ಮುಕ್ತ ಆಹ್ವಾನ...
ಗೋಪಿನಾಥ್ ರಾವ್

ಕಳೆದೆರಡು ವಾರಗಳಿಂದ ಕನ್ನಡಧ್ವನಿಯ ಹೊಸ ರೂಪದ ಪರಿಚಯ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹಾಗೆಯೇ ನೀವೂ ಕುತೂಹಲದಿಂದ ಅಲ್ಲಲ್ಲಿ ಕ್ಲಿಕ್ಕಿಸಿ ಹೊಸ ತಾಣದ ರೂಪರೇಷೆಗಳನ್ನು ಜಾಲಾಡಿಸಿದ್ದೀರೆಂದು ನಂಬಿದ್ದೇನೆ.

ಹೊಸ ಕನ್ನಡಧ್ವನಿಯಲ್ಲಿ ಹಲವಾರು ಹೊಸ ಸವಲತ್ತುಗಳಿವೆ.

ಅವುಗಳಲ್ಲಿ ಮುಖ್ಯವಾದ ಒಂದೆರಡು ವಿಷಯ ಪ್ರಸ್ತಾಪಿಸಲು ಬಯಸುತ್ತಿದ್ದೇನೆ.
ನಮ್ಮ ಬರಹಗಾರರು ಅವರ ಲೇಖನವನ್ನು ಮುಂದಿನವಾರಕ್ಕಾಗಿ ಹಾಕಿಡಬಹುದು ಎನ್ನುವುದು ಒಂದು ಮುಖ್ಯ ಬದಲಾವಣೆ. ಲೇಖನ ಹೇಗೆ ಮೂಡಿಬರುತ್ತದೆ ಎನ್ನುವುದನ್ನೂ ತಾವೇ ಅರಿತುಕೊಳ್ಳಬಹುದು. ನೀವು ಹಾಕಿದ ಲೇಖನ ಕ್ಯೂನಲ್ಲಿ ಬಂದು ದಾಖಲಾಗುತ್ತದೆ. ಸಣ್ಣ ಪುಟ್ಟ ಬದಲಾವಣೆಗಳು ಬೇಕಿದ್ದರೆ ಮಾಡಿಕೊಂಡು ನಮ್ಮ ಸಂಪಾದಕ ಮಂಡಳಿ ಅವುಗಳನ್ನು  ಮುಂದಿನ ವಾರದ ಪ್ರಕಟಣೆಗಾಗಿ ಕಾದಿರಿಸುತ್ತದೆ. ಲೇಖಕರು ಅವರಾಗಿ ಕ್ಯೂನಲ್ಲಿ ಹಾಕಿದ ಲೇಖನಗಳು ಮುಂದೆ ಅವರ ಹೆಸರಿನ ಸೂಚಿಯಲ್ಲೇ ಶೇಖರಣೆಯಾಗುವುದರಿಂದ ಲೇಖಕರ ಹೆಸರು ಹಾಕಿ ಹುಡುಕುವ ಓದುಗರಿಗೆ ಸುಲಭದಲ್ಲಿ ಲಭ್ಯವಾಗುತ್ತವೆ. ಸಂಪಾದಕರಿಗೆ ಕಳುಹಿಸಿದ ಲೇಖನ ಸಾಮಾನ್ಯ ಸೂಚಿಯಲ್ಲಿ ಶೇಖರಣೆಯಾಗುತ್ತವೆ. ಇದನ್ನು ಲೇಖಕರು ಅರಿತುಕೊಳ್ಳಬೇಕು.

ಲೇಖನ ಹಾಕಲು ನೋಂದಣೆ ಅವಶ್ಯ. ನೋಂದಣೆಯಾದ ಓದುಗರೊಂದಿಗೆ ಮುಖ್ಯವಾದ ವಿಚಾರಗಳನ್ನು ಹಂಚಿಕೊಳ್ಳುವ ಸೌಕರ್ಯವಾಗಿ ಸುದ್ದಿಪತ್ರದ ವ್ಯವಸ್ಥೆಯಿದೆ. ಸಾಹಿತ್ಯಲೋಕದ ಮುಖ್ಯ ವಾಹಿನಿಯಲ್ಲಿ ಪಾಲುಗೊಳ್ಳಲು ಮುಂದೊಂದು ದಿನ ಈ ಸುದ್ದಿ ಪತ್ರದ ವ್ಯವಸ್ಥೆಯನ್ನು ಸೂಕ್ತವಾಗಿ ಬಳಸಿಕೊಳ್ಳಲಿದ್ದೇವೆ.

ನಿಮಗೆ ಉತ್ತಮವೆನಿಸಿದ ಲೇಖನವನ್ನು ನಿಮ್ಮ ಹಾಗೆಯೇ ಅಭಿರುಚಿಯಿರುವ ಇತರರಿಗೆ ತಿಳಿಸುವಂತಹ ಸೌಲಭ್ಯವಿದೆ. ಉತ್ತಮ ಲೇಖನವೊಂದಕ್ಕೆ, ಉತ್ತಮ ಲೇಖಕರೊಬ್ಬರಿಗೆ ನೀವು ನೀಡಬಹುದಾದ ಉತ್ತಮ ಪ್ರೋತ್ಸಾಹ ಈ ವ್ಯವಸ್ಥೆ. ನಿಮ್ಮ ಇ ಮೈಲ್ ನೋಡಿದಾಕ್ಷಣ ನಿಮ್ಮ ಮಿತ್ರರು ಆ ಲೇಖನವನ್ನು ಓದುತ್ತಾರೆ, ಹೀಗೆ ಹೆಚ್ಚು ಮಂದಿ ಓದಿದಾಗ ಲೇಖನ ಬರೆದವರ ಶ್ರಮ ಸಾರ್ಥಕವಾಗುತ್ತದೆ. ಓದಿಮುಗಿಸಿದಾಕ್ಷಣ ಉತ್ತಮ ಲೇಖನ ಎಂದು ಅನ್ನಿಸಿತೇ? ಅಲ್ಲೇ ಒಂದು ಪಂಕ್ತಿ ಬರೆದು ಹಾಕಿ. ಲೇಖಕರ ಉತ್ಸಾಹ ಇಮ್ಮಡಿಯಾಗುತ್ತದೆ. ಲೇಖಕರ ಅಭಿಪ್ರಾಯವನ್ನು ನೀವು ಒಪ್ಪುವುದಿಲ್ಲ ಅನ್ನಿಸಿದರೆ ಅದನ್ನೂ ಬರೆದು ಹಾಕಿ, ಲೇಖಕರಿಗೆ ತಮ್ಮ ಅಭಿಪ್ರಾಯವನ್ನು ಇನ್ನೊಮ್ಮೆ ಪರಿಶೀಲಿಸಿಕೊಳ್ಳುವುದಕ್ಕೆ ಇದು ಸಹಾಯವಾಗುತ್ತದೆ. ನಮ್ಮ ಓದುಗರು ಈ ಸೌಲಭ್ಯವನ್ನೂ ವ್ಯಾಪಕವಾಗಿ ಬಳಸಿಕೊಳ್ಳುವಿರೆಂದು ಹಾರೈಸುತ್ತೇವೆ.

ಕನ್ನಡ ಇಂದು ಅಂತರ್ಜಾಲದಲ್ಲಿ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದೆ. ನಮ್ಮ ಎಲ್ಲಾ ಲೇಖಕರು ಅವರ ಒಳಿತಿಗಾಗಿ, ಓದುವ ಅಂತರ್ಜಾಲ ಮಿತ್ರರಿಗಾಗಿ ಅಂತರ್ಜಾಲಕ್ಕೆ ಬರಬೇಕಾದ ಕಾಲ ಸನ್ನಿಹಿತವಾಗಿದೆ. ಇಂತಹ ಒಂದು ವ್ಯವಸ್ಥೆಯಾಗಿ ಕನ್ನಡಧ್ವನಿ ಲೇಖಕರನ್ನು ಸಂಘಟಿಸಲು ಯತ್ನಿಸುತ್ತಿದೆ. ಎಲ್ಲ ಲೇಖಕ ಮಿತ್ರರಿಗೂ ನಮ್ಮಲ್ಲಿ ನೋಂದಾಯಿಸಿ ತಮ್ಮ ಪರಿಚಯವನ್ನು ತಮ್ಮ ಲೇಖನಗಳಮೂಲಕ ಕನ್ನಡ ಸಾರಸ್ವತಲೋಕಕ್ಕೆ ನೀಡಬೇಕೆಂದು ನಮ್ಮ ಸಂಪಾದಕಮಂಡಳಿಯ ಪರವಾಗಿ ಮುಕ್ತ ಆಹ್ವಾನ ನೀಡುತ್ತಿದ್ದೇನೆ. ಎಲ್ಲರೂ ಬೆಳೆಯಬೇಕು, ಅಂತರ್ಜಾಲ ಕನ್ನಡ ಸಮೃದ್ಧವಾಗಬೇಕು ಎನ್ನುವ ಆಶಯವಿರುವ ಎಲ್ಲ ಕನ್ನಡಿಗರೂ ವೇದಿಕೆಯೊಂದರ ಮೂಲಕ ಒಬ್ಬರಿಗೊಬ್ಬರು ಹತ್ತಿರವಾಗಲು, ವ್ಯಾಪಕವಾಗಿ ಒಗ್ಗೂಡಲು ಇದೊಂದು ಅವಕಾಶ.  ಈ ಆಶಯವನ್ನು ಹೊತ್ತ, ಹೊಸ ರೂಪದಲ್ಲಿ ಬಂದಿರುವ   ಕನ್ನಡಧ್ವನಿಯನ್ನು ಕನ್ನಡಿಗರೆಲ್ಲರೂ ಬೆಂಬಲಿಸಬೇಕು ಎಂದು ಅಪೇಕ್ಷಿಸುತ್ತೇವೆ.

ವಂದನೆಗಳೊಂದಿಗೆ,

ಗೋಪೀನಾಥ ರಾವ್

ಮುಕ್ತ ಆಹ್ವಾನ

ಸಮಯ ಸಿಕ್ಕಾಗ ಒ೦ದೊ೦ದಾಗಿ ಹೊಸತಾಣದ ಸವಲತ್ತುಗಳನ್ನು ಉಪಯೋಗಿಸಲು ಪ್ರಯತ್ನಿಸುತ್ತಿದ್ದೆ. ಉತ್ತಮ ಸವಲತ್ತುಗಳನ್ನು ಕಲ್ಪಿಸಿಕೊಟ್ಟಿದ್ದೀರಿ. ನಿಮ್ಮ ಪ್ರಯತ್ನಕ್ಕೆ ಓದುಗರ ಪ್ರೋತ್ಸಾಹ ಸಿಗಲಿ.
ಮೃಣಾಲಿನಿ ಉದಯ ಕುಮಾರ್

Syndicate

Syndicate content