ಮೋಹಿನಿ
- ಗುರು ಬಬ್ಬಿಗದ್ದೆ
ಕಾಡುತಿರುವೆ ಕಾಡಬೇಡ, ಕೋಮಲಾಂಗಿ ಮೋಹಿನಿ
ಕನಸುಗಳನು ಹೊಸೆಯಬೇಡ ನನ್ನ ಬಾಳ ಚಾಂದಿನಿ ೧
ಕಣ್ಣ ರೆಪ್ಪೆಯಂಚಿನಲ್ಲಿ, ಕೊಂಕುಕಣ್ಣ ನೋಟದಲ್ಲಿ
ಕರಗುವಂತೆ ಕಲ್ಲು ಹೃದಯ ನೋಡಬೇಡ ನನ್ನ ನೀ ೨
ಕಾಯುತಿರುವೆ ನಿನ್ನ ನಾನು, ನನ್ನ ಪ್ರೇಮ ಗೂಡಿನಲ್ಲಿ
ಕಾಯಲಾರೆ ಇನ್ನು ಮುಂದೆ ಕದವ ತೆರೆಯೆ ಮಾನಿನಿ ೩
ಕಾಲವೆಂಬ ಪರಿಧಿಯಲ್ಲಿ, ಕವನವಾದ ವಾಹಿನಿ
ಕವಿಯ ಮನದ ಕಣ್ಣ ಮುಂದೆ ಮೂಡಿ ಬಂದ ಕಾವ್ಯ ನೀ ೪
ಹಾರುತಿರುವೆ ಮನದ ತುಂಬ, ಬಂಧಿಯಾಗು ಕಣ್ಮಣಿ
ನಿನ್ನ ಪ್ರೇಮ ಪಾಶದಲ್ಲಿ ಸಿಲುಕಿಬಿಡಲೇ ಅರಗಿಣಿ ೫
ಅಚ್ಚ ಹಸಿರ ಪಚ್ಚೆ ಕೆನೆಯ, ಕಡೆದ ಕಲ್ಲ ಶಿಲ್ಪದಲ್ಲಿ
ತುಂಟನಗೆಯ ಬೀರಿ ಎನ್ನ ಕಾಡಬೇಡ ಕಾಮಿನಿ ೬









