ಎದುರುತ್ತರ ಎಂದರೇನು?

- ಆರ್ ಶ್ರೀ ನಾಗೇಶ್ 

ಎಷ್ಟೋ ವೇಳೆ ಎದುರುತ್ತರ ಎಂದರೆ ಏನು ಎಂದು ಅರ್ಥವಾಗದೇ ಪೋಷಕರಲ್ಲಿ, ಮಕ್ಕಳಲ್ಲಿ ವಿರಸ ಉಂಟಾಗುವುದು. ಅದಕ್ಕಾಗಿ ಈ ವಿಷಯದಲ್ಲಿ ಗೊಂದಲ ಇರಬಾರದು. 

ತಂದೆ ಕುಡಿದು ಮನೆಗೆ ಬರುತ್ತಾನೆ. ಮಗ ತಂದೆಗೆ ಹೇಳುತ್ತಾನೆ, ನೀವು ಈ ರೀತಿ ಮಾಡುವುದು ತಪ್ಪು ಎಂದು. ನಾನು ನಿನ್ನ ಅಪ್ಪ. ನನಗೇ ಬುದ್ದಿ ಹೇಳಲು ಬರುತ್ತೀಯ ಅಂತ ಅಪ್ಪ ಜೋರು ಮಾಡುತ್ತಾನೆ. ನೀವು ಮಾಡುತ್ತಿರುವುದು ತಪ್ಪು ಕೆಲಸ. ಅದನ್ನು ಹೇಳುವ ಹಕ್ಕು ನನಗಿದೆ ಎಂದು ಮಗ ವಾದಿಸುತ್ತಾನೆ.

ಅಜ್ಜಿ ತನ್ನ ತಾಯಿಯನ್ನು ಬೈಯುತ್ತಿರುತ್ತಾಳೆ. ಅದನ್ನು ಕೇಳಿಸಿಕೊಂಡ ಮಗಳು ಅಜ್ಜಿಗೆ ತನ್ನ ತಾಯಿಯನ್ನು ಹಾಗೆ ಬೈಯಬೇಡಿ ಎಂದು ಹೇಳುತ್ತಾಳೆ. ಒಳ್ಳೆಯ ಮಾತಿನಲ್ಲಿಯೇ ಯಾಕೆ ಹೇಳಬಾರದು ಅಂತ ಕೇಳುತ್ತಾಳೆ.

ತಂದೆ ತಾಯಿ ಇಬ್ಬರೂ ಬೇರೆಯವರ ಮಕ್ಕಳಿಗೆ ಉಡುಗೊರೆಗಳನ್ನು ಕೊಡುತ್ತಿರುತ್ತಾರೆ. ತಮ್ಮ ಮಕ್ಕಳು ಕೇಳಿದರೆ ಏನನ್ನೂ ಕೊಡಿಸುವುದಿಲ್ಲ. ದುಡ್ಡಿಲ್ಲ ಅನ್ನುವರು. ಆಗ ಮಕ್ಕಳು ನಾವು ಕೇಳಿದರೆ ಇಲ್ಲ ಅಂತೀರ, ಬೇರೆಯವರಿಗೆ ಕೊಡಿಸಕ್ಕೆ ಮಾತ್ರ ನಿಮ್ಮ ಹತ್ತಿರ ದುಡ್ಡಿರತ್ತೆ. ನಾವು ಕೇಳಿದಾಗ ಮಾತ್ರ ಯಾಕೆ ಇರಲ್ಲ ಅಂತ ಕೇಳ್ತಾರೆ.

ಮೇಲಿನ ಮೂರೂ ಪ್ರಸಂಗಗಳಲ್ಲಿ ಮಕ್ಕಳ ಮಾತುಗಳು ಎದುರುತ್ತರದ ಸ್ವರೂಪವನ್ನೇ ಹೋಲುತ್ತವೆ. ಆದರೆ ಅವು ಎದುರುತ್ತರಗಳಲ್ಲ. ತಾವು ಕಂಡ ಅನ್ಯಾಯದ ವಿರುದ್ದ ಪ್ರತಿಭಟಿಸುವ ಹಕ್ಕು ಮಕ್ಕಳಿಗೆ ಇದೆ. ತಮಗಾಗಲೀ, ತಮ್ಮ ಕುಟುಂಬಕ್ಕಾಗಿಯಾಗಲೀ ಅನ್ಯಾಯವಾಗುತ್ತಿದೆ, ತೊಂದರೆಯಾಗುತ್ತಿದೆ, ಅಥವಾ ನಡೆಯುತ್ತಿರುವುದು ನೀತಿ ಸಮ್ಮತವಲ್ಲ ಎಂದು ಅನಿಸಿದರೆ ಮಕ್ಕಳು ಪ್ರತಿಭಟಿಸಬಹುದು.

ಆದರೆ ಈ ಕೆಳಗಿನ ಪ್ರಸಂಗಗಳನ್ನು ನೋಡಿ. ಇವನ್ನು ಎದುರುತ್ತರ ಎಂದು ಪರಿಗಣಿಸಬಹುದು.
ಓದು, ತಿನ್ನು ಎಂದೆಲ್ಲ ಅಪ್ಪ ಅಥವಾ ಅಮ್ಮ ಹೇಳಿದಾಗ ನನಗೆ ಬೇಕಾದರೆ ಓದ್ತೀನಿ/ತಿಂತೀನಿ, ಇಲ್ಲ ಬಿಡ್ತೀನಿ, ನಿಮಗೇನು? ಎನ್ನುತ್ತಾನೆ/ಳೆ ಮಗ/ಳು.

ನನಗೆ ಮೋಟರ್ ಬೈಕ್ ಕೊಡಿಸದಿದ್ದರೆ ನಾನು ಓದಲ್ಲ ಅಂತಾನೆ, ಮಗ.

ನನಗೆ ಗೊತ್ತಿದೆ. ನೀವೇನೂ ಹೇಳಬೇಕಿಲ್ಲ ಅನ್ನುವುದು.

ನಾನಿರೋದೇ ಹೀಗೆ ಅನ್ನುವುದು.

ನನಗೆ ನಿಮ್ಮ ಪ್ರೀತಿ ಅಗತ್ಯ ಇಲ್ಲ.

ನೀವು ನನ್ನ ಅಪ್ಪ ಅಮ್ಮ. ನಾನು ಕೇಳಿದ್ದನ್ನ ಕೊಡಿಸೋದು ನಿಮ್ಮ ಕರ್ತವ್ಯ. ನನ್ನ ಸಾಕೊದು ನಿಮ್ಮ ಕರ್ತವ್ಯ. ಅದನ್ನ ನೀವು ಮಾಡ್ತಿದೀರ ಅಷ್ಟೆ ಅನ್ನುವುದು.

ಮುಖ ಸಿಂಡರಿಸುವುದು. ರೇಗಿದ ಧ್ವನಿಯಲ್ಲಿ ಉತ್ತರಿಸುವುದು.

ಭುಜ ಕುಣಿಸಿ ನಿರ್ಲಕ್ಷ್ಯ ತೋರುವುದು ನೀವು ಏನಾದರೂ ಹೇಳುತ್ತಿದ್ದರೆ ಅದಕ್ಕೆ ಕಿವಿ ಕೊಡದೆ ಇರುವುದು

ಇಂತಹ ನಡವಳಿಕೆ ಎದುರುತ್ತರ ಎನಿಸಿಕೊಳ್ಳುತ್ತದೆ.

ಅದಕ್ಕೆ ಪರಿಹಾರ ಏನು?
ಮೊದಲ ಲೇಖನದಲ್ಲಿ ಯುವ ಜನರ ನಡವಳಿಕೆಯನ್ನು ರೂಪಿಸುವ ಅಂಶಗಳನ್ನು ಪ್ರಸ್ತಾಪಿಸಲಾಗಿದೆಯಷ್ಟೆ. ಅವುಗಳನ್ನು ಒಂದು ಸಲ ಅವಲೋಕಿಸಿ ಅವರ ನಡವಳಿಕೆಗೆ ಕಾರಣ ಏನು ಇರಬಹುದು ಎಂದು ವಿಶ್ಲೇಷಿಸಿಕೊಳ್ಳಬೇಕು. ಎರಡನೆಯದಾಗಿ ಅವರಿಗೆ ಈ ನಡವಳಿಕೆ ನಮಗೆ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಬೇಕು. ಅದನ್ನು ತಿದ್ದಿಕೊಳ್ಳದಿದ್ದರೆ ಅವರಿಗೆ ಕೊಟ್ಟಿರುವ ಕೆಲವು ಸೌಲಭ್ಯಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಅಂತಹ ಸಂದರ್ಭದಲ್ಲಿ  ನನ್ನನ್ನ ಹುಟ್ಟಿಸಿದ ತಪ್ಪು ನಿಮ್ಮದೇ. ನನಗೆ ಬೇಕಾದ ಅನುಕೂಲಗಳನ್ನ ಮಾಡಿಕೊಡೊದು ನಿಮ್ಮ ಕರ್ತವ್ಯ ಎಂದು ಅವರು ವಾದಿಸಿದರೆ, ನಮ್ಮ ಮಗು ಹೇಗೆ ನಡೆದುಕೊಳ್ಳಬೇಕೋ ಹಾಗೆ ನಡೆದುಕೊಂಡರೆ ನಮ್ಮ ಕರ್ತವ್ಯವನ್ನು ನಾವು ಮಾಡುತ್ತೇವೆ. ನಮ್ಮ ಮಗು ಹೇಗೆ ನಡೆದುಕೊಳ್ಳಬೇಕೋ ಹಾಗೆ ನಡೆದುಕೊಳ್ಳದಿದ್ದರೆ ನಾವು ಏನೂ ಮಾಡಬೇಕಿಲ್ಲ ಎಂದು ಸ್ಪಷ್ಟವಾಗಿ ದೃಢವಾಗಿ ಹೇಳಬೇಕು. ಮೂರನೆಯದಾಗಿ ಮನೆ ಬಿಟ್ಟು ಹೋಗು ಎಂದು ಹೇಳಲು ಸಿದ್ದವಿರಬೇಕು! ಹಾಗೆ ಹೇಳಿದರೆ ಹೋಗೇಬಿಡ್ತಾನೆ ಅಂದರು ಒಬ್ಬ ಅಮ್ಮ. ಹೋಗಲಿ ಬಿಡಿ. ಆದರೆ ಹಾಗೆ ಹೋಗುವಾಗ ಮನೆಯಿಂದ ಏನನ್ನೂ ತೆಗೆದುಕೊಂಡು ಹೋಗಲು ಬಿಡಬಾರದು. ಬರಿ ಕೈಯಲ್ಲಿ ಹೋಗಬೇಕು. ಮನೆ ಬಿಟ್ಟು ಹೋಗು ಎಂದ ಮೇಲೆ ಮನಸ್ಸನ್ನು ಗಟ್ಟಿ ಮಾಡಿಕೊಂಡು ಆಗಿಂದಾಗಲೇ ಹೊರಡಿಸಬೇಕು. ಸಮಯ ಕೊಡಬಾರದು. ಇದನ್ನು ತಂದೆ ತಾಯಿ ಅಥವಾ ಅಜ್ಜ/ಅಜ್ಜಿ ಮಾಡುವುದಿಲ್ಲ ಎಂಬ ನಂಬಿಕೆಯಿಂದಲೇ ಮಕ್ಕಳು ಹಾಗೆ ಜೋರು ಮಾಡುವರು. ಇಲ್ಲ, ಅಪ್ಪ ಅಮ್ಮ ಹಾಗೆ ಮಾಡಿಬಿಡುವರು ಎಂಬ ಹೆದರಿಕೆ ಇದ್ದರೆ ಹಾಗೆ ಮಾಡುವುದಿಲ್ಲ. ನಮ್ಮ ಪ್ರೀತಿ, ಭಾವುಕತೆಗಳನ್ನು ಬಳಸಿಕೊಂದು ನಮ್ಮನ್ನು ಬ್ಲಾಕ್ ಮೈಲ್ ಮಾಡಲು ಬಿಡಬಾರದು. ಆಗ ಮಕ್ಕಳು ಸಾಧಕರಾಗಿ ನಮಗೆ ಹೆಮ್ಮೆ ತರುವರು. ಸಮಾಜಕ್ಕೂ ಒಳಿತು ಮಾಡುವರು. ಅದಕ್ಕಿಂತ ಹೆಚ್ಚಾಗಿ ನಿಮ್ಮದಿಯ ಬದುಕನ್ನು ನಡೆಸಿಕೊಂಡು ಹೋಗುವರು. 

Syndicate

Syndicate content