ಹುಳುಕು ತರಕಾರಿ
 •    •  
scan0001.jpg

                -ಶ್ರೀನಾಥ್ ಭಲ್ಲೆ 

ಅಕ್ಕಾ ಅಕ್ಕಾ

ಬುಟ್ಟಿಯ ಹಿಡಿದು

ಹೊರಟೆ ನೀನೆಲ್ಲಿಗೆ ?

 

ಅಡುಗೆ ಮಾಡಲು

ತರಕಾರಿ ತರಲೆಂದು

ಹೊರಟೆ ಮಾರ್ಕೆಟ್ಟಿಗೆ

 

 

ಅಕ್ಕಾ ಅಕ್ಕಾ

ಹಣವನು ಕೊಡು ನೀ

ನಾನೇ ತಂದುಕೊಡುವೆ

 

 

ಒಳಿತೋ ಕೆಡುಕೋ

ಅರಿಯದೆ ನೀನು

ಹೇಗೆ ತಂದುಕೊಡುವೆ ?

 

 

ಬೆಳೆಯುವ ನೆಲವೊಂದೇ

ಉಣುವ ಗೊಬ್ಬರವೊಂದೇ

ಆದರೂ ಕೆಡುಕು ಹೇಗಾಗುವುದು ?

 

 

ಬೀಳುವ ಬಿಸಿಲೊಂದೇ

ಸುರಿಯುವ ಮಳೆಯೊಂದೇ

ಹಿಡಿವುದು ಕೆಲವಕ್ಕೆ ಹುಳುಕು

 

 

ನೋಡಲು ಎಲ್ಲವೂ

ಹಸಿರೇ ಇರುವುದು

ಒಳಿತೋ ಕೆಡುಕೋ ಹೇಗರಿಯುವುದು ?

 

 

ಬೆಳ್ಳಗಿರುವುದೆಲ್ಲ ಹಾಲಲ್ಲ

ಕಪ್ಪು ದನದ ಹಾಲು ಕಪ್ಪಲ್ಲ

ನೋಡಿ ಅರಿಯಬಹುದು ಹಿಡಿದಿಹ ಹುಳುಕು

 

 

ಹುಳುಕನು ತೆಗೆದು

ನೀರಲಿ ತೊಳೆದು

ಮಾಡಲಾಗದೇ ಅಡಿಗೆ ?

 

 

ಕಣ್ಣಿಗೆ ಕಾಣುವ

ಹುಳುಕನು ತೆಗೆದು

ಉಣಬಹುದು ಬೆಂದ ಆಹಾರ

ಥಳುಕಿನ ಒಳಗೆ

ಹುದುಗಿಹ ಹುಳುಕಿಗೆ

ಯಾರಿಗೂ ಅರಿಯದು ಪರಿಹಾರ

 

 

ನೀ ಏನ ಹೇಳಿದೆಯೋ ನಾನರಿಯೆ

ನೀ ಹೋಗಿ ಬಾ ಮಾರ್ಕೆಟ್ಟಿಗೆ

ನಾನಾಡಬೇಕು ಗೆಳೆಯರೊಟ್ಟಿಗೆ

 

Syndicate

Syndicate content