ಅಣು ಒಪ್ಪಂದ : ಸಹಿ ಸಂಗ್ರಹ
 •    •  
bush.jpg

                                       ---ಗೋಪಿನಾಥ ರಾವ್

’ಮಕ್ಕಳಿಗೆ ರಜ ಸಿಕ್ಕಾಯ್ತಲ್ಲ, ಇನ್ನು ಸ್ವಲ್ಪ ಮನೆಯಿಂದ ಹೊರಗೆ ಹೊರಟು ಕೆಲವರ ಸಹಿ ತಕ್ಕೊಂಡು ಬನ್ನಿ ಹೋಗಿ’


ನಾನು ಸುಮ್ಮನೆ ಕುಳಿತರೆ ಸಂಪಾದಕರಿಗೆ ಏನೋ ಒಂದು ತರಹದ ಅಸೂಯೆ. ಅದಕ್ಕೇ ಇರಬೇಕು, ಇರಲಿ, ಹೊರಗೆ ಸೆಖೆಯಲ್ಲಿ ಸ್ವಲ್ಪ ಸುತ್ತಾಡಿಕೊಂಡು ಬರುವಾ ಎಂದು ಹೊರಟೆ.

ದುಬೈಯ ಈ ಸೆಖೆಯಲ್ಲಿ ಹೊರಗೆ ಹೋಗುವ ಶಿಕ್ಷೆ ಯಾರಿಗೂ ಬೇಡ, ಅದರಲ್ಲೂ ಈ ಅಣು ಒಪ್ಪಂದದಂತಹ ಮಹತ್ವದ ವಿಚಾರಣೆ ನಡೆಸಲು ಹೋಗುವುದು ಒಂದು ಶಿಕ್ಷೆಗೆ ಸಮಾನ.

ಮೊದಲು ಸಿಕ್ಕಿದವರು ರಾಮಾ ಜೋಯಿಸರು. ಶುಕ್ರವಾರ ಅಲ್ಲಲ್ಲಿ ಪೂಜೆ ನಡೆಯಬೇಕಿದ್ದರೆ ಅವರಿಗೆ ಒಂದು ಮಾತು ಹೇಳಿದರೆ ಸಾಕು. ದಕ್ಷಿಣೆ ಅವರ ಪಾರ್ಟ್ ಟೈಂ ಆದಾಯ.
’ರಾಮಾ ಜೋಯಿಸ್ರಿಗೆ ನಮಸ್ಕಾರ, ಅಣು ಒಪ್ಪಂದ ಸರಿಯೋ ತಪ್ಪೋ ಎಂದು ನಿಮ್ಮದೊಂದು ಸಹಿ ಬೇಕಾಗಿತ್ತಲ್ಲಾ’
’ಹ್ಹೆ ಹ್ಹೆ ಹ್ಹೆ, ನೋಡಿ, ಈ ಮನಮೋಹನರಿಗೆ ಅಮೇರಿಕದ ಬಗ್ಗೆ ಭಾರಿ ಭರವಸೆ, ಯಾವುದೇ ಕೆಲಸ ಆಗಲಿ, ಒಂದು ಪೂಜೆ ಮಾಡಿ, ಒಳ್ಳೆಯ ಮುಹೂರ್ತದಲ್ಲಿ ತೆಂಗಿನಕಾಯಿ ಒಡೆದು ಪ್ರಾರಂಭ ಮಾಡಿದ್ದರೆ ಒಳ್ಳೆಯದಾಗುತ್ತದಲ್ಲವೋ, ಒಂದು ಮಾತು ಹೇಳಿದ್ದರೆ ನಾನೇ ಅವರಿಗೆ ಪೂಜೆ ಮಾಡಿಕೊಟ್ಟು ಬರುತ್ತಿದ್ದೆ"
ಪರಿಸ್ಥಿತಿಯ ಅನುಕೂಲತೆ ಪಡೆಯುವುದೆಂದರೆ ಇದೇ ಇರಬೇಕು.
’ಅಲ್ಲಾ ಜೋಯಿಸ್ರೇ, ಅಣು ಒಪ್ಪಂದ ಬೇಕೋ, ಬೇಡವೋ ಎಂಬ ನಿಮ್ಮ ಅಭಿಪ್ರಾಯ ಹೇಗೆ?’
’ಪೂಜೆ ಇದ್ದರೆ ಇರಲಿ, ಇಲ್ಲದಿದ್ದರೆ ಬೇಡ , ಇದು ನನ್ನ ಅಭಿಪ್ರಾಯ’
ಹಾಗಾದರೆ ಸರಿ, ಇವರ ಪ್ರಕಾರ ಸರಿ ಎಂದಿರುವರಲ್ಲಿ ಟಿಕ್ ಮಾಡಿ ಅವರ ಸಹಿ ತೆಗೆದುಕೊಂಡು ಮುಂದೆ ಹೊರಟೆ

ದೇರಾ ಕಡೆ ಬಂದಾಗ ಒಂದು ಮ್ಯಾಜಿಕ್ ಷೋ ನಡೆಯುತ್ತಿತ್ತು. ನೋಡಿದರೆ ಭಾರತದಿಂದ ಬಂದ ಪಿ.ಸಿ.ಸರ್ಕಾರ್. ಕಾರ್ಯಕ್ರಮ ಮುಗಿದ ಬಳಿಕ ಸಂಪಾದಕರ ಹೆಸರು ಹೇಳಿ ಒಂದು ಸಮಯ ಗಿಟ್ಟಿಸಿಕೊಂಡೆ
’ಪಿ.ಸಿ. ಸರ್ಕಾರ್ ಅವರೇ, ಅಣು ಒಪ್ಪಂದದ ಬಗ್ಗೆ ಏನು  ಹೇಳುತ್ತೀರಿ? ನಮ್ಮದೊಂದು ಸಹಿ ಬೇಕಲ್ಲಾ"
"ಒಂದು ಕೆಲಸ ಮಾಡಿ, ನಾನೊಂದು ಪೆನ್ನು ಕೊಡುತ್ತೇನೆ, ಅದರಲ್ಲಿ ಅಣುಒಪ್ಪಂದಕ್ಕೆ ಸಹಿ ಹಾಕಲು ಮನಮೋಹನ್ ಸಿಂಗ್ ಅವರಿಗೆ ಹೇಳಿ, ವಾರದ ಬಳಿಕ ಆ ಸಹಿ ಮಾಯವಾಗಿರುತ್ತದೆ. ಆಮೇಲೆ ನಾವು ಸಹಿ ಮಾಡಿಯೆ ಇಲ್ಲವೆಂದು ಬುಶ್ ರನ್ನು ಆಟವಾಡಿಸಬಹುದು ಏನಂತೀರಿ?’
ಒಳ್ಳೆಯ ಸಲಹೆ. ಮ್ಯಾಜಿಕ್ ಮೂಲಕ ಬುಶ್ ಕುರ್ಚಿಯನ್ನೇ ಅಲುಗಾಡಿಸಲು ಹೊರಟಿರುವ ಪಿ.ಸಿ.ಸರ್ಕಾರರ ಜಾಣ್ಮೆಗೆ ಮೆಚ್ಚುತ್ತಾ ಇರಲಿ ಎಂದ ಕಡೆ ಟಿಕ್ ಮಾಡಿ ಅವರ ಸಹಿ ತೆಗೆದುಕೊಂಡು ಮುಂದೆ ಹೊರಟೆ

ನಂತರ ಸಿಕ್ಕಿದವರು ಟಿಂಬರ್ ಮರ್ಚೆಂಟ್ ಅಬು ಬ್ಯಾರಿ

ಅಣು ಒಪ್ಪಂದದ ಬಗ್ಗೆ ಕೇಳಿದ ಕೂಡಲೇ ಕೆಂಡಾಮಂಡಲವಾದರು.
’ಇದೆಲ್ಲಾ ನಮ್ಮ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಸರ್ಕಾರದ್ದು. ನಾಲ್ಕು ಡ್ಯಾಮು ಮಾಡಿ ಕಾಡು ಕಡಿದು ನಾಲ್ಕು ಕಾಸು ಮಾಡಿಕೊಳ್ಳುತ್ತೇವೆಂದು ಇವರಿಗೆ ಹೊಟ್ಟೆಯುರಿ. ನನಗೆ ಮಾತ್ರ ಇವರ ಒಪ್ಪಂದ ಸರಿಬರಲ್ಲ ನೋಡಿ, ಮನಮೋಹನ್ ಅವರು ಸಹಿ ಹಾಕಲೇ ಬಾರದು"

ದೇಶ ಹಾಳಾಗಿಹೋದರೂ ಚಿಂತಿಲ್ಲ, ತಮ್ಮ ಹೊಟ್ಟೆ ಮಾತ್ರ ತುಂಬಿಸಬೇಕು ಎಂಬ ಕಾರಣಕ್ಕೆ ಮಾತ್ರ ಅಣುಒಪ್ಪಂದಕ್ಕೆ ವಿರುದ್ಧ. ಇಲ್ಲ ಎಂಬ ಕಡೆ ಟಿಕ್ ಮಾಡಿ ಸಹಿ ತೆಗೆದುಕೊಂಡು ಮುಂದೆ ಹೊರಟೆ.

ಆ ಬಳಿಕ ಸಿಕ್ಕವ ಓರ್ವ ಮಲಯಾಳಿ
’ನಮಸ್ಕಾರ, ಅಣು ಒಪ್ಪಂದದ ಬಗ್ಗೆ ನಿಮ್ಮ ಅಭಿಪ್ರಾಯ ಹೇಗೆ?’
’ಅಣು ಒಪ್ಪಂದವಾ? ಹಾಗೆಂದರೆ?’ ಸೂಚ್ಯವಾಗಿ ವಿವರಿಸಿದೆ
’ಓ ಹಾಗೇನು? ಇದರಿಂದ ನಮ್ಮ ಜನಕ್ಕೆ ದುಬೈ ಬರಲು ವೀಸಾ ಸುಲಭವಾಗಿ ಸಿಕ್ಕುತ್ತೆಯೇ?"
ಎತ್ತಣ ಮಾಮರ ಎತ್ತಣ ಕೋಗಿಲೆ? ಇವರ ತಲೆಯಲ್ಲಿ ದುಬೈ ಬಿಟ್ಟು ಭಾರತ ಯಾವಾಗ ಬರುತ್ತದೆಯೋ ದೇವರೇ ಬಲ್ಲ. ಆದರೂ ಕಾಟಾಚಾರಕ್ಕೆ ಇಲ್ಲ ಎಂಬುದೆಡೆ ಟಿಕ್ ಹಾಕಿದೆ.

ಸಂಜೆಯಾಗುತ್ತಾ ಬಂತು ಹಲವರು ಹೌದು ಎಂಬಲ್ಲಿ, ಹಲವರು ಇಲ್ಲ ಎಂಬಲ್ಲಿ ಸಹಿ ಹಾಕಿದ್ದರು. ಆರ್ದ್ರತೆಯಿಂದ ಬಟ್ಟೆಯೆಲ್ಲಾ ನೆನೆದು ಮೈಗಂಟಿಕೊಂಡು ಬಿಟ್ಟಿತ್ತು.

ಕಟ್ಟಕಡೆಯದಾಗಿ ಒಬ್ಬರದ್ದಿರಲಿ ಎಂದು ನೇರ ಬರ್ ದುಬೈಗೆ ಹೊರಟೆ. ದುಬೈ ಕ್ರೀಕ್ ನ ಉದ್ಯಾನದ ಕಟ್ಟೆಯ ಮೇಲೆ ಕುಳಿತಿದ್ದರು ಲಾಲೂ ಪ್ರಸಾದ್ ಯಾದವ್. ಸಹಿ ಬಗ್ಗೆ ತಿಳಿಸಲು ಇವರೇ ತಕ್ಕ ವ್ಯಕ್ತಿ ಎಂದು ಅವರತ್ತ ಸಾಗಿದೆ.

’ಲಾಲೂ ರವರಿಗೆ ನಮಸ್ಕಾರ. ಅಣು ಒಪ್ಪಂದದ ಬಗ್ಗೆ ತಮ್ಮ ಅಭಿಪ್ರಾಯ ಬೇಕಿತ್ತು, ಒಂದು ಸಹಿ ಹಾಕಿ"
’ದೇಶವನ್ನು ಪ್ರಗತಿಗೆ ಕೊಂಡೊಯ್ಯಬೇಕೆಂದು ಮನಮೋಹನ್ ಬುಶ್ ಕಾಲು ಹಿಡಿಯುವುದು ನನಗೇನೋ ಸರಿ ಕಾಣಿಸುತ್ತಿಲ್ಲ. ರೈಲ್ವೇ ನೌಕರರನ್ನು ಸರಿಯಾಗಿ ಕೆಲಸ ಮಾಡುವಂತೆ ಮಾಡಿ ಲಾಭಕರವನ್ನಾಗಿ ನಾವು ಮಾರ್ಪಾಡಿಸಿಲ್ಲವೇ, ಹಾಗೇ ಪ್ರತಿಯೊಂದು ಕ್ಷೇತ್ರದಲ್ಲಿ ದಕ್ಷತೆಯನ್ನು ಹೆಚ್ಚಿಸಿದರೆ ದೇಶ ಏಳ್ಗೆ ಕಾಣುತ್ತದೆ’
’ಆದರೂ ಅಣುಒಪ್ಪಂದ ಬೇಕೋ ಬೇಡವೋ, ನಿಮ್ಮ ಅಭಿಪ್ರಾಯ’
’ಒಂದು ಕೆಲಸ ಮಾಡಿ, ನಾನು ಹೆಬ್ಬೆಟ್ಟು ಹಾಕುತ್ತೇನೆ, ಅದನ್ನು ಬುಶ್ ಅವರಿಗೆ ತೋರಿಸಿ, ಇದರ ಬಗ್ಗೆ ನಮ್ಮ ಅಭಿಪ್ರಾಯ ಅವರಿಗೇ ತಿಳಿಯುತ್ತದೆ.’
’ಏನು ನಿಮ್ಮ ಅಭಿಪ್ರಾಯ’
"ಠೇಂಗಾ"

ಸರಿ ಇದ್ದಿದ್ದಿಷ್ಟು ಸಹಿಗಳನ್ನು ಒಪ್ಪ ಓರಣ ಮಾಡಿ ಸಂಪಾದಕರಿಗೆ ನೀಡಿದರೆ ಸಾಕು, ಮುಂದಿನದ್ದು ಅವರೇ ನೋಡಿಕೊಳ್ಳುತ್ತಾರೆ ಎಂದು ಕಛೇರಿಗೆ ಬಂದು ವರದಿ ನೀಡಿದೆ. ವರದಿ ಕಳಿಸಿದ್ದಾರೋ, ಲಾಲು ರವರ ಠೇಂಗಾ ಕೆಲಸ ಮಾಡುವುದೋ ಗೊತ್ತಿಲ್ಲ.

ಅಣು

ಅಣು ಒಪ್ಪ೦ದದ೦ತಹ ಮಹತ್ವದ ಸಮಸ್ಯೆಯನ್ನೂ ವೈಯುಕ್ತಿಕ ಲಾಭದ ತಕ್ಕಡಿಯಲ್ಲಿ ತೂಗಿ ಬೆ೦ಬಲಿಸುವ ಯಾ ವಿರೋಧಿಸುವ ಚಿತ್ರಣ ನೀಡಿ, ಇ೦ದಿನ ಜನರ ಲೌಕಿಕ ಮನೋವೃತ್ತಿಯನ್ನು ಹಾಸ್ಯಮಯವಾಗಿ ವಿಶ್ಲೇಷಿಸಿದ್ದೀರಿ. ಲಾಲೂ ಹೇಳಿದ್ದು ಸತ್ಯ.  ನಮ್ಮ ಉದ್ಧಾರ ನಮ್ಮ ಕೈಯಲ್ಲಿದೆ. ಒಗ್ಗಟ್ಟು, ದಕ್ಷತೆ ಮತ್ತು ಸಮರ್ಥ ನಾಯಕತ್ವವಿದ್ದಲ್ಲಿ ದೇಶದ ಸರ್ವತೋಮುಖ ಉದ್ದಾರ ಸಾಧ್ಯ.  ಪರದೇಶೀಯರ ಹಸ್ತಕ್ಷೇಪವನ್ನು ಆದಷ್ಟು ದೂರವಿಟ್ಟರೆ ಒಳ್ಳೆಯದು.

ಮೃಣಾಲಿನಿ ಉದಯ ಕುಮಾರ್

Syndicate

Syndicate content