Hariprasad Breaking News: ಬೆಂಗಳೂರು ಆಗಸ್ಟ್8 : ರಾಜಕೀಯ ವಲಯದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು,ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah ) ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ (B.K Hariprasad) ಅವರು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿಯಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟು ಟೀಕಾಕಾರರಾಗಿರುವ ಕಟ್ಟಾ ಕಾಂಗ್ರೆಸಿಗ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಅವರ ಅಚ್ಚರಿಯ ಭೇಟಿಯು ಕಾಂಗ್ರೆಸ್ ವಲಯ ಸಂಚಲನ ಮೂಡಿಸಿದ್ದು, ಸಿದ್ದರಾಮಯ್ಯ ಅವರಿಗೆ ಭೀಮ ಬಲ ಬಂದಾಂತಾಗಿದೆ.
ಇದನ್ನು ಓದಿಃ ಆಂತರಿಕ ಜಗಳದಿಂದ ಸಿದ್ದರಾಮಯ್ಯ ಸರಕಾರ ಪತನ ಆಗಲಿದೆಃ ನಳಿನ್
ಸಿಎಂ ಕಚೇರಿಯಲ್ಲಿ ಸಿಬ್ಬಂದಿಯನ್ನು ಹೊರಕಳಿಸಿ ಬಿ.ಕೆ. ಹರಿಪ್ರಸಾದ್ ರೊಂದಿಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಮಾತುಕತೆ ನಡೆಸಿದರು. ಮೈಸೂರು (Mysore) ಸಮಾವೇಶದ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದ್ದರೂ ಕೂಡ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಪಾರ್ಟಿ ಮತ್ತು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಮಹತ್ತರ ಬದಲಾವಣೆ ಆಗಬಹುದು ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರ್ಪಡೆ ಆದ ಕಾಲದಲ್ಲಿ ಸಿದ್ದರಾಮಯ್ಯನವರ ಸೈದ್ಧಾಂತಿಕ ಸಹಯೋಗಿ ಆಗಿದ್ದ ಹರಿಪ್ರಸಾದ್ ಇತ್ತೀಚಿಗಿನ ವರೆಗು ಸಿದ್ದರಾಮಯ್ಯನವರ ಸೈದ್ಧಾಂತಿಕ ನಿಲುವಿಗೆ ಬಹಿರಂಗ ಬೆಂಬಲ ಸೂಚಿಸಿದ್ದರು. ಮುಖ್ಯಮಂತ್ರಿ ಎಡವಿದಾಗ ಬಹಿರಂಗವಾಗಿ ಟೀಕೆ ಕೂಡ ಮಾಡಿದ್ದರು.
ಎರಡನೇ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾದ ಅನಂತರ ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದರು.
ಸಿದ್ದರಾಮಯ್ಯನವರು ಪ್ರತಿಪಕ್ಷಗಳಿಂದ ಭ್ರಷ್ಟಚಾರ ಆರೋಪ ಎದುರಿಸಿ ರಾಜಕೀಯ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಪರವಾಗಿ ನಿಲ್ಲಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಬಯಸಿತ್ತು. ಈ ಮಧ್ಯೆ, ಸಿದ್ದರಾಮಯ್ಯನವರ ಬೆಂಬಲಿಗರು ಹಲವು ಬಾರಿ ಹರಿಪ್ರಸಾದ್ ಮತ್ತು ಮುಖ್ಯಮಂತ್ರಿ ಭೇಟಿಗಾಗಿ ಪ್ರಯತ್ನ ನಡೆಸಿದ್ದರು ಸಾಧ್ಯ ಆಗಿರಲಿಲ್ಲ.
ಗ್ಯಾರಂಟಿ ಯೋಜನೆಯಿಂದ ಕಂಗೆಟ್ಟು ಹೋಗಿರುವ ಕಾಂಗ್ರೆಸ್ ಪಕ್ಷದ ಶಾಸಕರು ಬಹಿರಂಗವಾಗಿ ಮುಖ್ಯಮಂತ್ರಿಯವರ ಬೆಂಬಲಕ್ಕೆ ನಿಂತಿಲ್ಲ. ಒಂದು ಕಾಲದ ಸಿದ್ದರಾಮಯ್ಯ ಆಪ್ತರು ಅವರ ಮಂತ್ರಿ ಮಂಡಲದ ಸದಸ್ಯರೇ ಮುಖ್ಯಮಂತ್ರಿಯವರ ಆಸ್ಥಾನ ಕಲಾಪಗಳ ಬಗ್ಗೆ ಅಸಮಾಧಾನ ಹೊಂದಿ ಮುಖ್ಯಮಂತ್ರಿಯವರನ್ನು ಬೆಂಬಲಿಸಿ ಹೇಳಿಕೆ ನೀಡಲು ಮುಂದೆ ಬರುತ್ತಿಲ್ಲ.
ಈ ನಡುವೆ, ಕಾಂಗ್ರೆಸ್ಸಿಗೆ ಸಿದ್ದರಾಮಯ್ಯರ ಕರೆತಂದು ಮಹಾ ತಪ್ಪು ಮಾಡಿರುವ ಹಾಲು ಮತದವರ ಮತ್ತೊಬ್ಬ ಮುಖಂಡ, ಸಿದ್ದರಾಮಯ್ಯ ಅತ್ಯಾಪ್ತ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರುದ್ಧ ಯುದ್ಧವನ್ನೇ ಘೋಷಣೆ ಮಾಡಿರುವುದು ಸಿದ್ದರಾಮಯ್ಯನವರನ್ನು ಏಕಾಂಕಿ ಮಾಡಿದೆ.
ಇಂತಹ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯರ ಕಟು ಟೀಕಾಕಾರರಾಗಿದ್ದ ಬಿ.ಕೆ. ಹರಿಪ್ರಸಾದ್ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಯನ್ನು ಆಯೋಜಿಸುವಲ್ಲಿ ಯಶಸ್ವಿಯಾದವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ.
ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರು ಜನತಾದಳ ಕಾಲದಿಂದಲೂ ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತ ಸ್ನೇಹಿತರಾಗಿದ್ದಾರೆ.
ಹಿಂದುಳಿದ ಸಮುದಾಯಗಳ ಇಬ್ಬರು ಮುಖಂಡರು ಒಂದಾಗಿ ಮಾತುಕತೆ ನಡೆಸಿರುವುದು ಒಂದೆಡೆ ತೀವ್ರ ಕುತೂಹಲ ಮೂಡಿಸಿದ್ದರೆ ಕಾಂಗ್ರೆಸ್ ಪಕ್ಷದೊಳಗೆ ಸಿದ್ದರಾಮಯ್ಯನವರಿಗೆ ಹೆಚ್ಚಿನ ಬಲಬಂದಾಂತಾಗಿದೆ. ಮಂತ್ರಿ, ಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಹೆಚ್ಚಿನ ನಿರಾಸಕ್ತಿ ಹೊಂದಿರುವ ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಮೈಸೂರಿನಲ್ಲಿ ನಡೆಯಲಿರುವ ಜನಾಂದೋಲನಾ ಸಭೆಗೆ ಆಹ್ವಾನಿಸುವ ಸಂಬಂಧ ಬಿ.ಕೆ.ಹರಿಪ್ರಸಾದ್ ಗೆ ಕರೆ ಮಾಡಿ ಸಚಿವ ಹೆಚ್.ಸಿ. ಮಹದೇವಪ್ಪ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗುವಂತೆ ವಿನಂತಿಸಿದ್ದರು. ಹೀಗಾಗಿ ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಮೈಸೂರಿನಲ್ಲಿ ಶುಕ್ರವಾರ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸುವರು.