ಇರುಳು ಕಂಡ ಬಾವಿಗೆ - ಎರಡನೆಯ ಇನ್ನಿಂಗ್ಸ್ : ಡಿಪಾರ್ಚರ್
express.jpg

- ಅರ್ಶದ್ ಹುಸೇನ್ ಎಂ. ಹೆಚ್

ಹಿಂದಿನ ಪ್ರಯಾಣದ ಅನುಭವ ಮತ್ತೊಮ್ಮೆ ಆಗದಿರಲಿ ಎಂದು ಹಿಂತಿರುಗುವ ಪ್ರಯಾಣಕ್ಕೆ ಎರೆಡು ದಿನ ಮೊದಲೇ ಫೋನು ಮಾಡಿ ಖಾತರಿ ಪಡಿಸಿಟ್ಟುಕೊಂಡಿದ್ದೆ. ಫೋನು ಸ್ವೀಕರಿಸಿದ ಅಧಿಕಾರಿ ಸಧ್ಯಕ್ಕೆ ಯಾವ ಬದಲಾವಣೆಯೂ ಇಲ್ಲವೆಂದೂ ಒಂದು ವೇಳೆ ಏನಾದರೂ ಇದ್ದಲ್ಲಿ ಕರೆ ಮಾಡಿ ತಿಳಿಸಲಾಗುವುದು ಎಂದೂ ವಿವರಿಸಿದ್ದರು. ಇವರ ಮಾತನ್ನು ನಂಬಿದ ನಾವು ಮತ್ತೊಮ್ಮೆ ಕೋಣರಾದೆವು.ಯಾವುದೇ ಕರೆ ಬರದಿದ್ದರಿಂದ ವಿಮಾನ ನಿಗದಿತ ಸಮಯಕ್ಕೇ ಹೊರಡುತ್ತಿರಬಹುದೆಂದು ನಂಬಿ ಹನ್ನೆರೆಡು ಘಂಟೆಗೆ ಹೊರಡಲಿದ್ದ ಯಾನಕ್ಕೆ ಹತ್ತು ಘಂಟೆಗೂ ಮೊದಲೇ ಬಂದು ತಲುಪಿದಾಗ ನಿಲ್ದಾಣ ಜನರಿಂದ ಜಿಗಿಗುಟ್ಟುತ್ತಿತ್ತು. ಯಥಾಪ್ರಕಾರ ಇಕ್ಕಟ್ಟು ಸಂಧಿಯಲ್ಲಿದ್ದ ಏರಿಂಡಿಯ ಎಕ್ಸ್ ಪ್ರೆಸ್ ಕಿಟಕಿ ಬಳಿ ವಿಚಾರಿಸಿದರೆ ನಿನ್ನೆಯ ವಿಮಾನ ಇನ್ನೂ ಹೋಗಿಯೇ ಇಲ್ಲವೆಂದೂ ಇಂದಿನ ಸಮಯಕ್ಕೆ ನಿನ್ನೆಯ ವಿಮಾನವನ್ನೂ, ಇಂದಿನದ್ದನ್ನು ಸಂಜೆ ನಾಲ್ಕು ಘಂಟೆಗೆ ಮುಂದೂಡಲಾಗಿದೆಯೆಂದೂ ಉತ್ತರ ಸಿಕ್ಕಿತು. ನೆನ್ನೆಯ ಪ್ರಯಾಣಿಕರೂ, ಇಂದಿನ ಪ್ರಯಾಣಿಕರೂ, ಅವರನ್ನು ಬೀಳ್ಕೊಡಲು ಬಂದ ಬಂಧುಮಿತ್ರರು, ಡೊಮೆಸ್ಟಿಕ್ ಪ್ರಯಾಣಿಕರು, ಸಾಕಲ್ಲ ಜಿಗಿಗುಟ್ಟುವುದಕ್ಕೆ. ಯಥಾಪ್ರಕಾರ ಇಂದೂ ಚಹಾದಂಗಡಿಗೆ ಭರ್ಜರಿ ವ್ಯಾಪಾರ. ಹಿಂದಿನ ದಿನದ ಪ್ರಯಾಣಿಕರಲ್ಲಿ ಕೆಲವರನ್ನು ವಿಚಾರಿಸಿದಾಗ ಅವರಿಗೂ ಯಾವುದೇ ಮಾಹಿತಿ ಸಂಸ್ಥೆ ನೀಡಿಲ್ಲವಾದ್ದರಿಂದ ನಿಲ್ದಾಣ ತಲುಪಿದ ಮೇಲೆಯೇ ವಿಮಾನ ರದ್ದಾಗಿದ್ದು ತಿಳಿದು ಬಂದು ಪ್ರಯಾಣಿಕರೆಲ್ಲಾ ಸೇರಿ ಗಲಾಟೆ ಮಾಡಿದಾಗ ಪ್ರತಿ ಪ್ರಯಾಣಿಕರಿಗೂ ಒಂದು ಸಾವಿರ ರೂಪಾಯಿಗಳನ್ನು ನೀಡಿ ಹಿಂದೆ ತಿರುಗುವಂತೆ ಕೇಳಿಕೊಳ್ಳಲಾಯಿತೆಂದೂ ಹಾಗಾಗಿ ಮನೆಗೆ ಹಿಂತಿರುಗಿ ಇಂದು ಬಂದರೆಂದೂ ತಿಳಿಸಿದರು. ಕೆಲವರು ದೂರದ ಊರುಗಳಿಂದ ಬಂದಿದ್ದವರು ಹಿಂತಿರುಗಿ ಹೋಗಲಾಗದೇ ಹೋಟೆಲಿನಲ್ಲಿ ಉಳಿದುಕೊಂಡು ತಾಪತ್ರಯ ಅನುಭವಿಸಬೇಕಾಗಿ ಬಂತೆಂದೂ, ತಾವು ಬೆಳಿಗ್ಗೆಯಿಂದ ಇಲ್ಲಿ ಲಾಟರಿ ಹೊಡೆಯುತ್ತಿರುವುದಾಗಿಯೂ ತಿಳಿಸಿದರು. ಇವರಿಗೇ ಹೀಗಾಗಿರಬೇಕಾದರೆ ಇನ್ನು ಇವತ್ತಿನವರಾದ ನಮ್ಮ ಗತಿ ಇನ್ನಷ್ಟು ಹದಗೆಡುವುದು ಖಂಡಿತ, ಅದಕ್ಕೆ ಜೊತೆಯಲ್ಲಿ ಬಂದವರನ್ನು ಹಿಂತಿರುಗಲು ಹೇಳಿದೆ.

ಬೆಳಗ್ಗಿನಿಂದ ಕಾದು ಬೇಸತ್ತ ನಿನ್ನೆಯ ದಿನದ ಪ್ರಯಾಣಿಕರನ್ನು ಹನ್ನೆರೆಡು ಘಂಟೆಗೆ ಚೆಕ್ ಇನ್ ಮಾಡಿಕೊಳ್ಳಲು ಕರೆ ನೀಡಿದರು. ಹನ್ನೆರೆಡು ಘಂಟೆಗೆ ಹಾರಬೇಕಾಗಿದ್ದ ವಿಮಾನಕ್ಕೆ ಹನ್ನೆರೆಡು ಘಂಟೆಗೇ ಚೆಕ್ ಇನ್ ಮಾಡಿಸಿಕೊಳ್ಳಲು ಹೇಗೆ ಸಾಧ್ಯ? ಅದರ ನಂತರ ಹೋಗಬೇಕಾಗಿದ್ದ ಇಂದಿನ ದಿನದ ಪ್ರಯಾಣಿಕರಿಗೆ ಇನ್ನೆಷ್ಟು ತಡವಾಗಬಹುದು? ಚೆಕ್ ಇನ್ ಮಾಡಿಸಿಕೊಳ್ಳಲು ನಿಂತಿದ್ದ ನಿನ್ನೆಯವರ ಸಾಲು ಮುಂದುವರೆಯುತ್ತಲೇ ಇರಲಿಲ್ಲ. ಬಸವನ ಹುಳುವಿನಂತೆ ತೆವಳುತ್ತಿತ್ತು. ಪ್ರಯಾಣಿಕರೆಲ್ಲಾ ನಿಂತೂ ನಿಂತೂ ಕಾಲು ನೋವಾಗಿ ಅವರು ತಂದಿದ್ದ ಲಗೇಜುಗಳ ಮೇಲೆಯೇ ಕುಳಿತಿದ್ದುದು ಕಂಡು ಬಂತು. ತೆವಳುತ್ತಾ ತೆವಳುತ್ತಾ ಸಾಲಿನ ಕಡೆಯವ ಚೆಕ್ ಇನ್ ಮಾಡಿಸಿಕೊಳ್ಳುವಷ್ಟರಲ್ಲಿ ಘಂಟೆ ಎರೆಡಾಯ್ತು.

ನಂತರ ಇಂದಿನ ದಿನದ ಪ್ರಯಾಣಿಕರನ್ನು ಚೆಕ್ ಇನ್ ಮಾಡಿಸಿಕೊಳ್ಳಲು ಕರೆ ನೀಡಲಾಯ್ತು. ಹಿಂದಿನ ಸಾಲಿಗೆ ಆದ ಗತಿಯೂ ನಮಗೂ ಆಯ್ತು. ಸಾಲಿನ ಮಧ್ಯಭಾಗದಲ್ಲಿದ್ದ ನಮಗೆ ಮುಂಭಾಗಕ್ಕೆ ಬರಲು ಒಂದೂವರೆ ಘಂಟೆ ಬೇಕಾಯ್ತು. ಅಲ್ಲಿಯವರೆಗೂ ನಿಲ್ದಾಣದ ಹೊರಗೇ ಇದ್ದ ನಾವು ಒಳಗಡಿಯಿರಿಸಿದ ತಕ್ಷಣ ತಡವಾಗಲ ಕಾರಣವೇನೆಂದು ಗೊತ್ತಾಯಿತು. ನಿಲ್ದಾಣದಲ್ಲಿರುವ ಏಕಮಾತ್ರ ಕ್ಷ-ಕಿರಣ ತಪಾಸಣಾ ಘಟಕದ ಎದುರಿಗೇ ಏರ್ ಇಂಡಿಯಾ ಎಕ್ಸ್-ಪ್ರೆಸ್ಸಿನ ಕೌಂಟರ್ ಇರುವುದು. ನಡುವಿರುವ ಸ್ಥಳ ಸುಮಾರು ಐದು ಅಡಿ ಮಾತ್ರ. ಕ್ಷ-ಕಿರಣದಿಂದ ತಪಾಸಣೆಯಾದ ಪೆಟ್ಟಿಗೆಗಳನ್ನು ಅದರ ಇಬ್ಬರು ಸಿಬ್ಬಂದಿ ಎತ್ತಿ ಪ್ಲಾಸ್ಟಿಕ್ ಪಟ್ಟಿಯಿಂದ ಭದ್ರವಾಗಿ ಬಿಗಿದು ತಪಾಸಣೆಯಾದ ಸ್ಟಿಕ್ಕರು ಅಂಟಿಸಿ ಮುಂದೆ ಒಗೆಯುತ್ತಿದ್ದರು. ಅಲ್ಲಿಗೆ ಅವರ ಕೆಲಸ ಮುಗಿಯಿತು. ಆದರೆ ಬಿದ್ದ ಲಗೇಜು ಮುಂದೆ ಹೋಗಬೇಕಲ್ಲಾ, ಅದರ ಮಾಲಿಕ ಈ ಮೊದಲೇ ಬಂದವರ ಹಿಂದೆ ಸರತಿಯಲ್ಲಿ ನಿಲ್ಲಬೇಕಾಗಿತ್ತು. ಕ್ಷ-ಕಿರಣ ತಪಾಸಣೆ ಮಾಡಲು ಹೆಚ್ಚಿನ ಹೊತ್ತು ಬೇಕಾಗಿಲ್ಲ, ಆದರೆ ಚೆಕ್ ಇನ್ ಮಾಡಿ ಬೋರ್ಡಿಂಗ್ ಪಾಸ್ ನೀಡುವಲ್ಲಿ ಆಗುವ ಹೊತ್ತಿನಲ್ಲಿ ನಾಲ್ಕು ಪೆಟ್ಟಿಗೆಗಳು ಬಂದು ಬೀಳುತ್ತಿದ್ದವು. ಒಂದರ ಮೇಲೊಂದು ಸಾಮಾನು ಬಿದ್ದು ಒಂದು ಚಿಕ್ಕ ಗುಡ್ಡ ನಿರ್ಮಾಣವಾಗಿತ್ತು.

ಸರಿಯಾದ ಮಾಹಿತಿಯಿಲ್ಲದೇ ನೇರ ಮುಂದೆ ಹೋಗುವವರನ್ನು ಸರತಿಯಲ್ಲಿ ನಿಂತವರು ಗಲಾಟೆ ಮಾಡಿ ಹಿಂದಕ್ಕೆ ಕಳಿಸುತ್ತಿದ್ದರು. ಹಿಂದೆ ಹೋದವರು ಮುಂದೆ ಬರುವಷ್ಟರಲ್ಲಿ ಅವರ ಸಾಮಾನಿನ ಮುಂದೆ ನಂತರ ಬಂದವರ ಸಾಮಾನು ಪೇರಿ ಇದು ಅಡಿಗೆ ಹೋಗಿರುತ್ತಿತ್ತು. ಅದನ್ನು ಹುಡುಕಿ ತೆಗೆಯುವವರೆಗೆ ಚೆಕ್ ಇನ್ ಮಾಡಿಸಿಕೊಳ್ಳುವ ಮಂದಿ ವೃಥಾ ಕಾಲಹರಣ ಮಾಡಬೇಕಾಗುತ್ತಿತ್ತು. ಲಗೇಜು ಎಳೆಯುವ ಭರಾಟೆಯಲ್ಲಿ ಬಿದ್ದ ಪೆಟ್ಟಿಗೆಗಳ ಮಾಲಿಕರು ಎಳೆದವರನ್ನು ಬೈಯುತ್ತಿದ್ದರು. ಸಹಾಯಕ್ಕೆ ಏರಿಂಡಿಯದ ಯಾರೂ ಇರಲಿಲ್ಲ. ನಮ್ಮ ಗೋಳು ನೋಡಲಾಗದೆ ಅನತಿ ದೂರದಲ್ಲಿದ್ದ ಜೆಟ್ ಏರ್ವೇಸ್, ಡೆಕ್ಕನ್ ಏರ್ವೇಸ್ ಸಂಸ್ಥೆಯ ಸಿಬ್ಬಂದಿ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದರು. ಆದರೂ ಅವರೂ ಹೆಚ್ಚಾಗಿ ತಮ್ಮ ಸ್ಥಳಗಳನ್ನು ಬಿಟ್ಟಿರಲು ಸಾಧ್ಯವಾಗದುದರಿಂದ ನಮ್ಮ ತೊಂದರೆಗಳು ಹಾಗೆಯೇ ಉಳಿದವು. ಇಂದಿನ ದಿನದ ದುಬೈ ಪ್ರಯಾಣಿಕರ ಕ್ಷ-ಕಿರಣ ತಪಾಸಣೆ ಮುಗಿಯುತ್ತಿದ್ದಂತೆ ಡೊಮೆಸ್ಟಿಕ್ ಪ್ರಯಾಣಿಕರ ಸಾಮಾನುಗಳ ಕ್ಷ-ಕಿರಣ ತಪಾಸಣೆ ಶುರುವಾಯಿತು. ಮೊದಲೇ ಗುಡ್ಡವಾಗಿದ್ದ ಬ್ಯಾಗುಗಳ ಮೇಲೆ ಇನ್ನಷ್ಟು ಬ್ಯಾಗುಗಳು ಬಂದು ಬಿದ್ದವು. ಭಾರ ತಡೆಯಲಾಗದ ಗುಡ್ಡದ ಒಂದು ಪಾರ್ಶ್ವ ಒಂದು ಕಡೆ ಕುಸಿಯಿತು. ನಮ್ಮ ಸಾಲಿನಲ್ಲಿದ್ದ ಕೆಲವು ಮಹಿಳೆಯರು ತಮ್ಮ ಪೆಟ್ಟಿಗೆಗಳ ಒಳಗಿರುವ ವಸ್ತುಗಳು ಒಡೆಯುತ್ತವೆ ಎಂದು ಆತಂಕದಿಂದ ಕಿರುಚಿಕೊಂಡರು. ಕೆಲವರು ಸಾಲು ಬಿಟ್ಟು ಸಾಮಾನುಗಳನ್ನು ಹಿಗ್ಗಾ ಮುಗ್ಗ ಎಳೆದಾಡಲು ತೊಡಗಿದರು. ಈ ಗೊಂದಲದಲ್ಲಿ ಬಲಿಷ್ಠರಾದವರು ಸಾಲು ತಪ್ಪಿಸಿ ಮುಂದೆ ನುಗ್ಗಿ ಗೊಂದಲ ಸೃಷ್ಟಿಯಾಯಿತು. ಕೆಲವರು ತಮ್ಮತಮ್ಮಲ್ಲೇ ಕೋಳಿಜಗಳಕ್ಕೆ ತೊಡಗಿದರು. ಆದರೂ ಏರಿಂಡಿಯದ ಒಬ್ಬನೇ ಒಬ್ಬ ಸಿಬ್ಬಂದಿ ಏನು ವಿಷಯವೆಂದು ವಿಚಾರಿಸಲೂ ಬರಲಿಲ್ಲ.

ಪುಣ್ಯಕ್ಕೆ ಜೆಟ್ ಏರ್ವೇಸ್‌ನ ಅಧಿಕಾರಿಯೊಬ್ಬರು ಹೊರಗಿನಿಂದ ಸೆಕ್ಯೂರಿಟಿ ಗಾರ್ಡೊಬ್ಬನನ್ನು ಕರೆದುಕೊಂಡು ಬಂದು ಪರಿಸ್ಥಿತಿ ನಿಯಂತ್ರಿಸಿದರು. ಆ ಗಾರ್ಡೋ, ಯೂನಿಫಾರಮ್ಮು, ಬಂದೂಕು ಎಲ್ಲಾ ಇದ್ದರೂ ತನ್ನ ಅಧಿಕಾರವನ್ನು ಹೇಗೆ ಚಲಾಯಿಸಬೇಕೆಂದು ಗೊತ್ತಿಲ್ಲದೇ ಗೊಂದಲದಲ್ಲಿದ್ದ. ಬಹುಶಃ ಹೊಸತಾಗಿ ಸೇರ್ಪಡೆಗೊಂಡವನಾಗಿರಬಹುದು. ಕಡೆಗೂ ಎಲ್ಲರ ಚೆಕ್ ಇನ್ ಆದಾಗ ಭರ್ತಿ ಮೂರೂವರೆ. ನನ್ನ ಸಾಮಾನು ತುಂಬಾ ಅಡಿಯಲ್ಲಿತ್ತೋ ಏನೋ, ಚಲಿಸುತ್ತಿರುವ ಬಸ್ಸಿನಿಂದ ಕೆಳಕ್ಕೆ ಬಿದ್ದು ಉರುಳಾಡಿದರೆ ಹೇಗಿರುತ್ತೋ ಆ ಅವಸ್ಥೆಯಲ್ಲಿತ್ತು.

 ಇಮಿಗ್ರೇಶನ್ ಮುಗಿಸಿ ನಮ್ಮನ್ನೆಲ್ಲ ಮೇಲಿನ ಲೌಂಜಿನಲ್ಲಿ ಕುಳ್ಳಿರಿಸಲಾಯ್ತು. ಸುಮಾರು ಒಂದು ಘಂಟೆ ಯಾವುದೇ ಮಾಹಿತಿಯಿಲ್ಲದೆ ಕಾಲ ಕಳೆದೆವು. ಕೆಳಗೆ ನಿಲ್ದಾಣದ ಅಂಗಣದಲ್ಲಿ ಗುಂಪು ಘರ್ಷಣೆಯಾಗಲು ತೊಡಗಿತು. ವಿಷಯ ಏನೆಂದು ವಿಚಾರಿಸಿದರೆ ಹಿಂದಿನ ದಿನದ ಪ್ರಯಾಣಿಕರು ವಿಮಾನ ಇನ್ನೂ ಹೊರಡದಿದ್ದುದಕ್ಕೆ ಆಕ್ರೋಶಗೊಂಡಿದ್ದರು. ಪರಿಸ್ಥಿತಿ ಕೈಕೈ ಮಿಲಾಯಿಸುವಷ್ಟರ ಮಟ್ಟಿಗೆ ಹೋಯ್ತೋ ಏನೋ, ನಿಲ್ದಾನದೊಳಗಿಂದ ಸುಮಾರು ನಲವತ್ತು ನಲವತ್ತೈದು ಪೋಲೀಸರು ಧಡ ಧಡ ಒಳಬಂದರು. ಚಕಮಕಿಯನ್ನು ಲೌಂಜಿನಲ್ಲಿದ್ದ ಅಷ್ಟೂ ಜನರು ಗುಂಪಾಗಿ ವೀಕ್ಷಿಸಿದೆವು. ನಿಲ್ದಾಣದಲ್ಲಿ ನಿರ್ಗತಿಕರಂತೆ ನಿಂತಿದ್ದ ನಿನ್ನೆಯ ಪ್ರಯಾಣಿಕರು ಪೋಲಿಸರ ಸರ್ಪಗಾವಲಿನ ನಡುವೆ ಬಂಧಿಸಿ ಕರೆದೊಯ್ಯುವ ಕೈದಿಗಳಂತೆ ಕಂಡುಬಂದರು. ಕೊಂಚಕಾಲದ ನಂತರ ಎಲ್ಲರನ್ನೂ ಒಳಗೆ ಕರೆದೊಯ್ಯಲಾಯ್ತು.

 ನಂತರ ಇಂದಿನ ದಿನದ ಪ್ರಯಾಣಿಕರನ್ನು ಕೊಂಚ ದೂರದಲ್ಲಿ ನಿಂತಿದ್ದ ಇನ್ನೊಂದು ವಿಮಾನದೊಳಕ್ಕೆ ಬರಲು ಕೇಳಿಕೊಳ್ಳಲಾಯ್ತು. ನಾವು ಆ ವಿಮಾನದ ಬಳಿ ತಲುಪಿ ಗುಂಪುಗಟ್ಟಿರುವಂತೆ ನಮ್ಮನ್ನು ಕಳಿಸಿದ ಸಿಬ್ಬಂದಿಗೂ ವಿಮಾನದೊಳಗಿರುವ ಸಿಬ್ಬಂದಿಗೂ ಜಟಾಪಟಿ ಶುರುವಾಯಿತು. ಅಲ್ಲಿನ ಸಿಬ್ಬಂದಿ ಪ್ರಯಾಣಿಕರನ್ನು ಒಳಗೆ ಕರೆದುಕೊಳ್ಳಲು ಸಿದ್ಧರಾಗಿಲ್ಲದ್ದಿದ್ದೋ ಏನೋ, ಅಷ್ಟೂ ಮಂದಿ ಪ್ರಯಾಣಿಕರು ಇವರ ಕೋಳಿಜಗಳದ ಪುಕ್ಕಟೆ ಮನರಂಜನೆ ಪಡೆದೆವು. ಹಿಂದಿನ ವಿಮಾನದ ಬಳಿ ಇದ್ದ ಪೋಲೀಸರೆಲ್ಲರೂ ಪ್ರಯಾಣಿಕರೇ ಏನಾದರೂ ಗಲಾಟೆ ಮಾಡಿರಬೇಕೆಂದುಕೊಂಡು ಓಡೋಡಿ ಬಂದರು. ಪ್ರಯಾಣಿಕರೆಲ್ಲಾ ತಾಳ್ಮೆಯಿಂದ ವ್ಯವಹರಿಸದಿದ್ದಿದ್ದರೆ ಲಾಠಿ ಛಾರ್ಜು ಮಾಡುತ್ತಿದ್ದರೋ ಏನೋ. ಪೋಲೀಸರನ್ನು ನೋಡಿ ಕೆಲವು ಮಕ್ಕಳು ಚಿಕ್ಕದಾಗಿ ರಾಗ ಎಳೆಯಲು ಶುರುಮಾಡಿದುವು. ಸುಮಾರು ಕಾಲು ಘಂಟೆ ಬಿಸಿಲಿನಲ್ಲಿ ನಾವು ಇವರ ಜಗಳ ಇತ್ಯರ್ಥವಾಗಲು ಕಾಯಬೇಕಾಯಿತು. ನಂತರ ನಮಗೆ ಪ್ರವೇಶ ನೀಡಲಾಯಿತು. ಪ್ರಯಾಣಿಕರಲ್ಲಿ ಹಲವರು ನಮ್ಮನ್ನೇನು ವಿಮಾನದ ಪ್ರಯಾಣಿಕರೆಂದು ತಿಳಿದುಕೊಂಡಿದ್ದಾರೋ, ಎತ್ತಿನಗಾಡಿಯ ಪ್ರಯಾಣಿಕರೆಂದೋ, ನಾವು ದೂರು ನೀಡುತ್ತೇವೆ, ಹಾಗೆ ಹೀಗೆ ಎಂದು ಹಾರಾಡಿದರು. ಎಷ್ಟು ಗುರುಗುಟ್ಟಿದರೂ ಕೇಳುವವರು ಯಾರಾದರೂ ಇರಬೇಕಲ್ಲ, ಇದ್ದವರು ಈ ವಿಷಯಗಳಿಗೆ ಯಾವುದೇ ಸಂಬಂಧವೇ ಇಲ್ಲದ ಗಗನಸಖಿಯರು.

 ನಂತರ ಕೇವಲ ಅರ್ಧ ಘಂಟೆ ತಡವಾಗಿ ವಿಮಾನ ನೆಲಬಿಟ್ಟಿತು. ನಂತರ ದುಬೈ ತಲುಪುವವೆರೆಗೂ ನೀರಸ ಪ್ರಯಾಣ ಬೇಸರ ತರಿಸಿತು. ದುಬೈ ವಿಮಾನ ನಿಲ್ದಾಣ ತಲುಪಲಿದ್ದೇವೆ ಎಂದು ಧ್ವನಿವರ್ಧಕದಲ್ಲಿ ಬಿತ್ತರಿಸಿದರೇ ವಿನಃ ದುಬೈ ಟರ್ಮಿನಲ್ - ೨ ಎಂದು ತಪ್ಪಿಯೂ ಹೇಳಲಿಲ್ಲ. ಯಾರಾದರೂ ಕರೆದೊಯ್ಯಲು ಬರುವವರಲ್ಲಿ ಬರೆಯ ದುಬೈ ವಿಮಾನ ನಿಲ್ದಾಣ ಎಂದು ಹೇಳಿದರೆ ಅವರು ಟರ್ಮಿನಲ್ - ೧ಕ್ಕೆ ಹೋಗಿ ಅವಾಂತರವಾಗುವ ಸಾಧ್ಯತೆಗಳು ಇಲ್ಲದಿಲ್ಲ. ಇಲ್ಲಿ ಬರುವ ವಿಮಾನಗಳು ಟರ್ಮಿನಲ್ -೨ ಎಂದು ಸ್ಪಷ್ಟವಾಗಿ ಬಿತ್ತರಿದ್ದರೆಂದು ಕೆಲ ಸ್ನೇಹಿತರು ನಂತರ ತಿಳಿಸಿದರು. ಸಹಪ್ರಯಾಣಿಕರಲ್ಲಿ ಹೆಚ್ಚಿನವರಾದ ಕೇರಳದವರು ಇಮಿಗ್ರೇಶನ್ ಸಾಲಿನಲ್ಲಿ ನಿಂತಿದ್ದರೂ ಏರಿಂಡಿಯಾವನ್ನು ಜರೆಯುತ್ತ ಕಾಲದ ಸದುಪಯೋಗ ಪಡೆದುಕೊಳ್ಳುತ್ತಿದ್ದರು. ಮಂಗಳೂರಿಗೆ ಬಂದು ಊರಿಗೆ ತಲುಪಲು ನಾಲ್ಕು ಘಂಟೆ ಬೇಕಾಗುತ್ತಿದ್ದುದರಿಂದ ಇದನ್ನು ಆಯ್ದುಕೊಂಡೆನೆಂದೂ ಅದೇ ಕ್ಯಾಲಿಕಟ್ಟಿಗೆ ಹೋದರೆ ಆರು ಘಂಟೆಯಾಗುತ್ತಿತ್ತೆಂದೂ, ಎರೆಡು ಘಂಟೆ ಉಳಿಸಲು ದರಿದ್ರದ ಏರಿಂಡಿಯದಲ್ಲಿ ಬಂದು ಒಂದಿಡೀ ದಿನವೂ, ಮನಸ್ಸೂ ಹಾಳಾಯಿತೆಂದೂ, ಭಿಕ್ಷುಕರಿಗಿಂತ ಕಡೆಯಾಗಿ ತಮ್ಮನ್ನು ಕಾಣಲಾಯಿತೆಂದೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.

ಇವರ ಮಾತು ಕೇಳುತ್ತಿದ್ದ ನನಗಂತೂ ಅತೀವ ವೇದನೆಯಾಯಿತು. ಮಂಗಳೂರು ನಿಲ್ದಾಣ ಅಂತಾರಾಷ್ಟ್ರೀಯವಾಗಬೇಕೆಂದು ಶ್ರಮಿಸಿದ ಕನ್ನಡಿಗರಲ್ಲಿ ಯಾರೊಬ್ಬರಿಗಾದರೂ ಏರಿಂಡಿಯ ಈ ತರಹದ ಸೇವೆ ನೀಡುತ್ತದೆ ಎಂದು ಗೊತ್ತಿದ್ದಿದ್ದರೆ ಇದರ ತಂಟೆಗೇ ಬರುತ್ತಿರಲಿಲ್ಲವೇನೋ. ಸಧ್ಯಕ್ಕೆ ಮಂಗಳೂರಿಗೆ ನೇರ ವಿಮಾನ ಇದೆ ಎಂಬ ಕಾರಣಕ್ಕೆ ಮಾತ್ರ ಏರಿಂಡಿಯಕ್ಕೆ ಭರ್ತಿ ಗ್ರಾಹಕರು ಸಿಗಲು ಕಾರಣವಾಗಿದೆ. ಸಧ್ಯಕ್ಕೆ ಬೇರೆ ಯಾವ ವಿಮಾನ ಸಂಸ್ಥೆಗಳಿಗೂ ಈ ಮಾರ್ಗ ಸಿಗದಿರುವುದರಿಂದ ಪ್ರಯಾಣಿಕರು ಬವಣೆ ಅನುಭವಿಸುವಂತಾಗಿದೆ.

ಏರಿಂಡಿಯ ಪ್ರಯಾಣಿಕರ ದೃಷ್ಟಿಯಿಂದ ಕೆಲವು ಬದಲಾವಣೆಗಳನ್ನು ಮಾಡುವುದು ಒಳಿತು:

೧)ಕ್ಷ-ಕಿರಣ-ತಪಾಸಣಾ ಘಟಕದ ಮೂತಿಗೇ ಕೌಂಟರು ಇರುವುದನ್ನು ಕೌಂಟರಿಗೆ ಬದಲಿಸಿ ವಿಶಾಲ ಸ್ಥಳ ನೀಡಬೇಕು.

೨)ಪ್ರಯಾಣಿಕರಿಗೆ ತನ್ನ ಬದಲಾದ ಸಮಯದ ವಿವರಗಳನ್ನು ಫೋನಿನ ಮುಖಾಂತರ ನೀಡಬೇಕು. ಇದರಿಂದ ಪ್ರಯಾಣಿಕರು ಬಂದು ಜಂಗುಳಿಯಾಗುವ ಸಂಭವ ತಪ್ಪುತ್ತದೆ

೩)ಪ್ರಯಾಣಿಕರ ಸಹಾಯಕ್ಕೆ ಒಂದಿಬ್ಬರಾದರೂ ತರಬೇತಿ ಪಡೆದಿರುವ ಸಿಬ್ಬಂದಿ ಇರಬೇಕು. ಡೊಮೆಸ್ಟಿಕ್ ಸೇವೆಗಳಿಗೆ ಸಿಗುತ್ತಿರುವ ಸೇವೆ ಪ್ರಶಂಸಾರ್ಹ.

೪)ಅರೈವಲ್ ಮತ್ತು ಡಿಪಾರ್ಚರ್ ಬಾಗಿಲುಗಳ ನಡುವೆ ಇರುವ ದಾರಿಯಲ್ಲಿಯೇ ಏರಿಂಡಿಯ ಎಕ್ಸ್ ಪ್ರೆಸ್ಸಿನ ಕಿಟಕಿ ಇರುವುದು. ವಿಚಾರಣೆಗೆ ನಿಲ್ಲುವ ಪ್ರಯಾಣಿಕರು ತಮ್ಮ ಟ್ರಾಲಿಗಳನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡಿರುವುದರಿಂದ ಮಾರ್ಗದಲ್ಲಿ ಹೋಗುವ ಇತರ ಪ್ರಯಾಣಿಕರಿಗೆ ಅತೀವ ತೊಂದರೆಯಾಗುತ್ತಿದ್ದು ಅಲ್ಲಿನ ಗಾರ್ಡು ಟ್ರಾಲಿಗಳನ್ನು ತೆಗೆಯಿರಿ ಎಂದು ವಿಚಾರಣೆ ಮಾಡುವವರಿಗೆ ಗದರಿಸುವುದು, ವಿಚಾರಣೆ ಮಧ್ಯದಲ್ಲಿ ಬರಲಾಗದೆ ಗೊಂದಲವಾಗುತ್ತಿದೆ. ಸಂಸ್ಥೆ ಇದಕ್ಕೇನಾದರೂ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕು.

ಬರುವ ವರ್ಷದ ರಜೆಯ ಹೊತ್ತಿಗೆ ಈ ತೊಂದರೆಗಳೆಲ್ಲ ಮಾಯವಾಗುವುದೆಂಬ ಹಾರೈಕೆ ಹೊತ್ತವರಲ್ಲಿ ನಾನೂ ಒಬ್ಬ. ಬಹುಶಃ ನೀವೂ ಕೂಡ! ಅಲ್ವಾ?

It was good to read your

It was good to read your experience in travelling from Mangalore Airport to Dubai. We hope that they are just initial hiccups and not permanent inconveniences. Everyone, who has experienced such problems, should write to the airport authorities so that they will be taking steps to correct the irregularities. Silence in these matters will be termed as acceptance and may encourage them to continue the same trend. Mangalore is famous for its efficiency and enterprise. Hope this reputation will be upheld by the airport authorities. We certainly hope that more airlines will be given permission to use Mangalore airport and we are hoping that one day there will be direct planes to Singapore too. Then, may be we too can fly direct to Mangalore.

Mr.Arshad has vividly

Mr.Arshad has vividly discribed the pain & agony of himself and his fellow passengers. Many of us have undergone lots of problem after the glorified inaguration of Air India express's direct flight to Mangalore. During the begining days for almost six months, there was no credit card payment system and I almost have to beg some one to pay my excess luggage. Believe me the price offered to this so called budget airline is too high and due to this my family is travelling through Bangalore on Air Arabia! I think we all gulf kannadigas must fight to force Indian Civil Aviation to allow Pvt carriers to operate in this region.

Syndicate

Syndicate content