- ಗೋಪೀನಾಥ ರಾವ್
ಹಾಳು ನೆನಪು
ಕಾಳು ಹಾಕಿ ಸಾಕಿದ ಕಾಗೆಯಂತೆ
ಸುತ್ತಿ ತಿರುಗಿ ಪುನಃ ಅಲ್ಲಿಗೇ ಬಂದು
ಹೇಳದೇ ಕೇಳದೇ ಗಟ್ಟಿಯಾಗಿ ತನ್ನಿರವನ್ನು ಅರಚುತ್ತದೆ
ಅಸಲಿನೊಡನೆ ನುಸುಳಿ ಬರುವ ಬಡ್ಡಿಯಂತೆ
ಕಿಸಿದು ಹಲ್ಲು ಚಹಾದ ಹೊತ್ತಿಗೇ ಬರುವ ನೆಂಟನಂತೆ
ಫಸಲು ಕೈಗೆ ಬರುವ ವೇಳೆ
ಬೀಡು ಬಿಡುವ ಜಮೀನುದಾರರಂತೆ
ಬಂದು ಕೂತಿದೆ ನೆನಪು
ತಲೆಯೆಲ್ಲ ಸಂತೆ
ಮರೆಯಲು ಪಟ್ಟ ಸಾಹಸ ಮರೆತುಹೋಗಿ
ಅಚ್ಚಳಿಯದೆ ಉಳಿದು ಅಟ್ಟಹಾಸ
ಮಟ್ಟ ಹಾಕಲಾಗದೆ ನೆನಪ ಸಿಟ್ಟಿಗೆದ್ದು
ಕಟ್ಟ ಕಡೆಗೆ ಕೈಗೆ ಸಿಕ್ಕಿದ್ದನ್ನು ಮುರಿದು ಒಲೆಗೆಹಾಕಿ ಸುಟ್ಟು
ಮನೆಯಿಂದ ಹೊರಗೆ ಗಾಳಿಗೆ ಹಾಯಾಗಿ
ಹರಡಿಕೊಂಡಿರುವಾಗ ತೋರಿಸುವುದು ಪುನಃ ಜುಟ್ಟು
ಸೆರಗ ಮರೆಯ ಬಸಿರ ಹೊಟ್ಟೆಯಲ್ಲಿ
ಹುಡುಗಿಯ ಗುಟ್ಟು ಬಟ್ಟ ಬಯಲಾದ ಹಾಗೆ
ತಲೆಯೊಳಗೇ ಅವಿತುಕೊಂಡು ಕಣ್ಣೆದುರೇ ಸುಳಿವ
ಜಗಜಾಹೀರು ನೆನಪುಗಳು
ಹಾಳು ಮರೆವು ಮನೆಯ ವಿಳಾಸ
ಮಡದಿಯ ಹುಟ್ಟುಹಬ್ಬ ಮಗನ ನಾಟಕದ ಜುಬ್ಬ
ಮಗಳ ಕಣ್ಣಿನ ಹುಬ್ಬ ಸರಿದಾರಿಗೆ ತರುವ ಸೌಟು
ತಂದಿದ್ದೇನೋ ಇಲ್ಲವೋ ಡೌಟು
ಕಣ್ಮುಂದೆ ಕಾಣುವುದೇ ಇರವು ಒಳಗಿಂದ
ಕಾಣುವುದೆಲ್ಲ ಹಾಳು ಮರೆವು
ಚಡ್ದಿ ಇಲ್ಲದ ಹುಡುಗ ಸೈಕಲ್ಲು ಮೇಲೇರಿ
ಭರದಿಂದ ತುಳಿಯುವಾಗ ಒಮ್ಮೆ ಆಚೆ ಒಮ್ಮೆ ಈಚೆ
ಇಣುಕುವ ತುಣುಕಿನಂತೆ
ಕಾಣುವುದು ಅನಗತ್ಯ ಆದರೂ ಪ್ರತ್ಯಕ್ಷ ಸತ್ಯ !









Namaskaara ! Gopinaat avare,
Namaskaara ! Gopinaat avare, nimma kavana chennaagi baMdide. ellarigU kaaDuva nenapu nenapaagE uLiyutte. nimma patrada hosa vinyaasa bannadiMda kUDiddu, vividha saahitya lEkhanagaLannu sariyaagi kaaNisalu anukUlavaagide. DhanyavaadhagaLu!!!!!! heege kannaDadhvani tale yettuttaa, dhvani ettuttaa irali eMdu aashisuva, Oduga baLaga.