ಎರಡನೇ ಹಂತದ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ರಾಹುಲ್ ಗಾಂಧಿ (Rahul Gandhi)ಮತ್ತು ಕಾಂಗ್ರೆಸ್ (Congress) ಸಿದ್ಧತೆ ನಡೆಸುತ್ತಿದೆ.
ಮೊದಲ ಹಂತದ ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ಯಶಸ್ಸು ಮತ್ತು ಹೊಸ ಉತ್ಸಾಹ ಮೂಡಿಸಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ (Congress) ಇದೀಗ ಎರಡನೇ ಹಂತದ ಭಾರತ್ ಜೋಡೋ ಯಾತ್ರೆಗೆ ಸಿದ್ಧವಾಗಿದೆ. ಎರಡನೇ ಹಂತದ ಭಾರತ್ ಜೋಡೋ ಯಾತ್ರೆಯಿಂದ ಇದೇ ಡಿಸೆಂಬರ್ ತಿಂಗಳಿನಿಂದ ಆರಂಬವಾಗಿ ಫೆಬ್ರುವರಿ ತಿಂಗಳ ತನಕ ನಡೆಯಲಿದೆ. 2024 ಏಪ್ರಿಲ್-ಮೇ ವೇಳೆಗೆ ಲೋಕಸಭಾ ಮಹಾಚುನಾವಣೆ ಕೂಡ ನಡೆಯಲಿದೆ.
ಈ ಬಾರಿ ಮೊದಲಿನಂತೆ ಸಂಪೂರ್ಣವಾಗಿ ಕಾಲುನಡಿಗೆಯಲ್ಲೇ ಪ್ರಯಾಣ ಮಾಡದೇ ಕೆಲವೆಡೆ ವಾಹನ ಬಳಸಲು ಅಗತ್ಯ ಭಾಗದಲ್ಲಿ ಮಾತ್ರ ಪಾದಯಾತ್ರೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಹಿಂದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು 7 ಸೆಪ್ಟೆಂಬರ್ 2022 ರಂದು ಕನ್ಯಾಕುಮಾರಿಯಿಂದ ಯಾತ್ರೆಯನ್ನು ಪ್ರಾರಂಭಿಸಿದ್ದರು. ಇದು 30 ಜನವರಿ 2023 ರಂದು ಕಾಶ್ಮೀರದಲ್ಲಿ ಕೊನೆಗೊಂಡಿತ್ತು.
ಪಕ್ಷದ ಮೂಲಗಳ ಪ್ರಕಾರ ಕಾಂಗ್ರೆಸ್ ಮತ್ತೊಮ್ಮೆ ಭಾರತ್ ಜೋಡೋ ಯಾತ್ರೆಗೆ ಸಿದ್ಧತೆ ನಡೆಸಿದೆ. ಆದಾಗ್ಯೂ, ಈ ಪ್ರಯಾಣವನ್ನು ಹೈಬ್ರಿಡ್ ಆಗಿ ಆಯೋಜಿಸಲಾಗುವುದು ಅಂದರೆ ಕೆಲವು ಕಡೆ ಕಾಲ್ನಡಿಗೆಯಲ್ಲಿ ಮತ್ತು ಕೆಲವು ಕಡೆ ವಾಹನಗಳ ಮೂಲಕ ಪ್ರಯಾಣಿಸಲಾಗುವುದು ಎಂದು ತಿಳಿದುಬಂದಿದೆ. ಈ ಯಾತ್ರೆ ಈ ವರ್ಷದ ಡಿಸೆಂಬರ್‌ನಲ್ಲಿ ಪ್ರಾರಂಭವಾಗಬಹುದು, ಇದು ಮುಂದಿನ ವರ್ಷ ಫೆಬ್ರವರಿವರೆಗೆ ಮುಂದುವರಿಯುತ್ತದೆ ಎನ್ನಲಾಗಿದೆ.
ಮೊದಲ ಹಂತದ ಭಾರತ್ ಜೋಡೋ ಯಾತ್ರೆ ಮುಗಿದ ನಂತರ ರಾಹುಲ್ ಗಾಂಧಿ ಹಲವಾರು ಬಾರಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು, ಅದರಲ್ಲಿ ತಮಗೆ ಯಾತ್ರೆ ವೇಳೇ ಮೊಣಕಾಲುಗಳಲ್ಲಿ ನೋವು ಕಾಣಿಸಿಕೊಂಡಿತ್ತು, ಇದರಿಂದಾಗಿ ನಡೆಯಲು ತುಂಬಾ ಕಷ್ಟವಾಗುತ್ತಿತ್ತು. ಆದರೆ ಸಾರ್ವಜನಿಕರಿಂದ ಸಿಕ್ಕ ಪ್ರೀತಿಯಿಂದ ತಮ್ಮ ನೋವನ್ನು ಮರೆತು ಯಾತ್ರೆ ಮುಗಿಸಿದ್ದಾಗಿ ತಿಳಿಸಿದ್ದಾರೆ. ಬಹುಶಃ ಅದಕ್ಕಾಗಿಯೇ ಕಾಂಗ್ರೆಸ್ ಎರಡನೇ ಹಂತದ ಯಾತ್ರೆಯಲ್ಲಿ ಬದಲಾವಣೆ ಮಾಡಿಕೊಳ್ಳಲಿದೆ, ಆದ್ದರಿಂದ ರಾಹುಲ್ ಗಾಂಧಿ ಮತ್ತು ಇತರ ಹಿರಿಯ ನಾಯಕರಿಗೆ ಯಾವುದೇ ಸಮಸ್ಯೆ ಎದುರಾಗಬಾರದು ಎಂದು ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಮೂಲ ತಿಳಿಸಿದೆ.
ಇದನ್ನು ಓದಿ- Udupi Lokasabha: ಉಡುಪಿ ಕಾಂಗ್ರೆಸ್ ಲಿಸ್ಟಲ್ಲಿ ಬಿಜೆಪಿ ಮುಖಂಡರು
4000 ಕಿಮೀ ದೂರ ಪ್ರಯಾಣ
ಕಳೆದ ವರ್ಷ ಸೆಪ್ಟೆಂಬರ್ 7 ರಂದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದ್ದರು. ಇದರಲ್ಲಿ ಪಕ್ಷದ ಹಲವು ನಾಯಕರೊಂದಿಗೆ ರಾಹುಲ್ ಗಾಂಧಿ 4,000 ಕಿಲೋಮೀಟರ್‌ಗೂ ಹೆಚ್ಚು ಪ್ರಯಾಣ ಕೈಗೊಂಡಿದ್ದರು. ಅವರ ಪ್ರಯಾಣವು ದಕ್ಷಿಣದ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಜನವರಿ 30, 2023 ರಂದು ಶ್ರೀನಗರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಕೊನೆಗೊಂಡಿತ್ತು. ಈ ಯಾತ್ರೆಯು ತಮಿಳುನಾಡಿನಿಂದ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್ ಮೂಲಕ ಕಾಶ್ಮೀರವನ್ನು ತಲುಪಿತ್ತು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ತಮ್ಮ ಬೆಂಬಲಿಗರು ಹಾಗೂ ವಿರೋಧಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಕಮಲ್ ಹಾಸನ್, ಪೂಜಾ ಭಟ್, ರಿಯಾ ಸೇನ್, ಸ್ವರಾ ಭಾಸ್ಕರ್, ರಶ್ಮಿ ದೇಸಾಯಿ, ಆಕಾಂಕ್ಷಾ ಪುರಿ ಮತ್ತು ಅಮೋಲ್ ಪಾಲೇಕರ್ ಅವರಂತಹ ಚಲನಚಿತ್ರ ತಾರೆಗಳು ಮತ್ತು ಟಿವಿ ಸ್ಟಾರ್ಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಇಂದು ನಮ್ಮ ರಾಷ್ಟ್ರವನ್ನು ವಿಭಜಿಸುತ್ತಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಲಕ್ಷಾಂತರ ಜನರು ಕಾಂಗ್ರೆಸ್ ನಾಯಕರ ಜೊತೆಗೂಡಿ ಅಗಾಧ ಪ್ರತಿಕ್ರಿಯೆಯನ್ನು ಪಡೆಯಿತು.
ಸೆಪ್ಟೆಂಬರ್‌ನಲ್ಲಿ, ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರಾ 2.0 ಅನ್ನು “ಪರಿಗಣನೆಯಲ್ಲಿದೆ” ಎಂದು ಹೇಳಿತ್ತು ಮತ್ತು ಕೆಲವು CWC ಸದಸ್ಯರು ಇದನ್ನು ದೇಶದ ಪೂರ್ವ ಭಾಗದಿಂದ ಪಶ್ಚಿಮಕ್ಕೆ ಕೈಗೊಳ್ಳಲು ವಿನಂತಿಸಿದ್ದರು. ಪಾದಯಾತ್ರೆ ಎಲ್ಲಿಂದ ಆರಂಭ ಆಗುತ್ತದೆ, ಯಾವ ರಾಜ್ಯಗಳಲ್ಲಿ ಹಾದುಹೋಗಲಿದೆ ಎಂಬುದು ಅಂತಿಮಗೊಳಿಸಲಾಗಿಲ್ಲ. ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರವಷ್ಟೆ ಸ್ಪಷ್ಟ ಚಿತ್ರಣ ದೊರೆಯಬಹುದು.
ಭಾರತದ ಪಾದಯಾತ್ರೆ ಹಾಗೂ ಕರ್ನಾಟಕದ ರಾಜಕೀಯ ಪಾದಯಾತ್ರೆಗಳ ಐತಿಹಾಸಿಕ ಮಹತ್ವ
ಪಾದಯಾತ್ರೆ ನಡೆಸಿದವರು ಜನರ ಮನಗೆದ್ದು, ಅಧಿಕಾರ ಹಿಡಿಯುತ್ತಾರೆ ಎಂಬುದಕ್ಕೆ ದೇಶದ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ.ಇಂದಿರಾ ಗಾಂಧಿ ಅಧಿಕಾರಾವಧಿಯಲ್ಲಿ ಜನತಾ ಪಾರ್ಟಿ ಮೂರು ಭಾಗಗಳಾಗಿ ಒಡೆದು ಹೋಗಿದ್ದ ಕಾಲದಲ್ಲಿ ಅಂದಿನ ಆಡಳಿತರೂಢ ಕಾಂಗ್ರೆಸ್ ಸರಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಜನತಾ ಪಾರ್ಟಿ ಮುಖಂಡರಾಗಿದ್ದ ಚಂದ್ರ ಶೇಖರ್ ಅವರು ಭಾರತ ಯಾತ್ರೆ ನಡೆಸಿದ್ದರು. ಇಬ್ಬರು ಸೊಶಿಯಲಿಸ್ಟ್ ಯುವಕರ ಸಲಹೆ ಮೇರೆಗೆ ಚಂದ್ರಶೇಖರ್ ದೇಶದ ದಕ್ಷಿಣ ತುದಿಯಿಂದ ಪಾದಯಾತ್ರೆ ಆರಂಭಿಸಿದ್ದರು.ಪಾದಯಾತ್ರೆಯ ಉದ್ದೇಶಗಳ ಬಗ್ಗೆ ಚಂದ್ರಶೇಖರ್ ಅವರಿಗೆ ಸ್ಪಷ್ಟ ಕಲ್ಪನೆ ಇರಲಿಲ್ಲ ಎಂದು ಅಂದಿನ ಪತ್ರಕರ್ತರು ದಾಖಲಿಸಿದ್ದಾರೆ. ಪಾದಯಾತ್ರೆ ನಡೆಯುತ್ತಿದ್ದಾಗಲೇ ಮೊದಲ ಫಲಶ್ರುತಿ ಕರ್ನಾಟಕ ರಾಜ್ಯದಲ್ಲಿ ಜನತಾರಂಗದ ರಾಮಕೃಷ್ಣ ಹೆಗಡೆ ಸರಕಾರ ಅಧಿಕಾರಕ್ಕೆ ಬಂತು.ಎಚ್.ಡಿ.ದೇವೆಗೌಡ ಲೋಕೋಪಯೋಗಿ ಸಚಿವರಾದರು. ಅನಂತರದ್ದು ಇತಿಹಾಸ ದೇವೇಗೌಡ ಚಂದ್ರ ಶೇಖರ್ ಇಬ್ಬರೂ ಪ್ರಧಾನಿಯಾದರು.
ದೇಶ ಮತ್ತು ರಾಜ್ಯದಲ್ಲಿ ಈ ಹಿಂದೆ ಹಾಗೂ ಇಂದಿಗೂ ಅನೇಕ ಪಾದಯಾತ್ರೆಗಳನ್ನು ಮಾಡಲಾಗಿದೆ. ಕೆಲವು ಪಾದಯಾತ್ರೆಗಳನ್ನು ಸ್ವಾತಂತ್ರ್ಯ, ಅಭಿವೃದ್ಧಿಗಾಗಿ ಮಾಡಿದರೆ, ಇದೀಗ ರಾಜಕೀಯಕ್ಕಾಗಿ ಪಾದಯಾತ್ರೆ ಮಾಡಲಾಗುತ್ತಿದೆ.
ಭಾರತದಲ್ಲಿ ಐತಿಹಾಸಿಕ ಎಂದು ಗುರುತಿಸಬಹುದಾದ ಪಾದಯಾತ್ರೆ ಮಾಡಿದವರು ಆಚಾರ್ಯ ವಿನೋಭಾ ಭಾವೆ. ಪ್ರಸ್ತುತ ತೆಲಂಗಾಣಕ್ಕೆ ಸೇರಿರುವ ಕೊಲ್ಲಂಪಲ್ಲಿ ಎಂಬ ಗ್ರಾಮಕ್ಕೆ 1951 ರ ಏಪ್ರಿಲ್ ನಲ್ಲಿ ಅವರು ಭೇಟಿ ನೀಡಿದರು. ವಿನೋಭಾ ಭಾವೆ ಅವರಿಗೆ ಅಲ್ಲಿನ ಹಲವು ಪರಿಶಿಷ್ಟ ಕುಟುಂಬಗಳು ಮನವಿ ನೀಡಿ, ತಮಗೆ ವ್ಯವಸಾಯ ಮಾಡಲು ಭೂಮಿ ಇಲ್ಲ. ಕನಿಷ್ಠ ಎರಡೆರಡು ಎಕರೆ ಭೂಮಿ ಕೊಡಿಸಿದರೆ ಅನುಕೂಲವಾಗುತ್ತದೆ ಎಂದು ವಿನಂತಿಸಿಕೊಳ್ಳುತ್ತಾರೆ.
13 ವರ್ಷಗಳ ಕಾಲ ಪಾದಯಾತ್ರೆ:
ಇಂತಹವರಿಗಾಗಿ ಭೂದಾನ ಮಾಡುವವರು ಯಾರು? ಎಂದು ವಿನೋಭಾಭಾವೆ ಚಿಂತಿತರಾದಾಗ ಅಲ್ಲೇ ಇದ್ದ ರಾಮಚಂದ್ರರೆಡ್ಡಿ ಎಂಬುವವರು ತಾವೇ ನೂರು ಎಕರೆ ಭೂಮಿ ಕೊಡುವುದಾಗಿ ಭರವಸೆ ಕೊಡುತ್ತಾರೆ. ಇದರಿಂದ ಸ್ಪೂರ್ತಿಗೊಂಡ ವಿನೋಭಾಭಾವೆ ಅಂದಿನಿಂದಲೇ ವಿದ್ಯುಕ್ತವಾಗಿ ದೇಶಾದ್ಯಂತ ತಿರುಗಿ ‘ಭೂದಾನ ಚಳವಳಿ’ ಮಾಡಲು ನಿರ್ಧರಿಸುತ್ತಾರೆ. ಇದೇ ಕಾರಣಕ್ಕಾಗಿ ಸತತ 13 ವರ್ಷಗಳ ಕಾಲ, ಸುಮಾರು 70 ಸಾವಿರ ಕಿಲೋಮೀಟರುಗಳಷ್ಟು ದೂರ ಪಾದಯಾತ್ರೆ ಮಾಡುವ ಅವರು ನಲವತ್ತು ಲಕ್ಷದ ಐವತ್ತು ಸಾವಿರ ಎಕರೆಯಷ್ಟು ಭೂಮಿಯನ್ನು ಉಳ್ಳವರಿಂದ ಪಡೆದು ಬಡವರಿಗೆ ಹಂಚುತ್ತಾರೆ.
ಈ ಕಾರ್ಯಕ್ಕಾಗಿ ತಾವು ಯಾರಿಂದಲೂ ನೆರವು ಪಡೆಯುವುದಿಲ್ಲ ಎಂದು ತೀರ್ಮಾನಿಸಿದ್ದ ವಿನೋಭಾ ಭಾವೆ ಇದೇ ಕಾರಣಕ್ಕಾಗಿ ರೈಲನ್ನೂ ಹತ್ತದೇ ಬರಿಗಾಲಲ್ಲಿ ದೇಶ ಸುತ್ತುತ್ತಾರೆ. ಇದು ಭಾರತ ಮಾತ್ರವಲ್ಲ, ಜಗತ್ತಿನ ಇತಿಹಾಸ ಕಂಡ ಅತ್ಯಂತ ದೊಡ್ಡ ಪಾದಯಾತ್ರೆ ಎಂಬ ಮಾತಿದೆ.
ಪಾದಯಾತ್ರೆ ಮಾಡಿದ್ದ ಮಹಾತ್ಮ ಗಾಂಧೀಜಿ: ಇನ್ನು ಯಂಗ್ ಟರ್ಕ್ ಖ್ಯಾತಿಯ ಚಂದ್ರಶೇಖರ್ ಅವರು 1983 ರ ಜನವರಿ 6 ರಿಂದ ಜೂನ್ 25 ರವರೆಗೆ ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಪಾದಯಾತ್ರೆ ಮಾಡಿದ್ದರು. ಇದಕ್ಕಾಗಿ 2900 ಕಿಲೋಮೀಟರುಗಳಷ್ಟು ದೂರವನ್ನು ಕ್ರಮಿಸಿದ್ದರು. ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದ ಮಹಾತ್ಮ ಗಾಂಧೀಜಿ ಅವರು ದೇಶವಾಸಿಗಳನ್ನು ಸಂಘಟಿಸಲು ದೇಶಾದ್ಯಂತ ತಿರುಗಿದ್ದರಲ್ಲದೇ, ಹಲವಾರು ಬಾರಿ ಪಾದಯಾತ್ರೆಗಳನ್ನು ಮಾಡಿದ್ದು ಇತಿಹಾಸ.
ಇದೇ ರೀತಿ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಹಲವಾರು ಯಾತ್ರೆ, ಪಾದಯಾತ್ರೆಗಳು ನಡೆದಿವೆ. ಕರ್ನಾಟಕದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಪಟ್ಟಕ್ಕೇರಿದ್ದ ಎಸ್.ಎಂ.ಕೃಷ್ಣ, ಸಿದ್ಧರಾಮಯ್ಯ, ಬಿ.ಎಸ್. ಯಡಿಯೂರಪ್ಪ ಅವರೆಲ್ಲ ವಿವಿಧ ಪಾದಯಾತ್ರೆಗಳನ್ನು ನಡೆಸಿ ಇತಿಹಾಸದಲ್ಲಿ ದಾಖಲಾಗಿದ್ದಾರೆ.
ಮುಖ್ಯಮಂತ್ರಿ ಆಗಿದ್ದ ಡಿ.ವಿ.ಸದಾನಂದ ಗೌಡ ಅವರು ಕೂಡ ಸುಳ್ಯದಿಂದ ಮಂಗಳೂರು ತನಕ ಒಂದು ಸಣ್ಣ ಪಾದಯಾತ್ರೆ ನಡೆಸಿದ ಮೇಲೆ ಬಿಜೆಪಿಯ ರಾಜ್ಯ ಅಧ್ಯಕ್ಷರಾದರು ಅನಂತರ ಮುಖ್ಯಮಂತ್ರಿ ಕೂಡ ಆಗಿದ್ದರು.
ರಾಜ್ಯ ರಾಜಕೀಯ ಇತಿಹಾಸದಲ್ಲಿ ಪಾದಯಾತ್ರೆ ಪೊಲಿಟಿಕ್ಸ್ ಇದೇ ಮೊದಲಲ್ಲ. ಈ ಮುಂಚೆಯೂ ಕೆಲವು ಪ್ರಮುಖ ಪಾದಯಾತ್ರೆಗಳಿಗೆ ರಾಜ್ಯ ಸಾಕ್ಷಿಯಾಗಿದೆ. ಆ ಮೂಲಕ ಪಾದಯಾತ್ರೆ ನಡೆಸಿದ ಪಕ್ಷಗಳಿಗೆ ಚುನಾವಣೆಗಳಲ್ಲಿ ರಾಜಕೀಯ ಲಾಭವನ್ನೂ ಒದಗಿಸಿಕೊಟ್ಟಿದೆ. ರಾಜ್ಯದಲ್ಲಿ ನಡೆದ ನಿರ್ಣಾಯಕ ಪಾದಯಾತ್ರೆ ಮತ್ತು ಅದರ ಲಾಭ ನಷ್ಟ ಲೆಕ್ಕಾಚಾರ ಇಲ್ಲಿದೆ.
ಹೆಚ್ ಡಿ ದೇವೇಗೌಡರ ಪಾದಯಾತ್ರೆ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು 2001ರಲ್ಲಿ ಅಂದಿನ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೊಡೆತಟ್ಟಿ ಪಾದಯಾತ್ರೆ ಹೋರಾಟಕ್ಕೆ ಇಳಿದಿದ್ದರು. ನೀರಾ ತೆಗೆಯುವ ವಿವಾದಲ್ಲಿ ಇಬ್ಬರು ರೈತರು ಪೊಲೀಸರು ಹಾರಿಸಿದ್ದ ಗುಂಡಿಗೆ ಬಲಿಯಾಗಿದ್ದರು. ಆ ವೇಳೆ, ತೆಂಗಿಗೆ ನುಸಿರೋಗ ಹೆಚ್ಚಿದ್ದರಿಂದ ನೀರಾ ತೆಗೆಯುವ ವಿಚಾರ ಮುನ್ನೆಲೆಗೆ ಬಂದಿತ್ತು.
ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿಯಿಂದ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ವರೆಗೆ ದೇವೇಗೌಡರು 2001ರ ಅ.28ರಿಂದ ನ.1ರ ವರೆಗೆ ಪಾದಯಾತ್ರೆ ಕೈಗೊಂಡಿದ್ದರು. ಒಟ್ಟು 5 ದಿನಗಳ ಕಾಲ ಸುಮಾರು 80 ಕಿ.ಮೀ ಕ್ರಮಿಸಿ ಪಾದಯಾತ್ರೆ ನಡೆಸಿ, ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು.
ಜೆಡಿಎಸ್ಗೆ ಲಾಭ: ದೇವೇಗೌಡರು ಕಾಂಗ್ರೆಸ್ ಸರ್ಕಾರದ ಗೋಲಿಬಾರ್ ವಿರುದ್ಧ ನಡೆಸಿದ ಪಾದಯಾತ್ರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ಗೆ ಭರ್ಜರಿ ರಾಜಕೀಯ ಲಾಭ ಕೊಟ್ಟಿತು. 2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಪಾರುಪತ್ಯ ಸಾಧಿಸಿತು. ಎಸ್.ಎಂ.ಕೃಷ್ಣ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯ ಜೊತೆಗೆ ಗೌಡರು ನಡೆಸಿದ ಪಾದಯಾತ್ರೆ ಹೋರಾಟವೂ ಜೆಡಿಎಸ್ಗೆ ಭಾರಿ ಲಾಭ ತಂದು ಕೊಟ್ಟಿತು. ಎಸ್. ಎಂ.ಕೃಷ್ಣ ಅವರು ಬೆಂಗಳೂರು ನಗರದ ಕೇಂದ್ರಿತ ಅಭಿವೃದ್ಧಿ ಸೂತ್ರ ಕೂಡ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ಮೂಡಿಸಿತ್ತು.
2004ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 58 ಸ್ಥಾನ ಗೆದ್ದು ಬೀಗಿತು. ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ 37 ಸ್ಥಾನಗಳನ್ನು ಗೆದ್ದು ಪಾದಯಾತ್ರೆ ಪೊಲಿಟಿಕ್ಸ್ ಶಕ್ತಿಯನ್ನು ತೋರಿಸಿಕೊಟ್ಟಿತು. 1999ರಲ್ಲಿ ಹಳೆ ಮೈಸೂರು ಭಾಗದಲ್ಲಿ 3 ಸ್ಥಾನ ಗೆದ್ದಿದ್ದ ಜೆಡಿಎಸ್ 2004ರಲ್ಲಿ 37 ಸ್ಥಾನ ಗೆಲುವು ಸಾಧಿಸಿತು. ಬಿಜೆಪಿ ಹೆಚ್ಚುಸ್ಥಾನಗಳನ್ನು ಗಳಿಸಿದ್ದರು ಕೂಡ ಜೆಡಿಎಸ್ ಬೆಂಬಲದೊಂದಿಗೆ ಧರಂ ಸಿಂಗ್ ನೇತೃತ್ವದ ಮೈತ್ರಿ ಸರಕಾರ ಅಧಿಕಾರಕ್ಕೆ ಬಂತು.
ಮುಖ್ಯಮಂತ್ರಿಯಿಂದಲೇ ಪಾದಯಾತ್ರೆ
ಎಸ್ ಎಂ ಕೃಷ್ಣರಿಂದ ಪಾದಯಾತ್ರೆ: 1999ರಲ್ಲಿ ಸಿಎಂ ಆಗಿದ್ದ ಎಸ್ ಎಂ ಕೃಷ್ಣ ಪಾಂಚಜನ್ಯ ಯಾತ್ರೆ ಮಾಡಿದ್ದರು. ಮತ್ತು ಅಧಿಕಾರಕ್ಕೆ ಬಂದರು. ಆದರೆ, 2002 ರಾಜ್ಯದಲ್ಲಿ ಭಾರಿ ಬರಗಾಲ ಆವರಿಸಿದ್ದರಿಂದ ತಮಿಳುನಾಡು ರಾಜ್ಯಕ್ಕೆ ನಿಗದಿತ ಪ್ರಮಾಣದ ಕಾವೇರಿ ನೀರು ಬಿಡಲು ಸಾಧ್ಯವಾಗಿರಲಿಲ್ಲ. ಆಗ ತಮಿಳುನಾಡು ಕೋರ್ಟ್ ಮೇಟ್ಟಿಲೇರಿತ್ತು. ನ್ಯಾಯಾಲಯದ ತೀರ್ಪನ್ನು ಪಾಲನೆ ಮಾಡುವ ಸ್ಥಿತಿಯಲ್ಲಿ ಸರಕಾರ ಇರಲಿಲ್ಲ.ನ್ಯಾಯಾಲಯದ ಆದೇಶ ಪಾಲನೆ ಮಾಡದಿರುವುದನ್ನ ಸುಪ್ರೀಂಕೋರ್ಟ್ ಗಂಭೀರವಾಗಿ ತೆಗೆದುಕೊಂಡಿತ್ತು.
ಆಗ ಸಿಎಂ ಆಗಿದ್ದ ಎಸ್ ಎಂ ಕೃಷ್ಣಾ ಪಾದಯಾತ್ರೆ ಕೈಗೊಂಡು ಕಾವೇರಿ ಪ್ರಾಂತ್ಯದ ಜನರ ಮನಗೆಲ್ಲುವ ಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ ನೀರು ಹಂಚಿಕೆ ವಿಚಾರ ಸುಪ್ರೀಂಕೋರ್ಟ್ ಮುಂದೆ ಇದ್ದದ್ದರಿಂದ ಈ ಪಾದಯಾತ್ರೆಗೆ ಭಾರಿ ಆಕ್ಷೇಪ ವ್ಯಕ್ತಪಡಿಸಿತ್ತು. ಎಸ್.ಎಂ.ಕೃಷ್ಣ ಅವರು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ 2002 ಅಕ್ಟೋಬರ್ 7 ರಿಂದ ಅಕ್ಟೋಬರ್ 11ರ ವರೆಗೆ 6 ದಿನಗಳ ಪಾದಯಾತ್ರೆ ಕೈಗೊಂಡಿದ್ದರು. ಪಾದಯಾತ್ರೆಯನ್ನು ಅರ್ಧದಲ್ಲೆ ಕೈಬಿಡಬೇಕಾಯಿತು.
ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಮಂಡ್ಯದವರೆಗೆ 100 ಕಿ.ಮೀ. ದೂರ ಪಾದಯಾತ್ರೆ ನಡೆಸಿದ್ದರು. ಆ ಮೂಲಕ ರಾಜಕೀಯ ಲಾಭದ ಲೆಕ್ಕಾಚಾರ ಹಾಕಿದ್ದರು. ಆದರೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಇದರಿಂದ ಹೆಚ್ಚಿನ ರಾಜಕೀಯ ಲಾಭ ಲಭಿಸಲಿಲ್ಲ. ಬಲವಾದ ಆಡಳಿತ ವಿರೋಧಿ ಅಲೆಗೆ ಕಾಂಗ್ರೆಸ್ ಆ ಚುನಾವಣೆಯಲ್ಲಿ ಕೊಚ್ಚಿ ಹೋಗಿತ್ತು.
ಸಿದ್ದರಾಮಯ್ಯರ ಬಳ್ಳಾರಿ ಪಾದಯಾತ್ರೆ
ವಿಧಾನಸಭೆಯಲ್ಲೇ ಬಳ್ಳಾರಿ ಗಣಿಧಣಿಗಳ ಸವಾಲು ಸ್ವೀಕರಿಸಿದ ಸಿದ್ದರಾಮಯ್ಯ ಭುಜತಟ್ಟಿ, ‘ನಾವು ಬಳ್ಳಾರಿಗೆ ಬಂದೇ ಬರುತ್ತೇವೆ. ನಡೆದುಕೊಂಡೇ ಬರುತ್ತೇವೆ. ತಾಕತ್ತಿದ್ದರೆ ತಡೆಯಿರಿ,’ ಎಂದು ಮರು ಸವಾಲು ಹಾಕಿದರು. ಹೀಗೆ 2010ರ ಜುಲೈ 25ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ‘ಬಳ್ಳಾರಿ ಚಲೋ’ ಪಾದಯಾತ್ರೆ ಆರಂಭವಾಯಿತು. ಬೆಂಗಳೂರಿನಿಂದ ನಡೆದೇ ಕಾಂಗ್ರೆಸ್ ನಾಯಕರೆಲ್ಲರೂ ಬಳ್ಳಾರಿ ತಲುಪಿದರು. ಪಾದಯಾತ್ರೆಯ 20ನೇ ದಿನ ಬಳ್ಳಾರಿಯಲ್ಲಿ ಆ.8 ರಂದು 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದ ಬೃಹತ್ ಸಮಾವೇಶದ ಮೂಲಕ ಕಾಂಗ್ರೆಸ್ ನಾಯಕರು ಗಣಿಧಣಿಗಳು ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಅಬ್ಬರಿಸಿದ್ದರು.
ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ: 2013ರಲ್ಲಿ ‘ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ’ ಎಂಬ ಪಾದಯಾತ್ರೆ ನಡೆಸಿದ್ದರು. ಕೃಷ್ಣಾದ ಎ ಮತ್ತು ಬಿ ಸ್ಕೀಮ್‌ನಡಿ ಪೂರ್ಣ ಪ್ರಮಾಣದ ನೀರು ಬಳಸಿಕೊಳ್ಳಲು ಸರಕಾರ ವೈಫಲ್ಯ ಹಾಗೂ ನೀರಾವರಿ ಯೋಜನೆಗೆ ಅನುಷ್ಠಾನದಲ್ಲಿನ ವೈಫಲ್ಯ ವಿರೋಧಿಸಿ ಚುನಾವಣಾ ಪೂರ್ವ ಜ.7ರಿಂದ 14 ರವರೆಗೆ ಕಾಂಗ್ರೆಸ್ ನಡಿಗೆ – ಕೃಷ್ಣೆಯ ಕಡೆಗೆ ಎಂಬ ಯಾತ್ರೆ ಕೈಗೊಂಡಿತ್ತು.
ಕೃಷ್ಣ ಯೋಜನೆಯಲ್ಲಿ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳದೇ ಇರುವುದರಿಂದ 259 ಟಿಎಂಸಿ ನೀರು ಆಂಧ್ರಕ್ಕೆ ಹೋಗುತ್ತಿದೆ. ಅಲ್ಲಿನ ನೀರಾವರಿ ಯೋಜನೆಗೆ 17 ಸಾವಿರ ಕೋಟಿ ರೂ. ಖರ್ಚು ಮಾಡುವ ಭರವಸೆ ನೀಡಿದ್ದ ಬಿಜೆಪಿ, ಕೇವಲ 500 ಕೋಟಿ ರೂ. ನೀಡಿದೆ ಎಂಬ ಪ್ರಮುಖ ಅಜೆಂಡಾದೊಂದಿಗೆ ಪಾದಯಾತ್ರೆ ನಡೆಸಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಬಜೆಟ್‌ನಲ್ಲಿ ಇದಕ್ಕೆ 10 ಸಾವಿರ ಕೋಟಿ ರೂ. ಮೀಸಲಿಡಲಾಗುವುದು ಎಂಬ ಭರವಸೆಯೊಂದಿಗೆ ಪಾದಯಾತ್ರೆ ನಡೆಸಿತ್ತು. ಹೊಸಪೇಟೆಯಿಂದ ಆರಂಭಗೊಂಡು ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳದ ಮಾರ್ಗವಾಗಿ ಕೂಡಲಸಂಗಮದಲ್ಲಿ ಸಮಾರೋಪಗೊಂಡು ಸುಮಾರು 140 ಕಿ.ಮೀ ಪಾದಯಾತ್ರೆ ನಡೆಸಲಾಯಿತು.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ರಾಜ್ಯದಲ್ಲಿ ಇದೀಗ ಕಾಂಗ್ರೆಸ್ ಉದ್ದೇಶಿಸಿರುವ ಮೇಕೆದಾಟು ಪಾದಯಾತ್ರೆ ರಾಜಕೀಯವಾಗಿ ಆರೋಪ – ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಹೊರಟಿದ್ದ ಪಾದಯಾತ್ರೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಡೆಯಿತು. ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ 2022 ಜನವರಿ 9 ರಿಂದ 19 ರವರೆಗೆ 11 ದಿನಗಳ 165 ಕಿ. ಮೀ. ಪಾದಯಾತ್ರೆ ಆರಂಭಿಸುವ ಮೂಲಕ ಹೋರಾಟಕ್ಕೆ ಮುನ್ನುಡಿ ಬರೆಯಿತು.
ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ, ಡಾ.ಜಿ.ಪರಮೇಶ್ವರ್, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರಾದೂ, ಅಷ್ಟಾಗಿ ನಾಯಕರಲ್ಲಿ ಆಸಕ್ತಿ ಕಾಣಿಸಲಿಲ್ಲ. ಕನಕಪುರದ ಮೇಕೆದಾಟುವಿನಿಂದ ಆರಂಭವಾದ ಪಾದಯಾತ್ರೆ ರಾಮನಗರದವರೆಗೆ ನಡೆಸಿದ ಕಾಂಗ್ರೆಸ್ ನಾಯಕರಿಗೆ ಕೋವಿಡ್ ಕಾರಣ ನೀಡಿ ತಡೆವೊಡ್ಡಲಾಗಿತ್ತು. ನಂತರ ರಾಮನಗರದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ನಡೆಸಿದ ಕೈ ನಾಯಕರು, ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದರು.
ಸಿದ್ದರಾಮಯ್ಯ ಅವರ ಬಳ್ಳಾರಿ ಪಾದಯಾತ್ರೆ: ಬಿಜೆಪಿಯ ಗಣಿದಣಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಪ್ರಾಬಲ್ಯದ ವಿರುದ್ದ ತೊಡೆತಟ್ಟಿದ ಸಿದ್ದರಾಮಯ್ಯ ಅವರು ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದರು. ಈ ಐತಿಹಾಸಿಕ ಪಾದಯಾತ್ರೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ್ದಲ್ಲದೇ, 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯುವಂತೆ ಮಾಡಿತು. ಅದುವರೆಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು.
ಮುಖ್ಯಮಂತ್ರಿಯಾಗಿದ್ದವರು ಬಿಎಸ್ ಯಡಿಯೂರಪ್ಪ. ಬಳ್ಳಾರಿಯ ಗಣಿಧಣಿಗಳಾದ ಜನಾರ್ದನ್ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು.ಬಳ್ಳಾರಿಯನ್ನು ತಮ್ಮ ಸ್ವಂತ ರಾಜ್ಯ ಎಂಬಂತೆ ಆಳುತ್ತಿದ್ದ ಇವರು ಅದೊಂದು ದಿನ ರಾಜ್ಯ ವಿಧಾನಸಭೆಯಲ್ಲಿ ‘ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ಸವಾಲು ಹಾಕಿದ್ದರು.
ಭಾರತ್ ಜೋಡೋ ಯಾತ್ರೆ: ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ನಡೆಸಲಿರುವ ‘ಭಾರತ್ ಜೋಡೋ ಯಾತ್ರೆ’ 2.0 ದೇಶದ ರಾಜಕೀಯ ಇತಿಹಾಸದಲ್ಲಿ ತಿರುವು ನೀಡಲಿದೆ ಎಂದು ಹೇಳಲಾಗುತ್ತಿದೆ.