Kannada Novelist K T Gatti, ಮಂಗಳೂರು ಫೆ. 19:ಖ್ಯಾತ ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಇಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿ ನಿಧನ ಹೊಂದಿದರು.
1938ರ ಜುಲೈ 22ರಂದು ಕಾಸರಗೋಡು ಸಮೀಪದ ಕೂಡ್ಲ ಎಂಬಲ್ಲಿ ಜನಿಸಿದ ಕೆ.ಟಿ.ಗಟ್ಟಿಯವರು 1957ರಿಂದಲೇ ಸಾಹಿತ್ಯ ಕೃಷಿ ಪ್ರಾರಂಭಿಸಿದ್ದರು. ಗಟ್ಟಿಯವರಿಗೆ ತಂದೆ ತಾಯಿಯೇ ಪ್ರೇರಣೆಯಾಗಿದ್ದರು. ತಂದೆ ಧೂಮಪ್ಪನವರು ವೃತ್ತಿಯಲ್ಲಿ ಕೃಷಿಕರಾದರೂ ಯಕ್ಷಗಾನ ಪ್ರಿಯರು. ಅವರು ಕೂಡ್ಲು ಯಕ್ಷಗಾನ ನಾಟಕ ಮಂಡಲಿಯೊಡನೆ ಊರೂರು ಸುತ್ತುತ್ತಿದ್ದು, ಸಿಕ್ಕಿದ ಪುಸ್ತಕಗಳನ್ನು ಮನೆಗೆ ತಂದಿಡುತ್ತಿದ್ದುದು ಗಟ್ಟಿಯವರಿಗೆ ಓದಲು ಪ್ರಚೋದನೆ ನೀಡಿತ್ತು. ತಾಯಿ ಪರಮೇಶ್ವರಿಯವರು ಮನೆಯಲ್ಲಿ ಹಾಡುತ್ತಿದ್ದ ತುಳು-ಮಲಯಾಳಂ ಪಾಡ್ದನಗಳು ಸಾಹಿತ್ಯದಲ್ಲಿ ಮತ್ತಷ್ಟು ಆಸಕ್ತಿ ಬೆಳೆಯುವಂತೆ ಮಾಡಿದ್ದವು.
ಕೆ ಟಿ ಗಟ್ಟಿಯವರು ಕಾಸರಗೋಡಿನ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಕ್ರಮಬದ್ಧವಾಗಿ ಕಲಿತದ್ದು ಎಂಟನೆಯ ತರಗತಿಯವರೆಗೆ ಮಾತ್ರ. ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ನಂತರ ಕಾಸರಗೋಡಿನ ಚಳುವಳಿಯಲ್ಲಿ ಬಾಗಿಯಾದರು . ನಂತರ ಪಿ.ಯು. ಹಾಗೂ ಬಿ.ಎ. ಪದವಿಗಳನ್ನು ಕೇರಳ ವಿಶ್ವವಿದ್ಯಾಲಯದಿಂದ ಪಡೆದರು. ಎರಡು ವರ್ಷಗಳ ಶಿಕ್ಷಕರ ತರಬೇತಿ ಪಡೆದದ್ದು ಮಾಯಿಪ್ಪಾಡಿಯ ಸರಕಾರಿ ಬೇಸಿಕ್ ಟ್ರೈನಿಂಗ್ ಶಾಲೆಯಿಂದ. ತಲಚೇರಿಯ ಸರಕಾರಿ ಟ್ರೈನಿಂಗ್ ಕಾಲೇಜಿನಿಂದ ಒಂದು ವರ್ಷದ ಬಿ.ಎಡ್. ಪದವಿ ಪಡೆದ ಗಟ್ಟಿಯವರು ಶಿಕ್ಷಕರಾಗಿ ಸೇರಿದ್ದು ಕಾಸರಗೋಡಿದ ಸರಕಾರಿ ಪ್ರೌಢಶಾಲೆಯಲ್ಲಿ. ಬಿಡುವಿನ ವೇಳೆಯಲ್ಲಿ ಖಾಸಗಿಯಾಗಿ ಕುಳಿತು ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ೧೯೬೮ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆ ಸೇರಿ ಆರು ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರ ಜೊತೆಗೆ ಒಂದು ವರ್ಷ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲೂ ಅಧ್ಯಾಪಕರಾಗಿ ಸೇವೆಸಲ್ಲಿಸಿದರು. ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ನಿಯುಕ್ತರಾಗಿ ಇಥಿಯೋಪಿಯಾದಲ್ಲಿರುವಾಗಲೇ ಲಂಡನ್ನಿನ ಟ್ರಿನಿಟಿ ಕಾಲೇಜಿನಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೊಮ ಮತ್ತು ಆಕ್ಸ್ಫರ್ಡಿನ ಕಾಲೇಜ್ ಆಫ್ ಪ್ರಿಸೆಪ್ಟರ್ಸ್‌ನಿಂದ ಡಿಪ್ಲೊಮ ಪಡೆದರು.
ಕೆಲಕಾಲ ಇಥಿಯೋಪಿಯಾದಲ್ಲಿದ್ದು ೧೯೮೨ರಲ್ಲಿ ಸ್ವದೇಶಕ್ಕೆ ಮರಳಿಬಂದ ಗಟ್ಟಿಯವರು ಪೂರ್ಣಾವಧಿ ಲೇಖಕರಾಗಿ ಬದುಕಲು ನಿರ್ಧರಿಸಿ, ದ.ಕ. ಜಿಲ್ಲೆಯ ಉಜಿರೆಯ ಬಳಿ ಜಮೀನು ಖರೀದಿಸಿ ‘ವನಸಿರಿ’ ಯಲ್ಲಿ ಕೃಷಿ, ಸಾಹಿತ್ಯ ಕೃಷಿ ಎರಡರಲ್ಲೂ ತೊಡಗಿಸಿಕೊಂಡಿದ್ದರು..
ಕೆ ಟಿ ಗಟ್ಟಿಯವರು ಹಲವಾರು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ದುಡಿದಿದ್ದರ ಅನುಭವದಿಂದ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಭಾಷ್ಯಾಧ್ಯಯನ, ವ್ಯಾಕರಣ, ಇಂಗ್ಲಿಷ್ ಭಾಷೆಯ ಪ್ರಯೋಗ ಉಚ್ಚಾರಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ತಂದೆತಾಯಿಗಳಿಗೂ ಉಪಯುಕ್ತವಾಗುವಂತಹ ಅನೇಕ ಕೃತಿಗಳನ್ನು ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ರಚಿಸಿದ್ದಾರೆ. ಕನ್ನಡ ಕೃತಿಗಳೆಂದರೆ ಉತ್ಕೃಷ್ಟತೆಗಾಗಿ ತಾಯಿ-ತಂದೆ, ಗುರುಗಳಾಗಿ ತಾಯಿ-ತಂದೆ, ಇಂಗ್ಲಿಷ್ ಮತ್ತು ಕನ್ನಡ ಭಾಷಾಧ್ಯಯನ, ನಿಮ್ಮ ಮಗುವಿಗೆ ಇಂಗ್ಲಿಷ್ ಹಾಗೂ ಕನ್ನಡ ಕಲಿಸುವ ವಿಧಾನ, ಕನ್ನಡ ಆಲಿಸಿ ಕಲಿಸಿ, ಇಂಗ್ಲಿಷ್ ಆಲಿಸಿ ಕಲಿಸಿ ಮುಂತಾದ ಪುಸ್ತಕಗಳಲ್ಲದೆ ಇಂಗ್ಲಿಷ್‌ನಲ್ಲಿ ಇಂಗ್ಲಿಷ್ ಕನ್ನಡ ಬೈಲಿಂಗ್ಟಲ್, ಪೇರೆಂಟಿಂಗ್ ಫಾರ್ ಎಕ್ಸೆಲೆನ್ಸಿ, ಬೈಲಿಂಗ್ವಲ್ ಮಾಸ್ಟರ್, ಹೌಟು ಟೀಚ್ ಯುವರ್ ಚೈಲ್ಡ್ ಇಂಗ್ಲಿಷ್ ಅಂಡ್ ಕನ್ನಡ, ಲರ್ನ್ ಕನ್ನಡ ಥ್ರೂ ಇಂಗ್ಲಿಷ್, ಲರ್ನ್ ಇಂಗ್ಲಿಷ್ ಥ್ರೂ ಕನ್ನಡ ಇವೇ ಮೊದಲಾದ ಕೃತಿಗಳನ್ನು ರಚಿಸಿದ್ದು ಇವು ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಉಪಕಾರಿ ಎನಿಸಿವೆ. ಮೇಲ್ಕಂಡ ಕೃತಿಗಳಲ್ಲದೆ ಅಂಡಮಾನ್ ಪ್ರವಾಸದ ‘ನಿಸರ್ಗ ಕನ್ಯೆ ಅಂಡಮಾನ್’, ಪ್ರಬಂಧ ಸಂಕಲನ ‘ಗುಳಿಗೆಗಳು’ ಮತ್ತು ಗಟ್ಟಿಯವರ ಆತ್ಮಕಥೆ ‘ತೀರ’ ಪ್ರಕಟವಾಗಿವೆ.
ಕೆ ಟಿ ಗಟ್ಟಿಯವರ ಮೊದಲ ಕಾದಂಬರಿ‘ಶಬ್ದಗಳು’ ಧಾರಾವಾಹಿಯಾಗಿ ಸುಧಾವಾರ ಪತ್ರಿಕೆಯಲ್ಲಿ ಪ್ರಕಟವಾದುದು 1976ರಲ್ಲಿ. ಇದು ಸುಧಾ ವಾರಪತ್ರಿಕೆಯ ಪ್ರಸಾರದ ಸಂಖ್ಯೆಯನ್ನೂ ಹೆಚ್ಚುಮಾಡಿದ್ದಲ್ಲದೆ ಜನಪ್ರಿಯ ಕಾದಂಬರಿ ಎನಿಸಿ ಅಂದಿನ ದಿನಗಳಲ್ಲೇ ಸತತವಾಗಿ ನಾಲ್ಕು ಮುದ್ರಣಗಳನ್ನು ಕಂಡ ಖ್ಯಾತಿಗೂ ಪಾತ್ರವಾಗಿತ್ತು. 1978ರಲ್ಲಿ ಬರೆದ‘ಸಾಫಲ್ಯ’ ಕಾದಂಬರಿಯೂ ಸೇರಿ 2004ರವರೆಗೆ ಅವರ 14ಕಾದಂಬರಿಗಳು ಸುಧಾ ವಾರಪತ್ರಿಕೆಯೊಂದರಲ್ಲಿಯೇ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಬಹುಶಃ ಒಬ್ಬ ಲೇಖಕರದ್ದೇ ಇಷ್ಟೊಂದು ಕಾದಂಬರಿಗಳು ಧಾರಾವಾಹಿಯಾಗಿ ಒಂದೇ ಪತ್ರಿಕೆಯಲ್ಲಿ ಪ್ರಕಟವಾಗಿರುವುದೂ ಒಂದು ದಾಖಲೆಯೇ. ಇದಲ್ಲದೆ ತುಷಾರ ಮಾಸ ಪತ್ರಿಕೆಯಲ್ಲಿ‘ಮನೆ’, ಕಾಮಯಜ್ಞ ಕಾದಂಬರಿಗಳು, ಗೆಳತಿ ಪತ್ರಿಕೆಯಲ್ಲಿ‘ಪೂಜಾರಿ’, ಕಾದಂಬರಿ ಪತ್ರಿಕೆಯಲ್ಲಿ ‘ಅವಿಭಕ್ತರು’, ತರಂಗ ವಾರ ಪತ್ರಿಕೆಯಲ್ಲಿ ‘ನಿರಂತರ’, ಮಲ್ಲಿಗೆ ಮಾಸಪತ್ರಿಕೆಯಲ್ಲಿ ‘ನವಂಬರ್ 10’, ಕರ್ಮವೀರ ವಾರಪತ್ರಿಕೆಯಲ್ಲಿ‘ಸನ್ನಿವೇಶ’, ಪ್ರಜಾವಾಣಿ ದಿನಪತ್ರಿಕೆಯಲ್ಲಿ‘ಕಾರ್ಮುಗಿಲು’, ಮಂಗಳ ವಾರಪತ್ರಿಕೆಯಲ್ಲಿ ‘ರಸಾತಳ’ ಹೀಗೆ ವಿವಿಧ ಪತ್ರಿಕೆಗಳಲ್ಲಿ ಅವರ ಕಾದಂಬರಿಗಳು ಧಾರಾವಾಹಿಗಳಾಗಿ ಪ್ರಕಟವಾಗಿವೆ. ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂ ಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ ಇವೇ ಮುಂತಾದವು ನೆನಪಿಗೆ ಬರುವ ಅವರ ಇನ್ನಿತರ ಕಾದಂಬರಿಗಳು. ಹೀಗೆ ಅವರ ಕಾದಂಬರಿಗಳ ಐವತ್ತರ ಸಂಖ್ಯೆಯನ್ನು ಮೀರಿವೆ.
ಗಟ್ಟಿಯವರು ವಿದೇಶಕ್ಕೆ ಹೊರಡುವ ಮುನ್ನ ಬರೆದ ಕಾದಂಬರಿ ‘ಶಬ್ದಗಳು’. ಅವರು ಇಥಿಯೋಪಿಯಾದಲ್ಲಿದ್ದಾಗ ನಡೆದ ಒಂದು ಘಟನೆ ಅವರ ಮನಸ್ಸಿನ ಮೇಲೆ ಅಚ್ಚೊತ್ತಿತು. ಇವರು ಪ್ರೀತಿಯಿಂದ ಬೆಳೆಸಿದ ನಿಂಬೆಗಿಡವನ್ನು ಕುರಿಯೊಂದು ಬಂದು ತಿನ್ನತೊಡಗಿದಾಗ ಕೋಪಗೊಂಡು ಓಡಿಸಿದ ಮೇಲೆ ಗಟ್ಟಿಯವರೆಗೆ ಕಾಡಿದ ಒಂದು ಪ್ರಶ್ನೆ ಕಾಡಿತಂತೆ. ಬೇರೆಯವರ ದೇಶ, ಅವರ ಮಣ್ಣು, ಅವರ ಗಿಡ, ಅವರ ಕುರಿ – ನಾನು ಓಡಿಸಿದ್ದು ಸರಿಯಾ? ಹೀಗೆ ಅನುಭವಿಸಿದ ಈ ತುಮುಲಗಳಿಂದ ಹುಟ್ಟಿ ಬಂದದ್ದೇ ಅವರ ‘ಅರಗಿನ ಅರಮನೆ’ ಕಾದಂಬರಿ.
ಗಟ್ಟಿಯವರು ಆಗಾಗ್ಗೆ ಪತ್ರಿಕೆಗಳಿಗೆ ಬರೆದ ಕಥೆಗಳು ‘ಮನುಷ್ಯನ ವಾಸನೆ ಮತ್ತು ಇತರ ಕಥೆಗಳು’, ‘ನೀಲಿ ಗುಲಾಬಿ ಮತ್ತು ಇತರ ಕಥೆಗಳು’, ‘ಭೂಗತ ಮತ್ತು ಇತರ ಕಥೆಗಳು’, ‘ವಿಶ್ವ ಸುಂದರಿ ಮತ್ತು ಇತರ ಕಥೆಗಳು’ ಹಾಗೂ ‘ಪ್ರೀತಿ ಎಂಬ ಮಾಯೆ ಮತ್ತು ಇತರ ಕಥೆಗಳು’ ಎಂಬ ಸಂಕಲನಗಳಲ್ಲಿ ಸೇರಿವೆ.
ನಲವತ್ತಕ್ಕೂ ಹೆಚ್ಚು ಕಾದಂಬರಿ, ಕಥಾ ಸಂಕಲನ, ಕವಿತೆ, ವೈಚಾರಿಕ ಬರಹಗಳು, ಭಾಷೆಯ ಬಗೆಗೆ ಗಟ್ಟಿಯವರು ಹಲವಾರು ಪುಸ್ತಕಗಳನ್ನು ಬರೆದಿದ್ದು ಅನನ್ಯವೆನಿಸಿದೆ.
ಅವರ ಅಗಲುವಿಕೆಯಿಂದ ಸಾಹಿತ್ಯಲೋಕದಲ್ಲಿ ಶೂನ್ಯ ಆವರಿಸಿಕೊಂಡಂತಾಗಿದೆ.