-ತ.ವಿ. ಶ್ರೀನಿವಾಸ, ಮುಂಬೈ
ಪರ್ಯಾವರಣ = ಪರಿ (ಸುತ್ತಲೂ) ಆವರಣ (ಪಸರಿಸಿರುವುದು) - ಎಂದರೆ ನಮ್ಮ ಅಥವಾ ಈ ಜಗತ್ತಿನ ಸುತ್ತಲೂ ಆವರಿಸಿರುವುದು. ಅದೇನು? ಆಗಸ, ಗಾಳಿ, ಬೆಳಕು, ನೀರು, ಭೂಮಿ. ಅಂದರೆ ಇವುಗಳನ್ನೇ ಪಂಚಭೂತಗಳು ಎನ್ನುವರಲ್ಲವೇ? (5 elements) ಕಣ್ಣಿಗೆ ಕಾಣದಿದ್ದರೂ, ಜೀವ ಇರುವುದನ್ನು ತೋರದಿದ್ದರೂ, ತಮ್ಮ ತಮ್ಮ ಪರಾಕ್ರಮವನ್ನು ಸೂಕ್ತ ಸಮಯದಲ್ಲಿ ತೋರಿಸುವ, ಇತರರಿಗೆ ತಮ್ಮ ಇರುವನ್ನು ತೋರ್ಪಡಿಸಬಲ್ಲ ಅಂಶಗಳು. ಹಲವು ಬಗೆಯ ಪಶು ಪಕ್ಷಿ ಪ್ರಾಣಗಳಿಗೆ ಜೀವಿತವನ್ನು ಕೊಡುವ ಪರಮಾತ್ಮನ ಸ್ವರೂಪ ಎಂದರೆ ತಪ್ಪಾಗಲಾರದು. ಈ ಪಂಚಭೂತಗಳನ್ನು ನಿಸರ್ಗವೆಂದೂ ಕರೆಯಬಹುದು.
ನಿಸರ್ಗ ದೇವರು - ಹೆಚ್ಚಿನವರು ಹೇಳುವ ಮಾತಿದು. ದೇವರು ಎಂದರೆ ಸರ್ವಶಕ್ತ ಅಥವಾ ಮಾನವನಿಗಿಂತ ಹೆಚ್ಚಿನ ಶಕ್ತಿ ಉಳ್ಳವನು, ತಪ್ಪು ಒಪ್ಪುಗಳನ್ನು ತುಲನೆಮಾಡಿ ತಕ್ಕ ಶಾಸ್ತಿ ಅಥವಾ ಪ್ರತಿಯನ್ನು ನೀಡುವವನು ಎಂದು ತಿಳಿದಿರುವೆ. ಈ ದಿಸೆಯಲ್ಲಿ ನನ್ನ ಪುಟ್ಟ ಚಿಂತನೆಯನ್ನು ತಮ್ಮ ಮುಂದಿಡುತ್ತಿರುವೆ.
ಈ ನಿಸರ್ಗಕ್ಕೆ ವಿರುದ್ಧವಾಗಿ ಮಾನವನು ನಡೆದುಕೊಳ್ಳುತ್ತಿದ್ದಾನೆ. ನಿಸರ್ಗವನ್ನು ಉಳಿಸಿ, ಬೆಳೆಸುವ ಬದಲು ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಉಳಿಸಿ ಬೆಳೆಸುವತ್ತ ನಡೆಯುತ್ತಿದ್ದಾನೆ. ಕಾಡು ಕತ್ತರಿಸಿ ಸಸ್ಯರಾಶಿಯನ್ನು ಧ್ವಂಸ ಮಾಡುತ್ತಿದ್ದಾನೆ. ಸಾಗುವಳಿಗೆ ವನ್ಯಸಂಪತ್ತನ್ನು ಉಪಯೋಗಿಸಿಕೊಳ್ಳುತ್ತಿದ್ದಾನೆ. ರಸ್ತೆ ನಿರ್ಮಾಣ, ಕಟ್ಟಡಗಳ ನಿರ್ಮಾಣಕ್ಕೆ ನಿಸರ್ಗದ ಬಲಿಯಾಗುತ್ತಿದೆ. ನಿಸರ್ಗ ಸಂಪತ್ತನ್ನು ಉಳಿಸಿ ಬೆಳೆಸುವ ಬದಲು ಕಬಳಿಸುತ್ತಿದ್ದಾನೆ. ನಾಳಿನ ಚಿಂತೆಯನ್ನು ಮರೆತು, ಸುಲಭದಲ್ಲಿ ಇಂದು ಹೊಟ್ಟೆ ಹೊರೆದುಕೊಳ್ಳುವುದರೆಡೆಗೇ ಅವನ ಚಿಂತನೆಗಳೆಲ್ಲವೂ ಸಾಗಿದೆ. ಹೆಚ್ಚು ಹೆಚ್ಚಾಗಿ ವಾಹನಗಳ ಬಳಕೆಯಾಗುತ್ತಿದ್ದು, ನಿಸರ್ಗದತ್ತವಾದ ಇಂಧನದ ಕಬಳಿಕೆಯೂ ಬಹಳ ಹೆಚ್ಚಾಗುತ್ತಿದೆ. ಹಾಗೆಯೇ ಅದರಿಂದ ವಾಯು ಪ್ರದೂಷಣೆಯೂ ಹೆಚ್ಚುತ್ತಿದೆ. ಅವನ ಈ ಕೃತಿಗೆ ತಕ್ಷಣದ ಪ್ರತಿಕ್ರಿಯೆಯನ್ನು ನೀಡದ ನಿಸರ್ಗ ತನಗೇನೇನೂ ಕೇಡು ಬಗೆಯದು ಎಂದು ತಿಳಿದಿದ್ದಾನೆ. ಆದರೆ ಈ ಅನಿಸಿಕೆ ಸುಳ್ಳು ಎಂದು ಈಗಾಗಲೇ ಸಾಬೀತಾಗಿದೆ. ಹೆಚ್ಚಿನ ಬಿಸಿಲು, ತಡೆಯಿಲ್ಲದ ಮಳೆ, ಪ್ರವಾಹ, ಹಿಂದೆಂದೂ ಎಣಿಸಿರದಷ್ಟಿನ ಹಿಮಪಾತ, ರಸ್ತೆಗಳಲ್ಲಿ ಭೂ ಕುಸಿತ, ಕಟ್ಟಡಗಳ ಕುಸಿಯುವಿಕೆ ಇತ್ಯಾದಿ ಅಕಾಲದ ಪ್ರಕೃತಿ ವೈಪರೀತ್ಯಗಳು ನಿಸರ್ಗದ ಪ್ರತಿಕ್ರಿಯೆಗಳು. ಆಗಸದಲ್ಲಿ ಆಮ್ಲಜನಕದ ಕೊರತೆ, ಓಝೋನ್ ಪದರದಲ್ಲಿ ಕ್ಷೀಣತೆ, ಸಮುದ್ರವನ್ನು ಅತಿಕ್ರಮಿಸಿ ಕಟ್ಟಡ ಸೇತುವೆಗಳನ್ನು ನಿರ್ಮಿಸುವಿಕೆ, ಖನಿಜ ಸಂಪತ್ತನ್ನು ಹೊರತೆಗೆಯುವ ಸಲುವಾಗಿ ಭುವಿಯನ್ನು ಅಗೆಯುವುದು, ವನ್ಯರಾಶಿಯ ಧ್ವಂಸ ಮಾಡುವಿಕೆ ಇತ್ಯಾದಿಗಳಿಂದ ಪಶು ಪಕ್ಷಿ ಪ್ರಾಣಿಗಳೂ ನಶಿಸಿ ಹೋಗುತ್ತಿರುವುವು. ಅದಲ್ಲದೇ ಸಮುದ್ರದಲ್ಲಿ ಚಂಡ ಮಾರುತ ಏಳುವುದು, ಅದರ ಮೇಲೆ ಕಟ್ಟಿದ ಕಟ್ಟಡ ಸೇತುವೆಗಳು ತುಕ್ಕು ಇತ್ಯಾದಿಗಳಿಂದ ಶಕ್ತಿಕಳೆದುಕೊಳ್ಳುವುದು, ಪೊಳ್ಳಾದ ಭುವಿಯ ಕುಸಿತ, ರಸ್ತೆಗಳ ಕುಸಿತ, ಮಲಿನ ವಾಯುವಿನಿಂದ ಉಸಿರಾಟದ ತೊಂದರೆ ಇತ್ಯಾದಿಗಳ ಅನುಭವ ಇಂದು ಸರ್ವೇ ಸಾಮಾನ್ಯ. ಒಂದು ವಿಧದಲ್ಲಿ ನಿಸರ್ಗವು ಮಾನವನ ಮೇಲೆ ಸೇಡು ತೀರಿಸಿಕೊಳ್ಳುವಂತೆಯೇ ಆಗುತ್ತಿದೆ.
ಈ ಸಂದರ್ಭದಲ್ಲಿ ನೆನಪಾಗುತ್ತಿರುವ ಉಕ್ತಿ ಎಂದರೆ -
ಜೈಸಾ ಕರನಿ ವೈಸಾ ಭರನಿ - ಜೊ ಹೆ ಕರತಾ ವೊ ಹಿ ಭರತಾ - ಮಾಡಿದಂತೆ ತುಂಬಿಕೊಳ್ಳುವನು - ಸತ್ಯ ಮಾರ್ಗದಿ ನಡೆದವರು ಸತ್ಯದ ಫಲವನ್ನು ಉಣ್ಣುವರು
ಅಸತ್ಯ ಮಾರ್ಗದಿ ನಡೆದವರು ದುರ್ಗತಿಯನ್ನು ಕಾಣುವರು - ಮಾಡಿದ್ದುಣ್ಣೋ ಮಹರಾಯ
ಇದು ಲೋಕ ಸತ್ಯ - ಇದು ನನ್ನ ಅನಿಸಿಕೆ - ನೀವೇನಂತೀರಿ?
ಧರ್ಮೋ ರಕ್ಷತಿ ರಕ್ಷಿತಃ - ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮವು ನಮ್ಮನ್ನು ರಕ್ಷಿಸುವುದು. ಧರ್ಮವೆಂದರೆ ನಡೆ ನುಡಿ. ನಮ್ಮ ಉಳಿವು ಅಳಿವು ಬೆಳೆವಿಗಿ, ನಿಸರ್ಗವೇ ಧರ್ಮ. ಅದರ ಅಳಿವು ನಮ್ಮ (ಮಾನವ ಜನಾಂಗ) ಅಳಿವು. ಅದನ್ನು ಈಗಿರುವಂತೆಯೇ ಉಳಿಸಿ, ಶಕ್ತಿಯುತವಾಗಿ ಬೆಳೆಸಿದರೆ ನಾವೂ ಬೆಳೆವೆವು. ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ, ಸುಭಿಕ್ಷತೆಯು ತುಂಬಿ ತುಳುಕುವುದು. ಈ ದಿಸೆಯಲ್ಲಿ ಮುಂದಾಗಲು ಪ್ರಯತ್ನಿಸೋಣವೇ?









