-ಅರ್ಶದ್ ಹುಸೇನ್ ಎಂ.ಹೆಚ್.
ಕಳೆದ ವಾರ ತಿಳಿಗೇಡಿಯೊಬ್ಬನ ಕುತೂಹಲಕರ ಸಾಹಸಗಾಥೆಯನ್ನು ವಿವರಿಸಿದ್ದೆವು. ನಿಗದಿತ ದಿನದಂದು ಆತ ಇಡಾಹೋ ನಗದರ ಹುಲ್ಲುಗಾವಲಿನಲ್ಲಿ ಸುಮಾರು 378 ಕಿ.ಮೀ ಗಾಳಿಯಲ್ಲಿ ತೇಲುತ್ತಾ ಸಾಗಿ ಬಂದಿಳಿದಿದ್ದಾನೆ.
ಲಾನ್ ಕುರ್ಚಿಯೊಂದಕ್ಕೆ ಹೀಲಿಯಂ ತುಂಬಿದ ನೂರೈವತ್ತು ಬೆಲೂನುಗಳನ್ನು ಕಟ್ಟಿಕೊಂಡು ಗಾಳಿ ಸಾಗಿದತ್ತ ತೇಲುತ್ತಾ ಸಾಗಿದ ಕೆಂಟ್ ಕೋಚ್ ಎಂಬ ಅಮೇರಿಕನ್ ಕಳೆದ ಶನಿವಾರ ಈ ಸಾಧನೆ ಸಾಧಿಸಿದ್ದಾರೆ. ಗಾಳಿಯ ದಿಕ್ಕು ಅನುಸರಿಸಿ ಆತ ಇಡಾಹೋದ ಬೋಯ್ಸ್ ನಗರದ ಬಳಿ ಇಳಿಯಬೇಕಿತ್ತು. ಆದರೆ ಗಾಳಿಯ ದಿಕ್ಕು ಬದಲಾದ್ದರಿಂದ ಕೇಂಬ್ರಿಡ್ಜ್ ಎಂಬಲ್ಲಿನ ಹುಲ್ಲುಗಾವಲಿನಲ್ಲಿ ಇಳಿಯಬೇಕಾಯಿತು. ಇದು ಅವರ ಮೂರನೆಯ ಪ್ರಯತ್ನವಾಗಿದ್ದು ಕಳೆದ ವರ್ಷ 193 ಕಿ.ಮೀ ಕ್ರಮಿಸಿದ್ದರು.
ಆದರೆ ಆತ ಕ್ರಮಿಸಿದ ದೂರವಾದರೂ ಎಷ್ಟು? ಬರೋಬ್ಬರಿ 378 ಕಿ.ಮೀಗಳು, ವೇಗ - ಘಂಟೆಗೆ ಮೂವತ್ತೆರೆಡು ಕಿ.ಮೀ ಗಳು ಅಂದರೆ ಸುಮಾರು ಒಂಭತ್ತುವರೆ ಘಂಟೆ ಕಾಲ ಕೊರೆಯುವ ಚಳಿಯಲ್ಲಿ ಒಬ್ಬಂಟಿಗನಾಗಿ ತಲೆಯಮೇಲಿನ ಬೆಲೂನುಗಳಲ್ಲಿ ಒಂದೆರೆಡು ಒಡೆದರೂ ಕೆಳಕ್ಕುರುಳುವ ಭೀತಿಯಲ್ಲಿ ಆತ ಸಾಗಿದ್ದ. ಆದರೂ ಛಲ ಎಂತಹ ಸಾಹಸವನ್ನಾದರೂ ಸಾಧಿಸಲು ಕುಮ್ಮಕ್ಕು ನೀಡುತ್ತದೆ ಎಂಬುದಕ್ಕೆ ಕೋಚ್ ನೇ ಸಾಕ್ಷಿ. ಸುಮಾರು ಹನ್ನೆರೆಡು ಘಂಟೆಗಳಲ್ಲಿ ಗುರಿ ತಲುಪುವ ನಿರೀಕ್ಷೆಯಲ್ಲಿ ಹೊರಟಿದ್ದ ಕೋಚ್ ಗೆ ವಾಯುದೇವನ ಸಹಾಯ ಕೊಂಚ ಸಿಕ್ಕಿತ್ತೇನೋ, ಗುರಿ ತಲುಪಲು ಒಂಭತ್ತುವರೆ ಘಂಟೆ ಸಾಕಾಯಿತು.
ಬೆಲೂನು ಕುರ್ಚಿ ಮೇಲೇರಿದ ಬಳಿಕ ತಾನು ನೋಡುವ ನೋಟವೇ ಬದಲಾಯಿತು, ಅದೊಂದು ಸುಂದರ ನೋಟ ಎಂದು ಕೋಚ್ ಹೇಳುತ್ತಾರೆ. ಹನ್ನೆರೆಡು ಘಂಟೆ ಸುಮ್ಮನೆ ಕುಳಿತು ಕಳೆಯಲಾಗುತ್ತದೆಯೇ, ಅದಕ್ಕೆಂದೇ ಆತ ಸುಮಾರು ನೂರ ಎಪ್ಪತ್ತು ಲೀಟರ್ ಕೂಲ್ ಏಡ್ ಪಾನೀಯವನ್ನು ಕೊಂಡೊಯ್ದಿದ್ದ.
ಅಸಾಧ್ಯವಾದುದನ್ನು ಸಾಧಿಸಿರುವ ಕೋಚ್ ರವರಿಗೆ ಅಭಿನಂದನೆ ಸಲ್ಲಿಸೋಣವೇ.








