-ಅರ್ಶದ್ ಹುಸೇನ್ ಎಂ.ಹೆಚ್
ಆಧುನಿಕತೆ ಹೆಚ್ಚಿನವರನ್ನು ನಗರದತ್ತ ಸೆಳೆಯುತ್ತಿದ್ದಂತೆ ನಗರದಲ್ಲಿ ಸ್ಥಳಾಭಾವವೂ ಸ್ವಾಭಾವಿಕ. ಅದರಲ್ಲೂ ಮಹಡಿಯಲ್ಲಿರುವವರಿಗೆ ತೋಟಗಾರಿಕೆ ಕನಸಿನ ಮಾತು. ಮಾರುಕಟ್ಟೆಯಲ್ಲಿ ಉತ್ತಮ ತರಕಾರಿ ಸಿಗುತ್ತಿದ್ದರೂ ಯಾವ ತರಹದ ಗೊಬ್ಬರ ನೀರು ಬಳಸಿದ್ದಾರೋ ಎಂಬ ಆತಂಕ.
ಇಂತಹವರಿಗಾಗಿ ಉಪಯೋಗಕಾರಿಯಾಗಿ ಬಂದಿದೆ ಫೋಲ್ಡಬಲ್ ಗ್ರೀನ್ ಹೌಸ್. ನೆದರ್ಲ್ಯಾಂಡ್ ನಾಗರಿಕ ಡೇನಿಯಲ್ ಶಿಪ್ಪರ್ ಅವರು ಮನೆಯೊಳಕ್ಕೇ ಸುಲಭವಾಗಿ ಬಳಸಬಹುದಾದ ಉಪಾಯವೊಂದನ್ನು ಅನುಸರಿಸಿದ್ದಾರೆ. ಸಾಮಾನ್ಯವಾದ ಪ್ಲಾಸ್ಟಿಕ್ ಪೊಟ್ಟಣವೊಂದನ್ನು ವಿಶಿಷ್ಟ ಮಡಿಕೆಗಳಿರುವಂತೆ ನಿರ್ಮಿಸಿ ಗಾಳಿ ಹಾಯಲು ಸೂಕ್ತ ರಂಧ್ರಗಳನ್ನು ಅಳವಡಿಸಿ ಸುಮಾರಾಗಿ ಬೆಳಕು ಬೀಳುವಲ್ಲಿಟ್ಟರೆ ಮಡಚುವ ಗ್ರೀನ್ ಹೌಸ್ ಸಿದ್ಧ.
ಚಿತ್ರದಲ್ಲಿ ತೋರಿಸಿರುವ ಕರಡು ಮಾದರಿ ಚಪ್ಪಟೆ ತಳವನ್ನು ಹೊಂದಿದ್ದು ಅದರ ಛಾವಣಿ ಸುಲಭವಾಗಿ ತೆರೆದು, ಮಡಚುವಂತಿದೆ. ಒಳಭಾಗದಲ್ಲಿ ಸುಲಭವಾಗಿ ಬೆಳೆಯಬಹುದಾದ ಗಿಡ್ಡ ತಳಿಗಳನ್ನು ಮನೆಯ ಟೆರೇಸ್, ಬಾಲ್ಕನಿ, ಮೆಟ್ಟಿಲು, ಕಿಟಕಿಗಳ ಬಳಿ ಇತ್ಯಾದಿ ಚೆನ್ನಾಗಿ ಬೆಳಕು ಬೀಳುವೆಡೆ ಇಡಬಹುದಾಗಿದ್ದು ಕಾಳು, ಸೊಪ್ಪು ಮೊದಲಾದವುಗಳನ್ನು ಸುಲಭವಾಗಿ ಬೆಳೆಸಬಹುದಾಗಿದೆ.
ಬೆಳೆಯ ಗರಿಷ್ಟ ಎತ್ತರ, ಅದಕ್ಕೆ ಬೇಕಾದ ಗೊಬ್ಬರ ನೀರು ಇನ್ನಿತರ ಮಾಹಿತಿಗಳನ್ನಾಧರಿಸಿ ಇದರ ವಿನ್ಯಾಸದ ಉದ್ದಗಳಗಳೂ ಬದಲಾಗುತ್ತಾ ಹೋಗುತ್ತವೆ. ಹೆಚ್ಚಿನ ಶ್ರಮವಿಲ್ಲದೇ ಮನೆಯಲ್ಲಿಯೇ ಹಲವು ತರಕಾರಿ, ಸೊಪ್ಪು, ಕಾಳುಗಳನ್ನು ಬೆಳೆದು ಉತ್ತಮ ಆರೋಗ್ಯಕರ ಆಹಾರವನ್ನು ಸುಲಭವಾಗಿ ಮನೆಯಲ್ಲಿಯೇ ಪಡೆಯಬಹುದಾಗಿದೆ.








