ರಾಷ್ಟ್ರ ಕವಿಗೆ ದುಬೈ ಕರ್ನಾಟಕ ಸಂಘದಲ್ಲಿ ಸನ್ಮಾನ; ಕನ್ನಡ ಸಾಹಿತ್ಯ ವೇದಿಕೆ ಅನಾವರಣ
vedike.jpg

- ರಂಜನಿ ಸುರೇಶ್

ಡಿಸೆಂಬರ್ ೩ ಕರ್ನಾಟಕ ಸಂಘ ದುಬೈಗೆ ಅವಿಸ್ಮರಣೀಯ ದಿನವಾಗಿತ್ತು. ಹಿರಿಯರೂ ಗೌರವಾನ್ವಿತರೂ ಖ್ಯಾತ ಕವಿಗಳೂ ರಾಷ್ಟ್ರ ಕವಿ ಬಿರುದಾಂಕಿತರೂ ಆಗಿರುವ ಡಾ ಜಿ ಎಸ್ ಶಿವರುದ್ರಪ್ಪ ಮತ್ತು ಅವರ ಸಹಧರ್ಮಿಣಿ ರುದ್ರಾಣಿ ದಂಪತಿಗಳನ್ನು ಅಭಿನಂದಿಸುವ ಅವಕಾಶ ಲಭಿಸಿದ್ದು ಸಂಘಕ್ಕೆ ಒಂದು ಅಪೂರ್ವವಾದ ಗೌರವವಾಗಿತ್ತು.

ಅಧ್ಯಕ್ಷ ಸಿ ಆರ್ ಶೆಟ್ಟಿಯವರ ನೇತೃತ್ವದಲ್ಲಿ ಅತಿ ಕನಿಷ್ಠ ಸಮಯದಲ್ಲಿ ಅತ್ಯಂತ ಸುಂದರವಾದ ಕಾರ್ಯಕ್ರಮವನ್ನು ಹಮ್ಮಿಕೊಂಡ ಹೆಮ್ಮೆ ಕರ್ನಾಟಕ ಸಂಘ ದುಬೈಯದ್ದು. ವಿನ್ನೀಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಶಿವರುದ್ರಪ್ಪನವರ ಕವನ ಶುಭೋದಯವನ್ನು ಸಮೂಹಗಾನದಲ್ಲಿ ಹಾಡಿ ಚಾಲನೆ ಒದಗಿಸಿದವರು ಶ್ರೀಮತಿಯರಾದ ರಜನಿ ಉಡುಪ, ಮಂಗಳಾ ಭಟ್, ಅನುಪಮಾ ಭಾಸ್ಕರ್ ಮತ್ತು ಶ್ರೀಯುತರಾದ ರಾಮಚಂದ್ರ ಉಡುಪ, ರಾಜೇಶ್ವರ ಹೊಳ್ಳ ಮತ್ತು ರವಿರಾಜ್ ತಂತ್ರಿ.

ಅಧ್ಯಕ್ಷ ಸಿ ಆರ್ ಶೆಟ್ಟಿ ಸ್ವಾಗತಿಸಿದರು. ರಂಜನಿ ಸುರೇಶ್ ಸಂಘದ ಕಾರ್ಯಕ್ರಮಗಳ ಬಗೆಗೆ ಪಕ್ಷಿನೋಟವಿತ್ತು ಮುಖ್ಯ ಅತಿಥಿ ಶಿವರುದ್ರಪ್ಪ ಹಾಗೂ ಮತ್ತೋರ್ವ ಗೌರವಾನ್ವಿತ ಅತಿಥಿ ಖ್ಯಾತ ರಂಗಭೂಮಿ ಕಲಾವಿದ ಶ್ರಿ ಸಿ ಆರ್ ಸಿಂಹ ಅವರನ್ನು ಪರಿಚಯಿಸಿದರು. ಅಧ್ಯಕ್ಷ ಸಿ ಆರ್ ಶೆಟ್ಟಿಯವರು ಡಾ ಶಿವರುದ್ರಪ್ಪನವರಿಗೆ ಹೂನೀಡಿ ಶಾಲು ಹೊದೆಸಿ ಗೌರವ ಕಾಣಿಕೆಯನ್ನಿತ್ತು ಸನ್ಮಾನಿಸಿದರು. ಸಂಘದ ಕಾರ್ಯದರ್ಶಿ ಶ್ರೀ ಕೆ ಆರ್ ತಂತ್ರಿಯವರು ಸನ್ಮಾನ ಪತ್ರ ವಾಚಿಸಿದರು. ಕೋಶಾಧಿಕಾರಿ ಶ್ರೀ ಮನೋಹರ್ ಹೆಗ್ಡೆ ಫಲ ತಾಂಬೂಲ ನೀಡಿ ಗೌರವಿಸಿದರು. ರುದ್ರಾಣಿ ಶಿವರುದ್ರಪ್ಪನವರಿಗೆ ರಂಜನಿ ಸುರೇಶ್ ಗೌರವದ ಕಾಣಿಕೆ ಕೊಟ್ಟು ಗೌರವಿಸಿದರು.

ಇದೇ ಸಂದರ್ಭದಲ್ಲಿ ಆಗಮಿಸಿದ್ದ ರಂಗಭೂಮಿ ಕಲಾವಿದ ಸಿ ಆರ್ ಸಿಂಹ ದಂಪತಿಗಳನ್ನೂ ಆತ್ಮೀಯವಾಗಿ ಸನ್ಮಾನಿಸಿಲಾಯಿತು.

ಡಾ ಶಿವರುದ್ರಪ್ಪನವರು ಈ ಸಂದರ್ಭದಲ್ಲಿ ದುಬೈ ಕರ್ನಾಟಕ ಸಂಘದ ಆಶ್ರಯದಲ್ಲಿ ಹೊಸತಾಗಿ ಕನ್ನಡ ಸಾಹಿತ್ಯ ವೇದಿಕೆಯನ್ನು ಅನಾವರಣಗೊಳಿಸಿದರು. ಈ ವೇದಿಕೆಯ ಮೂಲಕ ಈ ಭಾಗದ ಕನ್ನಡಿಗರ ಬಹು ಕಾಲದ ಆಶೆ ಹಾರೈಕೆಗಳನ್ನು ಕರ್ನಾಟಕ ಸಂಘ ದುಬೈ ಪೂರೈಸುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಡಾ ಶಿವರುದ್ರಪ್ಪನವರ ದಿವ್ಯ ಹಸ್ತದಿಂದ ಸಾಹಿತ್ಯವೇದಿಕೆ ಉದ್ಘಾಟನೆಗೊಂಡದ್ದು ಸಾಹಿತ್ಯಾಸಕ್ತರಿಗೆ ಸಂತಸ ನೀಡಿದೆ. ಈ ಮಹತ್ವದ ಹೆಜ್ಜೆಯನ್ನು ಅಭಿನಂದಿಸಿದ ಡಾ ಶಿವರುದ್ರಪ್ಪ ಈ ವೇದಿಕೆಯಲ್ಲಿ ಕೊಲ್ಲಿ ರಾಷ್ಟ್ರಗಳ ಹಾಗೂ ಹೊರನಾಡಿನ ಇತರ ರಾಷ್ಟ್ರಗಳ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಗಲಿ, ಕರ್ನಾಟಕದಿಂದ ಬರುವ ಸಾಹಿತಿಗಳಿಗೆ, ಕವಿಗಳಿಗೆ ತಮ್ಮ ಸೃಜನಶೀಲತೆಯನ್ನು ಪ್ರಸ್ತುತಗೊಳಿಸಲು ಸೂಕ್ತ ವೇದಿಕೆಯಾಗಲಿ ಮತ್ತು ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಶೇಷ ಅತಿಥಿಗಳಾದ ಶ್ರೀ ಮಂಜುನಾಥ ಸಾಗರ್ (ಹೃದಯವಾಹಿನಿ ಸಂಪಾದಕ), ಡಾ ಪಿ ಕೆ ಪುತ್ತೂರಾಯ(ಹಾಸ್ಯ ಭಾಷಣಗಾರರು), ಚಂದ್ರಿಕಾ ಗುರುರಾಜ್(ಹಿನ್ನೆಲೆ ಗಾಯಕಿ), ಜಿ ಕೆ ಕಾಡೇಶ್ ಕುಮಾರ್(ಮೂಗಿನಲ್ಲಿ ಶೆಹೆನಾಯಿ ಸ್ವರ ನುಡಿಸುವ ವಿಶೇಷ ಪ್ರತಿಭೆ), ಸಹನಾ ಪ್ರದೀಪ್ ಭಟ್(ನಾಟ್ಯ), ಪ್ರೊ ಹೆಗಡೆ(ಜಾದೂಗಾರ) ಇವರನ್ನು ಶಶಿಧರ್ ನಾಗರಾಜಪ್ಪ ಸಭೆಗೆ ಪರಿಚಯಿಸಿದರು. ಈ ಎಲ್ಲ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನ ನೀಡಿ ಸಭೆಯನ್ನು ರಂಜಿಸಿದರು.

ಸಂಘದ ಕಾರ್ಯಕಾರೀ ಸಮಿತಿ ಸದಸ್ಯರಾದ ಜಯಂತ್ ಶೆಟ್ಟಿ ಅನಿತಾ ಪ್ರಭು, ಅರುಣ ಎಸ್ ಎಂ ಚಂದ್ರಶೇಖರ ಸಂಕೋಲೆ, ದಯಾ ಕಿರೋಡಿಯನ್, ಅಬ್ದುಲ್ ರಜಾಕ್, ಲಾರೆನ್ಸ್ ಡಿ ಸೋಜಾ ಇವರು ಅತಿಥಿಗಳಿಗೆ ಹೂ ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯದರ್ಶಿ ಶ್ರೀ ಕೃಷ್ಣರಾಜ್ ತಂತ್ರಿ ಕಾರ್ಯಕ್ರಮ ರೂಪಿಸಿ ಕೊನೆಯಲ್ಲಿ ಧನ್ಯವಾದವಿತ್ತರು.

( ಇಲ್ಲಿರುವ ಫೋಟೋ ಕ್ಲಿಕ್ಕಿಸಿದರೆ ಪೂರ್ಣ ಪ್ರಮಾಣದ ಫೋಟೋ ಲಭ್ಯವಾಗುತ್ತದೆ)

Syndicate

Syndicate content