ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರರ ನಿರ್ದೇಶನದಲ್ಲಿ ಹಯವದನ ನಾಟಕ ದುಬೈಯಲ್ಲಿ ಯಶಸ್ವೀ ಪ್ರದರ್ಶನ
 •    •  
hayavadana2.jpg

 

             -ವರದಿ: ಅರ್ಶದ್ ಹುಸೇನ್ ಎಂ.ಹೆಚ್.


ಅತಿ ಕುತೂಹಲ ಕೆರಳಿಸಿದ್ದ ಗಿರೀಶ್ ಕಾರ್ನಾಡರ ಕನ್ನಡ ನಾಟಕ ಕಳೆದ ಶುಕ್ರವಾರ ದುಬೈ ಇಂಡಿಯನ್ ಕಾನ್ಸುಲೇಟ್ ಹಾಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಕಲಾರಸಿಕರ ಮನತಣಿಸಿತು. ಸುಮಾರು ಎರೆಡು ತಿಂಗಳುಗಳಿಂದ ಸ್ಥಳೀಯ ಕಲಾವಿದರಿಂದ ಹಯವದನ ನಾಟಕ ಅಭ್ಯಾಸ ನಡೆಸಿ ಉತ್ತಮ ನಾಟಕದ ಪ್ರದರ್ಶನದ ಸಾಧನೆಯ ಹಿಂದಿನ ಶಕ್ತಿ ಮತ್ತು ಪ್ರೇರಣೆ ನಿರ್ದೇಶಕರಾದ ಶ್ರೀ ಪ್ರಕಾಶ್ ರಾವ್ ಪ್ರಯ್ಯಾರ್ ಅವರದ್ದು.


ಇದೇ ಸಂದರ್ಭದಲ್ಲಿ ಕರ್ನಾಟಕ ರಂಗಕ್ಷೇತ್ರದಲ್ಲಿ ಹೆಸರುವಾಸಿಯಾದ ಶ್ರೀನಿವಾಸ ಕಪ್ಪಣ್ಣನವರಿಗೆ ಶ್ರೀರಂಗರಂಗ ಪ್ರಶಸ್ತಿ ಹಾಗೂ ಪ್ರಖ್ಯಾತ ಚುಟುಕು ಕವಿ ಜರಗನಹಳ್ಳಿ ಶಿವಶಂಕರ್ ಅವರಿಗೆ ಧ್ವನಿ ಪುರಸ್ಕಾರ-೨೦೦೮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ವಿಶೇಷ ಅತಿಥಿಗಳಾಗಿ ಕರ್ನಾಟಕದಿಂದ ಆಗಮಿಸಿದ್ದ ಶ್ರೀ ಚಂದ್ರಶೇಖರ ಕಂಬಾರರು ಸಮಾರಂಭದ ಅಧ್ಯಕ್ಷರೂ ಆಗಿದ್ದರು.ಸರಿಸುಮಾರು ನಾನೂರಕ್ಕೂ ಹೆಚ್ಚು ಕಲಾರಸಿಕರ ಉಪಸ್ಥಿತಿಯಲ್ಲಿ ಸುಮಾರು ಒಂದು ಘಂಟೆ ತಡವಾಗಿ ಪ್ರಾರಂಭವಾದ ಕಾರ್ಯಕ್ರಮ ಶ್ರೀ ಗಣೇಶ್ ರೈಯವರ ನಿರೂಪಣೆಯೊಂದಿಗೆ ಪ್ರಾರಂಭವಾಯಿತು. ಕನ್ನಡದ ಸಾಹಿತ್ಯಾಧಾರಿತ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಧ್ವನಿ ಪ್ರತಿಷ್ಠಾನದ 23 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.


ಯು.ಎ‌ಇ.ಯ ಪ್ರಮುಖರಾದ ಶ್ರೀ ಸರ್ವೋತಮ ಶೆಟ್ಟಿ, ಶ್ರೀ ಶೇಖರ್ ಬಾಬು ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ, ದೈಜಿ ವರ್ಲ್ಡ್ ತಾಣದ ವಾಲ್ಟರ್ ನಂದಳಿಕೆ, ಖ್ಯಾತ ಕೊಂಕಣಿ ಕವಿ ಡಯಾನ್ ಡಿಸೋಜಾ, ಮ್ಯಾಂಗಲೋರ್ ಕೊಂಕಣ್ಸ್ ಅಧ್ಯಕ್ಷ ಜೇಮ್ಸ್ ಮೆಂಡೋನ್ಸಾ, ಶಾರ್ಜಾ ಕರ್ನಾಟಕ ಸಂಘದ ಪೋಷಕರಾದ ಶ್ರೀ ಮಾರ್ಕ್ ಡೆನ್ನಿಸ್ ಡಿಸೋಜಾ, ಶ್ರೀ ಕುಲಕರ್ಣಿ, ಮ್ಯಾಕ್ಸೆಲ್ ಸಂಸ್ಥೆಯ ಮುಖ್ಯಸ್ಥರಾದ ಹಾಗೂ ಕಲಾಪೋಷಕರಾದ ಶ್ರೀ ಉದಯಕುಮಾರ್, ಶ್ರೀ ಅಜಿತ್ ಪೈ ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಲ್ಲೊಬ್ಬರಾದ ಜೈನ್ ಇಂಟರ್ ನ್ಯಾಶನಲ್ ಮಾಲಿಕರಾದ ಶ್ರೀ ಜಫರುಲ್ಲ ಖಾಲ್ ಅನುಪಸ್ಥಿತಿಯಲ್ಲಿ ಶ್ರೀಮತಿ ನೂರ್ ಅವರು ಉಪಸ್ಥಿತರಿದ್ದರು. ಎಲ್ಲಾ ಗಣ್ಯರನ್ನು ವೇದಿಕೆ ಮೇಲಕ್ಕೆ ಬರಮಾಡಿಕೊಂಡು ಹೂಗುಚ್ಛ ಸಹಿತ ಸ್ವಾಗತಿಸಲಾಯಿತು.


ಸುಮಾರು ಮೂರುವರೆ ಘಂಟೆಗಳ ಕಾಲ ನಡೆದ ನಾಟಕ ಕಲಾರಸಿಕರ ಮನತಣಿಸಿತು. ಕಳೆದ ವರ್ಷದ ನಾಗಮಂಡಲ ನಾಟಕದ ನಾಯಕರಾದ ಡೋನಾಲ್ಡ್ ಕೊರಿಯರವರೇ ಈ ನಾಟಕದಲ್ಲಿ ಕಪಿಲನ ಪಾತ್ರ ವಹಿಸಿ ಅಧ್ಬುತವಾಗಿ ನಟಿಸಿ ಎಲ್ಲರ ಜನಮನ ಗೆದ್ದರು. ಅತ್ಯಂತ ಕ್ಲಿಷ್ಟಕರ ಪಾತ್ರವಾದ ಪದ್ಮಿನಿ ಪಾತ್ರವನ್ನೂ ಅವರ ಪತ್ನಿ ಆಶಾ ಕೊರಿಯರವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ತಮಗೆ ದೊರೆತ ಪತಿಯ ಬೆಂಬಲ ಈ ಪಾತ್ರಕ್ಕೆ ಮುಖ್ಯ ಪ್ರೇರಣೆಯಾಗಿದೆ ಎಂದು ಹಿಂದಿನ ಸಂದರ್ಶನನದಲ್ಲಿ ಅವರು ತಿಳಿಸಿದ್ದುದು ವೇದಿಕೆಯವೇಲೆ ಅನುಭವಗಮ್ಯವಾಯಿತು. ಸುಲಲಿತ ಸಂಭಾಷಣೆ ಹಾಗೂ ಅದ್ಭುತ ಅಭಿನಯದಿಂದ ಆಶಾರವರು ಭವಿಷ್ಯದ ನಾಯಕಿಯಾಗುವ ಎಲ್ಲಾ ಲಕ್ಷಣಗಳನ್ನು ಪ್ರದರ್ಶಿಸಿದರು. ದೇವದತ್ತನ ಪಾತ್ರದಲ್ಲಿ ನಟಿಸಿದ ಶ್ರೀ ಪ್ರಭಾಕರ ಕಾಮತ್ ಸಹಾ ಅಧ್ಬುತವಾಗಿ ನಟಿಸಿ ತಮ್ಮ ಪಾಲಿನ ನ್ಯಾಯ ಒದಗಿಸಿದರು. ಶಿರ ಕಪಿಲನದ್ದಾಗಿದ್ದು ದೇಹ ದೇವದತ್ತನದಾಗಿದ್ದ ಸಂಗ್ದಿದ್ಧದಲ್ಲಿ ನೀಡಿದ ಭಾವಪೂರ್ಣ ಅಭಿನಯದ ವೇಳೆಗೆ ಅವರ ಕಣ್ಣಿಂದ ಉದುರಿದ ಭಾವಪೂರ್ಣ ಅಶ್ರು ನಿಜವಾದ ಕಲಾಸೇವೆಯ ಕುರುಹಾಗಿತ್ತು. ಹೇಳಿ ಕೇಳಿ ಗಿರೀಶ್ ಕಾರ್ನಾಡರ ನಾಟಕ. ಹಾಸ್ಯಕ್ಕೆಲ್ಲಿದೆ ಆಸ್ಪದ? ಅದರಲ್ಲೇ ಕಾಳಿಮಾತೆಯ ಪಾತ್ರವಹಿಸಿದ್ದ ಜಯಶ್ರೀ ಮಧುಸೂಧನ್ ಅವರು ಕೆಲವು ಚಟಾಕುಗಳ ಮೂಲಕ ನಗೆಹನಿಯನ್ನು ಮೂಡಿಸಿದರು.
ಇನ್ನುಳಿದಂತೆ ಭಾಗವತರಾಗಿ ಪಿಯುಷ್ ಜೇಮ್ಸ್, ನಟ ೧- ಸಂಪತ್ ಶೆಟ್ಟಿ, ಹಯವದನನಾಗಿ ಅಜಯ್ ಶ್ಯಾಮ್, ಗೊಂಬೆ ೧ : ಸರಳಾ ರಘುಪ್ರಸಾದ್, ಗೊಂಬೆ ೨: ನಿವೇದಿತಾ ಅರವಿಂದ್, ನಟ ೨ : ಸಂತೋಷ ಪೂಜಾರಿ, ಹುಡುಗನಾಗಿ ಅನನ್ಯ, ಮೇಳದವರಾಗಿ ಬಸವರಾಜ್ ಎಮ್.ಎನ್ ತಮ್ಮ ಪಾತ್ರಗಳನ್ನು ಚೊಕ್ಕವಾಗಿ ನಿರ್ವಹಿಸಿ ನಾಟಕ ಯಶಸ್ವಿಯಾಗುವಲ್ಲಿ ತಮ್ಮ ಕಾಣಿಕೆ ನೀಡಿದರು.
ಹಿನ್ನೆಲೆ ಸಂಗೀತ ಕೇತನ್ ಹಾಗೂ ಹಿನ್ನೆಲೆ ಗಾಯಕರಾಗಿ ರವಿರಾಜ್ ತಂತ್ರಿ, ಅನುಪಮ ಭಾಸ್ಕರ್ ಹಾಗೂ ಸುಧಾ ನಾಟಕಕ್ಕೆ ಮೆರುಗು ನೀಡಿದರು. ಹಿನ್ನೆಲೆ ಧ್ವನಿ ನೀಡಿದ ಗೋಪಿ ಕಾಮತ್ ಉತ್ತಮವಾಗಿ ನಡೆಯುವಲ್ಲಿ ಸಹಕರಿಸಿದರು. ಉತ್ತಮ ಬೆಳಕು ಹಾಗೂ ಧ್ವನಿ ಸಂಯೋಜನೆಯೊಂದಿಗೆ ನಾಟಕ ಹಲಕಾಲ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿತು.
ಅಂತಿಮವಾಗಿ ಎಲ್ಲಾ ನಟ-ನಟಿ ಹಾಗೂ ನಾಟಕದ ಬಳಗದವರಿಗೆ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ಶ್ರೀ ರೋಷನ್ ಆರ್ಥರ್ ಪಿರೇರಾರವರ ವಂದನಾರ್ಪಣೆಯೊಂದಿಗೆ ನಾಟಕ ಮುಕ್ತಾಯ ಕಂಡಿತು.


 

Syndicate

Syndicate content