ಮಾರುವಿಕೆಯ ತಂತ್ರ - ಸುಲಭ ಹಣ ಮಾಡುವ ಮಂತ್ರ

- ತಳಕು ಶ್ರೀನಿವಾಸ, ಮುಂಬೈ

ವಸ್ತುಗಳನ್ನು ಮಾರಾಟ ಮಾಡಲು ಹಲವು ಬಗೆಯ ತಂತ್ರಗಳನ್ನು ಮಾಡುವುದನ್ನು ನಾವುಗಳು ಪ್ರತಿದಿನವೂ ಪ್ರತಿಹಂತದಲ್ಲೂ ಕಾಣಬರುತ್ತೇವೆ. ೩೦-೩೫ ವರ್ಷಗಳ ಹಿಂದೆ ರೇಡಿಯೋ, ಪತ್ರಿಕೆ ಅಥವಾ ಟಿವಿ ಮಾಧ್ಯಮದಲ್ಲಿ ವಸ್ತುವಿನ ಬಗ್ಗೆ ಜಾಹೀರಾತು ಬಂದರೆ ಸಾಕು, ಅದನ್ನೇ ಹೆಚ್ಚಿನ ಜನಗಳು ಕೊಳ್ಳುತ್ತಿದ್ದರು. ಅದಾದ ಹತ್ತು ವರ್ಷಗಳ ತರುವಾಯ ಪುರುಷರು ಸುಲಭವಾಗಿ ಜಾಹೀರಾತುಗಳ ತಂತ್ರಕ್ಕೆ ಮಣಿಯದ್ದನ್ನು ಕಂಡು, ಸ್ತ್ರೀಯರ ಮೂಲಕ ಜಾಹೀರಾತು ಮಾಡುವುದು, ಮನೆ ಮನೆಗಳಿಗೆ ಹೋಗಿ ವಸ್ತುಗಳ ಬಗ್ಗೆ ತಿಳಿಸಿ ಕೊಳ್ಳುವಿಕೆಗೆ ಒತ್ತಾಯಿಸುವುದು ಕಂಡುಬಂದಿತು. ಈಗೊಂದು ಐದಾರು ವರುಷಗಳಿಂದ ಮಕ್ಕಳನ್ನು ಪುಸಲಾಯಿಸಿ ವಸ್ತುಗಳ ಮಾರಾಟದ ಬಗ್ಗೆ ಹೊಸ ತಂತ್ರವನ್ನು ಕಂಡುಕೊಂಡಿದ್ದಾರೆ. ಇದೇನು ಹೊಸ ವಿಷಯವೇನಲ್ಲ. ಬಹಳ ಹಿಂದಿನಿಂದಲೂ ಇದ್ದದ್ದೇ. ಈಗೀಗ ನಾನು ಕಾಣುತ್ತಿರುವ ಒಂದು ವಿಧವನ್ನು ಬರಹ ರೂಪಕ್ಕೆ ಇಳಿಸುತ್ತಿರುವೆನಷ್ಟೆ. ಇದು ನಿಮ್ಮೆಲ್ಲರ ಗಮನಕ್ಕೂ ಬಂದಿರಬಹುದು.

ಮಕ್ಕಳು ಎಳೆಯ ವಯಸ್ಸಿನಿಂದಲೇ ಕಾರ್ಟೂನ್ ಚಾನೆಲ್‍ಗಳಿಗೆ ದಾಸರಾಗುವುದು ಎಲ್ಲರ ಮನೆಗಳಲ್ಲೂ ಕಂಡು ಬರುತ್ತಿರುವ ದೃಶ್ಯ. ಒಂದೆರಡು ವರುಷಗಳ ಹಿಂದೆ ಇಂತಹ ಕಾರ್ಟೂನ್ ಚಾನೆಲ್‍ಗಳು ಮಕ್ಕಳಿಗೆ ಸುಲಭದ ಪ್ರಶ್ನೆಗಳನ್ನು ಕೇಳಿ, ಉತ್ತರವನ್ನು ಎಸ್‍ಎಮ್‍ಎಸ್ ಮೂಲಕ ಕಳುಹಿಸಿದರೆ ಬಹುಮಾನ ಕೊಡುವರೆಂದು ಘೋಷಿಸಿದ್ದರು. ಮಾತಿಗೆ ತಪ್ಪದಂತೆ, ರೂ ೧೦೦ - ೨೦೦ ರ ಬಹುಮಾನವನ್ನು ಆಟಗಳ ಸಿಡಿ, ಆಟದ ಸಾಮಾನು, ಇತ್ಯಾದಿಗಳ ಮೂಲಕ ಕೊರಿಯರ್ ಮಾಡಿದ್ದರು. ಇದರ ಫಲವನ್ನು ನನ್ನ ಮಗನೂ ಪಡೆದಿದ್ದನು. ಹೀಗೆ ಫಲ ಅನುಭವಿಸಿದ, ಫಲದ ನಿರೀಕ್ಷೆಯಲ್ಲಿರುವ ಇತರ ಮಕ್ಕಳು ಕಾರ್ಟೂನ್ ಚಾನೆಲ್‍ಗಳಿಗೆ ದಾಸರಾಗಿ ಹೋಗಿದ್ದಾರೆ. ಓದಿನ ಸಮಯವನ್ನು ಬಿಟ್ಟರೆ ಮಿಕ್ಕೆಲ್ಲ ಸಮಯದಲ್ಲೂ ಮಕ್ಕಳು ಟಿವಿಯ ಮುಂದೆಯೇ ಕುಳಿತಿರುತ್ತಾರೆ. ಎಷ್ಟೇ ಹೇಳಿದರೂ ನಮ್ಮ ಮಾತುಗಳು ಅವನ ಕಿವಿಗೆ ಹೊಕ್ಕುವುದಿಲ್ಲ. ಹಿಂದೆಲ್ಲಾ ಆದರೆ ತಂದೆ ತಾಯಿಗಳು ಒದ್ದು ಬುದ್ಧಿ ಕಲಿಸುತ್ತಿದ್ದರು. ಈಗಿನ ಕೌಟುಂಬಿಕ ಪರಿಸ್ಥಿತಿಯಲ್ಲಿ ಮಕ್ಕಳಿಗೆ ತಂದೆ ಅಥವಾ ತಾಯಿ ಹೊಡೆದರೆ ಮತ್ತೊಬ್ಬರು ಯಾಕೆ ಹೊಡೆಯುವುದೆಂದು ಮಕ್ಕಳ ಪರವಹಿಸುವರು. ಹೀಗಾಗಿ ಮಕ್ಕಳಿಗೆ ಹೊಡೆದು ಬುದ್ಧಿ ಕಲಿಸುವ ಕಾಲ ಹೋಯಿತು. ಇನ್ನು ಬಾಯಿ ಮಾತನ್ನು ಎಲ್ಲಿ ಕೇಳುತ್ತಾರೆ. ಅದರಲ್ಲೂ ಹಿರಿಯ ಒಬ್ಬರ ಮಾತಿಗೆ ವಿರುದ್ಧವಾಗಿ ಇನ್ನೊಬ್ಬ ಹಿರಿಯರು ಪ್ರತಿಕ್ರಿಯಿಸುವುದು ಸರ್ವೇಸಾಮಾನ್ಯವಾಗಿದೆ. ಇಂತಹ ಸನ್ನಿವೇಶವನ್ನು ಮಕ್ಕಳು ಬಹಳ ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಈಗಂತೂ ಮನೆಯಲ್ಲಿ ತಂದೆ ತಾಯಿಯರಿಬ್ಬರೂ ದುಡಿಯಲು ಹೋಗುವ ಕಾರಣ, ಮಕ್ಕಳ ಕಡೆಗೆ ಹೆಚ್ಚಿನ ಗಮನ ಕೊಡಲಾಗುತ್ತಿಲ್ಲ. ಹಾಗಾಗಿ ಮಕ್ಕಳಿಗೆ ಶಾಲೆ ಇಲ್ಲದಿದ್ದರೆ ಮನೆಯಲ್ಲಿ ಟಿವಿಯ ಮುಂದೆ ಕುಳಿತಿರುವುದು ಸಾಮಾನ್ಯವಾಗಿದೆ. ಹಿಂದೆ ಇದ್ದ ಜಂಟಿ ಕುಟುಂಬ ಪದ್ಧತಿ ಈಗ ಮಾಯವಾಗಿ, ಅಣು ಕುಟುಂಬ ಪದ್ಧತಿ ಬಂದಿರುವುದೂ ಇದಕ್ಕೆ ಕಾರಣ. ತಂದೆ, ತಾಯಿ ಮತ್ತು ಮಗು ಮೂವರೇ ಇರುವಂತಹ ಅಣು ಕುಟುಂಬ. ತಂದೆ ತಾಯಿ ಕೆಲಸಕ್ಕೇ ಹೋಗುವರು. ಮಗುವಿಗೆ ಶಾಲೆಯಿಲ್ಲದ ಸಮಯದಲ್ಲಿ, ಮನೆಯೇತರರ ನಿರೀಕ್ಷಣೆ. ಅವರು ತಾನೆ ಎಷ್ಟರ ಮಟ್ಟಿನ ಮುತುವರ್ಜಿ ತೋರಿಸಿಯಾರು? ಮಗುವಿಗೆ ಹಿರಿಯರ ಅವಶ್ಯಕತೆ ಬೇಕೆನಿಸಿದಾಗ, ತಂದೆ ತಾಯಿಯರು, ಎಷ್ಟು ಹಣ ಬೇಕಾದರೂ ಕೇಳು ಕೊಡುವೆ, ಆದರೆ ನಮ್ಮ ಸಮಯವನ್ನು ಮಾತ್ರ ಕೇಳಬೇಡವೆನ್ನುವುದು ಸಹಜ ಪರಿಸ್ಥಿತಿ.

ಪ್ರಸ್ತುತ ಒಂದು ಕಾರ್ಟೂನ್ ಜಾಹೀರಾತಿನ ಬಗ್ಗೆ ನಾನು ಹೇಳಬಯಸುವೆ. ಇದೊಂದು ಹೆಸರಾಂತ ಕಾರ್ಟೂನ್ ಚಾನೆಲ್. ಅದರಲ್ಲಿ ಪ್ರಸಾರ ಆಗುವ ಕಾರ್ಯಕ್ರಮಗಳ ಮಧ್ಯದಲ್ಲಿ ಸಂಖ್ಯೆಗಳನ್ನು ತೋರಿಸುವರು. ೩-೪ ಕ್ಷಣಗಳಷ್ಟೇ ಆ ಸಂಖ್ಯೆಯನ್ನು ತೋರಿಸುವುದು. ತತ್‍ಕ್ಷಣ ಆ ಸಂಖ್ಯೆಯನ್ನು ಎಸ್‍ಎಮ್‍ಎಸ್ ಮೂಲಕ ತಿಳಿಸಿದ ಸಂಖ್ಯೆಗೆ ರವಾನಿಸಿದರೆ ಹತ್ತು, ಇಪ್ಪತ್ತು ಅಥವಾ ಮೂವತ್ತು ಅಂಕಗಳನ್ನು ನೀಡುವರು. ಅದನ್ನು ಕೂಡಾ ಎಸ್‍ಎಮ್‍ಎಸ್ ಮೂಲಕವೇ ತಿಳಿಸುವರು. ಎರಡು ದಿನಗಳ ಗಡುವು ಕೊಟ್ಟು ಎಷ್ಟು ಅಂಕಗಳನ್ನು ಪಡೆಯುವರೋ, ಅದರ ಆಧಾರದ ಮೇಲೆ ಹೆಚ್ಚಿನ ಅಂಕ ಗಳಿಸಿದವರಿಗೆ ಲ್ಯಾಪ್‍ಟಾಪ್, ಸಿಡಿ ಗೇಮ್ ಇತ್ಯಾದಿ ಬಹುಮಾನವನ್ನು ಕಳುಹಿಸುವರೆಂದು ಘೋಷಿಸಿದ್ದಾರೆ. ಈ ಎರಡು ದಿನಗಳು ಮಕ್ಕಳು ಓದುತ್ತಿಲ್ಲ, ನಿದ್ರೆ ಮಾಡುತ್ತಿಲ್ಲ ಎಂಬುದು ತಂದೆ ತಾಯಿಯರ ಕಳವಳ. ಹಾಗೇನಾದರೂ ಬಲವಂತವಾಗಿ ನಿದ್ರೆ ಮಾಡಲು ಕಳುಹಿಸಿದರೆ, ಹಿರಿಯರು ಟಿವಿಯ ಮುಂದೆ ಕುಳಿತು ಜಾಹೀರಾತನ್ನು ವೀಕ್ಷಿಸಬೇಕಿದೆ. ಇಲ್ಲದಿದ್ದರೆ ಮನೆಯು ರಣರಂಗವಾಗುವುದು ನಿಶ್ಚಿತ. ಜಾಹೀರಾತುದಾರರಿಗೆ ಹೇಗೆ ಲಾಭವಾಗುವುದು ಎಂದು ಯೋಚಿಸುತ್ತಿದ್ದೆ. ಆಗ ಹೊಳೆದದ್ದು ಇದು. ಒಂದು ಎಸ್‍ಎಮ್‍ಎಸ್‍ಗೆ ಮೂರು ರೂಪಾಯಿಗಳನ್ನು ವಿಧಿಸುವರು. ಹೆಚ್ಚಿನ ಅಂಕ ಪಡೆಯಬೇಕೆಂದರೆ ಹೆಚ್ಚಿನ ಎಸ್‍ಎಮ್‍ಎಸ್ ಸಂದೇಶಗಳನ್ನು ಕಳುಹಿಸಬೇಕು. ಸಾಮಾನ್ಯವಾಗಿ ಒಂದು ಎಸ್‍ಎಮ್‍ಎಸ್‍ಗೆ ಒಂದು ರೂಪಾಯಿ ವಿಧಿಸಿದರೆ, ಇಲ್ಲಿ ಮುಪ್ಪಟ್ಟು ದರವನ್ನು ವಿಧಿಸುವರು. ಆಟದ ಒಂದು ಸಿಡಿಗೆ ಹೆಚ್ಚೆಂದರೆ ೫೦ ರೂಪಾಯಿಗಳ ಖರ್ಚು ತಗಲುವುದಷ್ಟೇ. ಆ ಸಿಡಿಯನ್ನು ಅಂಗಡಿಯಲ್ಲಿ ಕೊಂಡು ಕೊಡುವೆನೆಂದರೆ, ಮಕ್ಕಳು ಕೇಳುವುದಿಲ್ಲ. ನನ್ನ ಬುದ್ಧಿವಂತಿಕೆಗೆ, ಅವರು ಪುಕ್ಕಟೆಯಾಗಿ ಸಿಡಿಯನ್ನು ನೀಡುತ್ತಿದ್ದಾರೆ ಎಂಬುದೇ ಅವರ ಅಂಬೋಣ. ಅವರ ಅನಿಸಿಕೆ ಸರಿ ಇಲ್ಲವೆಂದು ತಿಳಿಸಿದರೂ, ಮನದಟ್ಟಾಗದ ವಯಸ್ಸು ಅವರದ್ದು. ಇದಲ್ಲದೇ ಟಿವಿ ಚಾನೆಲ್‍ನಲ್ಲಿ ಆಗ ತೋರಿಸುವ ಜಾಹೀರಾತುಗಳ ವಸ್ತುಗಳನ್ನೇ ಕೊಳ್ಳಬೇಕೆಂಬು ಮಕ್ಕಳ ಹಠವೂ ಸೇರುವುದು. ಇದನ್ನು ತಡೆಯುವುದು ಹೇಗೆ?

Syndicate

Syndicate content