೆಯುತ್ತೆ ದರ್ಗಾದಲ್ಲಿ ಪೂಜೆ
ದಿಢೀರ್ ಆಗಿ ಆನೆ ಅಸ್ವಸ್ಥಗೊಂಡಿದ್ದರಿಂದ ಆನೆಗಳನ್ನು ನೋಡಿಕೊಳ್ಳುತ್ತಿದ್ದ ಮಾವುತರು ಮತ್ತು ಕಾವಾಡಿಗರು ಆತಂಕಗೊಂಡರು. ಮುಂದೇನು ಮಾಡುವುದು ಎಂಬ ಚಿಂತೆ ಅವರನ್ನು ಕಾಡಿತ್ತು. ಈ ವೇಳೆ ಏನು ಮಾಡುವುದೆಂದು ತೋಚದ ಮಾವುತರು ಸಮೀಪದಲ್ಲಿಯೇ ಇದ್ದ ನಗರದ ಕೃಷ್ಣವಿಲಾಸ ರಸ್ತೆಯಲ್ಲಿರುವ ಹಜರತ್ ಇಮಾಮ್ ಷಾ ವಲೀ ದರ್ಗಾಕ್ಕೆ ಬಂದು ಅಲ್ಲಿನ ಧರ್ಮಗುರುಗಳಿಗೆ ವಿಚಾರ ಹೇಳುತ್ತಾರೆ. ಈ ವೇಳೆ ಧರ್ಮಗುರುಗಳು ತಾಯತವೊಂದನ್ನು ನೀಡಿ ಅಸ್ವಸ್ಥಕ್ಕೀಡಾದ ಆನೆಗೆ ಕಟ್ಟುವಂತೆ ಸೂಚಿಸುತ್ತಾರೆ.
ಧರ್ಮಗುರುಗಳಿಂದ ಪಡೆದ ತಾಯತವನ್ನು ಅಸ್ವಸ್ಥಗೊಂಡ ಆನೆಗೆ ಮಾವುತರು ಕಟ್ಟುತ್ತಾರೆ. ಆಶ್ಚರ್ಯವೆಂಬಂತೆ ಆನೆ ಚೇತರಿಸಿಕೊಳ್ಳುತ್ತದೆ. ಅಲ್ಲಿಂದೀಚೆಗೆ ಆನೆಗಳನ್ನು ದರ್ಗಾಕ್ಕೆ ಕರೆದೊಯ್ದು ಪೂಜೆ ಸಲ್ಲಿಸುವ ಸಂಪ್ರದಾಯ ರೂಢಿಗೆ ಬಂತೆಂದು ಹೇಳಲಾಗುತ್ತದೆ. ಇದು ಇವತ್ತಿಗೂ ಮುಂದುವರೆದಿದ್ದು, ಆಯುಧಪೂಜೆಯ ದಿನ ಸಂಜೆ ಗಜಪಡೆಯನ್ನು ದರ್ಗಾಕ್ಕೆ ಕರೆದೊಯ್ಯಲಾಗುತ್ತದೆ. ಈ ವೇಳೆ ಮಾವುತರು ತಾವು ಕೊಂಡೊಯ್ದ ಬೂಂದಿ, ಅಗರಬತ್ತಿ ಸೇರಿದಂತೆ ಪೂಜೆಗೆ ಬೇಕಾದ ಸಾಮಗ್ರಿಯನ್ನು ಧರ್ಮಗುರುಗಳಿಗೆ ನೀಡುತ್ತಾರೆ.
ಯಾವುದೇ ವಿಘ್ನ ಬಾರದಂತೆ ಪೂಜೆ
ಅದನ್ನು ಪಡೆದ ಧರ್ಮಗುರುಗಳು ದರ್ಗಾದಲ್ಲಿರಿಸಿ ಪೂಜೆ ಸಲ್ಲಿಸುತ್ತಾರೆ. ಬಳಿಕ ಜಂಬೂಸವಾರಿಗೆ ಯಾವುದೇ ವಿಘ್ನ ಬಾರದಂತೆ ಪ್ರಾರ್ಥಿಸಿ ನವಿಲು ಗರಿಯನ್ನು ಆನೆಗಳ ತಲೆಗೆ ಸೋಕಿಸಿ, ನಿಂಬೆ ಹಣ್ಣಿನಿಂದ ದೃಷ್ಟಿ ತೆಗೆದು ಬಳಿಕ ನಿಂಬೆ ಹಣ್ಣನ್ನು ಆನೆಗಳ ಕಾಲಿನಿಂದ ತುಳಿಸಲಾಗುತ್ತದೆ. ಅಲ್ಲಿಗೆ ಪೂಜೆ ಮುಗಿಯುತ್ತದೆ. ಆ ನಂತರ ಗಜಪಡೆ ಅರಮನೆ ಆವರಣಕ್ಕೆ ಹಿಂತಿರುಗುತ್ತದೆ.
ಗಜಪಡೆಗಳಿಗೆ ಹಜರತ್ ಇಮಾಮ್ ಷಾ ವಲೀ ದರ್ಗಾದಲ್ಲಿ ಕಳೆದ ಮೂರು ತಲೆ ಮಾರುಗಳಿಂದ ಪೂಜೆ ಮಾಡುತ್ತಾ ಬರಲಾಗುತ್ತಿದ್ದು, ಮೊದಲಿಗೆ ಯಾಕೂಬ್ ಸಾಬ್ ಮಾಡುತ್ತಿದ್ದರೆ, ತದನಂತರ ಮೊಹಮ್ಮದ್ ನೂರುಲ್ಲಾ ಷಾ ಮಾಡುತ್ತಿದ್ದರು. ಈಗ ಮೊಹಮ್ಮದ್ ನಬೀಬುಲ್ಲಾ ಷಾ ನೆರವೇರಿಸುತ್ತಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ಮೈಸೂರು ದಸರಾ ಸರ್ವ ಧರ್ಮಗಳ ಸಂಗಮ ಎನ್ನುವುದಕ್ಕೆ ಇದೊಂದು ನಿದರ್ಶನ ಎಂದರೆ ತಪ್ಪಾಗಲಾರದು.