ಪ್ರವಾಸ ಲೇಖನ-೨
-ನಳಿನಿ ಸೋಮಯಾಜಿ
ತಲಕಾಡು ಶಿವಸಮುದ್ರದ ಭರಚುಕ್ಕಿ ಪ್ರದೇಶದಿಂದ 24 ಕಿಲೋಮೀಟರ್ ದೂರದಲ್ಲಿದೆ. ನಾವು ಈ ರಸ್ತೆಯಲ್ಲಿ ಮುಂದುವರೆದು ತಲಕಾಡು ಸೇರುವ ಉದ್ದೇಶದಿಂದ ನಮ್ಮ ಪ್ರಯಾಣ ಮುಂದುವರೆಸಿದೆವು. ರಸ್ತೆಯಂತೂ ಒಂದಿಷ್ಟೂ ಸರಿಯಿಲ್ಲದೆ ನಮಗೆ ಆ 24 ಕಿಲೋಮೀಟರ್ ದೂರ ಸಾಗಿ ತಲಕಾಡು ಸೇರಲು 2 ಗಂಟೆ ಬೇಕಾಯಿತು.
ಪುರಾತನ ಕಾಲದಿಂದಲೂ ಹೆಸರುವಾಸಿಯಾದ ತಲಕಾಡು, ಸಾದಾರಣವಾಗಿ ಕರ್ನಾಟಕವನ್ನಾಳಿದ ಅರಸರೆಲ್ಲರ ಆಳ್ವಿಕೆಗೆ ಒಳಗಾದ ತಲಕಾಡು ಮೈಸೂರು ಅರಸರ ಆಳ್ವಿಕೆಯಲ್ಲಿ ಮೈಸೂರು ಒಡೆಯರ್ ಅದನ್ನು ವಶಪಡಿಸಿಕೊಡು ದಾಳಿ ನಡೆಸಿದಾಗ, ಆಲಮೆಲಮ್ಮನ ಶಾಪಕ್ಕೆ ತುತ್ತಾಗಬೇಕಾಯ್ತು.
ಕಥೆಯನ್ನು ಹೀಗೆ ಹೇಳುತ್ತಾರೆ. ಮೈಸೂರು ಅರಸರ ಸರದಾರರು ತಲಕಾಡಿನ ಮೇಲೆ ದಾಳಿ ಮಾಡಿದ ಸಂಧರ್ಭದಲ್ಲಿ, ಅಲ್ಲಿನ ಪಾಳೆಗಾರನು ಯಾವುದೋ ಒಂದು ಕಾಯಿಲೆಗೆ ತುತ್ತಾಗಿ ಸಾಯುವ ಕ್ಷಣದಲ್ಲಿದ್ದನು. ಪಾಳೆಯಗಾರ ಹೆಂಡತಿ ಅಲಮೇಲಮ್ಮನ ಹತ್ತಿರವಿದ್ದ ಚಿನ್ನದ ಒಡವೆಗಳನ್ನು ತರಬೇಕೆಂದು ಅರಸರ ಅಪ್ಪಣೆಯಾಗಿತ್ತು. ಸರದಾರರು ಚಿನ್ನ ಕಿತ್ತುಕೊಳ್ಳಲು ಮುತ್ತಿಗೆ ಹಾಕಿದಾಗ ಅಲಮೇಲಮ್ಮ ಚಿನ್ನವನ್ನೆಲ್ಲ ಹತ್ತಿರದ ಕಾವೇರಿ ನದಿಗೆ ಎಸೆದು ಆತ್ಮಹತ್ಯೆ ಮಾಡಿಕೊಂಡಳೆಂದು ಹೇಳುತ್ತಾರೆ.
ಸಾಯುವ ಮೊದಲು ತಾನು ಚಿನ್ನ ಎಸೆದ ಸ್ಥಳ ( ಮಾಲಂಗಿ) ಮಡುವಾಗಲಿ, ತಲಕಾಡು ಮರಳಾಗಲಿ ಮತ್ತು ಮೈಸೂರು ಅರಸರಿಗೆ ಮಕ್ಕಳಾಗದೆ ಹೋಗಲಿ ಎಂದು ಶಾಪ ಕೊಟ್ಟಳಂತೆ. ಅದೇನು ಆಶ್ಚರ್ಯವೋ ತಲಕಾಡಿನ ಹತ್ತಿರ ಹೋಗುತ್ತಿದ್ದಂತೆ ಮರಳು ಭೂಮಿ ಎದುರಾಗುತ್ತದೆ. ಮೈಸೂರು ಒಡೆಯರ ಸಂತಾನದ ಬಗ್ಗೆ ಎಲ್ಲರಿಗೂ ತಿಳಿದಿದ್ದೆ.
ತಲ ಮತ್ತು ಕಾಡು ಎಂಬ ಬೇಟೆಗಾರರು ಇಲ್ಲಿ ಬೇಟೆಯಾಡಿದ್ದರಿಂದಲೂ ತಲಕಾಡು ಎಂಬ ಹೆಸರು ಬಂತು ಎನ್ನುವ ಪ್ರತೀತಿಯೂ ಇದೆ. ಆವರಿಂದಲೇ ಇಲ್ಲಿಯ ಮಹತ್ವ ಬೆಳಕಿಗೆ ಬಂದದ್ದು ಎಂಬ ಅಭಿಪ್ರಾಯವೂ ಇದೆ.
ಅಂತೂ ಇಂತೂ ನಾವು ತಲಕಾಡು ಸೇರುವಾಗ 5 ಗಂಟೆಯಾಗಿತ್ತು. ಮನಸ್ಸಿನಲ್ಲಿ ಇಲ್ಲಿಯವರೆಗೆ ಬಂದು ಏನೂ ನೋಡದೆ ಹೋಗಬೇಕೇನೋ ಅನ್ನಿಸುತ್ತಿತ್ತು. ಗಂಗರಸರು, ಚೋಳರು, ಹೊಯ್ಸಳರು ಹೀಗೆ ಎಲ್ಲರ ಆಳ್ವಿಕೆಗೆ ಒಳಗಾದ ಈ ತಲಕಾಡಿನ ಬಗ್ಗೆ ಕೇಳಿ ತಿಳಿದ್ದಿದ್ದ ನಮಗೆ ಹಾಗೆ ಒಂದು ಸುತ್ತು ಬಂದು ಅಲ್ಲಿನ ಸ್ಥಳ ನೋಡುವ ಹಂಬಲ. ಎಲ್ಲಿ ಏನಿದೆ ತಿಳಿಯದು, ಹುಡುಕಿಕೊಂಡು ಹೋಗಲು ಸಮಯವಿಲ್ಲ. ಹಾಗೆ ಮುಂದಕ್ಕೆ ಹೋಗುತ್ತಿದ್ದಂತೆ ಗೈಡ್ ಒಬ್ಬರು ನಮ್ಮ ಸಹಾಯಕ್ಕೆ ಬಂದರು. ಮರಳು ಗುಡ್ಡೆಯ ಮೇಲೆ ಹತ್ತಿ ಪಾತಾಳೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಅವರಿಗೆ ಗೊತ್ತಿದ್ದ ವಿಷಯಗಳನ್ನು ಹೇಳುತ್ತ ಹೋದರು.
ಮರಳ ಅಡಿಯಲ್ಲಿದ್ದ ದೇವಸ್ಥಾನಗಳನ್ನು ಅಗೆದು ತೆಗೆದದ್ದು, ಇನ್ನೂ ಮರಳಿನ ಕೆಳಗೆ ಏನೆಲ್ಲ ಇರಬಹುದು... ಹೀಗೆ ಪಾತಾಳೇಶ್ವರ ದರ್ಶನ ಮಾಡಿ ಕೀರ್ತಿ ನಾರಾಯಣ ದೇವಸ್ಥಾನದ ಬಳಿ ಹೋಗುತ್ತಾ ದಾರಿಯಲ್ಲಿ ನಿಂತು ಒಂದು ಸ್ಥಳದಲ್ಲಿ ಕೆಳಗೆ ಕಾಲಿಗೆ ತಾಗುವಂತೆ ಇದ್ದ ಜಾಗದಲ್ಲಿ ಗತಕಾಲದ ಮನೆಯೋ ಅಥವಾ ದೇವಸ್ಥಾನವೋ ಇರಬಹುದೆಂಬ ಸಂಶೋಧಕರ ಶಂಕೆ ಇರುವುದಾಗಿ ತಿಳಿಸಿದರು. ಅವರು ತಲಕಾಡಿನ ಬಗ್ಗೆ ಹೇಳುತ್ತಿದ್ದ ವಿಷಯಕ್ಕೂ ಮತ್ತು ನಾವು ಓದಿ ತಿಳಿದ್ದಿದ್ದ ವಿಷಯಕ್ಕೂ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ಕೀರ್ತಿನಾರಾಯಣ ದೇವಸ್ಥಾನ ಅಗೆದು ತೆಗೆದ ಬಗ್ಗೆ ಮತ್ತು ಅದನ್ನು ಮತ್ತೆ ಬಿಚ್ಚಿ ಕಟ್ಟುವ ಪ್ರಯತ್ನ, ಪ್ರತಿಯೊಂದು ಭಾಗದ ಕಲ್ಲುಗಳನ್ನು ಆಯಾ ದಿಕ್ಕಿನಲ್ಲಿ ಇಟ್ಟಿರುವ ರೀತಿ ಎಲ್ಲವನ್ನೂ ನೋಡುತ್ತಾ ಬಂದೆವು. ಅಲ್ಲಿಂದ ಮರುಳೇಶ್ವರ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಿ ಮೇಲೆ ಬಂದೆವು.ಮರಳೇಶ್ವರನ ಸುತ್ತ ಇದ್ದ ಬಿಳಿ ಗೋಡೆ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಸಮಯದಲ್ಲಿ ಮತ್ತೆ ಕಟ್ಟಲಾಗುತ್ತದೆ. ಈ ಗೋಡೆಗಳು ಸಹ ಮರಳಿನಿಂದ ಮುಚ್ಚಿರುತ್ತವೆ ಎಂಬುದಾಗಿ ಆತ ತಿಳಿಸಿದರು. ಅಲ್ಲಿಂದ ಸುತ್ತು ಹಾಕಿ ಮರಳ ಗುಡ್ಡೆಯ ಮೇಲೆ ನಡೆದು ಕೀರ್ತಿ ನಾರಾಯಣ ದೇವಸ್ಥಾನದ ಮುಖಮಂಟಪದ ಹತ್ತಿರ ಹೋಗಿ ಅಲ್ಲಲ್ಲಿ ಬಿಚ್ಚಿ ಇಟ್ಟಿದ್ದ ಕಲ್ಲುಗಳನ್ನು ನೋಡುತ್ತಾ ಚೌಡೇಶ್ವರಿ ದೇವಸ್ಥಾನಕ್ಕೆ ಬಂದು ಚೌಡೇಶ್ವರಿ ದೇವಿಯ ದರ್ಶನ ಮಾಡಿ ವೈದ್ಯನಾಥೇಶ್ವರ ದೇವಸ್ಥಾನದ ಮುಂಬಾಗಿಲಿಗೆ ಬಂದೆವು. ಅಲ್ಲಿಯ ಅಂದದ ಕಲ್ಲಿನ ಕೆತ್ತನೆಯನ್ನೆಲ್ಲಾ ನೋಡಿ ಆನಂದಿಸುತ್ತಾ ವೈದ್ಯನಾಥೇಶ್ವರನನ್ನು ನೋಡಿ ಬಂದೆವು. ದೇವಸ್ಥಾನಕ್ಕೆ ಒಂದು ಸುತ್ತು ಬಂದು ಸುತ್ತಲಿನಲ್ಲಿದ್ದ ಸಣ್ಣ ಗುಡಿಗಳನ್ನು ನೋಡಿ ಕೈ ಮುಗಿದು ನಮಗೆ ಅಲ್ಲಿನ ವಿಶೇಷಗಳನ್ನು ತಮಗೆ ತಿಳಿದಂತೆ ತಿಳಿಸಿದ ಗೈಡ್ ಗೆ ವಂದನೆ ತಿಳಿಸಿ ಅಲ್ಲಿಂದ ಹೊರಟೆವು. ಅದಾಗಲೆ ರಾತ್ರಿಯ ಸಮಯವಾದ್ದರಿಂದ ಪಕ್ಕದಲ್ಲಿಯೆ ಹರಿಯುವ ಕಾವೇರಿಯನ್ನಾಗಲಿ ಮಾಲಂಗಿ ಮಡುವಾಗಲಿ ಹಾಗು ಮಲ್ಲಿಕಾರ್ಜುನ ದರ್ಶನ ವಾಗಲಿ ಮಾಡಲಾಗಲಿಲ್ಲ. ಇನ್ನೊಮ್ಮೆ ಬೇಗ ಹೊರಟು ಇಲ್ಲಿಗೆ ಬರಬೇಕೆಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ತಲಕಾಡನ್ನು ಬಿಟ್ಟೆವು.
ಮೈಸೂರಿಗೆ ಬರುವ ದಾರಿಯಂತು ಬಹಳ ಕೆಟ್ಟಿದೆ. ಹಳ್ಳಿಗರಂತೂ ಯಾವಾಗಲೂ ಹೀಗೆ ಎನ್ನುವ ಉದ್ಗಾರ. ತಲಕಾಡಿನ ವಿಷಯದಲ್ಲಿಯೂ ಹಾಗೆಯೆ. ಅದನ್ನು ಜೀರ್ಣೋದ್ದಾರ ಮಾಡುವ ಮನಸ್ಸು ಯಾರಿಗೂ ಇದ್ದಂತಿಲ್ಲ. ಆದಷ್ಟೂ ಹಣ ಗೋಚುವ ಈಗಿನ ರಾಜಕಾರಣಿಗಳಿಗೆ ಇದ್ಯಾವುದರ ಪರಿವೆಯೆ ಇದ್ದಂತಿಲ್ಲ.ತಲಕಾಡನ್ನು ನೋಡಿದ ಮೇಲೆ ನಮ್ಮ ನಾಡು ಎಷ್ಟೊಂದು ಸುಂದರ! ಏನೆಲ್ಲ ಐತಿಹಾಸಿಕ ಘಟನೆಗಳನ್ನು ತನ್ನಲ್ಲಿ ತುಂಬಿಕೊಂಡಿದೆ ಎನ್ನುವ ಅಲೋಚನೆ ಬರುತ್ತದೆ. ಆದರೆ ಹಾಳು ಹೊಂಡಗಳಾಗಿ ಮಾರ್ಪಟ್ಟ ರಸ್ತೆಗಳ್ಳಲ್ಲಿ ಪ್ರಯಾಣಿಸಿದಾಗ ಆಗುವ ತೊಂದರೆ ಅನುಭವಿಸಿದವರಿಗೇ ಗೊತ್ತು.
ಏನೇ ಇರಲಿ, ತಲಕಾಡನ್ನು ನೋಡಿದ ಅನುಭವವನ್ನು ನಾವು ಮೆಲುಕು ಹಾಕುತ್ತಿರುತ್ತೇವೆ.
*******************








