ಮೌನ ಪ್ರಾರ್ಥನೆ..
 •    •  
ಗುರು ಬಬ್ಬಿಗದ್ದೆ

- ಗುರು ಬಬ್ಬಿಗದ್ದೆ 

ನನ್ನ ಜೀವನದಿ ಬೆಳಕಾಗಿ ನೀ ಬಂದೆ
ನಿನ್ನ ಕಾಣದೆಯೆ ನಾ ನೋವನುಂಡೆ
ನಿನ್ನ ಕಾಲ್ಗೆರಗುತಲಿ ನಾ ಬಾಗಿ ನಿಂದೆ
ಸಾಗಿಸು ಎನ್ನ ಬಾಳ ನೌಕೆಯನು ತಂದೆ ೧

ನಾನೊಬ್ಬ ಕವಿಯಲ್ಲ, ಕಲಿಯಲೂ ಇಲ್ಲ
ಕಲಿತು ಕಲೆಯಲು ಮನಸು ಸಿದ್ಧವಿಲ್ಲ
ನಿನ್ನ ಶರಣದೊಳು ಬರಲು ಎನೆಲ್ಲ
ಕಷ್ಟ ಕಾರ್ಪಣ್ಯಗಳ ಉಂಡೆನಲ್ಲ ೨ 

ಸುಖವೆಲ್ಲ ಗತ್ತಿನಲಿ, ಹಣದ ಆ ಮತ್ತಿನಲಿ
ದು:ಖವೆನ್ನುವುದು ಬಡವರ ಹಣೆಬರಹದಲಿ
ತಾರತಮ್ಯವು ಸಾಕು ನಿನ್ನಯಾ ಜಗದಲಿ
ಅಧರ್ಮ ತೊಳೆಯಲು ಅವತರಿಸಲಿ ೩

ನನ್ನ ಸುತ್ತಲೂ ಎಲ್ಲ ಕತ್ತಲೆಯು ಮುತ್ತಿಹುದು
ಬೆಳಕಿಗಾಗಿ ಮನ ತಡಕಾಡುತಿಹುದು
ಜ್ಯೋತಿ ನೀನೆಂದು ಬಂದೆ ನಿನ್ನಯ ಎಡೆಗೆ
ಅಸ್ಪ್ರಶ್ಯನೆಂದು ನೂಕಿದರು ಹೊರಗೆ ೪ 

ಹುಟ್ಟಿಸಿದು ನೀನು, ಸಲಹುವನು ನೀನು
ಕಾಯುವನು ನೀನು ಕೊಲ್ಲುವನು ನೀನು
ಅಳುತಲೇ ಹುಟ್ಟಿಸಿದೆ, ಅದು ಶಾಶ್ವತವೇ ಎನಗೆ
ಆನಂದದ ಬದುಕು ನೀಡು ಎನಗೆ ೫ 

ದಿಕ್ಕು ತಪ್ಪಿದ ನೌಕೆ, ನನ್ನ ಬಾಳಿನ ಕಲಿಕೆ
ತಾಳಲಾರೆನು ಇನ್ನು ನೀಡು ವರವನು ಮನಕೆ ೬

Syndicate

Syndicate content