ರಾಮಣ್ಣಿಯ ಹೋಮ್ ವರ್ಕ್ !
 •    •  
srinath.jpg

                                -ಶ್ರೀನಾಥ್ ಭಲ್ಲೆ

 ಶುದ್ದ ಶುಕ್ರವಾರ ಬೆಳಿಗ್ಗೆ ತಲೆ ಸ್ನಾನ ಮಾಡಿ ತುಳಸೀಕಟ್ಟೆಯನ್ನು ನಾಲ್ಕೂವರೆ ರೌಂಡ್ ಹೊಡೆಯುವಷ್ಟರಲ್ಲಿ ನನ್ನ ಧರ್ಮಪತ್ನಿ ವಿಶಾಲೂಗೆ ಸೊಂಟ ಹಿಡಿದುಕೊಂಡುಬಿಟ್ಟಿತು. ನಿಲ್ಲೋಕ್ಕಾಗದೆ ಕುಸಿಯುವುದರಲ್ಲಿದ್ದಳು. ಹಿಡಿದುಕೊಳ್ಳೋಣ ಅಂತ ಹತ್ತಿರ ಹೋದರೆ ’ಮುಟ್ಟಬೇಡಿ’ ಅಂತ ಕಿರುಚೋದೇ ? ಇದೇನಪ್ಪಾ ಗ್ರಹಚಾರ ? ಸೊಂಟ ಹಿಡಿದುಕೊಂಡರೆ ತಲೆ ಕೆಡುತ್ತೆಯೇ ?

 

ಪರಿಸ್ಥಿತಿ ಅರ್ಥವಾಗದೆ "ಯಾಕೆ ?" ಅಂತ ಕೇಳಿದೆ. ನರಳಿಕೊಂಡೇ ಅವಳು ’ನೀವಿನ್ನೂ ಸ್ನಾನ ಮಾಡಿಲ್ಲ’ ಅಂದಳು. ಇವಳು ಬೀಳ್ತಾಳೆ ಅಂತ ಮೊದಲೇ ಗೊತ್ತಿದ್ದರೆ ಬೆಳಿಗ್ಗೇನೇ ಸ್ನಾನ ಮಾಡಿ ಇವಳ ಹಿಂದೇನೇ ಕೂತಿರುತಿದ್ದೆ..... ವಿಕೆಟ್ ಕೀಪರ್ ತರಹ. ಅಮೇರಿಕದಲ್ಲಿ ಸ್ವಾತಂತ್ರದ ದಿನ ಅಂತ ನಾನು ಇಲ್ಲಿ ರಜೆ ಹಾಕಿ ಆಚರಣೆ ಮಾಡ್ತಿದ್ದೆ. ಅಲ್ಲಾ, ರಜಾದಿನ ಸ್ನಾನಾ ಯಾರು ಮಾಡ್ತಾರೆ .... ಇಷ್ಟು ಬೇಗ ?

 

ಹಾಗೇ ಸ್ವಲ್ಪ ಸರಿದು ಪಕ್ಕಕ್ಕೆ ಕುಳಿತುಕೊಂಡಳು. ಏನು ಮಾಡ್ತಾಳೆ ಅಂತ ನಾನು ಪಿಳಿ ಪಿಳಿ ಕಣ್ಣು ಬಿಡುತ್ತಾ ನಿಂತಿದ್ದೆ. ಅವಳು ಕ್ಷೀಣ ಸ್ವರದಲ್ಲೇ ಬೈದಳು ’ಇನ್ನೂ ಏನ್ರೀ ಮಾಡ್ತಿದ್ದೀರಾ ?’. ಹಿಡಿದುಕೊಳ್ಳಲು ಹೋದರೆ ಬೇಡಾ ಅಂದಳು ... ಮತ್ತೆ ನಾನು ಏನು ಮಾಡಬೇಕಿತ್ತು ಎಂದು ಅರ್ಥವಾಗಲಿಲ್ಲ. "ನಾನೇನು ಮಾಡಬೇಕು ಈಗ?" ಎಂದು ಕೇಳಿದೆ. ’ನೀವು ಸ್ವಲ್ಪಾನೂ ಸೂಕ್ಷ್ಮ ಇಲ್ಲಪ್ಪ. ಹೋಗಿ ಸ್ನಾನ ಮಾಡಿಕೊಂಡು ಬಂದು ನನ್ನನ್ನು ಹೊತ್ತುಕೊಂಡು ಹೋಗ್ರೀ’ ಅಂದಳು.... ಇನ್ನೂ ಮಾತು ಮುಗಿಸಿರಲಿಲ್ಲ, ನಾನಾಗಲೇ ಬಚ್ಚಲ ಮನೆಯಲ್ಲಿದ್ದೆ.

 

ಸ್ನಾನ ಮಾಡಿ, ಬಟ್ಟೆ ಹಾಕಿಕೊಂಡು, ಮುಖಕ್ಕೆ ಪೌಡರ್ ಬಳಿದುಕೊಂಡು ನಂತರ ತಲೆ ಬಾಚಿಕೊಂಡು, ಮತ್ತೆ ಅಂಗಳಕ್ಕೆ ಬಂದೆ. ಕುಳಿತಲ್ಲೇ ಕುಳಿತಿದ್ದಳು ಅಶೋಕವನದಲ್ಲಿ ಸೀತೆ ಕುಳಿತಿದ್ದ ಹಾಗೆ. ’ಸ್ನಾನಾ ಆಯ್ತು ಕಣೆ’ ಅಂದೆ. ’ಅಂತೂ ಆಯ್ತಾ? ಏನಾದ್ರೂ ತಿಂದ್ರಾ?’. ನಾನು ’ಎಷ್ಟು ಕಾಳಜಿ ಕಣೆ ನಿನಗೆ ನನ್ನ ಮೇಲೆ’ ಅಂದೆ. ’ಹಂಗಲ್ರೀ, ಹಸೀ ಹೊಟ್ಟೇಲಿ ನನ್ನ ಹೊತ್ತುಕೊಂಡು ನೀವು ಕೆಳಗೆ ಬಿದ್ದು ನಿಮಗೆ ಸೊಂಟ ಹಿಡಿದುಕೊಂಡರೆ, ಇಬ್ಬರನ್ನೂ ಯಾರು ಹೊತ್ಕೊಂಡು ಒಳಗೆ ಹಾಕ್ತಾರೆ ? ಕಡೇ ಪಕ್ಷ ಎನರ್ಜಿ ಡ್ರಿಂಕ್ ಕುಡೀಬೇಕಿತ್ತು’ ಅನ್ನೋದೇ ?

 

’ಏನೂ ಆಗಲ್ಲ ... ನೀನೇನು ಚಿಂತೆ ಮಾಡಬೇಡ’ ಎಂದು ಅರಿಶಿನ ಕುಂಕುಮದ ತಟ್ಟೆಯನ್ನು ಬದಿಗೆ ಸರಿಸಿ ಅವಳನ್ನು ಹೊತ್ತುಕೊಂಡು ನಿಂತೆ... ಏಲ್ಲೋ ಏನೋ ಶಬ್ದ ಬಂತು .... ಮೂಳೆ ಮುರೀತು ಅಂತ ಅಂದುಕೊಂಡೆ ... ಇರಲಿ ಅಂತ ಒಂದು ಹೆಜ್ಜೆ ಇಟ್ಟೆ.. ಏನೂ ತೊಂದರೆ ಆಗಲಿಲ್ಲ ... ನರಳಿಕೊಂಡೇ ವಿಶಾಲೂ ಹೇಳಿದಳು ’ನಿಮಗೇನೂ ಆಗಿಲ್ಲ. ಶಬ್ದ ಬಂದಿದ್ದು ನಿಮ್ಮ ಕಾಲ ಕೆಳಗಿನ ಒಣಕಲು ಎಲೆಯಿಂದ’ ಅಂದಳು.

 

ಸಿನಿಮಾಗಳಲ್ಲಿ ನಾಯಕನು ನಾಯಕಿಯನ್ನು ಹೊತ್ತುಕೊಂಡ ದೃಶ್ಯ ನೆನಪಿಗೆ ಬಂದು ರಸಿಕತೆಯಿಂದ ಹೇಳಿದೆ ’ಜೀವನವೆಲ್ಲ ಹೀಗೇ ಹೊತ್ತುಕೊಂಡು ಇರೋಣ ಅನ್ನಿಸುತ್ತೆ’ ಅಂತ.... ’ಏನು ಕೆಟ್ಟ ಬುದ್ದೀ ರೀ ನಿಮಗೆ. ನನಗೆ ದಿನಾ ಸೊಂಟ ಮುರೀಬೇಕಾ ? ’ ಅಂದಳು. ’ಹಂಗಲ್ವೇ... ಹಿತವಾಗಿದೆ ಅಂತ ನಾನು ಹೇಳಿದ್ದು’ ಅಂದೆ. ’ನಿಮಗೆ ಹಿತ ಇರಬಹುದು ಆದರೆ ನಿಮ್ಮ ಕೈ ಮೂಳೆ ನನ್ನನ್ನು ಚುಚ್ಚುತ್ತಿದೆ... ಮೊದಲು ಒಳಗೆ ನೆಡೀರೀ’.....

 

ಅಂತೂ ಇಂತೂ ಅವಳನ್ನು ಹೊತ್ತುಕೊಂಡು ಹಾಸಿಗೆಯ ಮೇಲೆ ಹಾಕಿದೆ... ಅಲ್ಲಲ್ಲ ಮಲಗಿಸಿದೆ. ಮುಂದೇನು ಎಂಬಂತೆ ಅವಳತ್ತ ನೋಡಿದೆ. ’ಎರಡು ದಿನದ ಬಟ್ಟೆ ಇದೆ, ಮೊದಲು ಅದನ್ನು ಒಗೆದು ಬಿಡಿ’ ಅಂದಳು. ’ಅಯ್ಯೋ! ಕೆಲಸದವಳು ಬರೋಲ್ವೇ ? ’ ಅಂದೆ. ವಿಶಾಲೂ ’ಇಲ್ಲ, ಇವತ್ತು ಅವಳ ಮಗ ಕೆಲಸದ ಮೇಲೆ ಲಂಡನ್’ಗೆ ಹೋಗ್ತಿದ್ದಾನಂತೆ. ಬಹಳ ಬ್ಯುಸಿ’ ಅಂದಳು ! ಇನ್ನು ಹೆಚ್ಚು ಪ್ರಶ್ನೆ ಮಾಡಿದರೆ ಕಷ್ಟ ಅಂತ ತೆಪ್ಪಗಾದೆ.

 

ಸರಿ ಅಂತ ಬಂಡೆ ಕಲ್ಲಿನ ಬಳಿ ನೆಡೆದೆ. ಎರಡೇ ದಿನಕ್ಕೆ ಎರಡು ದೇಹಕ್ಕೆ ಮೂವತ್ತು ಬಟ್ಟೆ ಹೇಗೆ ಬಿತ್ತು ಒಗೆಯಲಿಕ್ಕೆ ಅಂತ ನನಗೆ ಅರ್ಥವೇ ಆಗಲಿಲ್ಲ. ರಪ ರಪ ಒಗೆದು ಒಣಗಿ ಹಾಕಿ ಒಳ ನೆಡೆದೆ. ತಕ್ಷಣವೇ ’ರ್ರೀ’ ಎಂಬ ಕರೆ. ’ವಿಶಾಲೂನಾ ಕೊರಳಿನಾ ಕರೆ’ ಅದು .... ನಾನು ’ಕರೆಯೇ ಕೋಗಿಲೇ ಮಾಧವನಾ’ ಎಂದು ಹಾಡುತ್ತಾ ರೂಮಿನೊಳಗೆ ಹೋದೆ. ’ಬಂಡೆ ಪಕ್ಕದಲ್ಲಿ ತೊಳೆಯೋ ಪಾತ್ರೆಗಳಿತ್ತಲ್ಲ ನೋಡಿದ್ರಾ ?’. ಥತ್! ಬಟ್ಟೆ ಒಗೆದ ಆಯಾಸಕ್ಕೆ ಏನೋ ಸಾಂತ್ವನ ಹೇಳ್ತಾಳೆ ಅಂದುಕೊಂಡರೆ... ’ನೋಡಿದೆ’ ಅಂದೆ. ’ಅದನ್ನು ಪಕ್ಕಕ್ಕೆ ಸರಿಸಿ ಬಟ್ಟೆ ಒಗೀಬೇಕಿತ್ತು. ಪಾತ್ರೆಯೆಲ್ಲ ಸೋಪು ನೀರಾಗಿರುತ್ತೆ. ಅದನ್ನೂ ತೊಳೆದು ಇಡ್ತೀರಾ ? ಕೆಲಸದವಳ ಮಗ ಲಂಡನ್’ಗೆ ಹೋಗೋದ್ರಿಂದ ಅವಳು ಬ್ಯುಸಿ’ ಅಂದಳು.

 

ಮೊದಲೇ ಸೋಪು ನೀರಿನ ಪಾತ್ರೆ. ಸರಿಯಾಗಿ ತೊಳಯದೇ ಇದ್ದರೆ ಇನ್ನೆರಡು ದಿನ ಹೊಟ್ಟೆ ಎಲ್ಲ ಕ್ಲೀನ್ ಆಗಿಬಿಡುತ್ತೆ. ಚೆನ್ನಾಗಿ ತೊಳೀಬೇಕು ಎಂದು ಒಂದೊಂದನ್ನೂ ಥಳ ಥಳ ಹೊಳೆಯುವ ಹಾಗೆ ಮಾಡಿದೆ. ಎಲ್ಲಾ ಸರಿ. ಈ ಲಂಡನ್ ವಿಷಯ ಮತ್ತೆ ಏಕೆ ಜ್ಞ್ನಾಪಿಸಿದಳು ಅಂತ ಅರ್ಥ ಆಗಲಿಲ್ಲ. ಅಷ್ಟೂ ಪಾತ್ರೆ ತೊಳೆದು ಮುಗಿಸಿ ಚೆನ್ನಾಗಿ ಕೈ ತೊಳೆದು ಅಲ್ಲೇ ಇದ್ದ ಟವಲನ್ನು ತೆಗೆದುಕೊಂಡು ಮುಖ ಒರೆಸಿಕೊಂಡು ಕಣ್ಣು ಬಿಟ್ಟು ಹಾಗೇ ಗಕ್ಕನೆ ನಿಂತೆ..... ಅರಿವಿಲ್ಲದೇ ಬಂದ ಪದಗಳು "ವಾವ್ ರಾಮಣ್ಣಿ ವಾ" !!!!

 

ಏನಾಯ್ತು ಅಂತೀರಾ .... ಹಿಂದಿನ ಮನೆಯಲ್ಲಿನ ಮಹಿಳಾಮಣಿ ಹಿಂದಿನ ಬಾಗಿಲಿಗೆ ಒರಗಿ ನಿಂತು ನನ್ನ ಕಾರ್ಯವೈಖರಿಯನ್ನು ನೋಡುತ್ತಾ ಮೆಚ್ಚುಗೆಯನ್ನು ಕಣ್ಣಲ್ಲೇ ಸೂಸುತ್ತಿದ್ದಳು. ಅಯ್ಯೋ! ಹೃದಯ ಡವ ಡವ ಅಂತ ಹೊಡ್ಕೊಳ್ತೈತಲ್ಲೋ ಶಿವನೇ !!!

 

’ರ್ರೀ’ ಎಂಬ ಕರೆ ಕಿವಿಗೆ ಬಿದ್ದರೂ ಸುಮ್ಮನಿದ್ದೆ. ’ಕರೆದರೂ ಕೇಳದೇ ’ ಎಂದು ಅವಳು ಹಾಡಿದಳೋ ಅಥವಾ ಹಿಂದಿನ ಮನೆಯ ಸುಂದರಿಯನ್ನು ನೋಡುತ್ತಾ ನಿಂತ ನನ್ನನ್ನು ’ನಿಲ್ಲು ನಿಲ್ಲೋ ಫಟಿಂಗಾ, ಬೇಡ ಬೇಡ ಬೆಂಕಿಯ ಸಂಗ’ ಎಂದು ಆರತಿ ಶೈಲಿಯಲ್ಲಿ ಕೂಗುತ್ತಿದ್ದಳೋ ಗೊತ್ತಾಗಲಿಲ್ಲ.

 

ಮತ್ತೆ ಒಳಗೆ ಹೋಗಿ, ತೊಳೆದಿಟ್ಟಿದ್ದ ಕೆಲವು ಪಾತ್ರೆಗಳನ್ನು ತಂದು ಮತ್ತೆ ತೊಳೆದೆ. ಹಿಂದಿನ ಬಾಗಿಲ ಬಳಿಯೇ ನಿಂತು ’ಮತ್ತೆ ಇನ್ನೇನಾದ್ರೂ ಬಟ್ಟೆ, ಪಾತ್ರೆ ಇದೆಯೇ?’ ಅಂತ ಬೇಕೂ ಅಂತಲೇ ಜೋರಾಗಿ ಕೂಗಿದೆ. ಉತ್ತರಕ್ಕೂ ಕಾಯದೆ, ಇದ್ದ ಒಂದೂವರೆ ಗಿಡಕ್ಕೆ ನೀರು ಹಾಕಿದೆ. ಹಳ್ಳೀ ಗಿಡಗಳಂತೂ ಆಶ್ಚರ್ಯದಿಂದ ’ಏನ್ಲಾ, ಎಂದೂ ಇಲ್ದೇ ಹಿಂಗೆ ಸುಮ್ ಸುಮ್ಕೆ ನೀರು ಬುಡ್ತಿದ್ದೀಯಾ ’ ಅಂತ ಕೇಳುವಂತೆ ನನ್ನತ್ತ ಮುಖ ಮಾಡಿತು. ಆಂಗ್ಲ ಗಿಡಗಳಿಗೆ ನೀರು ಹಾಕಲಿಲ್ಲ... ಅವು ಡಯಟ್’ನಲ್ಲಿ ಇರುತ್ತೆ ಅಂತ. ಫಲ ಕೊಡೋ ಗಿಡಗಳು ನನ್ನ ಪ್ರಕಾರ ಹಳ್ಳೀ ಗಿಡಗಳು... ಶೋ’ಗೆ ಇಡೋ ಗಿಡಗಳು ಪಟ್ಟಣದವು... ಇದು ನನ್ನ ಥಿಯರಿ ಮಾತ್ರ

 

ಒಳಗೆ ಹೋಗಿ ಕಾಫ಼ೀ ಮಾಡಿ ಅವಳಿಗೂ ಕೊಟ್ಟು ನಾನೂ ಕುಡಿದು, ಅಡಿಗೆ ಮನೆಯ ಸಿಂಕಿನಲ್ಲೇ ತೊಳೆಯಬಹುದಾಗಿದ್ದರೂ, ಮತ್ತೆ ಹಿಂದೆ ಹೋಗಿ ಅದನ್ನು ತೊಳೆದುಕೊಂಡು ಬಂದೆ. ಅಲ್ಲಾ, ಹಿಂದಿನ ಮನೆ ಖಾಲಿ ಬಿದ್ದು ಒಂದು ತಿಂಗಳು ಆಯ್ತು. ಇನ್ನೂ ಯಾರೂ ಬಂದಿಲ್ಲ ನಾನು ಅಂದುಕೊಂಡಿದ್ದೆ. ವಿಶಾಲೂ ಕೂಡಾ ಈ ಬಗ್ಗೆ ನನಗೆ ಹೇಳಿರಲಿಲ್ಲ. ಸಂಜೆ ಹಾಗೇ ಒಂದು ರೌಂಡ್ ಹೋಗಿ ಮಾತಾಡಿಸಿಕೊಂಡು ಬರಬೇಕು... ಮನೆ ಯಜಮಾನನ್ನ...

 

ಅಡಿಗೆ ಆಯ್ತು, ಊಟ ಆಯ್ತು, ಮತ್ತೆ ಹಿಂದೆ ಹೋಗಿ ಪಾತ್ರೆ ತೊಳೆದಿದ್ದೂ ಆಯ್ತು. ವಿಶಾಲೂ ಮಲಗಿದಳು. ನಾನೂ ಅಡ್ಡಾದೆ. ಸಂಜೆ ಬಿಸಿ ಬಿಸಿ ಕಾಫ಼ಿ ಕುಡಿಯೋ ಸಮಯ. ತಂಪಾದ ಗಾಳಿಯಲಿ, ಮುಸ್ಸಂಜೆ ಹೊತ್ತಿನಲಿ, ಇಚ್ಚೆಯನರಿವ ಸತಿಯೊಡನೆ, ಟ್ಯೂಬು ಲೈಟಿನ ಅಡಿಯಲ್ಲಿ, ಹಿಂದಿನ ಮನೆಯ ಮಹಿಳಾಮಣಿಯನ್ನು ನೆನಪಿಸಿಕೊಳ್ಳುತ್ತ ಬಿಸಿ ಬಿಸಿ ಕಾಫ಼ೀ ಹೀರುತ್ತಿರುವಾಗ, ಧಡ ಧಡ ಬಾಗಿಲ ಸದ್ದು.

 

ಕಾಫ಼ೀ ಲೋಟ ಹಿಡಿದುಕೊಂಡೇ ಬಾಗಿಲು ತೆಗೆದು, ಬಂದವರನ್ನು ಏನು ಬೇಕು ಎನ್ನುವ ಮೊದಲೇ ಅವರನ್ನು ನೋಡಿ ಅರ್ಧ ಲೋಟ ಬಿಸೀ ಕಾಫ಼ಿ ಬಾಯಲ್ಲಿ ಹೋಯಿತು. ಬಂದವರನ್ನು ನೋಡಿದಾಗ ಅರ್ಧ ಪ್ರಾಣ ಹೋದರೆ ಇನ್ನು ಕಾಲು ಭಾಗ ಪ್ರಾಣ ಹೋಗಿದ್ದು ಬಿಸಿ ಕಾಫ಼ಿಯ ದೆಸೆಯಿಂದ. ಹಿಂದಿನ ಮನೆಯ ಮಹಿಳಾಮಣಿ ಬಾಗಿಲ ಬಳಿ ನಿಂತಿದ್ದರು. ನನ್ನನ್ನು ನೋಡಿ ನಸುನಕ್ಕರು. ಕೆನ್ನೆ ಮೇಲೆ ಗುಳಿ ಬೀಳುತ್ತಲ್ಲೋ ಶಿವನೇ!!! ಕತ್ತು ವಾಲಿಸುತ್ತ ’ವಿಶಾಲೂ ಇದ್ದಾರಾ’... ನನ್ನ ಸುಟ್ಟ ಬಾಯಲ್ಲಿ ... ಅಲ್ಲಲ್ಲ ಕಾಫ಼ಿಯಿಂದ ಸುಟ್ಟಿರುವ ಬಾಯಲ್ಲೇ ’ಒಳಗೆ ಬನ್ನಿ’ ಎಂದು ಜಾಗ ಬಿಟ್ಟೆ. ಅವರು ರೂಮಿನೊಳಗೆ ಹೋದರೆ ನಾನು ಅಡಿಗೆ ಮನೆಗೆ ಹೋದೆ.

 

ಆಕೆ ಸೀದ ಒಳ ಹೋಗಿದ್ದು ನೋಡಿದರೆ ನಮ್ಮ ಮನೆ ಅವರಿಗೆ ಹೊಸದೇನೂ ಅಲ್ಲ ಎನ್ನಿಸಿತು ನನಗೆ. ತಣ್ಣನೆಯ ನೀರು ಕುಡಿದು, ತೊಳೆದ ಲೋಟವನ್ನೇ ಮತ್ತೆ ಮತ್ತೆ ತೊಳೆಯುತ್ತ ಕಿವಿಯನ್ನು ರೂಮಿನಲ್ಲಿ ನೆಡೆವ ಸಂಭಾಷಣೆ ಆಲಿಸುವುದಕ್ಕೆ ಸಿದ್ದಗೊಳಿಸಿದೆ.

 

’ಏನಾಯ್ರೀ ವಿಶಾಲೂ...’ ’ಏನಿಲ್ಲ ರಮ್ಯಾ... ನೆನ್ನೆ ಉಪವಾಸ ಮಾಡಿದ್ದೋ ಏನೋ.. ಗ್ಯಾಸ್ ಆಗಿರಬೇಕು.. ಸೊಂಟ ಹಿಡಿದುಕೊಂಡು ಬಿಟ್ಟಿದೆ.. ಏನ್ರೀ ಬಂದ ವಿಷಯ’ ಅಂದಳು ವಿಶಾಲೂ.... ’ಈ ಊರಿಗೆ ಹೊಸಬರು ನಾವು ಅಂತ ನಿಮಗೆ ಹೇಳಿದ್ದೆನಲ್ಲ. ಮನೆ ಕೆಲಸದವರನ್ನು ಇಟ್ಟುಕೊಳ್ಳೋಣಾ ಅಂದರೆ ಯಾರು ಹೇಗೋ ಏನೋ ಅಂತ ಭಯ. ಅದಕ್ಕೆ ನಿಮ್ಮನ್ನ ಒಂದು ಸಹಾಯ ಕೇಳಬೇಕು ಅಂತ ಬಂದೆ ಕಣ್ರೀ’. ನಾನು ನಿಂತಲ್ಲೇ ’ಅದಕ್ಕೇನು ಕೇಳಿ. ಪರೋಪಕಾರಾರ್ಥಂ ಇದಂ ಶರೀರಂ’ ಎಂದುಕೊಂಡೆ ಮನಸ್ಸಿನಲ್ಲಿ.

 

ವಿಶಾಲೂ ಕೇಳಿದಳು ’ಅದಕ್ಕೇನು ಕೇಳಿ’ ಅಂದಳು. "ಏನಿಲ್ಲ, ಬೆಳಿಗ್ಗೆ ಇಂದ ನೋಡ್ತಿದ್ದೀನಿ. ನಿಮ್ಮ ಮನೆ ಕೆಲಸದವನು ಬಹಳ ಚುರುಕಿನಿಂದ ಬಟ್ಟೆ ಒಗೆಯೋದು, ಪಾತ್ರೆ ತೊಳೆಯೋದು, ಗಿಡಕ್ಕೆ ನೀರು ಹಾಕೋದು ಅತ ಎಲ್ಲ ಕೆಲಸ ಚಕ ಚಕ ಅಂತ ಮಾಡ್ತಿದ್ದಾನೆ. ಈಗ ನೋಡಿದರೆ ಕಾಫ಼ಿ ಕೂಡಾ ಮಾಡಿಕೊಟ್ತಂತೆ ಕಾಣುತ್ತೆ. ಬಹಳ ನಂಬಿಕಸ್ತ ಇರಬೇಕು. ಬೆಳಿಗ್ಗೆ ಹೊತ್ತು ನಿಮ್ಮ ಮನೆ ಕೆಲಸ ಆದಮೇಲೆ ನಮ್ಮ ಮನೆಗೂ ಕಳಿಸಿಕೊಡ್ತೀರಾ ? "

 

ಅಡಿಗೆ ಮನೆಯಿಂದ ’ಧೊಪ್’ ಎಂಬ ಶಬ್ದ ಕೇಳಿ ’ರೀ, ಏನಾಯ್ತು’ ಅಂತ ಕೂಗಿದಳು ವಿಶಾಲೂ.

Syndicate

Syndicate content