ಕಿಲುಬು ಸಂಸ್ಕೃತಿ
- ಗೋಪೀನಾಥ ರಾವ್
ಹಗಲಲ್ಲಿ ರಂಜನೆಯ ಹಾಡು, ನೃತ್ಯ
ರಾತ್ರಿ ಇನ್ನೊಂದು ಜಾಡು.. ದಿನನಿತ್ಯ
ಇದು ಹಲವು ಕಲಾವಿದೆಯರ ಪಾಡು
ನಮ್ಮದು ಕಾಡು ಸಂಸ್ಕೃತಿಯ ನಾಡು
ಕಸದಗುಂಡಿಯ ಬಳಿ ಹತ್ತಾರು ಮಕ್ಕಳು
ದೊಡ್ಡವಳ ಕಂಕುಳಲ್ಲಿ ಜೋಲುವ ಚಿಕ್ಕವಳು
ದಾನ ಧರ್ಮ ಉಳ್ಳವರ ವಿಕೃತ ಅಟ್ಟಹಾಸ
ಮಾನವಂತರ ಸಾಂತ್ವನದ ಕಪಟ ಪ್ರಯಾಸ
ಸಾವ ಬಯಸುವ ಸೋತ ಮುದುಕರು
ಹೊನ್ನಬದುಕು ಬಿಟ್ಟು ಚಿನ್ನರಿಗಾಗಿ ದುಡಿದವರು
ಬೆಳೆದ ಮಕ್ಕಳ ಕೈಯಲ್ಲೀಗ ಸುಖಸಂಪತ್ತು
ಮುದುಕರೆಂದರೆ ವೃಥಾಖರ್ಚು ನುಂಗಲಾರದ ತುತ್ತು
ಬೆಳೆಸಿಕೊಂಡಿದ್ದೇವೆ ಕಣ್ತೆರೆದು ನೋಡದ ವಿದ್ಯೆ
ಸಂಪತ್ತಿಗಾಗಿ ಸಮರ ಅಣ್ಣ ತಮ್ಮಂದಿರ ಮಧ್ಯೆ
ಮಾತೆತ್ತಿದರೆ ಬೊಗಳುತ್ತೇವೆ ನಮ್ಮತನ ಸಂಸ್ಕೃತಿ
ಸುತ್ತು ಪರಿಸರದಲ್ಲಿ ಹರಡಿ ಹೇಸಿಗೆಯ ವಿಕೃತಿ









