ಮಂದರೆಯ ಕತೆ
 •    •  
ramayana.jpeg


                                  -ಎಮ್.ಎಸ್.ರಾಮಚಂದ್ರ,

          ಅಂದು ಅಯೋದ್ಯೆಯಲ್ಲಿ ರಾಮನು ಯುವರಾಜನಾಗಿ ಪಟ್ಟಾಬಿಷಿಕ್ತನಾಗಬೇಕಿದ್ದ ದಿನದ ಹಿಂದಿನ ಸಾಯಂಕಾಲ. ನಗರದಲ್ಲಿ ಸಂಭ್ರಮವೋ ಸಂಭ್ರಮ. ನಗರವೆಲ್ಲಾ ತಳಿರು ತೋರಣಗಳಿಂದ ಕಂಗೊಳಿಸುತ್ತಿದೆ. ಜನರ ಸಡಗರವಂತೂ ಹೇಳತೀರದು. ಆದರೆ ರಾಣಿ ಕೈಕೇಯಿಯ ಮುದಿ ದಾಸಿಯಾದ  ಮಂದರೆಯ ಮನಸ್ಸಿನಲ್ಲಿ ಅದೇನೋ  ಅಸೂಯೆ, ಅತೃಪ್ತಿ.  ಅವಳಿಗೆ ರಾಮನು ಯುವರಾಜನಾಗುವುದು ಬೇಕಿಲ್ಲ. ಅದನ್ನು ಸಾದಿಸಲು ಮನಸ್ಸಿನಲ್ಲೇ ಒಂದು ಪಥಕವನ್ನು ತಯಾರಿಸಿಕೊಂಡು ರಾಣಿ ಕೈಕೇಯಿಯ ಅಂತಃಪುರದ ಕಡೆಗೆ ಸಾಗುತ್ತಾಳೆ.

                     ಇದು ನಮಗೆಲ್ಲಾ ತಿಳಿದಿರುವ ರಾಮಾಯಣ.

                                ಆದರೆ

        ರವಿ ಕಾಣದ್ದನ್ನು ಕವಿ ಕಂಡ ಎಂದು ನಮ್ಮಲ್ಲಿ ಒಂದು ನಾಣ್ಣುಡಿ ಇದೆ. ನನ್ನ ತಂದೆ ಮಧುಗಿರಿ ಶಾಮಣ್ಣನವರು ಈ ಸನ್ನಿವೇಶವನ್ನು , ತಮ್ಮ " ಮಂದರೆಯ ಕನಸು" ಎನ್ನುವ ಒಂದು ಅಪ್ರಕಟಿತ ಕಾವ್ಯ ನಾಟಕದಲ್ಲಿ ಕಂಡ ಪರಿ ಇದು.

             ಅಂದು ಅಯೋದ್ಯೆಯಲ್ಲಿ ರಾಮನು ಯುವರಾಜನಾಗಿ ಪಟ್ಟಾಬಿಷಿಕ್ತನಾಗಬೇಕಿದ್ದ ದಿನದ ಹಿಂದಿನ ಸಾಯಂಕಾಲ. ನಗರದಲ್ಲಿ ಸಂಭ್ರಮವೋ ಸಂಭ್ರಮ. ನಗರವೆಲ್ಲಾ ತಳಿರು ತೋರಣಗಳಿಂದ ಕಂಗೊಳಿಸುತ್ತಿದೆ. ಜನರ ಸಡಗರವಂತೂ ಹೇಳತೀರದು. ಆ ಸಮಯದಲ್ಲಿ ರಾಮನು , ತಾನು ಯುವರಾಜನಾದಮೇಲೆ ಪ್ರಜೆಗಳಿಗಾಗಿ ತನ್ನ ಕರ್ತವ್ಯವನ್ನು ಕುರಿತು ಮತ್ತು ಈ ಸಂತೋಷದ ಸಮಯದಲ್ಲಿ ಅಲ್ಲಿರದ ತನ್ನ ತಮ್ಮಂದಿರಾದ ಭರತ ಮತ್ತು ಶತ್ರುಙ್ನರನ್ನು ಕುರಿತು ಯೋಚಿಸುತ್ತಾ , ಅರಮನೆಯ ಉದ್ಯಾನವನದಲ್ಲಿ ಶಥಪಥ ತಿರುಗುತ್ತಿರುತ್ತಾನೆ. ಆಗ ಇದ್ದಕ್ಕಿದ್ದಂತೆ ಇಬ್ಬರು ತಪಸ್ವಿಗಳು ಅವನ ಮುಂದೆ ಪ್ರತ್ಯಕ್ಷರಾಗುತ್ತಾರೆ. ಆ ಸಮಯದಲ್ಲಿ ಅವರ ಆಗಮನದಿಂದ ಚಕಿತನಾದ ರಾಮನು , ಅವರಿಗೆ ವಂದಿಸಿ ಅವರ ಯೋಗಕ್ಷೇಮವನ್ನು ಮತ್ತು  ಬಂದ ಕಾರಣವನ್ನು ವಿಚಾರಿಸುತ್ತಾನೆ. ಆಗ ಅವರು ದಕ್ಷಿಣದ ದಂಡಕಾರಣ್ಯದಲ್ಲಿ ರಾಕ್ಷಸರಿಂದ ತಮಗೆ ಆಗುತ್ತಿರುವ ಉಪಟಳವನ್ನು ವಿವರಿಸಿ , ರಾಮನು ಕೂಡಲೇ ಅಲ್ಲಿಗೆ ಬಂದು ರಾಕ್ಷಸರನ್ನು ಸಂಹರಿಸಿ , ತಮ್ಮ ಯಜ್ಞಯಾಗಾದಿಗಳಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕೆಂದು ಕೇಳುತ್ತಾರೆ.  ಅದಕ್ಕೆ ರಾಮನು , ಮಾರನೆಯದಿನದ ತನ್ನ ಯುವರಾಜ ಪಟ್ಟಾಬಿಷೇಕದ ವಿಷಯವನ್ನು ಅವರಿಗೆ ತಿಳಿಸಿ,  ಅದಾದನಂತರ ತಾನು ಅಲ್ಲಿಗೆ ಬಂದು ಅವರ ಕಷ್ಟಗಳನ್ನು ಪರಿಹರಿಸುವುದಾಗಿ ತಿಳಿಸುತ್ತಾನೆ. ಆದರೆ ಆ ತಪಸ್ವಿಗಳು ರಾಮನಿಗೆ , ಅಲ್ಲಿರುವ ರಾಕ್ಷಸರನ್ನೆಲ್ಲಾ ನಿರ್ಮೂಲಮಾಡುವುದಕ್ಕೆ ಅನೇಕ ವರುಷಗಳೇ ಬೇಕಾಗುವುದೆಂದೂ , ರಾಮನು ಯುವರಾಜನಾಗಿ ಪಟ್ಟಾಭಿಷಿಕ್ತನಾದರೆ , ಅಯೋಧ್ಯೆಯ ಪ್ರಜೆಗಳ ಹಿತವೇ ಅವನ ಪ್ರಥಮ ಕರ್ತವ್ಯವಾಗುವುದೆಂದೂ , ರಾಜಧಾನಿಯನ್ನು ಬಿಟ್ಟು ವರ್ಷಾನುಗಟ್ಟಲೆ ಕಾಡಿಗೆ ಹೋಗುವುದಕ್ಕೆ ದಶರಥನಾಗಲೀ ಅಥವಾ ಪ್ರಜೆಗಳಾಗಲೀ ಒಪ್ಪುವುದಿಲ್ಲವೆಂದೂ ತಿಳಿಯಹೇಳುತ್ತಾರೆ. ಆ ಮಾತಿನಲ್ಲಿರುವ  ಸತ್ಯವನ್ನು ಅರಿತು, ತಾನು ಕೂಡಲೇ ಕಾಡಿಗೆ ಬಂದು ರಾಕ್ಷಸರನ್ನು ನಿರ್ಮೂಲಮಾಡುವುದಾಗಿ ಅವರಿಗೆ ಮಾತು ಕೊಟ್ಟು ಅವರನ್ನು ಬೀಳ್ಕೊಡುತ್ತಾನೆ.  ಅವರು ತೆರಳಿದನಂತರ ರಾಮನು ಈ ಸಂದರ್ಭದಲ್ಲಿ ತನ್ನ ತಂದೆ ತಾಯಿಯರನ್ನೂ, ಮಡದಿ ಸೀತೆಯನ್ನೂ ಹೇಗೆ ಒಪ್ಪಿಸುವುದೆಂದು ಯೋಚಿಸುತ್ತಾ ನಡೆಯುತ್ತಿರಲಾಗಿ ಅವನಿಗೆ ದೂರದಲ್ಲಿ , ಮಾರನೆಯದಿನದ ಸಮಾರಂಭಕ್ಕೆ ಬೇಕಾಗುವ ಯಾವುದೋ ಸಾಮಾನನ್ನು ತಲೆಯಮೇಲೆ ಹೊತ್ತು ಸಡಗರದಿಂದ ಅರಮನೆಯತ್ತ ನಡೆಯುತ್ತಿರುವ , ತನ್ನನ್ನು ಚಿಕ್ಕಂದಿನಲ್ಲಿ ಎತ್ತಿ ಆಡಿಸಿದ ಮಂದರೆಯು ಕಾಣಿಸುತ್ತಾಳೆ. ಅವಳನ್ನು ಕಂಡ ಕೂಡಲೇ ರಾಮನಿಗೆ ಒಂದು ಆಲೋಚನೆ ಹೊಳೆದು , ಅವಳನ್ನು ತನ್ನತ್ತ ಕರೆಯುತ್ತಾನೆ. ರಾಮನ ಕರೆ ಕೇಳಿದೊಡನೆಯೇ ಮಂದರೆ ತಾನು ಹೊತ್ತ ಹೊರೆಯ ಬಾರವನ್ನೂ, ತನ್ನ ವಯಸ್ಸನ್ನೂ ಮರೆತು , ರಾಮನತ್ತ ಸಂತೋಷ ಸಂಭ್ರಮದಿಂದ ಓಡಿಬಂದು ಅವನ ಮುಂದೆ ನಿಲ್ಲುತ್ತಾಳೆ. ರಾಮನು ಅವಳನ್ನು ತನ್ನ ಹತ್ತಿರ ಕೂರಿಸಿಕೊಂಡು , ನಿಧಾನವಾಗಿ ಅಂದು ಸಂಜೆ  ತನ್ನ ಮತ್ತು ತಪಸ್ವಿಗಳ ಮಧ್ಯೆ ನಡೆದ ಸಂಭಾಷಣೆಯನ್ನೂ ಮತ್ತು ತಾನು ಅವರಿಗೆ ಕೊಟ್ಟ ಮಾತನ್ನು ವಿವರಿಸಿ , ತಾನು ಕಾಡಿಗೆ ಹೋಗಲು ತಂದೆ ತಾಯಿಯರ ಅನುಮತಿ ಪಡೆಯಲು ಅವಳ ಸಹಾಯವನ್ನು ಕೋರುತ್ತಾನೆ.  ಅವನ ಯುವರಾಜ ಪಟ್ಟಾಭಿಷೇಕದ ಗುಂಗಿನಲ್ಲೇ ಇದ್ದ ಮಂದರೆಗೆ ರಾಮನ ಮಾತುಗಳೇನೂ ಅವಳ ತಲೆಗೆ ಹೋಗುವುದಿಲ್ಲ. ಆದರೆ ರಾಮನು ಅವಳಿಗೆ ಮತ್ತೆ ಮತ್ತೆ ಅದನ್ನೇ ವಿವರಿಸಿದನಂತರ ಅವಳಿಗೆ ಅರ್ಥವಾಗುತ್ತಿದ್ದಂತೆ ಅವಳಲ್ಲಿ ಉದ್ವೇಗ,ದುಃಖಗಳು ಉಂಟಾಗುತ್ತದೆ. ಈ ಸಂದರ್ಭದಲ್ಲಿ ಅದು ಹೇಗೆ ಸಾಧ್ಯವಾಗುವುದೆಂದು ರಾಮನೊಡನೆ ವಾದಿಸುತ್ತಾಳೆ. ಅವನ ನಿರ್ಣಯವನ್ನು ಬದಲಾಯಿಸುವಂತೆ ಬೇಡಿಕೊಳ್ಳುತ್ತಾಳೆ. ಆದರೆ ರಾಮನು , ಈ ಕೆಲಸವು ಲೋಕ ಕಲ್ಯಾಣಕ್ಕಾಗಿಯೆಂದೂ , ತಪಸ್ವಿಗಳಿಗೆ ಕೊಟ್ಟ ಮಾತನ್ನು ತಪ್ಪಲಾರನೆಂದು ಅವಳಿಗೆ ತಿಳಿಯ ಹೇಳಿದ ನಂತರ, ಬೇರೆ ದಾರಿಯಿಲ್ಲದೆ ಈ ವಿಷಯದಲ್ಲಿ ತಾನು ಮಾಡಬೇಕಾದುದೇನೆಂದು ಕೇಳುತ್ತಾಳೆ. ಆಗ ರಾಮನು ಅವಳಿಗೆ ತನ್ನ ತಂದೆಯವರು ರಾಣಿ ಕೈಕೇಯಿಗೆ ಅನೇಕ ವರುಷಗಳ ಹಿಂದೆ ಕೊಟ್ಟ ಎರಡು ವಚನಗಳನ್ನು ಜ್ಞಾಪಿಸಿ, ಮಂದರೆಯು ಮಾಡಬೇಕಾಗಿರುವ ಕಾರ್ಯವನ್ನು ವಿವರಿಸುತ್ತಿದ್ದಂತೆ, ಮಂದರೆಯು ಗಾಬರಿಯಿಂದ , ತಾನು ಆ ರೀತಿ ಮಾಡಲು ಹೊರಟರೆ , ರಾಮನನ್ನು ತನ್ನ ಮಗನಿಗಿಂತ ಹೆಚ್ಚಾಗಿ ಪ್ರೀತಿಸುವ ಕೈಕೇಯಿಯು ತನ್ನನ್ನು ಕೊಂದೇಬಿಡುವುಳೆಂದು, ತಾನು ಬದುಕಿರುವುದು ರಾಮನಿಗೆ ಬೇಕಿಲ್ಲವೇ ಎಂದು ಕೇಳುತ್ತಾಳೆ. ರಾಮನು ಅವಳನ್ನು ಸಮಾಧಾನಪಡಿಸಿ, ತನ್ನ ಚಿಕ್ಕಮ್ಮನಿಗೆ ತನ್ನ ಮೇಲಿರಿವ ಪ್ರೀತಿಯು ತನಗೆ ತಿಳಿದಿದೆಯಾದರೂ, ಮಂದರೆಯ ಬುದ್ದಿವಂತಿಕೆ ಮತ್ತು ಕಾರ್ಯ ಕುಶಲತೆಯಲ್ಲಿ ತನಗೆ ನಂಬಿಕೆ ಇದೆಯೆಂದು , ಚಂದ್ರನನ್ನು ತಂದುಕೊಡೆಂದು ತಾನು ಚಿಕ್ಕವನಾಗಿದ್ದಾಗ ಹಠ ಹಿಡಿದಾಗ ಅವಳು ತನ್ನ ಬುದ್ದಿವಂತಿಕೆಯಿಂದ ತನ್ನನ್ನು ಸಮಾದಾನಪಡಿಸಿದ ವಿಷಯವನ್ನು ಅವಳ ನೆನಪಿಗೆ ತಂದು ,ಈ ಕೆಲಸವು ಅವಳಿಂದ ಮಾತ್ರವೇ ಸಾಧ್ಯವೆಂದೂ , ಲೋಕಕಲ್ಯಾಣಕ್ಕಾಗಿ ಅವಳು ಈ ಕಾರ್ಯವನ್ನು ನಡೆಸಿ ಕೊಡಬೇಕೆಂದು ಹೇಳುತ್ತಾನೆ. ಅಯೋಧ್ಯೆಯ ಜನರೆಲ್ಲಾ ಹಾಗೂ ಮುಂದೆ ಬರುವ ಜನಗಳೆಲ್ಲಾ ಅವಳನ್ನು , ರಾಮನನ್ನು ಕಾಡಿಗೆ ಕಳುಹಿಸಿದ ಕೆಟ್ಟ ಹೆಂಗಸೆಂದು, ಪರಮ ಪಾಪಿಯೆಂದು ದೂಷಿಸುವುರೆಂದೂ , ಮಂದರೆಯು ಅದನ್ನೆಲ್ಲಾ ಸಹಿಸಿ ತನಗೆ ದುಷ್ಟರ ಸಂಹಾರ ಕಾರ್ಯದಲ್ಲಿ ಸಹಾಯ ಮಾಡಬೇಕೆಂದು ಕೇಳಿಕೊಳ್ಳುತ್ತಾನೆ  ಮತ್ತು ಈ ಮಾತುಗಳೆಲ್ಲಾ ತಮ್ಮಿಬ್ಬರ ನಡುವೆಯೇ ಇರಬೇಕೆಂದು,  ಬೇರೆ ಯಾರಿಗೂ ತಿಳಿಯಬಾರದೆಂದೂ, ಈ ಕಾರ್ಯವಾದನಂತರ ಮಂದರೆಯು ಅದನ್ನು ಒಂದು ಕನಸೆಂದು ಮರೆತುಬಿಡಬೇಕೆಂದು ಹೇಳುತ್ತಾನೆ.

     ಆಗ ಮಂದರೆಗೆ ತನ್ನಿಂದ ಪ್ರಾರಂಭವಾಗಬೇಕಾಗಿರುವ ಒಂದು ಮಹತ್ ಕಾರ್ಯದ ಅರಿವಾಗಿ , ತನಗೆ ಕೆಟ್ಟ ಹೆಸರು ಬಂದರೂ ಲೊಕಕಲ್ಯಾಣದ ಕೆಲಸಕ್ಕೆ ತಾನು ಕಾರಣಭೂತಳಾಗುವಳೆಂಬ ಅರಿವಿನಿಂದ , ತಾನು ತಂದ ಹೊರೆಯನ್ನು ಅಲ್ಲೇ ಮರೆತು , ರಾಮನು ತನ್ನ ಮೇಲೆ ಹೊರಿಸಿದ ಕಾರ್ಯಾಭಾರದಿಂದ ಕುಗ್ಗಿದವಳಾಗಿ, ತನ್ನ ವಯಸ್ಸಿಗಿಂತಲೂ ಹೆಚ್ಚು ವಯಸ್ಸಾದವಳಂತೆ  ಕಾರ್ಯ ಸಾಧನೆಗೆ ತನ್ನ ರಾಣಿ ಕೈಕೇಯಿಯತ್ತ ನಿಧಾನವಾಗಿ ಸಾಗುತ್ತಾಳೆ.

   ಹೀಗೆ ನಡೆದಿದ್ದರೆ ಮಂದರೆಯ ವ್ಯಕ್ತಿತ್ವ ದೊಡ್ಡದೆನಿಸುವುದಿಲ್ಲವೇ? 


  ಬರೆದವರು :

     ಎಮ್.ಎಸ್.ರಾಮಚಂದ್ರ,
     ೨೪, ೨ನೇ ಅಡ್ಡ ರಸ್ತೆ, ಎಲ್.ಐ.ಸಿ.ಕಾಲೋನಿ
     ಜಿ.ಹೆಚ್. ಲೇ-ಔಟ್ , ೩ನೇ ಬ್ಲಾಕ್ ಪೂರ್ವ, ಜಯನಗರ , ಬೆಂಗಳೂರು-೫೬೦ ೦೧೧
     ದೂರವಾಣಿ : ೨೬೬೩೦೬೦೩  

Syndicate

Syndicate content