ಅಬು ಧಾಬಿಯಲ್ಲಿ ಕನ್ನಡ ರಾಜ್ಯೋತ್ಸವ
adhrajyotsava

ಅಬುಧಾಬಿ ಕನ್ನಡ ಸಂಘವು 51ನೆಯ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು. ಕಾರ್ಯಕ್ರಮವು ಹಾಸ್ಯ, ಕವನವಾಚನ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡಿದ್ದು ನೆರೆದಿದ್ದ ಕನ್ನಡಿಗರ ಮನಸೂರೆಗೊಂಡಿತು.


ಶುಕ್ರವಾರ, ನವೆಂಬರ್ 2ರ ಸಂಜೆ ಅಬುಧಾಬಿ ಸೂಡಾನೀಸ್ ಕಲ್ಚರಲ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ  ಕನ್ನಡ ಚಿತ್ರನಟ ರಮೇಶ್ ಹಾಗೂ ಮಹಾಪೋಷಕರಾದ ಶ್ರೀ ಬಿ.ಆರ್. ಶೆಟ್ಟಿಯವರಿಂದ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆಯಾಯಿತು.
ಭರತನಾಟ್ಯ, ಜಾನಪದ ನೃತ್ಯ, ಹಾಸ್ಯ, ಕವನ ಇತ್ಯಾದಿಗಳು ಕಾರ್ಯಕ್ರಮದ ಸವಿಯನ್ನು ಇನ್ನಷ್ಟು ಸವಿಯುವಂತಾಗಿದ್ದು ಸಮಯೋಚಿತವಾಗಿತ್ತು. ಈ ಸಾಹಿತ್ಯಿಕ ಕಾರ್ಯಕ್ರಮ ಕನ್ನಡ ಸಾಹಿತ್ಯದ ಬಗ್ಗೆ ಒಲವು ಮೂಡಿಸುವ ಉತ್ತಮ ಪ್ರಯತ್ನ.

ಶ್ರೀ ಶರಣಪ್ಪ ಹಾಗೂ ಸಂಗಡಿಗರ ಸ್ವಾಗತಗೀತೆ, ಜೈ ಭಾರತ ಜನನಿನೃತ್ಯ, ಹಾಗೂ ನಾಗನೃತ್ಯಗಳೊಂದಿಗೆ ಮುಂದುವೆರೆಯಿತು. ಶ್ರೀಮತಿ ನಮಿತಾ ಅನಂತ್ ಹಾಗೂ ತಂಡದವರು ಪ್ರಸ್ತುತ ಪಡಿಸಿದ ತಿಲ್ಲಾನ ಭರತನಾಟ್ಯಕ್ಕೆ ಸಭಿಕರ ಭರ್ಜರಿ ಕರತಾಡನದ ಪ್ರಶಸ್ತಿ ಸಿಕ್ಕಿತು.
ಅಬುಧಾಬಿ ಕನ್ನಡ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವಾಗಿ ಪ್ರಶಸ್ತಿಗಳನ್ನು ಶ್ರೀ ಬಿ.ಆರ್. ಶೆಟ್ಟಿಯವರು ನೀಡಿ ಪುರಸ್ಕರಿದರು. ಪುರಸ್ಕಾರ ಪಡೆದ ಪ್ರತಿ ವಿದ್ಯಾರ್ಥಿಯ ಪಾಲಕರಿಗೆ ಇದೊಂದು ಭಾವಪರವಶತೆಯ ಕ್ಷಣವಾಗಿತ್ತು.
ಅಬುಧಾಬಿ ಬಿಟ್ಟು ತೆರಳುತ್ತಿರುವ ಹಿರಿಯ ಸದಸ್ಯರಾದ ಶ್ರೀ ಡಿ.ಆರ್ ಅಗ್ನಿಹೋತ್ರಿ, ಶ್ರೀನಿವಾಸ ಆಚಾರ್ ಹಾಗೂ ಶೋಧನ್ ಅವರ ಸಾಧನೆಗಳನ್ನು ಸ್ಮರಿಸಿ ಸಂಘವು ಹೃತ್ಪೂರ್ವಕವಾಗಿ ಬೀಳ್ಕೊಟ್ಟಿತು.
ಉತ್ತಮ ಸಾಧಕರನ್ನು ಪ್ರತಿ ರಾಜ್ಯೋತ್ಸವದಂದು ಅಭಿನಂದಿಸುವ ತನ್ನ ರೂಢಿಯಂತೆ ಈ ಬಾರಿಯ ರಾಜ್ಯೋತ್ಸವದಂದು ಸಂಘವು ಕವಿ, ವಿಮರ್ಶಕ ಹಾಗೂ ಬರಹಗಾರರಾದ ಶ್ರೀ ಮನೋಹರ ತೋನ್ಸೆಯವರನ್ನು ಸನ್ಮಾನಿಸಿತು. ಶ್ರೀ ಬಿ.ಆರ್. ಶೆಟ್ಟಿಯವರು ಸಂಘದ ಪರವಾಗಿ ತೋನ್ಸೆಯವರನ್ನು ಸನ್ಮಾನಿಸಿದರು.
ಶ್ರೀ ಬಿ.ಆರ್. ಶೆಟ್ಟಿಯವರು ಪ್ರಸ್ತುತ ರಾಜಕೀಯದತ್ತ ಬೆರಳು ಮಾಡಿ ಹೊಲಸು ರಾಜಕೀಯ ಮಾಡುತ್ತಿರುವ ರಾಜಕರಣಿಗಳಿಗೆ ಛೀಮಾರಿ ಹಾಕಿದರು. ರಾಜಕೀಯದ ಹೊಲಸನ್ನು ತೊಡೆಯುವತ್ತ ಕನ್ನಡಿಗರು ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ತಾನು ಚತುರ ಸಂಘಟಕ ಮಾತ್ರವಲ್ಲ, ಒಬ್ಬ ಕವಿ ವಿದೂಶಕನೂ ಹೌದು ಎಂದು ಸರ್ವೋತ್ತಮ ಶೆಟ್ಟಿಯವರು ತಮ್ಮ ಹಾಸ್ಯಕವನಗಳಿಂದ ಮನದಟ್ಟು ಮಾಡಿದರು. ಇವರಲ್ಲದೆ ಉದಯೋನ್ಮುಖ ಹಾಸ್ಯ ಸಾಹಿತಿಗಳೂ ತಮ್ಮ ಚುಟುಕುಗಳನ್ನು ನಿವೇದಿಸುವ ಮೂಲಕ ಹಾಸ್ಯದ ಹೊನಲನ್ನು ಹರಿಸಿದರು. ಸ್ವಾದಿಷ್ಟ ಭೋಜನದ ನಂತರ ನಡೆದ ಹಾಸ್ಯ ಕವಿಗೋಷ್ಟಿಯಲ್ಲಿ ಶ್ರೀಮತಿ ರಂಜನಿ ಸುರೇಶ್, ಪ್ರಕಾಶ್ ರಾವ್ ಪಯ್ಯಾರ್, ಮಂಗಳಾ ಶೆಟ್ಟಿ, ಇರ್ಶಾದ್ ಮೂಡಬಿದ್ರಿ, ಲಕ್ಷೇಶ ಭಟ್, ಶಶಿಧರ್ ನಾಗರಾಜಪ್ಪ, ಮಣಿ ಮನಮೋಹನ್ ರೈ ಹಾಗೂ ಸರ್ವೋತ್ತಮ ಶೆಟ್ಟಿಯವರು ತಮ್ಮ ಚುಟುಕುಗಳಿಂದ ಸಭಿಕರ ಚಪ್ಪಾಳೆ ಗಿಟ್ಟಿಸಿದರು. ಶ್ರೀ ಮನೋಹರ ತೋನ್ಸೆಯವರ ಹನಿಗವನ ವಿಭಾಗವು ಶ್ಲಾಘನೆ ಗಿಟ್ಟಿಸಿತು.

ಕಡೆಯದಾಗಿ ಶ್ರೀ ಅನಂತ್ ಅವರು ಸ್ಪಷ್ಟ ಹಾಗೂ ನಿರರ್ಗಳ ಕನ್ನಡದಲ್ಲಿ ನೀಡಿದ ಸಂಘದ ಸಾಧನೆಯ ಅವಲೋಕನವು ಸಭಿಕರ ಮೆಚ್ಚುಗೆ ಗಳಿಸಿತು.

Syndicate

Syndicate content