-ಅರ್ಶದ್ ಹುಸೇನ್ ಎಂ.ಹೆಚ್, ಶಾರ್ಜಾ
ನಗರಗಳು ಬೆಳೆದಂತೆ ಕಾರುಗಳ ಸಂಖ್ಯೆಯಲ್ಲಿ ಹೆಚ್ಚಳವೂ ಸಹಜ. ವಾಹನಗಳ ಸಂಖ್ಯೆ ಹೆಚ್ಚಿದಂತೆ ಪಾರ್ಕ್ ಮಾಡುವುದು ಎಲ್ಲಿ ಎಂಬ ಸಮಸ್ಯೆ ವಿಶ್ವದ ಎಲ್ಲಾ ಪ್ರಮುಖ ನಗರಗಳನ್ನು ಕಾಡುತ್ತಿದೆ. ಹಲವು ನಗರಗಳು ಹಲವು ಕಟ್ಟಡಗಳನ್ನು ಕಟ್ಟಿವೆ. ಇಂದಿನ ವರದಿಯ ಪ್ರಕಾರ ಶಾರ್ಜಾದಲ್ಲಿ ಏಳು ಮಹಡಿಯ ಕಟ್ಟಡ ನಿರ್ಮಾಣವಾಗಲಿದೆ. ಅಬುಧಾಬಿ, ದುಬೈಗಳಲ್ಲೂ ಕಾರು ಪಾರ್ಕಿಂಗಿಗಳಿಗೆಂದೇ ವಿಶೇಷ ಕಟ್ಟಡಗಳಿವೆ. ಆದರೆ ಆ ಕಟ್ಟಡ ಕಟ್ಟಲಿಕ್ಕೂ ಸ್ಥಳವಿಲ್ಲದಿದ್ದರೆ?
ಮಾಸ್ಕೋ ನಗರದ ಅಧಿಕಾರಿಗಳಿಗೂ ಇದೇ ಪ್ರಶ್ನೆ ಕಾಡಿದೆ. ಮಾಸ್ಕೋ ರಶ್ಯಾದ ಪ್ರಮುಖ ಹಾಗೂ ಅತಿದೊಡ್ಡ ನಗರವಾಗಿದ್ದು ಪ್ರಸ್ತುತ ಆರು ಲಕ್ಷ ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ. ಇನ್ನೂ ನಾಲ್ಕು ಲಕ್ಷ ವಾಹನಗಳನ್ನು ಕಟ್ಟಡಗಳ ಕೆಳಮಹಡಿಯಲ್ಲಿ ತುರುಕಿಸಬಹುದಾಗಿದ್ದು ಒಟ್ಟು ಹತ್ತು ಲಕ್ಷ ವಾಹನಗಳಿಗೆ ಸ್ಥಳವಾಯಿತು. ಆದರೆ ಮುಂಬರುವ ವರ್ಷಗಳಲ್ಲಿ ಒಟ್ಟು ವಾಹನಗಳ ಸಂಖ್ಯೆ ನಲವತ್ತು ಲಕ್ಷ ಆಗಲಿದೆ ಎಂದು ಅಂಕಿ ಅಂಶಗಳು ತಿಳಿಸುತ್ತಿವೆ. ಈ ಕಾರುಗಳನ್ನು ನಿಲ್ಲಿಸುವುದೆಲ್ಲಿ??
ಕಷ್ಟ ಬಂದಾಗ ಮೊದಲು ಹೆಸರು ತೆಗೆಯುವುದು ಯಾವುದು? ಅಮ್ಮಾ, ಅಲ್ಲವೆ, ಹಾಗೆಯೇ ಮಾಸ್ಕೋ ಅಧಿಕಾರಿಗಳೂ ಮಾಸ್ಕೋ ನಗರದ ಅಮ್ಮನಂತಿರುವ ಮಾಸ್ಕೋ ನದಿಯ ಮೊರೆ ಹೊಕ್ಕಿದ್ದಾರೆ (ಮಾಸ್ಕೋ ನದಿಯಿಂದಲೇ ಮಾಸ್ಕೋ ನಗರಕ್ಕೂ ಅದೇ ಹೆಸರು ಬಂದಿದೆ). ಮಾಸ್ಕೋ ನದಿಯ ಮೇಲೆಯೇ ತೇಲುವ ಕಾರು ಪಾರ್ಕಿಂಗ್ ನಿರ್ಮಿಸಲು ಈಗ ಯೋಜನೆಗಳು ಸಿದ್ಧವಾಗುತ್ತಿವೆ.
ಈ ಪರಿಕಲ್ಪನೆ ಹೊಸತೇನೂ ಅಲ್ಲ. ಜಪಾನಿನಲ್ಲಿ ಟೋಕಿಯೋ ಬೇ ವಾಟರ್ ನದಿಯ ಮೇಲೆ ನಿರ್ಮಿಸಲಾಗಿರುವ ಒಂದು ಕಟ್ಟಡ ಸೇತುವೆಯಂತೆಯೂ, ಕಾರು ಪಾರ್ಕಿಂಗಿನಂತೆಯೂ ಕೆಲಸ್ ನಿರ್ವಹಿಸುತ್ತಿದೆ. ಮಾಸ್ಕೋದಲ್ಲಿ ನಿರ್ಮಿಸಲಾಗುವ ಈ ಪಾರ್ಕಿಂಗ್ ವ್ಯವಸ್ಥೆ ಒಟ್ಟು ನಲವತ್ತಾರು ಸಾವಿರ ಕಾರುಗಳಿಗೆ ಆಶ್ರಯ ನೀಡಲಿದೆ. ಎರೆಡು ವರ್ಶದ ಅವಧಿಯಲ್ಲಿ ಕಟ್ಟಲಾಗುವ ಈ ತೇಲುವ ಕಾರು ಪಾರ್ಕಿಂಗ್ ಪ್ರಥಮ ವರ್ಷದಲ್ಲಿಯೇ ಹದಿನಾಲ್ಕು ಸಾವಿರ ಕಾರುಗಳಿಗೆ ಸ್ಥಳಾವಕಾಶ ನೀಡಲಿದೆ.
ಜಪಾನಿನಲ್ಲಿ ನಿರ್ಮಿಸಿರುವ ವ್ಯವಸ್ಥೆಗಿಂತಲೂ ಈ ವ್ಯವಸ್ಥೆ ಭಿನ್ನವಾಗಿದೆ. ಈ ಪಾರ್ಕಿಂಗ್ ಒಂದು ತೇಲುವ ದ್ವೀಪದಂತಿದ್ದು ಬಹುಮಹಡಿ ಕಟ್ಟಡದಂತಿದೆ. ಕಾರುಗಳು ಒಳಬರಲು ಹಾಗೂ ಹೊರಹೋಗಲು ಪ್ರತ್ಯೇಕ ಪಥಗಳಿದ್ದು ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ.
ಆದರೆ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಗಿರುವ ಈ ಕಾರು ಪಾರ್ಕಿಂಗ್ ನಲವತ್ತು ಲಕ್ಷದ ಬೇಡಿಕೆಯನ್ನು ಪೂರೈಸುತ್ತಿಲ್ಲ. ಒಂದು ವೇಳೆ ಈ ಪಾರ್ಕಿಂಗ್ ಯಶಸ್ವಿಯಾದರೆ ಒಂದರ ಪಕ್ಕ ಇನ್ನೊಂದರಂತೆ ಇಡಿಯ ನದಿಯನ್ನೇ ಅಕ್ರಮಿಸಲಿದ್ದಾರೆಯೇ? ಕಾದು ನೋಡಬೇಕು.









