-ಅರ್ಶದ್ ಹುಸೇನ್ ಎಂ. ಹೆಚ್
ಮೊನ್ನೆ ಯು.ಪಿ.ಎ. ಸರ್ಕಾರ ಪೆಟ್ರೋಲ್,ಡೀಸೆಲ್ ಬೆಲೆಗಳನ್ನು ಏರಿಸಿದ್ದು ಜನಸಾಮಾನ್ಯರಲ್ಲಿ ಬಿಸಿಸುದ್ದಿ. ಇದಕ್ಕೇ ಕಾದುಕೊಂಡಿದ್ದವರು ಪೆಟ್ರೋಲ್ ಬೆಲೆ ಏರಿಕೆಯನ್ನೇ ನಪವಾಗಿಟ್ಟುಕೊಂಡು ಅಗತ್ಯವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಲವೆಡೆ ಪ್ರತಿಭಟನೆ, ಬಂದ್ ಎಲ್ಲಾ ಆಚರಿಸುತ್ತಿದ್ದಾರೆ.
ನಾವಾದರೆ ಬಂದ್ ಮಾಡುವುದು, ಸತ್ಯಾಗ್ರಹ ಕೂಗುವುದು, ಬಸ್ಸುಗಳಿಗೆ ಬೆಂಕಿ ಹಚ್ಚುವುದು ಮೊದಲಾದ ಕೃತ್ಯಗಳಿಂದ ಸಾಮಾನ್ಯಜನರಿಗೆ ಇನ್ನಿಲ್ಲದಂತೆ ತೊಂದರೆ ಕೊಟ್ಟು ಯಾವುದೋ ಮಹತ್ಸಾಧನೆ ಸಾಧಿಸಿದವರಂತೆ ಬೀಗುತ್ತೇವೆ. ಅದೇ ಜಗತ್ತಿನ ದೊಡ್ಡಣ್ಣ ಅಮೇರಿಕಾದಲ್ಲಿ ಹೀಗೇನಾದರೂ ಆದರೆ?
ಹೀಗೇ ಆಗಿದೆ. ತೈಲಬೆಲೆ ಏರಿರುವುದು ವಿಶ್ವವ್ಯಾಪಿಯಾಗಿ. ನಮಗೆ ಬೆಲೆಯೇರಿಕೆ ತಟ್ಟಿದಂತೆ ತೈಲಬಳಸುವ ಎಲ್ಲಾ ರಾಷ್ಟ್ರಗಳಿಗೂ ಬಿಸಿ ತಟ್ಟಿದೆ. ಕ್ಯಾಲಿಫೋರ್ನಿಯಾದ ಡ್ಯಾನ್ವಿಲೇ ನಗರದ ಡಯೇನ್ ಕ್ರೇಗ್ ಂಬ ಅರವತ್ತನಾಲ್ಕು ವರ್ಷ ವಯಸ್ಸಿಯ ಬಿಸಿರಕ್ತದ ಅಜ್ಜಿಯೊಬ್ಬರು ಎರೆಡು ಪೆಟ್ರೋಲ್ ಬಂಕ್ ಹಾಗೂ ಒಂದು ಸ್ಟಾರ್ ಬಕ್ಸ್ ಆಹಾರಮಳಿಗೆಗೆ ಬೆಂಕಿ ಹಚ್ಚಿ ತಮ್ಮ ಅಸಮಾಧಾನ ಪ್ರಕಟಿಸಿದ್ದಾರೆ.
ತೈಲ ಬೆಲೆ ಏರಿಕೆಯ ವಿರುದ್ಧ ಪ್ರತಿಭಟಿಸಲು ತಾನು ಇವುಗಳಿಗೆ ಬೆಂಕಿ ಹಚ್ಚಿದೆ ಎಂದು ಎಂಟೆದೆಯಿಂದ ಹೇಳಿಕೊಂಡ ಆಕೆಯನ್ನು ಬಳಿಕ ಪೋಲೀಸರು ಬಂಧಿಸಿದ್ದಾರೆ.
ಇದಕ್ಕಾಗಿ ಆಕೆ ಬಳಸಿದ್ದಾದರೂ ಏನು? ಅಮೇರಿಕಾದ ಮನೆಗಳಲ್ಲಿ ಚಳಿಗಾಲದ ದಿನಗಳಲ್ಲಿ ಮನೆಯನ್ನು ಬೆಚ್ಚಗಿಡಲು ಉರಿಸುವ ಎಂಟು ಕಟ್ಟಿಗೆ ತುಂಡುಗಳು ಹಾಗೂ ಒಂದು ಲೈಟರ್ ಮಾತ್ರ. ಇವುಗಳನ್ನು ಆರಾಮವಾಗಿ ಕೊಂಡೊಯ್ದು ಒಂದು ಆರ್ಕೋ ಪೆಟೋಲ್ ಬಂಕ್ ಹಾಗೂ ಇನ್ನೊಂದು ಚೆವರಾನ್ ಪೆಟ್ರೋಲ್ ಬಂಕುಗಳ ಶೌಚಾಲಯದಲ್ಲಿ ಹಚ್ಚಿ ಬಾಗಿಲು ಬಂದ್ ಮಾಡಿ ಬಂದಿದ್ದಾರೆ.
ಜನರಹಿತ ಸಮಯದಲ್ಲಿ ಆಕೆ ಬೆಂಕಿ ಹಚ್ಚಿದ್ದರಿಂದ ಬೆಂಕಿ ಆರಾಮವಾಗಿ ಕಿಟಕಿಬಾಗಿಲುಗಳಿಗೆ ಹಬ್ಬಿ ಇತರೆಡೆ ಹಬ್ಬಿದೆ. ಆ ಬಳಿಕ ಸ್ಟಾರ್ ಬಕ್ಸ್ ರೆಸ್ಟುರಾ ಒಂದಕ್ಕೂ ನುಗ್ಗಿ ಇದೇ ಮಾದರಿಯಲ್ಲಿ ಅಲ್ಲೂ ಬೆಂಕಿ ಹಚ್ಚಿದ್ದಾರೆ. ಬೆಂಕಿ ವಿಪರೀತಕ್ಕೆ ಹೋಗುವ ಮೊದಲೇ ಶಮನಗೊಳಿಸಿದ್ದರಿಂದ ದೊಡ್ಡ ಅನಾಹುತದಿಂದ ನಗರ ಪಾರಾಗಿದೆ.
ಬಂಧನಕ್ಕೊಳಗಾದ ಬಳಿಕೆ ವಿಚಾರಣೆಯಲ್ಲಿ ಆಕೆ ಏರುತ್ತಿರುವ ತೈಲಬೆಲೆಗೆ ತನಗೇನಾದರೂ ಮಾಡಬೇಕೆನಿಸಿತು ಅದಕ್ಕೇ ಹೀಗೆ ಮಾಡಿದೆ ಎಂದು ಪ್ರಾಮಾಣಿಕವಾಗಿ ನುಡಿದಿದ್ದಾರೆ.
ಅರವತ್ತರಲ್ಲಿ ಅರಳು ಮರಳು. ಅರವತ್ತನಾಲ್ಕರಲ್ಲಿ ???








