ಎನರ್ಜಿ ಡ್ರಿಂಕ್ ಹಿಂದಿನ ಸತ್ಯ
 •    •  
14965.jpg

                              -ಅರ್ಶದ್ ಹುಸೇನ್ ಎಂ.ಹೆಚ್, ದುಬೈ.

ತಕ್ಷಣ ಹೆಚ್ಚಿನ ಶಕ್ತಿ ನೀಡುವ ಎನರ್ಜಿ ಡ್ರಿಂಕ್ ಪಾನೀಯಗಳು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಂತೆಯೇ ಆ ಪೇಯದಲ್ಲಿರುವ ಋಣಾತ್ಮಕ ಅಂಶಗಳನ್ನು ಅಮೇರಿಕಾದ ಜಾನ್ ಹಾಪ್ಕಿನ್ಸ್ ಮೆಡಿಕಲ್ ಇನ್ಸಿಟಿಟ್ಯೂಶನ್ ಬಹಿರಂಬಪಡಿಸಿದೆ.  ಇವುಗಳ ಸೇವನೆಯಿಂದ ಶರೀರಕ್ಕೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಕೆಫೀನ್ ದೇಹಕ್ಕೆ ಸೇರಿ ಹೆಚ್ಚಿನ ಹಾನಿಯುಂಟುಮಾಡುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.

ಇದರಲ್ಲಿ ಸಾಮಾನ್ಯವಾಗಿ ಒಂದು ಕಪ್ ಕಾಫಿಯಲ್ಲಿರುವುದಕ್ಕಿಂತಲೂ ಹತ್ತು ಪಟ್ಟು ಹೆಚ್ಚಿನ ಕೆಫೀನ್ ಇದೆ  ಅಥವಾ ಒಟ್ಟು ಹದಿನಾಲ್ಕು ಕ್ಯಾನ್ ಕೋಕಾ ಕೋಲಾದಲ್ಲಿರುವಷ್ಟಿದೆ.  ಆದರೆ ಈ ಎನರ್ಜಿ ಡ್ರಿಂಕ್ ಗಳ ಲೇಬಲ್ ಗಳಲ್ಲಿ ಇದರ ಯಾವುದೇ ಮಾಹಿತಿ ಇರುವುದಿಲ್ಲ ಅಥವಾ ಇದರ ಸೇವನೆಯಿಂದ ಉಂಟಾಗುವ ಪರಿಣಾಮಗಳನ್ನೂ ವಿವರಿಸಿರುವುದಿಲ್ಲ ಎಂದು ಸಂಸ್ಥೆಯ ಸಂಶೋಧಕರಾದ ಡಾ. ರೋನಾಲ್ಡ್ ಗ್ರಿಫಿತ್ಸ್, ಪಿ.ಎಚ್.ಡಿ. ಅವರು ತಿಳಿಸಿದ್ದಾರೆ.

ಎನರ್ಜಿ ಡ್ರಿಂಕ್ ಪೇಯಗಳು ಹೆಚ್ಚಾಗಿ ಯುವಜನತೆಯನ್ನೇ ದೃಷ್ಟಿಯಲ್ಲಿರಿಸಿಕೊಂಡು ಮಾರುಕಟ್ಟೆಗೆ ಬಿಡುವುದರಿಂದ ಅವುಗಳ ಜಾಹೀರಾತುಗಳೂ ಹೆಚ್ಚಿನ ಶಕ್ತಿ ನೀಡುವಂತೆಯೇ ಬಿಂಬಿಸಲಾಗುತ್ತದೆ.  ೨೦೦೭ ರಲ್ಲಿ ಒಟ್ಟು ೪೯೬ ವಿದ್ಯಾರ್ಥಿಗಳ ಮೇಲೆ ಸಂಸ್ಥೆ ಸಂಶೋಧನೆ ನಡೆಸಿದ್ದು ಅವರಲ್ಲಿ ೨೯ ಶೇಖಡಾ ವಿದ್ಯಾರ್ಥಿಗಳಿಗೆ ನಡುಕ ಹಾಗೂ ಮಾನಸಿಕ ನಿಃಶಕ್ತಿ, ೧೦ ಶೇಖಡಾ ವಿದ್ಯಾರ್ಥಿಗಳು ಹೃದಯಾತಿಸ್ಪಂದನ (ಪಾಲ್ಪಿಟೇಶನ್) ತೊಂದರೆಗಳಿಂದ ಬಳಲುತ್ತಿರುವುದು ಧೃಡಪಟ್ಟಿದೆ.  ಇವರಲ್ಲಿ ಎನರ್ಜಿ ಡ್ರಿಂಕ್ ಹಾಗೂ ಆಲ್ಕೋಹಾಲ್ ಸೇವಿಸಿದ ೨೭ % ವಿದ್ಯಾರ್ಥಿಗಳಲ್ಲಿ ಒಂದಲ್ಲಾ ಒಂದು ತೊಂದರೆ ಕಂಡುಬಂದಿದೆ. ಅಲ್ಪಪ್ರಮಾಣದ ಕೆಫೀನ್ ಉತ್ತೇಜನಕಾರಿಯಾದರೂ ಹತ್ತುಪಟ್ಟು ಹೆಚ್ಚಿನ ಕೆಫೀನ್ ಮಾರಕವಾಗಿದೆ ಎಂದು ಸಂಶೋಧನೆ ತಿಳಿಸುತ್ತದೆ. ಇದರಿಂದ ನರದೌರ್ಬಲ್ಯ, ನಿದ್ರೆ ಬರದಿರುವಿಕೆ, ತಳಮಳ ಹೆಚ್ಚುವಿಕೆ, ಚಡಪಡಿಸುವಿಕೆ, ಕರುಳುಬೇನೆ, ನಡುಕ, ಹೃದಯಬಡಿತದಲ್ಲಿ ಏರಿಕೆ (ಟ್ಯಾಖಿಕಾರ್ಡಿಯಾ), ವಿಶ್ರಾಂತಿರಹಿತ ಕ್ಷೋಭೆ (ಸೈಕೋಮೋಟಾರ್ ಅಜಿಟೇಶನ್) ಹಾಗೂ ಅಪರೂಪವಾಗಿ ಸಾವು ಸಂಭವಿಸುವ ಅಪಾಯವಿರುತ್ತದೆ.

ಎನರ್ಜಿ ಡ್ರಿಂಕ್ ತಾತ್ಕಾಲಿಕವಾಗಿ ಉತ್ತೇಜನ ನೀಡಿದರೂ ಶಾಶ್ವತ ಪರಿಣಾಮಗಳು ಭೀಕರವಾಗಿವೆ. ಹಾಗಾಗಿ ಇವುಗಳನ್ನು ವರ್ಜಿಸುವುದೇ ಲೇಸು.

ಕೃಪೆ: ಜಾನ್ ಹಾಪ್ಕಿನ್ಸ್ ಮೆಡಿಕಲ್ ಇನ್ಸಿಟಿಟ್ಯೂಶನ್ ಪತ್ರಿಕಾ ಪ್ರಕಟಣೆ

Syndicate

Syndicate content