Free Power ಹೊಸದಿಲ್ಲಿ, ಫೆ.1- ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಕೇಂದ್ರ ಸರಕಾರ ತನ್ನ ಹೊಸ ಬಜೆಟಿನಲ್ಲಿ Budget ಪ್ರಕಟಿಸಿದೆ.
2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸರ್ಕಾರ ಶ್ರಮಿಸುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
2024-25 ರ ಮಧ್ಯಂತರ ಬಜೆಟ್ ನ್ನು ಇಂದು ಲೋಕಸಭೆಯಲ್ಲಿ ಮಂಡಿಸಿ ಮಾತನಾಡಿ ನಿರ್ಮಲಾ ಸೀತಾರಾಮನ್ 5 ವರ್ಷಗಳಲ್ಲಿ 3 ಕೋಟಿ ಮನೆ ನಿರ್ಮಾಣ ಗುರಿ, ಜನರು ಹೆಚ್ಚಿನ ಆದಾಯ ಗಳಿಸಲು ಹೆಚ್ಚಿನ ಆದ್ಯತೆ, ವಿಶ್ವದ ಸಮಸ್ಯೆಗಳಿಗೆ ಭಾರತ ಪರಿಹಾರ ನೀಡಿದೆ. ಹೊಸ ಶಿಕ್ಷಣ ನೀತಿ (ಎನ್ಇಪಿ) ಮೂಲಕ ಯುವಕರ ಸಬಲೀಕರಣ ಆಗಲಿದೆ ಎಂದವರು ಹೇಳಿದರು..
‘ಅನ್ನದಾತ’ (ರೈತರು)ರಿಗಾಗಿ ಕನಿಷ್ಠ ಬೆಂಬಲ ಬೆಲೆಗಳನ್ನು ನಿಯತಕಾಲಿಕವಾಗಿ ಮತ್ತು ಸೂಕ್ತವಾಗಿ ಹೆಚ್ಚಿಸಲಾಗಿದೆ ಎಂದು ಬಜೆಟ್ ಭಾಷಣದಲ್ಲಿ ಹೇಳಿದರು.
ಹಲವು ದಶಕಗಳಿಂದ ಬಾಕಿ ಉಳಿದಿರುವ ಪರೋಕ್ಷ ತೆರಿಗೆ ಬಾಕಿಯನ್ನು ಮನ್ನಾ ಮಾಡಲಾಗುವುದು. ಇದರಿಂದ ಒಂದು ಕೋಟಿ ತೆರಿಗೆದಾರರಿಗೆ ಪ್ರಯೋಜನ ಆಗಲಿದೆ.
ವಿತ್ತ ಸಚಿವೆ ನಿರ್ಮಲಾ ಅವರ ಭಾಷಣದ ಮುಖ್ಯಾಂಶಗಳು…
ಸಾಮಾಜಿಕ ನ್ಯಾಯದ ತತ್ವದಲ್ಲಿ ಕೇಂದ್ರ ಸರ್ಕಾರವು ಆಡಳಿತ, ಸೇವೆ, ಅಭಿವೃದ್ಧಿಗೆ ಆದ್ಯತೆ ನೀಡಿದೆ.
2047ರ ವೇಳೆಗೆ ಭಾರತ ವಿಕಸಿತವಾಗಲಿದೆ, ಜಗತ್ತಿನಲ್ಲೇ ಬಲಿಷ್ಠವಾಗಿದೆ
ಕೇಂದ್ರ ಸರ್ಕಾರವು ಸ್ವಜನ ಪಕ್ಷಪಾತ, ವಂಶಾಡಳಿತಕ್ಕೆ ಇತಿಶ್ರೀ ಹಾಡಿದೆ
ಭ್ರಷ್ಟಾಚಾರ ನಿಗ್ರಹ ಮಾಡಿದ ಪರಿಣಾಮ ದೇಶವು ಸಾಮಾಜಿಕ ಆರ್ಥಿಕ ಏಳಿಗೆ ಸಾಕಾರವಾಗಿದೆ.
ಕೇಂದ್ರ ಸರ್ಕಾರದ ಸಮರ್ಥ ಆಡಳಿತದಿಂದ 25 ಕೋಟಿ ಜನ ಬಡತನದಿಂದ ಹೊರಗೆ
ಜನಧನ್ ಯೋಜನೆಯಿಂದ 2.7 ಲಕ್ಷ ಕೋಟಿ ರೂ. ಉಳಿತಾಯ ಖಾತೆಗೆ ಜಮೆ
ಪಿಎಂ ಸ್ವನಿಧಿ ಯೋಜನೆಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯಧನ
ಪಿಎಂ ಜನಮನ ಯೋಜನೆಯಿಂದ ಬುಡಕಟ್ಟು ಸಮುದಾಯಗಳಿಗೆ ನೆರವು
ಪಿಎಂ ವಿಶ್ವಕರ್ಮ ಯೋಜನೆಯಿಂದ ಸಮುದಾಯಗಳ ಏಳಿಗೆ
ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ 11.8 ಕೋಟಿ ರೈತರಿಗೆ ವಾರ್ಷಿಕ 6 ಸಾವಿರ ರೂ. ಸಹಾಯಧನ
ಸಣ್ಣ ನಗರಗಳಿಗೂ ಮೆಟ್ರೋ ವಿಸ್ತರಣೆ
40 ಸಾವಿರ ರೈಲ್ವೆ ಕೋಚ್ ಬದಲಾವಣೆಗೆ ಕ್ರಮ ಕೈಗೊಂಡಿದ್ದೇವೆ
ಮೆಟ್ರೋ, ವಂದೇ ಭಾರತ್ ರೈಲಿಗೆ ಹೆಚ್ಚಿನ ಒತ್ತು
ಭಾರತದ ಆರ್ಥಿಕತೆಯು 2022-23ರಲ್ಲಿ ಶೇ.7.2 ಮತ್ತು 2021-22ರಲ್ಲಿ ಶೇ.8.7ರಷ್ಟು ಬೆಳವಣಿಗೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2023-24 ರಲ್ಲಿ ಭಾರತದ ಆರ್ಥಿಕತೆಯು ಶೇ.7.3 ಬೆಳವಣಿಗೆ ನಿರೀಕ್ಷಿಸಲಾಗಿದೆ. ಇದು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದ್ದು, ಈ ಮೂಲಕ ಮೊರಾರ್ಜಿ ದೇಸಾಯಿ ಬಳಿಕ ಸತತ 6 ಬಾರಿ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಮಂತ್ರಿಯಾಗಿ ದಾಖಲೆ ಬರೆದಿದ್ದಾರೆ.
ಚುನಾವಣೆಗೆ ಹೋಗುವುದಕ್ಕೂ ಮುನ್ನ ಸರ್ಕಾರಗಳು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸಾಧ್ಯವಿಲ್ಲ. ಹೀಗಾಗಿ ಲೇಖಾನುದಾನ ಅಥವಾ ಮಧ್ಯಂತರ ಬಜೆಟ್ ಮಂಡಿಸಲಾಗುತ್ತದೆ. ಲೇಖಾನುದಾನ ಅಂದರೆ, ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳ ಅವಧಿಗೆ ಸರ್ಕಾರಿ ಖರ್ಚುವೆಚ್ಚ ಹಾಗೂ ನೌಕರರ ಸಂಬಳ ಪಾವತಿಗೆ ಬೇಕಾದ ಹಣವನ್ನು ಬೊಕ್ಕಸದಿಂದ ಖರ್ಚು ಮಾಡಲು ಶಾಸನಸಭೆಯಿಂದ ಪಡೆಯುವ ಅನುಮತಿ. ಲೇಖಾನುದಾನವು ಸಂಕ್ಷಿಪ್ತ ಹಣಕಾಸು ದಾಖಲೆಯಾಗಿದ್ದು, ಅದರಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಅಂಕಿಅಂಶಗಳಷ್ಟೇ ಇರುತ್ತವೆ. ಅದರಲ್ಲಿ ತೆರಿಗೆ ದರಗಳನ್ನು ಬದಲಿಸಲು ಅಥವಾ ಹೊಸ ಯೋಜನೆಗಳನ್ನು ಪ್ರಕಟಿಸಲು ಸಾಧ್ಯವಿಲ್ಲ. ಅಗತ್ಯಬಿದ್ದರೆ ಲೇಖಾನುದಾನವನ್ನು ಇನ್ನೆರಡು ತಿಂಗಳು ವಿಸ್ತರಿಸಬಹುದು.