ಕರ್ನಾಟಕ ಕಲಾ ಸಂಸ್ಕೃತಿಯ ಸಂಗೀತ ಲೋಕದಲ್ಲಿ ಕೋಗಿಲೆಯಾಗಿ ತನ್ನ ಸುಮಧುರ ಕಂಠದಿಂದ ವಿಶ್ವದಾದ್ಯಂತ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಪ್ರಖ್ಯಾತ ಗಾಯಕಿ ಬಿ ಆರ್. ಛಾಯಾ.
೧೯೬೦-೭೦ ರ ದಶಕದಲ್ಲಿ ಕನ್ನಡ ಚಲನ ಚಿತ್ರ ರಂಗದ ಸುವರ್ಣಯುಗವನ್ನಾಗಿಸಿದ ಹಲವಾರು ಪ್ರತಿಭಾನ್ವಿತರಲ್ಲಿ ಓರ್ವರಾದ ಚಲನಚಿತ್ರ ನಿರ್ದೇಶಕ ದಿ. ಪುಟ್ಟಣ್ಣ ಕಣಗಾಲ್ ರವರ "ಅಮೃತ ಘಳಿಗೆ ಕನ್ನಡ ಚಲನಚಿತ್ರದ ಮೂಲಕ ಸಂಗೀತ ನಿರ್ದೇಶಕ ಸಂಗೀತ ಸಾಮ್ರಾಟ್ ದಿ. ವಿಜಯ ಭಾಸ್ಕರ್ ರವರ ಮಾರ್ಗದರ್ಶನದಲ್ಲಿ ಚಲನಚಿತ್ರ ಸಂಗೀತ ಲೋಕಕ್ಕೆ ಪಾದಾರ್ಪಣೆ. "ಹಿಂದೂಸ್ಥಾನ ಎಂದೂ ಮರೆಯದ ಭಾರತ ರತ್ನ ನೀನಾಗು" ಪ್ರಥಮ ಹಿನ್ನೆಲೆ ಗಾಯನ ಮೂಲಕ ಪರಿಚಯವಾಗಿ ಇಂದಿಗೂ ಎಂದೂ ಮರೆಯಲಾಗದ ಗಾಯಕಿಯಾಗಿ ಸಂಗೀತ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.
ಸಂಗೀತ ಲೋಕದ ಧ್ರುವತಾರೆಗಳಾದ ಬಾಲಮುರಳಿ ಕ್ರ್‍ಅಷ್ಣ, ಡಾ. ಜೇಸುದಾಸ್, ಡಾ. ಪಿ. ಬಿ ಶ್ರೀನಿವಾಸ್, ಡಾ. ರಾಜ್ ಕುಮಾರ್, ಎಸ್. ಪಿ. ಬಾಲಸುಬ್ರಮಣ್ಯಂ ರಂತಹ ಗಾಯಕರೊಡನೆ ಸ್ವರಜೋಡಿಸಿರುವ ಬಿ. ಆರ್. ಛಾಯಾ ರವರ ಸುಮಧುರ ಧ್ವನಿಯನ್ನು ಮೊದಲಿಗೆ ಗುರುತಿಸಿ, ಪ್ರಶಂಸಿಸಿ, ಆಶಿರ್ವಾದ ಮಾಡಿದವರು ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಇಳೆಯರಾಜರವರು.
ಭಾರತ ದೇಶದಲ್ಲಿಯೆ ಅತ್ಯಂತ ಹೆಚ್ಚಿನ ಸಂಖ್ಯೆ ಯಲ್ಲಿ ಸುಮಾರು ೬೦೦೦ ಕ್ಕೊ ಹೆಚ್ಚು ಧ್ವನಿ ಸುರುಳಿಗಳಲ್ಲಿ ಭಾವಗೀತೆ, ಜಾನಪದ, ಭಕ್ತಿಗೀತೆ, ಪಾಪ್ ಶೈಲಿಯ ಗೀತೆಗಳನ್ನು ಹಾಡಿ ಕನ್ನಡಿಗರ ಮನಸೂರೆಗೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ತುಳು, ಕೊಂಕಣಿ ಭಾಷೆಗಳಲ್ಲಿ ಸುಮಾರು ೨೦೦ ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ, ೧೯೮೭-೮೮ ನೇ ಸಾಲಿನಲ್ಲಿ "ಬೆಂಕಿ" , ೧೯೯೪-೯೫ ನೇ ಸಾಲಿನ "ರಶ್ಮಿ"ಕನ್ನಡ ಚಲನ ಚಿತ್ರದ ಹಿನ್ನೆಲೆ ಗಾಯನಕ್ಕೆ ಕರ್ನಾಟಕ ಸರ್ಕಾರದಿಂದ ಎರಡು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ.
ದಶಕಗಳಿಂದ ಕನ್ನಡ ತಮಿಳು, ತೆಲಗು, ರಾಜಸ್ತಾನಿ, ಪಂಜಾಬಿ, ಹಳೆಯ ಹಿಂದಿ ಚಿತ್ರಗೀತೆಗಳು ಮತ್ತು ಗಜಲ್ ಗಳನ್ನು ವಿವಿಧ ಬೃಹತ್ ವೇದಿಕೆಗಳಲ್ಲಿ ಸಂಗೀತ ಸಂಜೆಗಳಲ್ಲಿ ೨೫೦೦ ಕ್ಕೊ ಹೆಚ್ಚು ಕಾರ್ಯಕ್ರಮ ನೀಡಿರುವ ಬಿ. ಆರ್. ಛಾಯಾರವರು ದೂರದರ್ಶನ, ಆಕಾಶವಾಣಿ, ಆಲ್ ಇಂಡಿಯಾ ರೇಡಿಯೊದಲ್ಲಿ "ಏ" ಗ್ರೇಡ್ ಗಾಯಕಿಯಾಗಿದ್ದಾರೆ.
ದೇವತಾ ಮನುಷ್ಯ ಕನ್ನಡ ಚಲನಚಿತ್ರದಲ್ಲಿ ಡಾ. ರಾಜ್ ಜೊತೆಗೆ ನಿನ್ನಂತ ಅಪ್ಪ ಇಲ್ಲಾ, ಶಬರಿಮಲೆ ಸ್ವಾಮಿ ಅಯ್ಯಪ್ಪ ಚಲನ ಚಿತ್ರದ ನೀನಮ್ಮ ಬೆಳಕಾಗಿ ಬಾ, ದೂರದರ್ಶನದಲ್ಲಿ ಹುಚ್ಚು ಕೋಡಿ ಮನಸ್ಸು, ಓ ನನ್ನ ದೇಶ ಬಾಂಧವರೆ, ದಾ. ರಾ. ಬೇಂದ್ರೆಯವರ ನಾವು ಬರ್ತೇವಿನ್ನ ನೆನಪಿರಲಿ ಇತ್ಯಾದಿ ನೂರಾರು ಗೀತೆಗಳ ಕೇಳುಗರ ಮನದಲ್ಲಿ ಶಾಶ್ವತವಾಗಿ ಉಳಿದು ಕೊಂಡಿವೆ.
ಬಿ. ಆರ್. ಛಾಯಾ ರವರ ನುರಿತ ಸಂಗೀತಗಾರರ, ಧ್ವನಿ ಸಂಯೋಜಕರ, ಅತ್ಯಾಧುನಿಕ ಸಂಗೀತ ಉಪಕರಣಗಳನ್ನೊಳಗೊಂಡ, ಗಾಯಕರ ತಂಡವಿರುವ ಆರ್ಕೆಸ್ಟ್ರಾ ಹಲವಾರು ಸಂಗೀತ ಸಂಜೆಯಲ್ಲಿ ಗೀತ ಗಾಯನವನ್ನು ವೈಭವೀಕರಿಸಿದ್ದಾರೆ.
ಈ ಟಿವಿ ಯ ಜನಪ್ರಿಯ ಗೀತ ಗಾಯನ 'ಹಾಡಿಗೊಂದು ಹಾಡು' ಹಲವಾರು ಕಡೆಗಳಲ್ಲಿ ಕಾರ್ಯಕ್ರಮ ನಡೆಸಿ ನೂತನ ಗಾಯಕರುಗಳನ್ನು ಗುರುತಿಸಿ ಪ್ರೋತ್ಸಾಹಿಸಿದ್ದು ಮೆಚ್ಚುವಂತಾಗಿದೆ.
ಆಸ್ಟ್ರೇಲಿಯಾದ ಸಿಡ್ನಿ ಕನ್ನಡ ಸಂಘ, ಕ್ಯಾನ್ ಬೆರಾ ಕರ್ನಾಟಕ ಸಂಘ, ಸೌತ್ ಆಸ್ಟ್ರೇಲಿಯಾ, ಮೆಲ್ಬೊರ್ನ್ ಕನ್ನಡ ಸಂಘ, ನ್ಯೂಜಿಲ್ಯಾಂಡ್ ಕನ್ನಡ ಕೂಟ, ಮಲೇಶಿಯಾ ಕನ್ನಡ ಕೂಟ, ಸಿಂಗಪೂರ ಕನ್ನಡ ಕೂಟ, ಆಮೆರಿಕಾ ಕನ್ನಡ ಕೂಟಗಳ ಆಗರ "ಅಕ್ಕ" ವಿಶ್ವಕನ್ನಡ ಸಮ್ಮೇಳನ ೨೦೦೬, ನ್ಯೂಯಾರ್ಕ್ ಕನ್ನಡ ಕೂಟಗಳಲ್ಲಿ ಕಾರ್ಯಕ್ರಮ ನೀಡಿ ವಿಶ್ವಕನ್ನಡಿಗರ ಮನಸೂರೆ ಗೊಂಡಿದ್ದಾರೆ.
ಶಾರ್ಜಾ ಕರ್ನಾಟಕ ಸಂಘದ ೫ನೇ ವಾರ್ಷಿಕೋತ್ಸವದ ವರ್ಣರಂಜಿತ ಗೀತಾ ಮಾಧುರ್ಯ ಸಂಗೀತಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಯು ಎ ಇ ಗೆ ಆಗಮಿಸಿರುವ ಬಿ. ಆರ್. ಛಾಯಾ ರವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು.
" ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"
ಬಿ. ಕೆ. ಗಣೇಶ್ ರೈ
ನಿಕಟಪೂರ್ವ ಅಧ್ಯಕ್ಷರು
ಕರ್ನಾಟಕ ಸಂಘ ಶಾರ್ಜಾ
ಅರಬ್ ಸಂಯುಕ್ತ ಸಂಸ್ಥಾನ








