ಮೋಹಿನಿ.....
 •    •  
ಗುರು ಬಬ್ಬಿಗದ್ದೆ

 

                    - ಗುರು ಬಬ್ಬಿಗದ್ದೆ

ಕಾಡುತಿರುವೆ ಕಾಡಬೇಡ,
ಕೋಮಲಾಂಗಿ ಮೋಹಿನಿ
ಕನಸುಗಳನು ಹೊಸೆಯಬೇಡ
ನನ್ನ ಬಾಳ ಚಾಂದಿನಿ           ೧

ಕಣ್ಣ ರೆಪ್ಪೆಯಂಚಿನಲ್ಲಿ,
ಕೊಂಕುಕಣ್ಣ ನೋಟದಲ್ಲಿ
ಕರಗುವಂತೆ ಕಲ್ಲು
ಹೃದಯ ನೋಡಬೇಡ ನನ್ನ ನೀ      ೨

ಕಾಯುತಿರುವೆ ನಿನ್ನ ನಾನು,
ನನ್ನ ಪ್ರೇಮ ಗೂಡಿನಲ್ಲಿ
ಕಾಯಲಾರೆ ಇನ್ನು
ಮುಂದೆ ಕದವ ತೆರೆಯೆ ಮಾನಿನಿ     ೩

ಕಾಲವೆಂಬ ಪರಿಧಿಯಲ್ಲಿ,
 ಕವನವಾದ ವಾಹಿನಿ
ಕವಿಯ ಮನದ ಕಣ್ಣ ಮುಂದೆ
ಮೂಡಿ ಬಂದ ಕಾವ್ಯ ನೀ           ೪

ಹಾರುತಿರುವೆ ಮನದ ತುಂಬ  ,
ಬಂಧಿಯಾಗು ಕಣ್ಮಣಿ
ನಿನ್ನ ಪ್ರೇಮ ಪಾಶದಲ್ಲಿ
ಸಿಲುಕಿಬಿಡಲೇ ಅರಗಿಣಿ              ೫

ಅಚ್ಚ ಹಸಿರ ಪಚ್ಚೆ ಕೆನೆಯ,
ಕಡೆದ ಕಲ್ಲ ಶಿಲ್ಪದಲ್ಲಿತುಂಟನಗೆಯ
ಬೀರಿ ಎನ್ನ ಕಾಡಬೇಡ ಕಾಮಿನಿ        ೬

Syndicate

Syndicate content