ಪ್ರಕಾಶ್ ಪಯ್ಯಾರ್ ಅವರಿಗೆ- ವಿಶ್ವ ಕನ್ನಡ ಸಮ್ಮೇಳನದಲ್ಲಿ ಸನ್ಮಾನ
kwt prakash.jpg

 

ಕುವೈತ್ ಕನ್ನಡ ಕೂಟವು ಹೃದಯವಾಹಿನಿ ಸಹಯೋಗದೊಂದಿಗೆ ಕುವೈತ್ ನಲ್ಲಿಆಯೋಜಿಸಿದ್ದ ವಿಶ್ವ ಕನ್ನಡ ಸಾಂಸ್ಕ್ರತಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ದುಬೈಯ ಪ್ರಕಾಶ್ ರಾವ್ ಪಯ್ಯಾರ್ ಅವರನ್ನು ಹೊರನಾಡಿನಲ್ಲಿ ಕನ್ನಡ ಬಾಷೆ ಮತ್ತು ಸಂಸ್ಕ್ರತಿಗೆ ಸಲ್ಲಿಸುತ್ತಿರುವ ಸೇವೆಗಾಗಿ ಸಮ್ಮೇಳನಾಧ್ಯಕ್ಷ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಕುವೈತನ ಭಾರತೀಯ ರಾಯಭಾರಿ ಎಮ್.ಗಣಪತಿ, ಕುವೈತ್ ದೇಶದ ಕೆ.ಎಸ್.ಎಸ್. ಅಧ್ಯಕ್ಷ ಅಹ್ಮದ್ ಅಲ್ ಸಲೆ, ದೂರದರ್ಶನ ಚಂದನದ ನಿರ್ದೇಶಕ ಮಹೇಶ್ ಜೋಷಿ, ಡಾ. ಅಶೋಕ್ ಪೈ, ಉದ್ಯಮಿ ಬಿ.ಆರ್.ಶೆಟ್ಟಿ, ಮಾಜಿ ಶಾಸಕ ಸಿ.ಟಿ.ರವಿ, ಕುವೈತ್ ಕನ್ನಡ ಕೂಟದ ಅಧ್ಯಕ್ಷ ಸುಧಾಕರ ಶೆಟ್ಟಿ, ಮಂಜುನಾಥ್ ಸಾಗರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಕಳೆದ ಎರಡು ದಶಕಗಳಿಂದ ಹೊರನಾಡಿನಲ್ಲಿ ನೆಲೆಸಿರುವ ಪ್ರಕಾಶ್ ರಾವ್ ಪಯ್ಯಾರ್ ಅವರು ೧೯೮೫ ರಲ್ಲಿ "ಧ್ವನಿ" ಎಂಬ ಸಂಘಟನೆಯನ್ನು ಮುಂಬೈ ಯಲ್ಲಿ ಸ್ಥಾಪಿಸಿ ಆ ಮೂಲಕ ಸತತ ಕನ್ನಡ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವರು.ತದ ನಂತರ ಉದ್ಯೋಗ ನಿಮಿತ್ತ ಯು.ಎ.ಇ.ಗೆ ವಲಸೆ ಬಂದ ಅವರು "ಧ್ವನಿ" ಘಟಕವನ್ನು ಇಲ್ಲಿಯೂ ಪ್ರಾರಂಭಿಸಿ ಸಾಹಿತ್ಯಿಕ ಚಟುವಟಿಕೆಗಳ್ನು ಹಮ್ಮಿಕೊಂಡರು. ಇವರ ನೇತ್ರತ್ವದಲ್ಲಿ ಇತ್ತೀಚಿನ ವರ್ಷಗಳಲ್ಲಿ ಯು.ಎ.ಇ.ಯಿಂದ ನಡೆಸಿದ ಅನಿವಾಸಿ ಕವನ ಸ್ಪರ್ಧೆ, ಕನ್ನಡ ನಾಡು ನುಡಿ ರಕ್ಷಣೆ ಯಾಕೆ ಮತ್ತು ಹೇಗೆ? ಎಂಬ ಲೇಖನ ಸ್ಪರ್ಧೆಗಳು ಮತ್ತು ಕೃತಿ ಪ್ರಕಟಣೆ, ದುಬೈ ದೂತಾವಾಸ ಸಭಾಗಂಣದಲ್ಲಿ ಇವರ ನಿರ್ದೆಶನದಲ್ಲಿ ರಂಗವೇರಿಸಿದ ಗಿರೀಶ್ ಕಾರ್ನಡರ ನಾಟಕ "ನಾಗಮಂಡಲ"  ಇವುಗಳಲ್ಲಿ ಮಹತ್ವವಾಗಿರುವವು. ಪಯ್ಯಾರ್ ಅವರ ಸ್ವರಚಿತ ಎರಡು ಕವನ ಸಂಕಲನಗಳು ಮತ್ತು ಎರಡು ನಾಟಕ ಕೃತಿಗಳು ಮತ್ತು ಅವರು ಸಂಪಾದಿಸಿದ ಮೂರು ಇತರ ಕೃತಿಗಳು ಪ್ರಕಟಗೊಂಡಿವೆ.

ರಂಗ ನಿರ್ದೇಶಕರಾಗಿರುವ ಪಯ್ಯಾರ್ ಅವರು ಶ್ರೀರಂಗ, ಕೈಲಾಸಂ, ಗಿರೀಶ್ ಕಾರ್ನಡ, ಚಂದ್ರಕಾಂತ್ ಕೂಸನೂರ್ ಅವರ ಕೃತಿಗಳು ಸೇರಿದಂತೆ ಸುಮಾರು ೨೫ಕ್ಕೂ ಹೆಚ್ಚು ನಾಟಕಗಳನ್ನು ಮುಂಬೈ, ಪುಣೆ, ಹಾಗು ಯು.ಎ.ಇ. ಯಲ್ಲಿ ನಿರ್ದೇಶಿಸಿ ರಂಗ ವೇರಿಸಿದ್ದಾರೆ.

ಯು.ಎ.ಇ.ಯಲ್ಲಿ ಪ್ರಕಾಶ್ ಪಯ್ಯಾರ್ ಅವರ ಮುಂದಾಳತ್ವದಲ್ಲಿ ಧ್ವನಿ ಪ್ರತಿಷ್ಠಾನ ಕರ್ನಾಟಕದ ಉತ್ತಮ ರಂಗಕರ್ಮಿ ಗಳನ್ನು ಗುರುತಿಸಿ ನೀಡುತ್ತಿರುವ "ಶ್ರೀರಂಗ ರಂಗ" ಪ್ರಶಸ್ತಿಯು ಗಣನೀಯ.

ಕನ್ನಡಧ್ವನಿ ಬಳಗ ಈ ಸಂದರ್ಭದಲ್ಲಿ ಪ್ರಕಾಶ್ ರಾವ್ ಪಯ್ಯಾರರನ್ನು ಆತ್ಮೀಯವಾಗಿ ಅಭಿನಂದಿಸುತ್ತದೆ.

( ಇಲ್ಲಿರುವ ಫೋಟೋ ಕ್ಲಿಕ್ಕಿಸಿದರೆ ಪೂರ್ಣ ಪ್ರಮಾಣದ ಫೋಟೋ ಲಭ್ಯವಾಗುತ್ತದೆ)

 

Syndicate

Syndicate content