ಕನ್ನಡದ ಕೂಸು!!
- ಉಮಾ ಭಾರದ್ವಾಜ್, ಕ್ಯಾಲಿಫೋರ್ನಿಯಾ
ತಾಯಿ ಭಾರತಿಯ ಮಡಿಲಿನಲಿ,
ತುಂಬು ಹೃದಯದ ಮಮತೆಯಲಿ,
ಕುಣಿದು ಕುಪ್ಪಳಿಸುತ ಸಂಭ್ರಮದಲಿ,
ಕವಿತೆಯ ಹಾಡಿ ,ಕೋಗಿಲೆ ಕಂಠದಲಿ.
ಕನ್ನಡದ ಕೂಸೆಂದು ಹೆಮ್ಮೆಯಲಿ..
ಕುವೆಂಪು ಬೇಂದ್ರೆ ಕವಿ ರತ್ನದಿಂದಿಲ್ಲಿ,
ಕೊಚ್ಚಿ ಹೋದೆವು ಪ್ರಶಸ್ತಿಯ ಸುರಿಮಳೆಯಲ್ಲಿ.
ದಾಸರ ನುಡಿಮುತ್ತಿನ ಶ್ರೀಮಂತಿಕೆಯಲಿ,
ಧನಿಯ ಎತ್ತರಿಸಿ ,ಸುಮಧುರ ಕಂಠದಲಿ .
ಕನ್ನಡದ ಕೂಸೆಂದು ಹೆಮ್ಮೆಯಲಿ..
ಧೀರೆ ಕಿತ್ತೂರು ಚೆನ್ನಮ್ಮನ ಸ್ಮರಿಸುತಲಿ,
ಶೂರೆ ಒನಕೆ ಓಬವ್ವನ ನೆನೆಯುತಲಿ.
ನೀರೆ ಕಾವೇರಮ್ಮನಿಗೆ ಕರವ ಜೋಡಿಸುತಲಿ,
ತೋರೆ ಎಲ್ಲರು, ಅಭಿಮಾನವ ಮಾತೆಯಲಿ
ಕನ್ನಡದ ಕೂಸೆಂದು ಹೆಮ್ಮೆಯಲಿ..









