- ಇರ್ಶಾದ್ ಮೂಡಬಿದ್ರಿ
ಕಾಬಾ, ಸೌದಿ ಅರೇಬಿಯಾದ ಮಕ್ಕ ನಗರದಲಿರುವ, ಅಲ್ಲಾಹನ ಭವನ. ಅದು ಜೆದ್ದಾ ನಗರದಿಂದ ೨೦ ಕಿ.ಮೀ. ದೂರದಲ್ಲಿದೆ. ಇಸ್ಲಾಮಿನ ತತ್ವ -ಸಿದ್ಧಾಂತದ ಪ್ರಕಾರ ಭೂಮಿಯಲ್ಲಿ ಅಲ್ಲಾಹನು ಮೊತ್ತ ಮೊದಲಾಗಿ ಸೃಷ್ಟಿಸಿದ್ದು ಕಾಬಾ ಭವನವನ್ನು. ಪ್ರವಾದಿ ಆದಂ (ಸ) ಅವರ ಆಗಮನದ ಮುನ್ನವೇ ದೇವಚರರು (ಮಲಕ್ ಗಳು) ಈ ಭವನವನ್ನು ನಿರ್ಮಿಸಿದ್ದರು. ಇದರ ನೆಲೆಯು ನೇರವಾಗಿ ಸ್ವರ್ಗದಲ್ಲಿರುವ =ಬೈತುಲ್ ಮತ್ ಮೂರಿ=ಯ ಕೆಳಭಾಗದಲ್ಲಿದೆ. ಹೀಗಾಗಿ ಈ ನೆಲೆಯ ಮೇಲೆ ಹರಡಿಕೊಂಡಿರುವ ಏಳು ಆಗಸಗಳು ಪಾವನವಾಗಿವೆ. ಹೀಗಾಗಿ ಈ ತಾಣವು ಪ್ರಳಯದ ಕಾಲದವರೆಗೆ ಅಪವಿತ್ರವಾಗದು, ಯಾವುದೇ ಅಕ್ರಮ ಚಟುವಟಿಕೆಗಳೂ ನಡೆಯದು. ಇದರ ಹೊಣೆಯನ್ನು ತಾನೇ ಸ್ವಯಂ ವಹಿಸುವೆನೆಂದು ಅಲ್ಲಾಹನೇ ವಾಗ್ದಾನ ನೀಡುತ್ತಾನೆ.
ಕಾಬಾ ಮಂದಿರ:
ಕಾಬಾ ಮಂದಿರವು ಅಲ್ಲಾಹನ ಅನುಗ್ರಹಿತ ಕೇಂದ್ರ. ಅದನ್ನು ಪವಿತ್ರ ಕುರ್ ಆನ್ ದೃಢಪಡಿಸುತ್ತದೆ. ಈ ಒಂದೇ ಕಾರಣಕ್ಕೆ ಅದು ಜಗತ್ತಿನ ಮುಸ್ಲಿಮರಿಗೆ ಕೇಂದ್ರಸ್ಥಾನವಾಗಿದೆ. ಐದು ಹೊತ್ತಿನ ತನ್ನ ನಿತ್ಯದ ಕಡ್ಡಾಯ ಪ್ರಾರ್ಥನೆಗಳಿಗೂ ಆತ ಇದನ್ನೇ ಅಭಿಮುಖವಾಗಿರಿಸಿಕೊಳ್ಳುತ್ತಾನೆ. ಮರಣ ಹೊಂದಿದರೂ ಅಷ್ಟೇ, ಗೋರಿಯಲ್ಲಿ ತನ್ನ ಮುಖವನ್ನು ಅದರತ್ತಲೇ ಇರಿಸಿ ಚಿರನಿದ್ರೆ ಪಡೆಯುತ್ತಾನೆ.
ಕಾಬಾವು ಯಾರ ನಿಯಂತ್ರಕ್ಕೂ ಒಳಪಟ್ಟಿಲ್ಲ. ಸೌದಿ ಅರೇಬಿಯಾದ ದೊರೆಯೂ ಇದಕ್ಕೆ ಒಡೆಯನಲ್ಲ. ಆತನಿಗೆಲ್ಲಾ ಹತೋಟಿ ಇದ್ದರೂ ಆತನೂ ಇತರರಂತೆ ಅಲ್ಲಾಹನ ಗುಲಾಮ. ಸಹಾಯ ಯಾಚಿಸುವ ಫಕೀರ. ಸರ್ವಶಕ್ತನೇ ಕಾಬಾದ ಒಡೆಯ.
ಈ ಕಾಬಾ ಮಂದಿರದ ದರ್ಶನ ಪಡೆಯಲು ಪ್ರತಿವರ್ಷ ಲಕ್ಷಾಂತರ ಜನರು ಮಕ್ಕಾ ನಗರಕ್ಕೆ ಆಗಮಿಸಿತ್ತಾರೆ. ಇದಕ್ಕೆ ಇಸ್ಲಾಂ ತಿಂಗಳಾದ ದುಲ್ಹಜ್ ತಿಂಗಳಲ್ಲಿ ನಿಗದಿತವಾಗಿರುತ್ತದೆ. ಮೂರು ದಿನಗಳ ಕಾಬಾ ಪ್ರದಕ್ಷಿಣೆ, ಮೀನಾ ಮೈದಾನ, ಮುಜ್ದಲಿಫಾ ಮೈದಾನ, ಹಾಗೂ ಅರಫಾತ್ ವಿಧಿಗಳೊಂದಿಗೆ ಹಜ್ ವಿಧಿ ನಿರ್ವಹಿಸಲಾಗುತ್ತದೆ.
ಹಜ್ ಕರ್ಮದಲ್ಲಿ -ಅರಾಫಾತ್- ದಿನ ಅತ್ಯಂತ ಮಹತ್ವವಾದ ಘಟ್ಟ. ಇಲ್ಲಿ ಹಜ್ ಯಾತ್ರೆ ಕೈಗೊಂಡ ಪ್ರತಿಯೋರ್ವ ಯಾತ್ರಿಕನೂ ಜೊತೆಯಾಗುತ್ತಾನೆ. ಇಹ-ಪರದ ಉಳಿವಿಗಾಗಿ ಪ್ರಾರ್ಥಿಸುತ್ತಾ ತಾನು ಸನ್ಮಾರ್ಗದಲ್ಲಿ ಸಾಗುವೆನೆಂಬ ಪ್ರತಿಜ್ಞೆಗೈಯುತ್ತಾನೆ. ಅದಕ್ಕೆ ಅಲ್ಲಾಹನನ್ನೇ ಸಾಕ್ಷಿಯಾಗಿರಿಸಿಕೊಳ್ಳುತ್ತಾನೆ. ಇಲ್ಲಿ ಮಕ್ಕಾ ನಗರದ ಧಾರ್ಮಿಕ ಗುರುಗಳು ಸಾರ್ವಜನಿಕವಾಗಿ ಧರ್ಮಬೋಧನೆ ನೀಡುತ್ತಾರೆ. ಇದನ್ನು ವಿಶ್ವದ ಪ್ರತಿಯೋರ್ವ ಹಜ್ ಯಾತ್ರಿಕನೂ ಗಮನವಿಟ್ಟು ಆಲಿಸುತ್ತಾನೆ. ಕೊನೆಗೆ ಅವರು ಮನುಷ್ಯನ ಕರ್ತವ್ಯ, ಆತನ ಧ್ಯೇಯ ಹಾಗೂ ನಾಳೆ ಮರಣಾನಂತರ ಪರಲೋಕದ ಶಾಶ್ವತ ಜೀವನದ ಕುರಿತು ಮಾರ್ಗದರ್ಶನ ನೀಡುತ್ತಾರೆ. ಇಡೀ ಲೋಕದ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ.
ಹಜ್ ಯಾತ್ರೆಗೆ ಹೊರಟ ಯಾತ್ರಿಕನು ಮಕ್ಕ ನಗರ ಮಾತ್ರವಲ್ಲದೆ ಮದೀನಾ ನಗರಕ್ಕೂ ಭೇಟಿ ನೀಡುವುದು ಸುನ್ನತ್ (ಕಡ್ಡಾಯವಲ್ಲ) ಆಗಿದೆ. ಇದನ್ನು ಹಜ್ ಯಾತ್ರೆಗೆ ಮೊದಲು ಅಥವಾ ಬಳಿಕವೂ ನಿರ್ವಹಿಸಬಹುದಾಗಿದೆ.
ಹಜ್ ಯಾತ್ರೆಯ ಉದ್ದೇಶ ತಾನು ಜೀವನದಲ್ಲಿ ಮಾಡಿದ ಪಾಪಗಳಿಗೆ ಪಶ್ಚಾತ್ತಾಪ ಪಟ್ಟು ಪರಲೋಕದಲ್ಲಿ ಶಾಶ್ವತ ಸ್ಥಾನಕ್ಕೆ ಹೋಗುವ ಮುನ್ನ ತನ್ನೆಲ್ಲಾ ತಪ್ಪುಗಳನ್ನು ಒಪ್ಪಿ ಹೊಸ ಮನುಷ್ಯನಾಗಿ ಬರುವುದೇ ಆಗಿದೆ. ತವಾಫ್ ನಿಂದ ಹೊರಟು ಅರಫಾತ್ ವರೆಗೆ ಆತನ ನಾಲಿಗೆಯಲ್ಲಿ ಬರೆಯ -ಕ್ಷಮಿಸು- ಎಂಬ ಧ್ವನಿಯೇ ಇರುತ್ತದೆ. ಕೆಡುಕಿನಿಂದ ಒಳಿತಿಗೆ ಸಾಗಿಸು ಎಂಬ ಯಾಚನೆ ಇರುತ್ತದೆ. ಸ್ವರ್ಗದ ಬಾಗಿಲನ್ನು ಮುಟ್ಟುವ ತವಕ ಇರುತ್ತದೆ. ಪುಣ್ಯದಲ್ಲಿ ಮಿಂದು ಬಂದ ಸಂತೃಪ್ತಿ ಇರುತ್ತದೆ. ಒಟ್ಟಿನಲ್ಲಿ ಹಜ್ ಎನ್ನುವುದು ಧಾರ್ಮಿಕ ಆಚರಣೆ ಮಾತ್ರವಲ್ಲದೆ ಪರಿಪೂರ್ಣ ಜೀವನವನ್ನು ತಿದ್ದುವ ಅವಲೋಕನವಾಗಿದೆ. ಪ್ರವಾದಿ (ಸ) ಹೇಳುವಂತೆ "ಆತ ತಾಯಿಯ ಹೊಟ್ಟೆಯಿಂದ ಆಗ ತಾನೇ ಜನಿಸಿದ ಮಗುವಿನಂತೆ ಪರಿಶುದ್ಧನಾಗಿರುತ್ತಾನೆ"
ಹಜ್ ಯಾತ್ರೆ ಮುಗಿಸಿ ಊರಿಗೆ ಹೊರಟ ಪ್ರತಿಯೋರ್ವ ಹಾಜಿಯೂ ಆಂತರಿಕವಾಗಿ ಬದಲಾಗಿರುತ್ತಾನೆ. ಎಲ್ಲರ ಹಿತವನ್ನೇ ಬಯಸುವ ಆತ ಹೊಸ ಬದುಕಿನತ್ತ ಸಾಗುತ್ತಾನೆ. ತಾನು ತೊಟ್ಟ ಎಹ್ರಾಮ್ ಬಟ್ಟೆಯನ್ನು ಜೋಪಾನವಾಗಿ ಕಾಯ್ದಿರಿಸುತ್ತಾನೆ. ತನ್ನ ಉಸಿರು ನಿಂತುಹೋದಾಗ ಅದನ್ನೇ ಶವವಸ್ತ್ರವನ್ನಾಗಿ ಉಪಯೋಗಿಸುವಂತೆ ನಿರ್ದೇಶಿಸಿರುತ್ತಾನೆ. ಕಾಬಾ ನೋಡುವ ಇಚ್ಛೆಯಂತೆ, ಇದೂ ತನ್ನ ಗೋರಿಯಲ್ಲಿ ಜೊತೆಯಾಗಿರಬೇಕೆಂದು ಆತನ ಅಂತಿಮ ಇಚ್ಛೆಯಾಗಿರುತ್ತದೆ.








