ಮಯೂರ ಪ್ರಶಸ್ತಿ ೨೦೦೭- ಶ್ರೀ ಬಿ.ಜಿ.ಮೋಹನದಾಸ್ ಆಯ್ಕೆ
beeji.jpg

- ಅರ್ಶದ್ ಹುಸೇನ್ 

೨೦೦೫ರಲ್ಲಿ ಕನ್ನಡಧ್ವನಿಯ ಲೇಖಕರಾದ ಶ್ರೀ ಇರ್ಶಾದ್ ಮೂಡಬಿದ್ರಿಯವರಿಗೆ ಸಿಕ್ಕಿದ್ದು ನೆನಪಿರಬೇಕಲ್ಲ, ಈ ವರ್ಷದ ಪ್ರತಿಷ್ಠಿತ ಪ್ರಶಸ್ತಿಗಾಗಿ ನಮ್ಮ ನೆಚ್ಚಿನ ಬೀಜಿಯವರು (ಆತ್ಮೀಯರಲ್ಲಿ ಬೀಜಿ ಎಂದೇ ಪ್ರಸಿದ್ಧರಾಗಿರುವ ಕನ್ನಡಿಗರಾದ ಶ್ರೀ ಬಿ.ಜಿ.ಮೋಹನದಾಸ್) ಆಯ್ಕೆಯಾಗಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪರಂಪರೆಯಂತೆ ಈ ವರ್ಷವೂ ಶಾರ್ಜಾ ಕನ್ನಡ ಸಂಘ ಯು.ಎ.ಇ.ಯಲ್ಲಿ ಕನ್ನಡಕ್ಕಾಗಿ ಶ್ರಮಿಸಿ ಕನ್ನಡದ ಏಳಿಗೆಗೆ ತಮ್ಮ ಯೋಗದಾನವನ್ನು ನೀಡಿರುವ ಉದ್ಯಮಿಗಳು, ಕಲಾಕಾರರು, ಸಮಾಜಸೇವಕರು ಹಾಗೂ ಬರಹಗಾರರಿಗೆ ಪ್ರತಿಷ್ಠಿತ "ಮಯೂರ ಪ್ರಶಸ್ತಿ" ನೀಡುವ ಮೂಲಕ ಅವರ ಸಾಧನೆಗೆ ಮೆರಗು ನೀಡುತ್ತಿದೆ. 

ಈ ಪ್ರಶಸ್ತಿಯು ಶಾರ್ಜಾ ಕನ್ನಡ ಸಂಘದ ಸ್ಥಾಪಕರಲ್ಲೊಬ್ಬರಾದ ದಿವಂಗತ ಉಮೇಶ್ ನಂತೂರ್ ಅವರ ಕಲ್ಪನೆಯ ಕೂಸಾಗಿದ್ದು ಇಂದು ಯು.ಎ.ಇ.ಯಲ್ಲಿ ನೀಡಲ್ಪಡುವ ಪ್ರಮುಖ ಪ್ರಶಸ್ತಿಯಾಗಿದೆ. ಕಳೆದ ವರ್ಷದ ಮಯೂರ ಪ್ರಶಸ್ತಿ ಅರಬ್ ಹೋಟೆಲ್ ಗ್ರೂಪ್ ಮಾಲೀಕರಾದ ಶ್ರೀ ಶೇಖರ್ ಶೆಟ್ಟಿಯವರಿಗೆ ಸಂದಿತ್ತು.

ಈ ವರ್ಷ ಸಂಘದ ವಿಶೇಷ ಸಮಿತಿಯು ಅವಿರೋಧವಾಗಿ ದುಬೈ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ, ಯು.ಎ.ಇ ಯ ಭಾರತೀಯ ಔಷಧೀಯ ವೇದಿಕೆಯ ಮಾಜಿ ಅಧ್ಯಕ್ಷರೂ ಆದ ಶ್ರೀ ಬಿ.ಜಿ. ಮೋಹನದಾಸ್ ಅವರನ್ನು ಮಯೂರ ಪ್ರಶಸ್ತಿ-೨೦೦೭ ನೀಡಿ ಸನ್ಮಾನಿಸಲು ನಿರ್ಧರಿಸಿದೆ.

ಈ ಪ್ರಶಸ್ತಿಯನ್ನು ಡಿಸೆಂಬರ್ ೨೧ರಂದು ಶಾರ್ಜಾದ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದಲ್ಲಿ  ಆಯೋಜಿಸಲಾಗಿರುವ ಅದ್ದೂರಿ ಸಮಾರಂಭದಲ್ಲಿ ಪ್ರದಾನಿಸಲು ನಿರ್ಧರಿಸಲಾಗಿದೆ.

ಶ್ರೀ ಬಿ.ಜಿ.ಮೋಹನದಾಸ್ ಅವರ ಪರಿಚಯ:

ಸ್ನೇಹಿತರ ಮತ್ತು ಆತ್ಮೀಯರ ನಡುವೆ ಬೀಜಿ ಎಂದೇ ಪ್ರಖ್ಯಾತರಾಗಿರುವ ಶ್ರೀ ಬಿ.ಜಿ. ಮೋಹನದಾಸ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಜಿಜೂರು ಗ್ರಾಮದಲ್ಲಿ ಜನಿಸಿದ್ದರೂ ಪ್ರಾಥಮಿಕ ಶಿಕ್ಷಣವನ್ನು ಉಡುಪಿಯಲ್ಲಿ ಪಡೆದರು. ಮಣಿಪಾಲದ ಕೆ.ಎಂ.ಸಿ. ವಿದ್ಯಾಲಯದಲ್ಲಿ  ಔಷಧೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಂತರಾಷ್ಟ್ರೀಯ  ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು. ೧೯೮೨ರಿಂದ ಸೌದಿ ಅರೇಬಿಯಾ ಮೊದಲುಗೊಂಡು ಇತರ ಗಲ್ಫ್ ರಾಷ್ಟ್ರಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

ಅನಿವಾಸಿಗಳಾಗುವ ಮುನ್ನ ಸಮಾಜದ ಏಳ್ಗೆಗಾಗಿ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮಣಿಪಾಲ ಜೇಸೀಸ್ ನಲ್ಲೂ ಕೆಲಕಾಲ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದರು.

ದುಬೈ ಕರ್ನಾಟಕ ಸಂಘದ ಸ್ಥಾಪನೆಯ ಕಾಲದಿಂದಲೂ ಸಂಘದ ಕಾರ್ಯಕಲಾಪಗಳಲ್ಲಿ ಭಾಗಿಯಾಗಿದ್ದ ಬಿ.ಜಿ. ೧೯೮೯ರಲ್ಲಿ ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದರು. ೧೯೮೯ರಿಂದ ೧೯೯೯ರ ದಶಕದಲ್ಲಿ ಕರ್ನಾಟಕ ಸಂಘವು ಇವರ ಅಧ್ಯಕ್ಷತೆ, ಉಪಾಧ್ಯಕ್ಷತೆ, ಹಾಗೂ ಕಾರ್ಯದರ್ಶಿತ್ವದ ಸೇವೆ ಪಡೆದು ಅಪ್ರತಿಮೆ ಏಳಿಗೆ ಸಾಧಿಸಿದೆ. ಈ ದಶಕದಲ್ಲಿ ಅತ್ಯಂತ ಹೆಚ್ಚಿನ ಸದಸ್ಯರ ನೋಂದಣೆ, ಅನೇಕ ಕಾರ್ಯಕ್ರಮಗಳು ಕರ್ನಾಟಕ ಸಂಘವನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ದಿತ್ತು. ಈ ಜನಪ್ರಿಯತೆಯೇ ದುಬೈ ಕರ್ನಾಟಕ ಸಂಘವನ್ನು ಯು.ಎ.ಇ.ಯಲ್ಲಿಯೇ ಪ್ರಮುಖ ಸಂಘವನ್ನಾಗಿ ಪರಿಗಣಿಸಲು ಸಾಧ್ಯವಾಗಿದೆ.

೧೯೮೯ರಲ್ಲಿ ಕನ್ನಡದ ಪ್ರಮುಖ ದಿನಪತ್ರಿಕೆಯಲ್ಲಿ ಪ್ರತಿ ಬುಧವಾರ ಪ್ರಕಟವಾಗುವ ಗಲ್ಫ್ ವಾರ್ತಾ ಸಂಚಯ ಅಂಕಣವನ್ನು ಪ್ರಾರಂಭಿಸಿ ಗಲ್ಫ್ ಕನ್ನಡಿಗರ ಚಟುವಟಿಕೆಗಳಿಗೆ ಕರ್ನಾಟಕದಲ್ಲಿ ವೇದಿಕೆ ಒದಗಿಸಿ ಗಲ್ಫ್ ಕನ್ನಡಿಗರಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿತೆಂದರೆ ತಪ್ಪಾಗಲಾರದು. ಯು.ಎ.ಇ. ದೇವಾಡಿಗ ಸಂಘದ ಸ್ಥಾಪನೆಗೂ ಬಿ.ಜಿ.ಯವರ ಕೊಡುಗೆ ಪ್ರಧಾನವಾಗಿದೆ.

ಇತ್ತೀಚಿನವರೆಗೂ ಗಲ್ಫ್ ಪ್ರಾಂತದಲ್ಲಿ ಪ್ರಖ್ಯಾತವಾಗಿರುವ ನ್ಯೂ ಮೆಡಿಕಲ್ ಸೆಂಟರ್ ಆರೋಗ್ಯಸಂಸ್ಥೆಯಲ್ಲಿ ಔಷಧೀಯ ವಿಭಾಗದಲ್ಲಿ  ಕಾರ್ಯನಿರ್ವಾಹಕರಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಇದೇ ಅವಧಿಯಲ್ಲಿ ಯು.ಎ.ಯಿ ಭಾರತೀಯ ಔಷಧೀಯ ವೇದಿಕೆಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿರುವ ಮಣಿಪಾಲ ವಿಶ್ವವಿದ್ಯಾಲಯ ೨೦೦೨ರಲ್ಲಿ ಅತ್ಯುತ್ತಮ ಕೆ.ಎಂ.ಸಿ.ಪೂರ್ವ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಿದೆ.

ಬಿಡುವಿನ ವೇಳೆಯಲ್ಲಿ ಕರ್ನಾಟಕ ಮತ್ತು ಕನ್ನಡ ವಿಷಯಾಧಾರಿತ  ಅಂತರ್ಜಾಲ ತಾಣಗಳನ್ನು ನಿರ್ದೇಶಿಸುವ ಮೂಲಕ ತಮ್ಮನ್ನು ತಾವು ಕನ್ನಡಸೇವೆಗೆ ಅರ್ಪಿಸಿಕೊಂಡಿದ್ದಾರೆ. ಆಂಗ್ಲಭಾಷೆಯ ಮೇಲೆ ಅತ್ಯುತ್ತಮ ಹಿಡಿತವಿರುವ ಇವರು ಸ್ವತಂತ್ರ ಬರಹಗಾರರೂ ಆಗಿದ್ದಾರೆ.

ಪ್ರಶಸ್ತಿಯ ಬಗೆಗೆ ಕೇಳಿದಾಗ ಆತ್ಮೀಯವಾಗಿ ಮಾತನಾಡುತ್ತಾ ತಮ್ಮ ಸಂತೋಷದ ಈ ಕ್ಷಣಗಳನ್ನು ಹಂಚಿಕೊಂಡರು. ತಾವು ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳಿಂದ  ದುಬೈ ನಲ್ಲಿ ಕನ್ನಡ ಸೇವೆ ನಡೆಸುತ್ತಾ ಬಂದಿದ್ದು ಈ ವರ್ಷ ಮಯೂರ ಪ್ರಶಸ್ತಿ ಸಿಗುತ್ತಿರುವುದು ಪ್ರಥಮ ಪ್ರಶಸ್ತಿಯಾಗಿದ್ದು ಈ ಅನುಗ್ರಹ ತಮಗೆ ಅತೀವ ಹರ್ಷ ತಂದಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಸಾಧನೆಗಳನ್ನು ಗುರುತಿಸಿದ ಶಾರ್ಜಾ ಕರ್ನಾಟಕ ಸಂಘಕ್ಕೆ ತಮ್ಮ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಾನೊಬ್ಬ ಕನ್ನಡ ಅಭಿಮಾನಿಯಾಗಿದ್ದು ತನ್ನಂತೆಯೇ  ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನವುಳ್ಳ ಕನ್ನಡಿಗರಿಂದ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ತಮ್ಮ ಸುಯೋಗ ಎಂದು ತಿಳಿಸಿದ್ದಾರೆ.

ಮಯೂರ ಪ್ರಶಸ್ತಿ ಅರ್ಹ ವ್ಯಕ್ತಿಗೆ ಸಲ್ಲುತ್ತಿರುವ ಸಂತೋಷದಲ್ಲಿ ಕನ್ನಡಧ್ವನಿ ತಂಡ ಸಮಾನವಾಗಿ ಭಾಗಿಯಾಗಿದೆ. ಇವರ ಇನ್ನಷ್ಟು ಸೇವೆ ಕನ್ನಡಕ್ಕೆ ದೊರೆಯುವಂತಾಗಲಿ, ಶ್ರೀಯುತರು ನೂರ್ಕಾಲ ಬಾಳಲಿ ಎಂದು ಕನ್ನಡಧ್ವನಿ ಹಾರೈಸುತ್ತದೆ.

AttachmentSize
848.jpg35.41 KB

Syndicate

Syndicate content