ಶಾರ್ಜಾದ ಕನಾತ್ ಅಲ್ ಕಸ್ಬಾಕ್ಕೊಂದು ಭೇಟಿ.
qanat al qasba02.jpg

- ಅರ್ಶದ್ ಹುಸೇನ್ ಎಂ.ಹೆಚ್.

ಬೊಂಬಾಯಿಗೆ ಮರೈನ್ ಡ್ರೈವ್ ಹೇಗೋ ಹಾಗೆಯೇ ಶಾರ್ಜಾಕ್ಕೆ ಖಾಲಿದ್ ಲಗೂನ್. ಆಕಾಶದಿಂದ ನೋಡಿದರೆ ಸಮುದ್ರವನ್ನು ಎರೆಡು ಕೊಲ್ಲಿಗಳು ಅಕ್ಕಪಕ್ಕದಲ್ಲಿಯೇ ಭೂಮಿಯೊಳಕ್ಕೆ ಹೋಗಿರುವುದು ಶಾರ್ಜಾದ ತೀರದಲ್ಲಿ ಕಂಡುಬರುತ್ತದೆ. ಒಂದು ವೇಳೆ ಈ ಎರೆಡೂ ಕೊಲ್ಲಿಗಳ ನಡುವೆ ಒಂದು ಕಾಲುವೆ ತೋಡಿ ಸಂಪರ್ಕ ನೀಡಿದರೆ? ಇದನ್ನು ಕಲ್ಪನೆ ಮಾಡಿದವರ ಸಾಕಾರವೇ ಕನಾತ್ ಅಲ್ ಕಸ್ಬಾ.

ಮಾನವನಿರ್ಮತ ಕಾಲುವೆಯ ಒಂದು ತುದಿಯಲ್ಲಿ ಸ್ಥಿತವಾಗಿರುವ ಐ ಆಫ್ ದಿ ಎಮಿರೇಟ್ಸ್ ತೂಗುತೊಟ್ಟಿಲು ಕನಾತ್ ಅಲ್ ಕಸ್ಬಾದ ಕಣ್ಮಣಿಯಾಗಿದೆ. ಹೊರಗಿನಿಂದ ಅಷ್ಟೇನೂ ವಿಶಾಲವಾಗಿ ಕಾಣದ ಕನಾತ್ ಅಲ್ ಕಸ್ಬಾದ ಒಟ್ಟಾರೆ ಪ್ರದೇಶ ೧೦,೦೦೦ ಎಕರೆಗಳು. ಈ ಪ್ರದೇಶವನ್ನು ಸಾಂಸ್ಕೃತಿಕ, ಮನರಂಜನೆ ಹಾಗೂ ರಜಾಕಾಲದ ವಿಹಾರತಾಣಗಳಿಗಾಗಿ ಮೀಸಲಿರಿಸಲಾಗಿದೆ. ಇಲ್ಲೊಂದು ೩೦೦ ಆಸನಗಳ ಚಲನಚಿತ್ರಮಂದಿರ, ಮಾನವನಿರ್ಮಿತ ಕಾಲುವೆ, ಕಾಲುವೆಯನ್ನು ದಾಟಲು ಮೂರು ಅರ್ಧಚಂದ್ರಾಕೃತಿಯ ಸೇತುವೆಗಳು, ಮತ್ತು ಮುಖ್ಯವಾಗಿ ದುಬೈಗೆ ಬುರ್ಜ್ ಅಲ್ ಅರಬ್ ಇರುವಂತೆ ಶಾರ್ಜಾಕ್ಕೆ ಇರುವ ೬೦ ಮೀಟರ್ ಎತ್ತರದ ತೂಗುತೊಟ್ಟಿಲು ಐ ಆಫ್ ದಿ ಎಮಿರೇಟ್ಸ್. ಪ್ರತಿ ವಾರಾಂತ್ಯದಲ್ಲಿ ಈ ಸ್ಥಳಕ್ಕೆ ಕಳೆ ಬರುತ್ತದೆ. ಕಾಲುವೆಯ ಇಬ್ಬದಿಯಲ್ಲೂ ಇರುವ ಅನೇಕ ಉಪಾಹಾರಗೃಹಗಳು, ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಎಲ್ಲಾ ಪಂಗಡದ ಕುಟುಂಬವರ್ಗದವರನ್ನು ಆಕರ್ಶಿಸುತ್ತದೆ. ಹೆಚ್ಚಿನ ಕಟ್ಟಡಗಳು ಆಕರ್ಷಕ ಯುರೋಪಿಯನ್ ಮತ್ತು ಸಾಂಪ್ರಾದಾಯಿಕ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿವೆ.

ಇಲ್ಲೊಂದು ರಂಗಮಂದಿರವಿರುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಮಸ್ರಾ ಅಲ್ ಕಸ್ಬಾ ಎಂಬ ಹೆಸರಿನ ಈ ರಂಗಮಂದಿರದಲ್ಲಿ ಸಂಗೀತಸಂಜೆಗಳನ್ನೂ ನಾಟಕಗಳನ್ನೂ ಪ್ರದರ್ಶಿಸಲಾಗುತ್ತದೆ. ಇತ್ತೀಚೆಗೆ ಅಂತರ್ರಾಷ್ಟ್ರೀಯ ಸೋಪ್ ಒಪೆರಾ - ಲಾ ಟ್ರಾವಿಯಾಟ ವನ್ನು ಸಹ ಪ್ರದರ್ಶಿಸಲಾಗಿತ್ತು. ಅನತಿ ದೂರದಲ್ಲಿ ೧೫೦೦ ಎಕರೆ ವಸ್ತುಪ್ರದರ್ಶನದ ವೇದಿಕೆಯಿದೆ. ಇಲ್ಲಿ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಮಕ್ಕಳಿಂದ ಹಿರಿಯರವರೆಗೆ ಮೆಚ್ಚುಗೆಗೆ ಪಾತ್ರವಾಗಿರುವ ಐ ಆಫ್ ದಿ ಎಮಿರೇಟ್ಸ್ ತೂಗುತೊಟ್ಟಿಲು ೬೦ ಮೀಟರ್ ಎತ್ತರವಿದ್ದು ಯು.ಎ.ಇ.ಯ ಅತಿ ಎತ್ತರದ ವೀಕ್ಷಣಾಲಯ ಎಂದು ಪ್ರಸಿದ್ಧವಾಗಿದೆ. ತೊಟ್ಟಿಲು ಮೇಲ್ಬಾಗದಲ್ಲಿದ್ದಾಗ ಕಾಣುವ ಶಾರ್ಜಾ ನಗರದ ನೋಟ ವಿಹಂಗಮ. ಇದರಲ್ಲಿ ೪೨ ಹವಾನಿಯಂತ್ರಿತ ಹಾಗೂ ಸಂಪೂರ್ಣ ಸುರಕ್ಷಿತ ತೊಟ್ಟಿಲುಗಳು ವಿಶಾಲವಾಗಿವೆ. ಒಮ್ಮೆ ಇದರಲ್ಲಿ ಸುತ್ತಿಬಂದವರು ಅನುಭವವನ್ನು ಎಂದೂ ಮರೆಯಲಾರರು.

ಕಳೆದ ರಂಜಾನ್ ಹಬ್ಬದ ರಜಾದಿನಗಳಲ್ಲಿ ಸುಮಾರು ೫೦,೦೦೦ ಜನರು ಕನಾತ್ ಅಲ್ ಕಸ್ಬಾಕ್ಕೆ ಭೇಟಿ ನೀಡಿದ್ದಾರೆ. ಅದರಲ್ಲಿ ಕನಿಷ್ಟ ೫,೦೦೦ ಜನರು ಈ ಐ ಆಫ್ ದಿ ಎಮಿರೇಟ್ಸಿನ ಅನುಭವ ಪಡೆದಿದ್ದಾರೆ. ಕಾಲುವೆಯಲ್ಲಿ ಅತ್ತಿಂದಿತ್ತ ಓಡಾಡಲು ಸಾಂಪ್ರಾದಾಯಿಕ ಅಬ್ರಾ (ಮರದಿಂದ ಮಾಡಿದ ದೋಣಿ. ಹಿಂದೆ ಇದನ್ನು ಹುಟ್ಟು ಹಾಕಿ ನಡೆಸಲಾಗುತ್ತಿತ್ತು. ಇಂದು ಇದರ ಮೂಲಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡದೆ ಇಂಜಿನ್ನು ಅಳವಡಿಸಿ ನಡೆಸುವಂತೆ ಮಾಡಲಾಗಿದೆ) ಒಂದನ್ನು ಬಾಡಿಗೆಗೆ ತೆಗೆದುಕೊಂಡು ಕಾಲುವೆಯಲ್ಲಿ ಪಯಣಿಸಬಹುದಾಗಿದೆ. ಯು.ಎ.ಇ. ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಕನಾತ್ ಅಲ್ ಕಸ್ಬಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ ೧ರಿಂದ ೩ರವರೆಗೆ ಪ್ರತಿದಿನ ಸಂಜೆ ೫ರಿಂದ ಮಧ್ಯರಾತ್ರಿಯವರೆಗೆ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಆಕರ್ಷಣೆಯಾಗಿ ಅಲ್ ಹರ್ಬಿಯಾ ಸಾಂಪ್ರದಾಯಿಕ ಬ್ಯಾಂಡ್ ಈ ಮೂರೂ ದಿನಗಳಂದು ರಾತ್ರಿ ಒಂಭತ್ತು ಘಂಟೆಯಿಎಂದ ಮಧ್ಯರಾತ್ರಿಯವರೆಗೆ ಪ್ರದರ್ಶನ ನೀಡಲಿದೆ. ಯು.ಎ.ಇ. ಸೈನ್ಯದ ವಿಷೇಶ ಕವಾಯತು ಪ್ರದರ್ಶನ ಡಿಸೆಂಬರ್ ೨ರಂದು ಸಂಜೆ ೫ ರಿಂದ ೭ ಘಂಟೆಯವರೆಗೆ ನಡೆಯಲಿದೆ. ಇತರ ಮನರಂಜನಾ ಕಾರ್ಯಕ್ರಮಗಳೊಂದಿಗೆ ಶೋಭಾಯಮಾನವಾದ ಪಟಾಕಿ ಪ್ರದರ್ಶನ ರಾತ್ರಿ ಒಂಭತ್ತು ಘಂಟೆಗೆ ಆಕಾಶದಲ್ಲಿ ಚಿತ್ತಾರಗಳನ್ನು ಮೂಡಿಸಲಿದೆ.

ಈ ದಿನಗಳಲ್ಲಿ ಫ್ರೀಜ್ ಕಾರ್ಟೂನ್ ವೇಷಧಾರಿಗಳು ಸಾಮ್ಜೆ ಐದರಿಂದ ಹತ್ತು ಘಂಟೆಯವರೆಗೆ ಮಕ್ಕಳನ್ನು ರಂಜಿಸಲಿದ್ದಾರೆ. ಮಕ್ಕಳಿಗೆ ಆಟವಾಡಲು ಮೀಸಲಾದ ಸ್ಥಳದಲ್ಲಿ ಮಕ್ಕಳ ಮನರಂಜನೆಗಾಗಿ ಸ್ಟಿಲ್ಟ್ (ಮರದ ಕಾಲು) ಮೇಲೆ ನಡೆಯುವವರು, ಕುದುರೆ ಹಾಗೂ ಒಂಟೆ ಸವಾರಿ, ಪುಟಿದೇಳುವ ಕೋಟೆ ಇತ್ಯಾದಿಗಳು ಇತ್ಯಾದಿಗಳನ್ನು ಸಜ್ಜುಗೊಳಿಸಲಾಗಿದೆ. ರಾಷ್ಟ್ರೀಯ ದಿನಾಚರಣೆಯ ರಜಾದಿನಗಳನ್ನು ಕನಾತ್ ಅಲ್ ಕಸ್ಬಾದಲ್ಲಿ ಸಂತೋಷದಿಂದ ಕಳೆಯಲು ಒಳ್ಳೆಯ ಅವಕಾಶವಿದೆ. ಹೆಚ್ಚಿನ ವಿವರಗಳನ್ನು ಕೆಳಗಿನ ಜಾಲತಾಣದಲ್ಲಿ ಪಡೆಯಬಹುದು. www.http://www.qaq.ae

Syndicate

Syndicate content