ಪರಸ್ಪರ ಸಹಾಯ
-ಎಮ್.ಎಸ್.ರಾಮಚಂದ್ರ,ಬೆಂಗಳೂರು.
ಇದು ಬಹಳ ವರುಷಗಳ ಹಿಂದೆ ನಡೆದ ಕಥೆ. ನಾನು ಆಗ ಹಾಸನದ ಹೈಸ್ಕೂಲ್ ನಲ್ಲಿ ಓದುತ್ತಿದ್ದೆ. ಆ ಸ್ಕೂಲು , ವಾರದ ಜಾತ್ರೆ ನಡೆಯುವ ಮೈದಾನದ ಪಕ್ಕದಲ್ಲಿತ್ತು. ಆದುದರಿಂದ ಸಂತೆಯ ದಿನ ನಮಗೆ ಬೆಳಗಿನ ಸ್ಕೂಲು. ೧೦.೩೦ ಘಂಟೆಗೆಲ್ಲಾ ಮುಗಿದು ಹೋಗುತ್ತಿತ್ತು. ಅಷ್ಟೊತ್ತಿಗೆಲ್ಲಾ ಸಂತೆ ಸಾಕಷ್ಟು ಕೂಡಿರುತ್ತಿತ್ತು.
ನಾನು ಸ್ಕೂಲ್ ಬಿಟ್ಟಮೇಲೆ ಸಂತೆಯಲ್ಲಿ ಸ್ವಲ್ಪಹೊತ್ತು ಓಡಾಡಿ ಆಮೇಲೆ ಮನೆಗೆ ಹೋಗುವ ಪದ್ದತಿ. ಆ ದಿನವೂ ಸಂತೆಯಲ್ಲಿ ಓಡಾಡುತ್ತಿದ್ದಾಗ ಅಲ್ಲೊಬ್ಬ ಮಂತ್ರವಾದಿ ತನ್ನ ವಿದ್ಯೆಯನ್ನು ತೋರಿಸಲು ಅಣಿಯಾಗುತ್ತಿದ್ದ. ಒಂದು ಬಟ್ಟೆಯನ್ನು ನೆಲದಮೇಲೆ ಹಾಸಿ ಅದರಮೇಲೆ ಒಂದು ತಲೆಬುರುಡೆಯನ್ನು ಇಟ್ಟ. ಅದರ ಸುತ್ತಲೂ ಕೆಲವು ಮೂಳೆಗಳನ್ನು ಇಟ್ಟು , ಬುಡಬುಡಿಕೆಯನ್ನು ಬಾರಿಸಲು ಪ್ರಾರಂಭಿಸಿದ. ಜನ ಅವನ ಸುತ್ತ ನೆರೆಯಲಾರಂಭಿಸಿದರು. ನನಗೆ ಇಂತಹವುಗಳೆಂದರೆ ಬಲು ಭಯ. ಆದರೂ ಕುತೂಹಲ ತಡಿಯಲಾಗದೆ ನಾನೂ ಆ ಗುಂಪಿನಲ್ಲಿ ಸೇರಿದೆ. ಸಾಕಷ್ಟು ಜನ ಸೇರಿದ ನಂತರ ಆ ಮಂತ್ರವಾದಿ ಆ ತಲೆ ಬುರುಡೆಯ ಸುತ್ತ ಒಂದು ಗೆರೆಯನ್ನು ಹಾಕಿದ. ಮೂಳೆಯಿಂದ ತಲೇಬುರುಡೆ ಸುತ್ತಲೂ ಒಂದು ಸುತ್ತು ಹಾಕಿ ಬಾಯಿಯಲ್ಲಿ ಏನೋ ಗುಣಗುಣಿಸಲು ತೊಡಗಿದ. ಅಗಾಗ ಘಟ್ಟಿಯಾಗಿ ಕೂಗಿಕೊಳ್ಳುತ್ತಿದ್ದ. ಜೋರಾಗಿ ಬುಡುಬುಡಿಕೆ ಬಾರಿಸುತ್ತಿದ್ದ. ತನ್ನ ಚೀಲದಿಂದ ಸ್ವಲ್ಪ ಬೂದಿ ತೆಗೆದು ನೆಲದಮೇಲೆಲ್ಲಾ ಉದರಿಸಿದ. ಒಂದು ನಿಂಬೆ ಹಣ್ಣನ್ನು ಕತ್ತರಿಸಿ ತಲೇಬುರುಡೆಯಕಡೆ ಎಸೆದ. ಜನರೆಲ್ಲಾ ಕುತೂಹಲದಿಂದ ನೋಡುತ್ತಿದ್ದರು. ನನಗೆ ಹೆದರಿಕೆಯಾದರೂ ಏನು ಮಾಡಲೂ ತೋಚದೆ ಹಾಗೆ ನಿಂತಿದ್ದೆ. ಆ ಮೇಲೆ ಆ ಮಂತ್ರವಾದಿಯು ಜನರನ್ನು ಉದ್ದೇಶಿಸಿ ಮಾತನಾಡಲು ಪ್ರಾರಂಬಿಸಿದ. ತಾನು ಕೊಳ್ಳೆಗಾಲದ ಒಬ್ಬ ದೊಡ್ಡ ಮಂತ್ರವಾದಿಯ ಬಳಿ ಮಾಯಾ ಮಂತ್ರ ವಿದ್ಯೆಯನ್ನು ಕಲಿತಿರುವುದಾಗಿಯೂ , ಅನೇಕ ಜನರ ಮೇಲೆ ತನ್ನ ವಿದ್ಯೆಯನ್ನು ಪ್ರಯೋಗಿಸಿರುವುದಾಗಿಯೂ , ಅನೇಕರ ಮೇಲೆ ಬಂದಿದ್ದ ಭೂತ ಪಿಶಾಚಿಗಳನ್ನು ಬಿಡಿಸಿರುವುದಾಗಿಯೂ ಹೇಳಿಕೊಂಡ. ತನ್ನ ಶಕ್ತಿಯನ್ನು ಯಾರಾದರೂ ಪರೀಕ್ಷಿಸುವ ದೈರ್ಯವಿದ್ದರೆ ಮುಂದೆ ಬರುವಂತೆ ಸವಾಲು ಎಸೆದ. ಆಗ ನನ್ನ ಕಾಲ ಬುಡದಲ್ಲೇ ಸುಮ್ಮನೇ ಕುಳಿತು ಮಂತ್ರವಾದಿಯ ಮಾತನ್ನು ಕೇಳುತ್ತಿದ್ದವನು, ತಾನು ಸವಾಲನ್ನು ಒಪ್ಪಿಕೊಳ್ಳುವುದಾಗಿಯೂ, ಮಂತ್ರವಾದಿ ಅವನ ವಿದ್ಯೆಯನ್ನು ತನ್ನ ಮೇಲೆ ಪ್ರಯೋಗಿಸಬಹುದೆಂದು ಹೇಳಿ ಮುಂದೆ ಹೋಗಿ ಕುಳಿತು, ತನ್ನ ತಲೆಗೆ ಸುತ್ತಿದ್ದ ಟವಲನ್ನು ಬಿಚ್ಚಿದ. ಆಗ ನಾನು ಅವನನ್ನು ಸರಿಯಾಗಿ ನೋಡಿದೆ . ಅವನು ನಮ್ಮೂರಿನ ಮಂತ್ರವಾದಿ . ಅವನು ಅಲ್ಲಲ್ಲಿ ತನ್ನ ವಿದ್ಯೆ ಪ್ರದರ್ಶಿಸುವುದನ್ನು ನೋಡಿದ್ದೆ. ಅವನು ನನ್ನ ಕಾಲಬಳಿ ಅದೂ ನನಗೆ ತಾಗುವಂತೆ, ನನಗೆ ಮೈಯೆಲ್ಲಾ ಬೆವರಿತು. ಅಲ್ಲಿರಲೂ ಹೆದರಿಕೆ , ಹೊರಕ್ಕೆ ಹೋಗಲೂ ಹೆದರಿಕೆ. ಸ್ಥಬ್ದನಾಗಿ ನಿಂತುಬಿಟ್ಟಿದ್ದೆ. ನಮ್ಮೂರಿನ ಜನಗಳೆಲ್ಲಾ , ತಮ್ಮೂರಿನ ಮಂತ್ರವಾದಿಯನ್ನು ಗುರುತಿಸಿ ಸಂತೋಷದಿಂದ ಚಪ್ಪಾಳೆ ತಟ್ಟಿದರು . ಹೊರಗಿನ ಮಂತ್ರವಾದಿ ನಮ್ಮೂರಿನವನ ಮೇಲೆ ತನ್ನ ಪ್ರಯೋಗವನ್ನು ಮೊದಲು ಮಾಡಿದ. ಬಾಯಲ್ಲಿ ಎನನ್ನೋ ಗುಣಗುಣಿಸುತ್ತಾ ನಮ್ಮವನ ಮೇಲೆ ಸ್ವಲ್ಪ ಬೂದಿಯನ್ನು ಎಸೆದ. ನಮ್ಮೂರಿನವನು ತನಗೆ ಏನೂ ಆಗದದಂತೆ ನಗುತ್ತಾ ಕುಳಿತಿದ್ದ. ಆಗಾಗ ತಾನೂ ಏನನ್ನೋ ಗುಣಗುಣಿಸುತ್ತಿದ್ದ. ನನ್ನ ಪಕ್ಕದಲ್ಲಿ ನಿಂತವರೊಬ್ಬರು , ನಮ್ಮೂರಿನವನು ಹೊರಗಿನವನ ಮಂತ್ರಗಳಿಗೆ ತಡೆ ಹಾಕುತ್ತಿದ್ದಾನೆ ಎಂದು ಪಿಸುಗುಟ್ಟಿದರು.
ತನ್ನ ಮಂತ್ರಗಳೇನೂ ಫಲಕಾರಿಯಾಗದಿದ್ದುದಕ್ಕೆ ಹೊರಗಿನ ಮಂತ್ರವಾದಿ ಕೋಪದಿಂದ ಇನ್ನಷ್ಟು ಜೋರಾಗಿ ಪ್ರಯೋಗಿಸಲು ಪ್ರಾರಂಬಿಸಿದ. ಆದರೆ ನಮ್ಮೂರಿನವನು ನಗುತ್ತಲೇ ಕುಳಿತಿದ್ದ. ಆದರೆ ಬಾಯಲ್ಲಿ ಗುಣಗುಣಿಸುವುದನ್ನು ಬಿಡಲಿಲ್ಲ. ಹೆಚ್ಚು ಹೆಚ್ಚು ಜನ ಗುಂಪಿಗೆ ಸೇರಿದರು. ಹೀಗೆ ಸ್ವಲ್ಪ ಕಾಲ ಹೊರಗಿನವನ ಪ್ರಯತ್ನಗಳಾದಮೇಲೆ ನಮ್ಮೂರಿನವನು ತನ್ನ ಕೈಚೀಲದಿಂದ ಒಂದು ಸಣ್ಣ ಕೋಲನ್ನು ಹೊರಕ್ಕೆ ತೆಗೆದು, ಅದರಿಂದ ತಾನು ಕುಳಿತಿದ್ದ ಜಾಗದ ಮುಂದೆ ಒಂದು ದೊಡ್ಡ ಸೊನ್ನೆ ಸುತ್ತಿ ಏನೋ ಮಂತ್ರವನ್ನು ಹೇಳುತ್ತಾ ಸೊನ್ನೆಯ ಮಧ್ಯೆ ತನ್ನ ಕೋಲಿನಿಂದ ಕುಟ್ಟಿದ. ಆಗ ಆ ಹೊರಗಿನ ಮಂತ್ರವಾದಿಯು ಕೈಕಾಲುಗಳನ್ನು ತಿರುಚಿಕೊಂಡು ವಿಕಾರವಾಗಿ ಕಿರುಚಿಕೊಳ್ಳುತ್ತಾ ಆ ಸೊನ್ನೆಯಲ್ಲಿ ಬಿದ್ದ. ಅವನ ಕಣ್ಣುಗುಡ್ಡೆಗಳು ಮೇಲಕ್ಕೆ ಸಿಕ್ಕಿಕೊಂಡಿದ್ದವು. ಬಾಯಲ್ಲಿ ನೋರೆ ಬರುತ್ತಿತ್ತು. ಮೈಯೆಲ್ಲಾ ನಡುಗುತ್ತಿತ್ತು. ಅವನ ಅವಸ್ಥೆ ನೋಡಲು ಭಯಂಕರವಾಗಿತ್ತು. ನನಗಂತೂ ಭಯದಿಂದ ಅಳುವೇ ಬರುವಂತಾಗಿತ್ತು. ಅವನು ಎಲ್ಲಿ ಸತ್ತು ಹೋಗುತ್ತಾನೋ ಎಂದು ಹೆದರಿಕೆಯಾಗುತ್ತಿತ್ತು. ಅಲ್ಲಿ ನೆರೆದಿದ್ದವರಲ್ಲಿ ಒಬ್ಬರು, ನಮ್ಮೂರಿನವನಿಗೆ ಆ ಮಂತ್ರವಾದಿಯನ್ನು, ಆ ಸ್ಥಿತಿಯಿಂದ ಬಿಡಿಸೆಂದು ಕೇಳಿಕೊಂಡರು. ಆಗ ನಮ್ಮೂರಿನವನು ನಗುತ್ತಾ ಏನೋ ಮಂತ್ರವನ್ನು ಹೇಳಿ ತನ್ನ ಕೋಲನ್ನು ಅವನ ಸುತ್ತಾ ತಿರುಗಿಸಿದ. ಆ ಮಂತ್ರವಾದಿಯ ನರಳಾಟ ನಿಂತು, ಸ್ವಲ್ಪ ಹೊತ್ತಿನಲ್ಲಿ ಎದ್ದು , ನಮ್ಮೂರಿನವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ , ಮಾತಾಡದೆ ತನ್ನ ಸಾಮಾನುಗಳನ್ನು ಗಂಟು ಕಟ್ಟಿಕೊಂಡು ತಲೆ ತಗ್ಗಿಸಿಕೊಂಡು ಅಲ್ಲಿಂದ ಹೊರಟು ಹೋದ. ನನಗಂತೂ ನಮ್ಮ ಊರಿನವನಮೇಲೆ ಬಹಳ ಹೆಮ್ಮೆಯೂ ಆಯಿತೆನ್ನಿ. ನಮ್ಮೂರಿನವನು ನಗುತ್ತಾ, ಇಂತಾ ಮಂತ್ರವಾದಿಗಳನ್ನು ತಾನು ಬಹಳಷ್ಟು ನೋಡಿದ್ದೀನೆಂದು ಹೇಳಿ, ತನ್ನ ಚೀಲದಿಂದ ಕೆಲವು ತಾಯಿತಗಳನ್ನು ಹೊರತೆಗೆದು , ಅದನ್ನು ಮಕ್ಕಳ ಕೊರಳಿಗೆ ಅಥವಾ ಕೈಗೆ ಕಟ್ಟಿದರೆ , ಅವರಿಗೆ ಯಾವ ರೀತಿಯ ಭೂತ ಪಿಶಾಚಿಗಳ ಕಾಟವಾಗಲೀ ಅಥವಾ ಮಾಟ ಮದ್ದುಗಳ ಭಯವಾಗಲೀ ಇರುವುದಿಲ್ಲವೆಂದು ಹೇಳಿ ಇಷ್ಟವುಳ್ಳವರು ಕೊಳ್ಳಬಹುದೆಂದು ಹೇಳಿದ. ಅಲ್ಲಿ ನೆರೆದಿದ್ದವರಲ್ಲಿ ಬಹಳಷ್ಟು ಜನ ಒಂದು ತಾಯಿತಕ್ಕೆ ಎರಡಾಣೆಯಂತೆ ಕೊಂಡರು. ನನಗೂ ಕೊಳ್ಳಬೇಕೆಂದು ಇಷ್ಟವಾದರೂ, ಜೇಬು ಖಾಲಿ ಇದ್ದುದರಿಂದ ಸುಮ್ಮನೇ ಹೊರಟುಬರಬೇಕಾಯಿತು . ನಾನು ಈ ವಿಷಯವನ್ನು ಬಹಳದಿನದವರೆಗೆ ನನ್ನ ಸ್ನೇಹಿತರಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆ. ಕಾಲ ಕಳೆದಂತೆ ಈ ವಿಷಯ ನನ್ನ ತಲೆಯಿಂದ ದೂರವಾಗತೊಡಗಿತು.
ಇದು ನಡೆದು ಐದು ಆರು ತಿಂಗಳಾಗಿರಬಹುದು. ಹೊಳೇನರಸೀಪುರದ ಜಾತ್ರೆ ನೋಡಲೆಂದು ನಮ್ಮ ಬಂದುಗಳ ಮನೆಗೆ ಹೋಗಿದ್ದೆವು. ಅಲ್ಲಿ ನನ್ನ ವಯಸ್ಸಿನ ಒಬ್ಬ ಹುಡುಗ ನನ್ನನ್ನು ಜಾತ್ರೆ ನೋಡಲು ಕರೆದುಕೊಂಡು ಹೋದ. ಅಲ್ಲಿ ನಮ್ಮ ಊರಿನ ಮಂತ್ರವಾದಿ ತನ್ನ ವಿದ್ಯೆ ಪ್ರದರ್ಶಿಸುತ್ತಿದುದನ್ನು ನೋಡಿದ ಕೂಡಲೇ ಸಂತೋಷದಿಂದ , ನನ್ನ ಜೊತೆ ಹುಡುಗನನ್ನು ಎಳೆದುಕೊಂಡು ಹೋಗಿ ನೋಡಲು ನಿಂತೆ. ನಮ್ಮ ಊರಿನ ಮಂತ್ರವಾದಿ ತನ್ನ ವಿದ್ಯಾಪಾಂಡಿತ್ಯವನ್ನುಹೇಳಿಕೊಂಡು , ತನ್ನನ್ನು ಎದುರಿಸಬಲ್ಲವರಾರಾದರು ಇದ್ದರೆ ಮುಂದೆ ಬರುವಂತೆ ಸವಾಲು ಹಾಕಿದ. ಆಗ ಅಲ್ಲಿ ನೆರೆದಿದ್ದವರಲ್ಲಿ ಒಬ್ಬ ಆ ಸವಾಲನ್ನು ಎದರಿಸುವುದಾಗಿ ಮುಂದೆ ಬಂದ. ಅವನನ್ನು ನೋಡಿದ ಕೂಡಲೇ ನಾನು ಅವನನ್ನು ಎಲ್ಲೋ ನೋಡಿದಂತೆನಿಸಿತು. ನನ್ನ ಜೊತೆಯ ಹುಡುಗ ಅವನು ತಮ್ಮ ಊರಿನ ಮಂತ್ರವಾದಿಯೆಂದು ಜಂಬದಿಂದ ಹೇಳಿಕೊಂಡ. ಆಗ ನನಗೆ ಅವನ ಗುರುತು ಸಿಕ್ಕಿತು. ಅವನು ನಮ್ಮ ಊರಿನ ಸಂತೆಯಲ್ಲಿ ನಮ್ಮೂರಿನ ಮಂತ್ರವಾದಿಗೆ ಸೋತುಹೋದ ಮಂತ್ರವಾದಿಯೆಂದು ನೆನಪಾಯಿತು. ಆಮೇಲೆ ಅಲ್ಲಿ ನಡೆದಿದ್ದು ನಮ್ಮೂರಿನಲ್ಲಿ ನಡೆದುದರ ಪುನರಾವರ್ತನೆ. ಆದರೆ ಪಾತ್ರದಾರಿಗಳು ಮಾತ್ರ ಅದಲು ಬದಲು. ನಮ್ಮೂರಿನವನು ಸೋತು ತಲೆ ತಗ್ಗಿಸಿಕೊಂಡು ಹೊರಟು ಹೋದ. ಅವರೂರಿನವನಿಂದ ತಾಯಿತಗಳನ್ನು ಕೊಳ್ಳಲು ಜನ ಮುಗಿಬಿದ್ದರು.
ನಾನು ಅಲ್ಲಿಂದ ಕಾಲು ತೆಗೆದಾಗ ಮೊದಲಿಗಿಂತಾ ಸ್ವಲ್ಪ ಹೆಚ್ಚಿನ ತಿಳುವಳಿಕೆಯುಳ್ಳವನಾಗಿದ್ದೆ.
ನೋಡಿದಿರಾ , ಪರಸ್ಪರ ಸಹಾಯದಿಂದ ಇಬ್ಬರೂ ಲಾಭ ಮಾಡಿಕೊಂಡರಲ್ಲವೇ . ಹೀಗೆ ಇತರ ವೃತ್ತಿಯವರೂ ತಮ್ಮ ತಮ್ಮಲ್ಲೇ ಕಚ್ಚಾಡದೆ ಪರಸ್ಪರ ಸಹಕರಿಸಿದರೆ ಬೇಕಾದಷ್ಟು ಲಾಭ ಮಾಡಿಕೊಳ್ಳಬಹುದಲ್ಲವೇ? .....ನೀವೇನಂತೀರಿ?
ಜ್ಞಾಪಿಸಿಕೊಂಡವರು :
ಎಮ್.ಎಸ್.ರಾಮಚಂದ್ರ,
೨೪, ೨ನೇ ಅಡ್ಡ ರಸ್ತೆ, ಎಲ್.ಐ.ಸಿ ಕಾಲೋನಿ,
ಜಿ.ಹೆಚ್ ಲೇ-ಔಟ್, ೩ನೇ ಬ್ಲಾಕ್ ಪೂರ್ವ , ಜಯನಗರ,
ಬೆಂಗಳೂರು - ೫೬೦ ೦೧೧.
ದೂರವಾಣಿ :೨೬೬೩೦೬೦೩









