CM Change ಮುಖ್ಯಮಂತ್ರಿ ಬದಲಾವಣೆಗ ನಾಂದಿ ಹಾಡಲಿದೆ ರಾಜ್ಯಸಭಾ ಚುನಾವಣೆ

CM Change ಬೆಂಗಳೂರು, ಫೆ. 9- ಕರ್ನಾಟಕ ವಿಧಾನಸಭೆಯಿಂದ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಐದನೇ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಮೂಲಕ ಭಾರತೀಯ ಜನತಾ ಪಾರ್ಟಿ ಲೋಕಸಭಾ ಚುನಾವಣೆಯ ನಂತರ ಸರಕಾರ ಬದಲಾವಣೆಯ ತಂತ್ರಗಾರಿಕೆಗೆ ಮುನ್ನುಡಿ ಬರೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ Siddaramaiah ನೇತೃತ್ವದ ಸರಕಾರ ಲೋಕಸಭಾ ಚುನಾವಣೆಯ ನಂತರ ಬದಲಾಗಲಿದೆ ಎಂಬ ಚರ್ಚೆ ಈಗಾಗಲೇ ವ್ಯಾಪಕವಾಗಿ ನಡೆಯುತ್ತಿದೆ.

ಬಿಜೆಪಿ- ಜಿಎಸ್ ಮೈತ್ರಿ ಕೂಟ 5ನೇ ಅಭ್ಯರ್ಥಿ ಕಣಕ್ಕಿಳಿಸಲಿದೆಯೇ ಎಂಬ  ಪ್ರಶ್ನೆ ಈಗ ಚರ್ಚೆ ಈಗಾಗಲೇ ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ. ಮುಂಬರುವ  27 ರಂದು ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ.ಕರ್ನಾಟಕ ವಿಧಾನಸಭೆಯ 224 ಸದಸ್ಯರು ಈ ಚುನಾವಣೆಗೆ  ಮತದಾರರಾಗಿದ್ದಾರೆ. ಹಾಲಿ ಸದಸ್ಯರಾದ ಕೇಂದ್ರ ಮಂತ್ರಿ ರಾಜೀವ್ ಚಂದ್ರಶೇಖರ್( ಬಿಜೆಪಿ),  ಡಾ.ಎಲ್. ಹನುಮಂತಯ್ಯ, ಜಿ.ಸಿ.ಚಂದ್ರ ಶೇಖರ್,ಹಾಗೂ ಸಯ್ಯದ್ ನಸೀರ್ ಹುಸೆನ್ ( ಮೂರು ಮಂದಿಯು ಕಾಂಗ್ರೆಸ್)  ಏಪ್ರಿಲ್ ತಿಂಗಳಲ್ಲಿ ನಿವೃತ್ತರಾಗಲಿದ್ದು ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ರಾಜ್ಯವಿಧಾನಸಭೆಯಲ್ಲಿ ಕಾಂಗ್ರೆಸ್  ಪಕ್ಷದ 136 ,ಬಿಜೆಪಿಯ 66 ಹಾಗೂ ಜೆಡಿಎಸ್ ನ 19 ಶಾಸಕರು ಇದ್ದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಮೂವರು ಪಕ್ಷೇತರ ಶಾಸಕರು ಇದ್ದಾರೆ. ಆಡಳಿತ ಕಾಂಗ್ರೆಸ್ ನಿಂದ ರಾಜ್ಯ ಸಭೆಗೆ ಆಯ್ಕೆಯಾಗಲು ಆಕಾಂಕ್ಷಿಗಳ ತೀವ್ರ ಪೈಪೋಟಿ ನಡೆದಿದೆ. ಸದ್ಯ ನಾಲ್ಕೂ ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ಅವಕಾಶ ಇದೆಯಾದರೂ ಐದನೇ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆಗಳೂ ಇವೆ. ಜನಾರ್ದನ ರೆಡ್ಢಿ ಈಗ ಬಿಜೆಪಿ ಪರವಾಗಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಗೆ ಸ್ಥಾನ ಹಂಚಿಕೆಯ ಮೂಲಕ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮುಗಿದಿಲ್ಲ. ಈ ಮಧ್ಯೆ,  ವಿಶೇಷವಾಗಿ ಈ ಚುನಾವಣೆ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ನಡೆಯಲಿರುವುದರಿಂದ ಮೊದಲನೇ ಪ್ರಾಶಸ್ತ್ಯದ ಮತಗಳಿಂದಲೇ ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳು ಹಾಗೂ ಬಿಜೆಪಿಯ ಒಬ್ಬ ಅಭ್ಯರ್ಥಿ ಗೆಲ್ಲುವುದು ಸುಲಭವಾಗಿದೆ.ಇದು ಹೊರತಾಗಿ  ಕಾಂಗ್ರೆಸ್  ಅಥವಾ ಬಿಜೆಪಿ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಆಗ ಚುನಾವಣಾ ಕಣ ರಂಗೇರುತ್ತದೆ. ಇದರಿಂದಾಗಿ ಈಗಾಗಲೇ ಅಸಮಾಧಾನಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಇನ್ನಷ್ಟು ಚಂಚಲರಾಗುವ ಸಾಧ್ಯತೆ ಇದೆ ಎಂಬುದು ಬಿಜೆಪಿ ಲೆಕ್ಕಚಾರ.

ಇತ್ತೀಚೆಗೆ ಆಡಳಿತ ಕಾಂಗ್ರೆಸ್ ನಲ್ಲಿ ನಾನಾ ಕಾರಣಗಳಿಗಾಗಿ ಅತೃಪ್ತರಾಗಿರುವ ಶಾಸಕರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ರಚನೆಯಾಗಿ ಒಂದು ವರ್ಷ ಸಮೀಪಿಸುತ್ತ ಬಂದರೂ ಸಚಿವ ಸಂಪುಟ ರಚನೆ , ಅನುದಾನ ಹಂಚಿಕೆ ,ನಿಗಮ- ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ಶಾಸಕರ ನೇಮಕದ ವಿಚಾರಗಳಲ್ಲಿ ಅತೃಪ್ತಿ ಕುದಿಯುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ  ಶಾಸಕರಿಗೆ ಅದಾನ ದೊರೆಯುತ್ತಿಲ್ಲ. ಲೋಕೋಪಯೋಗಿ, ಸಮಾಜ ಕಲ್ಯಾಣಯಂತಹ ಇಲಾಖೆಗಳಿಗೆ ಅದಾನದ ಕೊರತೆಯಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡವರ ಪೈಕಿ ಕೆಲವು ಶಾಸಕರು ಮಂತ್ರಿಗಿರಿ ಕೊಡಿ ಇಲ್ಲದಿದ್ದರೆ ಈ ಸ್ಥಾನವೂ ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಇದು ಕಾಂಗ್ರೆಸ್ ಗೆ ದೊಡ್ಡ ತಲೆ ನೋವು ತಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಹಿಂದಿನಷ್ಟೇ ಅಧಿಕ ಸ್ಥಾನಗಳನ್ನು ಗೆಲ್ಲಲಿದ್ದು ಚುನಾವಣೆಯ ನಂತರ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂಬ ಮಾಹಿತಿಯೂ  ಆಡಳಿತ ಪಕ್ಷದ ಶಾಸಕರ ಚಿಂತೆಗೆ ಕಾರಣವಾಗಿದೆ. ಲೋಕಸಭೆ ಚುನವಾಣೆಗೂ ಮುನ್ನವೇ ಕಾಂಗ್ರೆಸ್ ಹಿನ್ನಡೆ ಎದುರಿಸಲಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕು ಸೀಟು ಗೆಲ್ಲಲು ಹರಸಾಹಸ ಪಡಬೇಕಾಗಿದೆ.

ಈ ಹಿನ್ನಲೆಯಲ್ಲಿ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ  ಚುನಾವಣೆಯೇ ಅಂತಿಮವಾದರೆ ಅಡ್ಡ ಮತದಾನ ನಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿಲುವಿನ ಪ್ರಕಾರ ಅಗತ್ಯ ಎನಿಸಿದರೆ ಕಾಂಗ್ರೆಸ್ ನಿಂದ ನಾಲ್ಕನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚಿಂತನೆ ಅವರದ್ದು.

ಕಾಂಗ್ರೆಸ್ ಮತಗಳ ಜತೆಗೇ ಜೆಡಿಎಸ್ ನಿಂದ 10 ಶಾಸಕರು ಹಾಗೂ ಬಿಜೆಪಿಯ ಕೆಲವು ಶಾಸಕರಿಂದ  ಅಡ್ಡ ಮತದಾನ ನಡೆಸಿದರೆ ಕಾಂಗ್ರೆಸ್ ನ ಮತ್ತೊಬ್ಬ ಅಭ್ಯರ್ಥಿ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಗೆಲ್ಲಲು ಸಾಧ್ಯ ಎಂಬ ಲೆಕ್ಕಾಚಾರ ಅವರದ್ದು. ಆದರೆ ನಾಲ್ಕನೇ ಅಭ್ಯರ್ಥಿ ಯಾರೆಂಬುದ ತೀರ್ಮಾನ ಆದಂತಿಲ್ಲ. ಲೋಕಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಮಹತ್ವದ ರಾಜಕೀಯ ಬದಲಾವಣೆಗಳು ನಡೆಯಲಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಸ್ತಿತ್ವಕ್ಕೆ ಇದು ಧಕ್ಕೆ ತರಲೂ ಬಹುದು ಎಂಬ ನಿರೀಕ್ಷೆಯಲ್ಲಿರುವ ಬಿಜೆಪಿ ಅದಕ್ಕೆ ಮುನ್ನವೇ ಮಹತ್ವದ ರಾಜಕೀಯ ಬೆಳವಣಿಗೆಗೆ ರಾಜ್ಯ ಸಭಾ ಚುನಾವಣೆಯನ್ನು ವೇದಿಕೆ ಮಾಡಿಕೊಳ್ಳಲು ಬಯಸಿದೆ.

 

ಇತ್ತೀಚೆಗೆ ದಿಲ್ಲಿಯಲ್ಲಿ ಕೇಂದ್ರ ಸರ್ಕಾರದ ತೆರಿಗೆ ಅನುದಾನ ಹಂಚಿಕೆ ತಾರತಮ್ಯ ನೀತಿ ವಿರುದ್ಧಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರೋಧಿ ಪಕ್ಷಗಳ ಗಮನ ಸೆಳೆದಿದೆ.

ಇಂತಹ ರಾಜಕೀಯ ಬೆಳವಣಿಗೆಗಳನ್ನು ಇನ್ನಷ್ಟು ಬೆಳೆಯಲು ಬಿಟ್ಟರೆ ದಕ್ಷಿಣ ಭಾರತದಲ್ಲಿ ಸಂಫೂರ್ಣ ಅಸ್ತಿತ್ವ ಸ್ಥಾಪಿಸುವ ತನ್ನ ಮಹತ್ವಾಕಾಂಕ್ಷೆಗೆ ಕಾಂಗ್ರೆಸ್ ಪಕ್ಷವೇ ಅಡ್ಡಿಯಾಗಬಹುದು ಎಂಬ ಆತಂಕವೂ ಬಿಜೆಪಿ ಕೇಂದ್ರ ನಾಯಕರಿಗೆ ಇದೆ.

ಆ ಹಿನ್ನಲೆಯಲ್ಲೇ ರಾಜ್ಯ ಸಭಾ ಚುನಾವಣೆಯ ಸಂದರ್ಭವನ್ನೇ ಬಳಸಿಕೊಂಡು ಕರ್ನಾಟಕ ಕಾಂಗ್ರೆಸ್ ನಲ್ಲಿ ಅಸ್ಥಿರತೆ ಹುಟ್ಟು ಹಾಕಿದರೆ ಅದರಿಂದ ದೂರಗಾಮಿ ಲಾಭ ಆಗಬಹುದು ಎಂಬ ಲೆಕ್ಕಾಚಾರವೂ ಈ ನಾಯಕರಲ್ಲಿ ಇದೆ. ರಾಜ್ಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದ ಜತೆ ಲೋಕಸಭೆ ಚುನಾವಣೆಗೆ ಮೈತ್ರಿಗೆ ಮುಂದಾಗಿರುವ ಹಂತದಲ್ಲೇ ರಾಜ್ಯ ವಿಧಾನಸಭೆಯಲ್ಲಿ ಜೆಡಿಎಸ್ ನ ನೆರವನ್ನೂ ಪಡೆದು ಕಾಂಗ್ರೆಸ್ ನ ಭಿನ್ನಮತದ ಲಾಭವನ್ನೂ ಪಡೆದರೆ ಬಿಜೆಪಿಯ ಮತ್ತೊಬ್ಬ ಅಭ್ಯರ್ಥಿ ಗೆಲ್ಲಬಹುದು.

ಬಹುಮತವಿದ್ದು ರಾಜ್ಯ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನವನ್ನು ಕಳೆದುಕೊಂಡರೆ ಅದರ ಪರಿಣಾಮದಿಂದ ಉಂಟಾಗಬಹುದಾದ ಭಿನ್ನಮತ ಲಾಭ ಪಡೆಯುವುದು ಮೈತ್ರಿ ಕೂಟದ ನಾಯಕರ ಲೆಕ್ಕಾಚಾರ.ಈ ವಿಚಾರದಲ್ಲಿ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯ ನಾಯಕರ ಪ್ರಸ್ತಾವನೆಗೆ ಓಕೆ ಎಂದಿದ್ದಾರಂತೆ.

ಈ ಬೆಳವಣಿಗೆಗಳಿಂದಾಗಿ ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಪತನವಾಗುವ ಸನ್ನಿವೇಶ ನಿರ್ಮಾಣವಾದರೆ ಬಿಜೆಪಿ ಜತೆಗೂಡಿ ಮೈತ್ರಿ ಸರ್ಕಾರ ರಚನೆಯ ಚಿಂತನೆಯೂ ಜೆಡಿಎಸ್ ನಾಯಕತ್ವಕ್ಕಿದೆ.  ಹೀಗಾಗೇ ರಾಜ್ಯದಲ್ಲಿ ಕಾಂಗ್ರೆಸ್ ನ್ನು ಮಣಿಸುವ ಯಾವುದೇ ಸನ್ನಿವೇಶ ಸೃಷ್ಟಿಯಾದರೂ ಅದನ್ನು ತನ್ನದಾಗಿಸಿಕೊಳ್ಳಲು ಜೆಡಿಎಸ್ ಹವಣಿಸುತ್ತಿದೆ. ಇದೆಲ್ಲವೂ ಸದ್ಯದಲ್ಲಿ ಎರಡೂ ಪಕ್ಷಗಳಲ್ಲಿ ನಡೆಯುತ್ತಿರುವ ರಾಜಕೀಯ ಲೆಕ್ಕಾಚಾರ.

Ayodhya ಅಯೋಧ್ಯೆಯಲ್ಲಿ ವಸತಿ ಗೃಹ ನಿರ್ಮಿಸಲಿದೆ ಕಾಂಗ್ರೆಸ್ ಸರಕಾರ

Leave a Reply

Your email address will not be published. Required fields are marked *