- ಗೋಪೀನಾಥ ರಾವ್
(ಶ್ರೀ ಮಹಾಬಲ ಮೂರ್ತಿ ಕೊಡ್ಲೆಕೆರೆಯವರ ಸಂಪಾದಕತ್ವದ "ಒಂದಲ್ಲ ಒಂದೂರಿನಲ್ಲಿ" ಪತ್ರಿಕೆಯ ಪ್ರಥಮ ಸಂಚಿಕೆಯಲ್ಲಿ ಪ್ರಕಟವಾದ ಕಥೆ)
ಆಗಲೇ ರಾತ್ರಿ ಹತ್ತುಗಂಟೆಯಾಗಿತ್ತು. ಶ್ರೀಧರ್ ಬಂದವರೇ ಕೈತೊಳೆದು ಬಂದು ಊಟಕ್ಕೆ ಕೂತರು. ತಟ್ಟೆ ತಂದಿಟ್ಟ ಸೀಮಾ ಅಲ್ಲೆ ನಿಂತಳು. ಏನೋ ಹೇಳಲಿಕ್ಕಿದೆ, ಒಂದೆರಡು ತುತ್ತು ಊಟ ಮಾಡಿ ಸುಧಾರಿಸಿಕೊಳ್ಳಲಿ ಎಂದು ಕಾಯುತ್ತಿರುವಂತೆ ನಿಂತಿದ್ದ ಹೆಂಡತಿಯನ್ನು ಗಮನಿಸಿಯೂ ಗಮನಿಸದಂತೆ ಊಟ ಮುಂದುವರೆಸಿದರು ಶ್ರೀಧರ್.
"ಶ್ವೇತಾ ಗರ್ಭಿಣಿಯಂತೆ" ಮೆಲ್ಲನೆ ಹೇಳಿದಳು ಸೀಮಾ.
"ಯಾವ ಶ್ವೇತಾ?" ಊಟ ಮುಂದುವರೆಸುತ್ತಲೇ ಕೇಳಿದರು ಶ್ರೀಧರ್.
"ರೇಣುಕಪ್ಪನೋರ ಮಗಳು"
"ಚಿಕ್ಕ ಹುಡುಗಿ ಅಂದ್ಕೊಂಡಿದ್ದೆ. ರೇಣುಕಪ್ಪ ಮಗಳ ಮದುವೆ ನಮಗೆ ಆಮಂತ್ರಣ ಕೊಟ್ಟಿದ್ನಾ? ನಾವು ಹೋಗಿದ್ದೆವಾ? ನನಗೊಂದೂ ನೆನಪಿಲ್ಲ" ಕಮ್ಯೂನಿಟಿಯವರ ಬಗೆಗೆ ಇದೇ ರೀತಿ ವರದಿ ಒಪ್ಪಿಸುತ್ತಿದ್ದ ಮಡದಿಯ ಮಾಮೂಲು ಮಾತಿದು ಅನ್ನುವಂತೆ ಅದಕ್ಕೊಪ್ಪುವ ಉತ್ತರವಿತ್ತರು ಶ್ರೀಧರ್.
"ಆಕೆಗೆ ಮದುವೇನೇ ಆಗಿಲ್ಲ"
"ಊಂ" ಉದ್ಗಾರ ತೆಗೆದರು ಶ್ರೀಧರ್. "ಇಲ್ಲಿ ಅಮೇರಿಕಾದಲ್ಲಿ ಇದೆಲ್ಲ ಸಾಮಾನ್ಯ ಕಣೇ. ನಮ್ಮ ಊರ್‍ಅ ಹಾಗೆ ದೊಡ್ಡ ವಿಷಯ ಏನಲ್ಲ. ಅವರು ಸರಿಮಾಡಿಕೊಳ್ಳುತ್ತಾರೆ ಬಿಡು" ಬರೇ ಲೋಕಾಭಿರಾಮ ವಿಷಯ ಅಂತ ಅಲಕ್ಷಿಸುವ ಮಾತಲ್ಲದಿದ್ದರೂ ತಾವು ತಲೆ ಕೆಡಿಸಿಕೊಳ್ಳುವಷ್ಟು ಗಂಭೀರ ವಿಷಯವೂ ಅಲ್ಲ ಎಂದು ಶ್ರೀಧರ್ ಊಟದಲ್ಲಿ ತಲ್ಲೀನನಾದರು.
"ಆಕೆಯ ಅಮ್ಮ ಗದರಿಸಿ ಕಾರಣ ಯಾರು ಅಂತ ಕೇಳಿದಾಗ... ಸತೀಶ ಅಂದಳಂತೆ" ಪಿಸು ಮಾತಲ್ಲಿ ಹೇಳಿದಳು ಸೀಮಾ.
"ಯಾವ ಸತೀಶ?" ಮಾಮೂಲಿನಂತೆ ಕೇಳಿದ್ದರು ಶ್ರೀಧರ್.
"ಮತ್ಯಾರು? ... ನಿಮ್ಮ ಮಗ"
ಅಲ್ಲಿಗೆ ನಿಂತಿತ್ತು ರಾಯರ ಊಟ. ಯಾರೋ ಕಮ್ಯೂನಿಟಿಯವರ ಬಗೆಗೆ ಮಾತನಾಡುತ್ತಿದ್ದಾಳೆ ಅಂತ ಅಂದುಕೊಂಡಿದ್ದ ಶ್ರೀಧರರಿಗೆ ಶಾಕ್ ಹೊಡೆದಂತಾಗಿತ್ತು.
"ಏನೇ ಹೇಳ್ತಿದ್ದಾಳೆ ಅವಳು?... ಕೇಳಿದಿಯಾ ಸತೀಶನಲ್ಲಿ?' ಗಡಬಡಿಸಿ ಅಬ್ಬರಿಸಿದರು ಶ್ರೀಧರ್.
"ಅವನು ಮಾತಾಡುವುದಿಲ್ಲ"
"ಯಾಕೆ ಮಾತಾಡುವುದಿಲ್ಲ?.. ಎಲ್ಲಿದ್ದಾನೆ ಅವನು?.. ಅವನ ಬೆನ್ನಿನ ಚರ್ಮ ಸುಲೀತೇನೆ... ಆಗ ಬಾಯಿ ಬಿಡುತ್ತಾನೋ ಇಲ್ಲವೋ ನಾನೂ ನೋಡುತ್ತೇನೆ" ಅನ್ನುತ್ತ ಎದ್ದರು ಶ್ರೀಧರ್.
"ಈಗ ಸುಮ್ನಿರಿ. ನಾಳೆ ಬೆಳಿಗ್ಗೆ ಕೇಳಿ" ಅನ್ನುತ್ತ ಸಮಾಧಾನಿಸಿ ಬ್ಲಡ್ ಪ್ರೆಶರಿನ ಮಾತ್ರೆ ಮತ್ತು ನೀರು ಕೈಗಿತ್ತಳು ಸೀಮಾ.
ಮಾತ್ರೆ ತೆಗೆದುಕೊಂಡು ಕುಳಿತು ನೀರು ಕುಡಿದು ಸುಧಾರಿಸಿಕೊಂಡರು ಶ್ರೀಧರ್. ತಲೆಯಿನ್ನೂ ಆ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ ಹೆಣಗುತ್ತಿತ್ತು.
"ನಿನಗಿದೆಲ್ಲ ಯಾರು ಹೇಳಿದ್ದು?" ತಮ್ಮ ಉದ್ವೇಗವನ್ನು ಆದಷ್ಟು ಹತೋಟಿಗೆ ತಂದು ಕೇಳಿದರು ಶ್ರೀಧರ್.
"ಶ್ವೇತಾಳ ಅಮ್ಮ ಫೋನ್ ಮಾಡಿದ್ದರು. ... ನಮಗೆ ದಿಕ್ಕೇ ತೋಚುತ್ತಿಲ್ಲ, ಶ್ವೇತಾಳ ತಂದೆ ಹುಚ್ಚರ ಹಾಗೆ ಆಗಿದ್ದಾರೆ. ಏನು ಮಾಡುವುದು ಅಂತ ಮಾತಾಡೋಣ... ನಾಳೆ ನಿಮ್ಮಲ್ಲಿಗೆ ಬರುತ್ತೇವೆ.. ಅಂದಿದ್ದಾರೆ"
"ಮಾತನಾಡುವುದೇನೆ ಇದೆ ಇದರಲ್ಲಿ? ವಾಶ್ ಮಾಡಿಸಿ ಅಂತ ಹೇಳಬೇಕಿತ್ತು ನೀನು" ಬುಸುಗುಟ್ಟಿದರು ಶ್ರೀಧರ್.
"ಆ ಹುಡುಗಿ ಕೇಳೋದಿಲ್ಲಂತೆ"
"ಆ ನಿನ್ನ ಸುಪುತ್ರನತ್ರ ಅವಳಿಗೆ ಹೇಳಿಸಿ ನೋಡು. ಕೇಳಿದ್ರೂ ಕೇಳಬಹುದು"
"ಈ ವಿಷಯದಲ್ಲಿ ಅವರ ನಡುವೆ ತುಂಬಾ ಮಾತಾಗಿ, ಜಗಳ ಆಗಿ ಆಮೇಲೆಯೇ ಅವಳು ತನ್ನ ಅಮ್ಮನಿಗೆ ಸುದ್ದಿಕೊಟ್ಟದ್ದು" ಸಾಧ್ಯವಿರುವ ಹಲವಾರು ಪರಿಹಾರ ಮಾರ್ಗಗಳೆಲ್ಲ ಆಗಲೇ ನಿಷ್ಪ್ರಯೋಜಕ ಅನ್ನಿಸಿವೆ ಎನ್ನುವ ಧಾಟಿಯಲ್ಲಿ ನುಡಿದಳು ಸೀಮಾ.
"ಇಂಡಿಯಾ ಬಿಟ್ಟು ಮಕ್ಕಳ ಭವಿಷ್ಯ ಅಂತ ಕನಸು ಹೊತ್ತು ನಿನ್ನ ಮಾತು ಕೇಳಿ ಇಲ್ಲಿಗೆ ಬಂದದ್ದು. ಈಗ ಇಲ್ನೋಡು, ಸಂಸಾರ ಎಲ್ಲಿ ಬಂದು ನಿಂತಿದೆ ನೋಡು" ಶ್ರೀಧರ್ ವಿಷಾದದಿಂದ ನುಡಿದರು.
"ಎಲ್ಲದಕ್ಕೂ ನನ್ನನ್ನು ಹೊಣೆ ಮಾಡುವುದು ನಿಮ್ಮ ಹಳೇ ಚಾಳಿ. ಅದನ್ನು ಬದಿಗಿಟ್ಟು, ನಾಳೆ ಅವರು ಬಂದಾಗ ನಾನೇನು ಮಾಡಬೇಕು ಅದನ್ನು ಹೇಳಿ" ಅಸಹನೆಯಿಂದ ನುಡಿದಳು ಸೀಮಾ.
"ವಾಶ್ ಮಾಡೋದು ಬಿಟ್ಟು ಬೇರಿನ್ನೇನು ಮಾರ್ಗ ಇದೆ ಕಣೇ? ಇನ್ನೂ ಪ್ರಿ ಯೂನಿವರ್ಸಿಟಿ ಓದುವ ಮಕ್ಕಳು. ಸ್ವಲ್ಪ ದೊಡ್ಡವರಾಗಿದ್ದರೆ ಹಾಳಾಗಿ ಹೋಗಲಿ ಅಂತ ಮದುವೆ ಮಾಡಿ ಬಿಡಬಹುದಿತ್ತು. ಅದನ್ನು ಅವರಿಗೆ ವಿವರಿಸಿ ಹೇಳು"
"ನಿಮ್ಮ ಮಗನಿಗೆ ಅವಳನ್ನು ಮದುವೆಯಾಗುವುದು ಇಷ್ಟವಿಲ್ಲವಂತೆ"
"ಆ ರಾಸ್ಕಲ್‍ನನ್ನು ಇನ್ನೊಂದು ಬಾರಿ ನನ್ನ ಮಗ ಅಂದರೆ ನಿನ್ನ ಕತ್ತು ಹಿಚುಕಿ ಬಿಟ್ಟೇನು. ಮದುವೆ ಬೇಕು ಬೇಡ ಅನ್ನುವ ಪ್ರಾಯವಾ ಅವನದ್ದು? ಮದುವೆಯಾಗಲಿಕ್ಕೆ ಬೇಡದವಳ ಜೊತೆ ಮಲಗಿದ್ದು ಯಾಕೆ?" ಅನ್ನುತ್ತ ಒಂದು ಕ್ಷಣ ನಿಲ್ಲಿಸಿದರು ಶ್ರೀಧರ್. "ಹೌದೇನೆ.. ಇವರಿಬ್ಬರೇ ಮಲಗಿದ್ದೆಲ್ಲಿ?"
"ಕಳೆದ ರಜೆಯಲ್ಲಿ ರೇಣುಕಪ್ಪ ಮತ್ತವರ ಹೆಂಡತಿ ಇಂಡಿಯಾಕ್ಕೆ ಹೋಗಿದ್ದಾಗ ಅವರ ಮನೆಯಲ್ಲಿ. ಈಗ ಅದೆಲ್ಲ ತನಿಖೆ ಮಾಡಿ ಏನು ಪ್ರಯೋಜನ? ನಾಳೆ ಅವರನ್ನು ಎದುರಿಸೋದು ಹೇಗೆ... ಅದನ್ನು ಹೇಳಿ"
"ಆ ಮುಠ್ಠಾಳ ನಿನ್ನ ಮಗನನ್ನೇ ಕೇಳು" ಏನೂ ತೋಚದೆ ಕಿರುಚಿದರು ಶ್ರೀಧರ್.
"ಅವನಿಗೇನು ಗೊತ್ತಿದೆ.. ಅವರೇನು ಹೇಳಬಹುದು ಅಂತಲೇ ಆಲೋಚಿಸುತ್ತಿದ್ದೇನೆ... ನನಗೇನೂ ಹೊಳೆಯುತ್ತಾ ಇಲ್ಲ. ಅವನು ಅವಳನ್ನೇ ಮದುವೆಯಾಗುವುದಾಗಿ ನಾವು ಮಾತು ಕೊಡಬೇಕು ಅಂದರೆ? ಒಂದು ನಿಶ್ಚಿತಾರ್ಥ ಮಾಡೋಣ ಅಂದರೆ?.. ನಾಳೆ ನೀವು ಆಫೀಸಿಗೆ ಹೋಗಬೇಡಿ, ಮನೆಯಲ್ಲೇ ಇದ್ದು ಬಿಡಿ" ಸಮಸ್ಯೆಗೆ ಪರಿಹಾರ ತನ್ನ ಕೈ ಎಟುಕಿನಲ್ಲಿಲ್ಲ ಎಂದೇ ನಂಬಿದ್ದಳು ಸೀಮಾ.
"ಏನೇ ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದೀಯ? ಅವನಿನ್ನೂ ಹದಿ ಹರೆಯ, ಕನಿಷ್ಟ ಪಕ್ಷ ಇನ್ನೂ ಆರೇಳು ವರ್ಷ ಕಲೀಬೇಕು.. ಆಮೇಲೆ ಕೆಲಸ ಸಿಗಬೇಕು.. ಮದುವೆ ಮಾತೆಲ್ಲ ಈಗ ಆಗೋಲ್ಲ ಅನ್ನು"
"ಆ ಹುಡುಗಿ ಜೊತೆ ನಿನ್ನೆ ಅನಿತಾ ಮಾತಾಡಿದ್ದಳು. ನಿನ್ನ ತಮ್ಮ ನನಗೆ 'ಯೂ ರಾಸ್ಕಲ್ ಬಿಚ್, ನಾನೇ ಅದಕ್ಕೆ ಕಾರಣ ಅಂತ ಹೇಗೆ ಹೇಳ್ತೀಯಾ? ನಿನಗೆಷ್ಟು ಗೆಳೆಯರಿದ್ದರೋ.. ಗೋ ಎಂಡ್ ಗೆಟ್ ಎಬಾರ್ಟೆಡ್' ಅಂತಾನೆ. ನಾನೇನು ಇಂಡಿಯಾದ ಹಳ್ಳಿ ಹೆಣ್ಣು ಅಂತ ತಿಳ್ಕೊಂಡಿದ್ದಾನಾ? "ನಾನು ಸೂಟ್ ಫೈಲ್ ಮಾಡಿ ಡಿ ಎನ್ ಎ ಟೆಸ್ಟ್ ಮಾಡಿಸಿ ನಿನ್ನ ಇಡೀ ಕುಟುಂಬವನ್ನು ಬೀದಿಗೆಳೆಯುತ್ತೇನೆ... ಅಂದಳಂತೆ" ವರದಿ ಒಪ್ಪಿಸಿದಳು ಸೀಮಾ.
"ಹೌದು ಕಣೇ. ಆಕೆ ಮಗು ಹೆತ್ತು, ಡಿ ಎನ್ ಎ ಮಾಡಿಸಿ, ಕೋರ್ಟ್ ಕೇಸು ಹಾಕಿದರೆ ಮುಂದೆ ಜೀವನ ಪರ್ಯಂತ ಮೆಂಟೆನೆನ್ಸ್ ಕೊಡಬೇಕಾದೀತು. ಒಂದು ಕಡೆ ಮರ್ಯಾದೆ ಹೋಗುತ್ತೆ, ಇನ್ನೊಂದು ಕಡೆ ಹಣ, ಸೊತ್ತು ನಾಶವಾಗಿ ಹೋಗುತ್ತೆ ಕಣೇ... ಹೇಗಾದರೂ ಮಾಡಿ ಅದನ್ನೆಲ್ಲ ತಪ್ಪಿಸೇ..." ಆ ಆಲೋಚನೆಗೇ ಹೆದರಿದ್ದರು ಶ್ರೀಧರ್.
"ಎನಾದರೂ ಮಾಡಿ ಆಕೆಯನ್ನು ಪುಸಲಾಯಿಸಿ ಅಬಾರ್ಶನ್ ಮಾಡಿಸುವಂತೆ ಮಾಡುವುದೇ ಎಲ್ಲರಿಗೂ ಹಿತ ಅಂತ ನಾಳೆ ನೀವೊಂದು ಮಾತು ರೇಣುಕಪ್ಪನವರಿಗೆ ಹೇಳ್ತೀರಾ?" ಸೂಚಿಸಿದಳು ಸೀಮಾ.
" ನನ್ನ ಪ್ರಾರಬ್ಧ. ನನ್ನ ಮಗ ನಿಮ್ಮ ಮಗಳನ್ನು ಗರ್ಭಿಣಿ ಮಾಡಿದ್ದಾನೆ. ನೀವು ಆಕೆಯನ್ನ ಅಬಾರ್ಶನ್ ಮಾಡಿಸಿಕೊಳ್ಳುವಂತೆ ಒತ್ತಾಯ ಮಾಡಬೇಕು ಅಂತ ಯಾವ ಬಾಯಿಯಲ್ಲಿ ಹೇಳಲೇ ನಾನು? ಇದೇನು ಹಿಂದಿ ಸಿನೇಮಾನಾ?" ದನಿಯೆತ್ತಿ ಅಬ್ಬರಿಸಿದ ಶ್ರೀಧರ್, ಮರುಕ್ಷಣದಲ್ಲಿ ದೈನ್ಯದಿಂದ "ಏನಾದ್ರೂ ಮಾಡಿ ಆಕೆ ಅಬಾರ್ಶನ್ ಮಾಡಿಕೊಳ್ಳುವಂತೆ ನೀನೇ ಪ್ಲಾನ್ ಹಾಕಿ ಸುಧಾರಿಸೇ" ಅನ್ನುತ್ತ ಬೇಡಿಕೊಂಡರು.
"ಎನೋಪ್ಪ ನಂಗೇನೂ ಹೊಳೀತಿಲ್ಲ. 'ಅವರು ಬರಲಿ ನಾನು ಸುಧಾರಿಸುತ್ತೇನೆ, ನೀವು ಟೆನ್‍ಶನ್ ಮಾಡ್ಕೋ ಬೇಡಿ' ಅಂದಿದ್ದಾಳೆ ಅನಿತಾ. ದೇವರ ಮೇಲೆ ಭಾರ ಹಾಕಿ ಅವಳನ್ನು ನಂಬಿ ಕೂತಿದ್ದೀನಿ. ನಾಳೆ ನೋಡೋಣ. ನೀವು ಮಲಗಿ. ನಾನು ಹಾಲ್‍ನಲ್ಲಿ ಮಲಗುತ್ತೇನೆ. ರಾತ್ರಿ ಇನ್ನು ಸತೀಶ ಏನಾದ್ರೂ ಬೇಡದ ಅವಾಂತರ ಮಾಡಿಕೊಂಡಾನು" ಅನ್ನುತ್ತ ದೀಪ ಆರಿಸಿದಳು ಸೀಮಾ.
ನಿದ್ದೆ ಬಾರದೆ ಹೊರಳಾಡಿದರು ಶ್ರೀಧರ್. ಎದ್ದು ಹೋಗಿ ಒಂದೇ ಬಾರಿಗೆ ಎರಡು ಪೆಗ್ ವಿಸ್ಕಿ ಇಳಿಸಿ ಬಂದು ಪುನ: ಮಲಗಿದರು. ಆದರೂ ನಿದ್ದೆ ಬರುವ ಸೂಚನೆಯೇ ಇಲ್ಲವಾಗಿತ್ತು. ಏನೆಲ್ಲ ಕನಸು ಕಟ್ಟಿ ಇಲ್ಲಿಗೆ ಬಂದಿದ್ದರವರು. ಇಂಡಿಯಾ ಬಿಡುವಾಗ ಅಭಿಮಾನ ನಮ್ಮ ಸಂಸ್ಕೃತಿಯ ಮೇಲೆ, ದೃಷ್ಟಿ ಡಾಲರ್ ಸಂಪಾದನೆ ಮೇಲೆ ಇದ್ದದ್ದು. ಇಲ್ಲಿ ಬಂದು ನೆಲೆ ನಿಂತು ಕಷ್ಟ ಪಟ್ಟು ದುಡಿದು ಸಂಪಾದಿಸಿದ ಡಾಲರಿನೊಡನೆ ಬಂದಿರುವುದು ಅಮೆರಿಕನ್ ಸಂಸ್ಕೃತಿ. ಇದೇ ಸ್ವಚ್ಛಂದ ಸಂಸ್ಕೃತಿಯ ಆಕರ್ಷಣೆಗೆ ಇಲ್ಲಿಗೆ ಬಂದ ಅದೆಷ್ಟು ಭಾರತೀಯರು ಬಲಿಯಾದ ಹಾಗೆ ತನ್ನ ಕುಟುಂಬವೂ ಬಲಿಯಾಯಿತಲ್ಲ! ಇನ್ನೂ ಮೀಸೆ ಮೂಡದ ಹುಡುಗ ಹಾಳಾಗಿ ಹೋದನಲ್ಲ! ಇಲ್ಲೇ ಹುಟ್ಟಿ ಬೆಳೆದ ಅವನಲ್ಲಿ ಭಾರತೀಯ ರಕ್ತವಾದ್ರೂ ಸಂಸ್ಕೃತಿ ಅಮೆರಿಕನ್ ತಾನೇ! ತಾವೇ ತಂದುಕೊಂಡ ಅಸಹಾಯಕ ಸ್ಥಿತಿಗೆ ಮರುಗಿದರು ಶ್ರೀಧರ್. ಮನಸ್ಸು ಒಮ್ಮೊಮ್ಮೆ 'ಬಾಕಿ ಅಮೇರಿಕನ್ನರಂತೆ ಇದೊಂದು ಸಮಸ್ಯೆಯೇ ಅಲ್ಲ ಅನ್ನುವಂತೆ ನೀನೂ ಇದ್ದುಬಿಡು' ಅನ್ನುವ ಸೂಚನೆ ಕೊಡುತ್ತಿತ್ತು. ಇಷ್ಟೆಲ್ಲ ಆದ್ರೂ ರೇಣುಕಪ್ಪ ತನಗೆ ಯಾಕೆ ಫೋನ್ ಮಾಡಿಲ್ಲ? ಚಿಂತಿಸಿದರು ಶ್ರೀಧರ್. ಆತನೂ ನನ್ನ ಹಾಗೆಯೇ ಭಾರತೀಯ ತಾನೇ. ಅದಕ್ಕೂ ಮೇಲೆ ಹೆಣ್ಣು ಹೆತ್ತ ತಂದೆ. ಮಗಳ ಅಕ್ರಮ ಬಸಿರಿನ ಬಗೆಗೆ ಯಾವ ಬಾಯಿಯಲ್ಲಿ ನನ್ನಲ್ಲಿ ಮಾತನಾಡಿಯಾನು? ಪಾಪ. ಬಹುಶ: ನಾಲ್ಕು ಪೆಗ್ ಹಾಕಿ ಮಲಗಿರಬೇಕು... ಈ ಪರಿಸ್ಥಿತಿಯಲ್ಲಿ ಆತ ಬೇರೇನು ತಾನೇ ಮಾಡಲು ಸಾಧ್ಯ?
... ಅಥವಾ ಈ ದ್ವಂದ್ವದಿಂದ ಹೊರಬಂದು ಆತ ನಿಜಕ್ಕೂ ಅಮೆರಿಕನ್ ಆಗಿ ತೇರ್ಗಡೆಯಾಗಿಬಿಟ್ಟಿದ್ದಾನೆಯೇ?
***
ಮರುದಿನ ಬೆಳಿಗ್ಗೆ ಶ್ರೀಧರ್ ಮಗಳು ಅನಿತಾಳಲ್ಲಿ ಸಮಾಲೋಚನೆ ನಡೆಸಿದರು. "ಡ್ಯಾಡಿ... ನೀವು ನಿಶ್ಚಿಂತೆಯಿಂದ ಆಫೀಸಿಗೆ ಹೋಗಿ. ನಾನು ಸುಧಾರಿಸುತ್ತೇನೆ" ಅಂದಳು ಅನಿತಾ.
"ಏನೋಮ್ಮ.. ನಾವು ಜಾಗರೂಕರಾಗಿರಬೇಕು, ನಮ್ಮಿಂದ ತಪ್ಪಾಗಿದೆ" ಅಂದರು ಶ್ರೀಧರ್.
"ತಪ್ಪು ಗಿಪ್ಪು ಏನಿಲ್ಲ ಡ್ಯಾಡ್.. ನಮ್ಮದು ತಪ್ಪಾದ್ರೆ ಅವರದ್ದೂ ತಪ್ಪು. ಅವರು ಏನು ಆಲೋಚಿಸುತ್ತಿದ್ದಾರೆ ಅಂತಲೇ ಗೊತ್ತಿಲ್ಲದೆ ನಾವ್ಯಾಕೆ ತಲೆ ಕೆಡಿಸಿಕೊಳ್ಳೋದು? ಅವರು ಬರಲಿ, ಅವರ ವಿಚಾರ ಹೇಳಲಿ, ಆಮೇಲೆ ನಾವು ನಮ್ಮ ವಿಚಾರ ಹೇಳೋದು. ಕಾಂಪ್ರಮೈಸ್ ಮಾಡಬಹುದಾ ನೋಡೋದು... ನಾನಿದ್ದೇನಲ್ಲ, ನೋಡಿಕೊಳ್ಳುತ್ತೇನೆ" ವಿಶ್ವಾಸದಿಂದ ನುಡಿದಳು ಅನಿತಾ.
ಮಗಳ ಧೈರ್ಯ ಕಂಡು ಶ್ರೀಧರರಿಗೆ ಸಂತಸವಾಯಿತು. ಅಮೇರಿಕಾದಲ್ಲಿ ಎಮ್ ಬಿ ಎ ಕಲಿಯುವ ಹುಡುಗಿ. ಸಮಸ್ಯೆಗಳಿಗೆ ಪರಿಹಾರ ಹೇಗೆ ಕಂಡುಕೊಳ್ಳಬೇಕು ಅನ್ನುವುದೇ ಅವಳ ಅಧ್ಯಯನದ ವಸ್ತು ತಾನೇ! "ಡ್ಯಾಡ್ ನೀವು ಮನೆಯಲ್ಲಿ ಇಲ್ಲದಿದ್ದರೆ ಇನ್ನೊಂದು ಅನುಕೂಲ ಇದೆ. ಯಾವುದಾದರೂ ಶರತ್ತಿಗೆ ಒಪ್ಪಿಕೊಳ್ಳುವ ಮೊದಲು ಆಲೋಚಿಸಬೇಕಾಗಿ ಬಂದರೆ 'ಅಪ್ಪನಲ್ಲಿ ಕೇಳಿ ಹೇಳುತ್ತೇವೆ' ಅಂತ ಸ್ವಲ್ಪ ಸಮಯಾವಕಾಶ ಪಡೆಯಬಹುದು" ಅಂದಳು ಮಗಳು!
"ಸರಿ. ಸಮಸ್ಯೆಯ ಪರಿಹಾರಕ್ಕೆ ಆದ್ಯತೆ ಕೊಡು. ಜಗಳ ಬೇಡ ನಮಗೆ" ಎಂದು ಮಗಳಿಗೆ ಸೂಚನೆ ನೀಡಿ "ಯದ್ವಾ ತದ್ವಾ ಮಾತಾಡಬೇಡಿ, ಅವರಿಗೆ ಬಂದ ಸಮಸ್ಯೆಯ ಬಗ್ಗೆ ನಮಗೂ ದು:ಖವಿದೆ ಅಂತ ಉಪಾಯವಾಗಿ ಆ ಹುಡುಗಿಯ ಮನವೊಲಿಸಲು ನೋಡಿ" ಅಂತ ಹೆಂಡತಿಗೆ ನಿರ್ದೇಶವಿತ್ತು ಆಫೀಸಿಗೆ ಹೊರಟರು ಶ್ರೀಧರ್.
ಕಾರು ನೂರು ಕಿ ಮೀ ವೇಗದಲ್ಲಿ ಓಡುತ್ತಿತ್ತು. ಶ್ರೀಧರ್ ತಲೆತುಂಬಾ ಕಲಕಿ ಹಾಕಿದ ಯೋಚನೆಗಳು... ಹಣದ ಬೆಂಬತ್ತಿ ಮಕ್ಕಳಿಗೆ ತಾನು 'ಅಪ್ಪ'ನಾಗುವಲ್ಲಿ ಹಿಂದೆ ಬಿದ್ದೆನೆ? ತಾನು ಮಕ್ಕಳೊಂದಿಗೆ ಇನ್ನೂ ಹೆಚ್ಚು ಸಮಯ ಕೊಡುತ್ತಿದ್ದರೆ ಈ ರೀತಿ ಆಗುತ್ತಿರಲಿಲ್ಲವೇ? ಈ ಪ್ರಾಯದಲ್ಲಿ ಈ ರೀತಿ ನಡತೆ ತೋರಿದ ಮಕ್ಕಳ ಭವಿಷ್ಯ ಏನು? ನಾನು ಅಮೆರಿಕಾಕ್ಕೆ ಬಂದು ತಪ್ಪು ಮಾಡಿದೆನೇ? ನಮ್ಮ ಸಂಸ್ಕೃತಿ ಇದಲ್ಲ, ಭಾರತಕ್ಕೆ ಮರಳೋಣ ಅಂದರೆ ಈ ಮಕ್ಕಳು ಬಂದಾರೆ? ಎಲ್ಲ ಪ್ರಶ್ನೆಗಳು ಒಂದರ ಹಿಂದೆ ಒಂದು ಮನಸ್ಸಿನಲ್ಲಿ ಹಾದು ಹೋಗುವಾಗ ಉತ್ತರ ಇಲ್ಲದೆ ಚಡಪಡಿಸಿದರು ಶ್ರೀಧರ್. ಆಫೀಸಿಗೆ ಬರುತ್ತಲೇ ಎಂದಿನಂತೆ ಕೋಟು ತೆಗೆಯುವ ನೆವದಲ್ಲಿ ಬಂದ ಕ್ರಿಸ್ಟಿನಾ ಕೋಟು ತೆಗೆಯುತ್ತ ಬ್ರಾ ಇಲ್ಲದ ಎದೆ ತಾಗಿಸಿದರೂ ಮನಸ್ಸು ಪುಳಕಗೊಳ್ಳಲಿಲ್ಲ. ಇದನ್ನು ಗ್ರಹಿಸಿದ ಕ್ರಿಸ್ಟಿನಾ ಸಮಸ್ಯೆ ಏನೆಂದು ಕೇಳಿ ಪಟ್ಟು ಹಿಡಿದಳು. ಎಲ್ಲ ಕತೆ ಕೇಳಿದ ಆಕೆ "ಇಷ್ಟೇನಾ?... ಗ್ಲೆನ್ ಕ್ಲಿನಿಕ್, ಎಂಟು - ಹತ್ತು ಸಾವಿರ ಡಾಲರ್, ಎರಡು ಅಥವಾ ಮೂರು ದಿನ. ಎಲ್ಲ ಸರಿ ಹೋಗುತ್ತೆ. ಇದರಲ್ಲಿ ತಲೆ ಹೋಗುವ ಸಮಸ್ಯೆ ಏನಿದೆ? ಆಕೆಯನ್ನು ಇಲ್ಲಿ ಬರಲು ಹೇಳು, ನಾನು ಕರೆದುಕೊಂಡು ಹೋಗುತ್ತೇನೆ" ಅಂದಳು. ಅವಳೊಡನೆ ಈ ಬಗ್ಗೆ ಚರ್ಚೆ ಬಯಸದೆ "ತಲೆ ಕೆಟ್ಟು ಹೋಗಿದೆ... ಎಲ್ಲಾ ಮೀಟಿಂಗ್ ಕ್ಯಾನ್ಸಲ್ ಮಾಡು, ಯಾರಿಗೂ ಅಪಾಯಿಂಟ್‍ಮೆಂಟ್ ಕೊಡಬೇಡ" ಎಂದಷ್ಟೇ ಹೇಳಿ ಕ್ಯಾಬಿನ್ನಿಗೆ ಬಂದು ಕುಳಿತರು ಶ್ರೀಧರ್. ಯಾವ ಕೆಲಸ ಮಾಡಲೂ ಮನಸ್ಸಿನ ಏಕಾಗ್ರತೆ ಇರಲಿಲ್ಲ. ಸುಮ್ಮನೆ ಕಣ್ಣು ಮುಚ್ಚಿ ಕುಳಿತುಕೊಂಡಾಗ ಕಣ್ಣೆದುರು ಅಜ್ಜಿ ಬಂದ ಹಾಗಾಯಿತು. "ದೊಡ್ಡ ಸಮಸ್ಯೆ ಅಂತ ಯಾವುದೂ ಇಲ್ಲ. ಹನುಮಾನ್ ಚಾಲೀಸು ಹೇಳು.. ಸಮಸ್ಯೆ ಪರಿಹಾರವಾಗುತ್ತೆ" ಅಂತ ಹೇಳಿದ ಹಾಗಾಯಿತು. ಕಣ್ಣು ಬಿಟ್ಟರು ಶ್ರೀಧರ್. ಎಲ್ಲಿ ಅಕ್ರಮಗರ್ಭದ ಸಮಸ್ಯೆ.. ಎಲ್ಲಿ ಅದಕ್ಕೆ ಬ್ರಹ್ಮಚಾರಿ ಹನುಮಾನ್ ಕೊಡುವ ಪರಿಹಾರ! ಆ ಉದ್ವೇಗದ ನಡುವೆಯೂ ಶ್ರೀಧರರಿಗೆ ಒಂದು ಸಣ್ಣ ನಗು ಬಂತು. ಹೇಗೂ ಬೇರೇನೂ ಕೆಲಸ ಮಾಡಲು ಸಾಧ್ಯವಿಲ್ಲವಲ್ಲ, ಹನುಮಾನ್ ಚಾಲೀಸೇ ಇರಲಿ ಎಂದು ಕಣ್ಣು ಮುಚ್ಚಿ ಪಠಿಸತೊಡಗಿದರು.
ಹಿಂದಿನ ದಿನ ರಾತ್ರಿ ನಿದ್ದೆಯಿಲ್ಲದಿದ್ದುದರಿಂದಲೋ ಅಥವಾ ಹನುಮಾನ್ ಚಾಲೀಸು ಪ್ರಭಾವವೋ, ಎರಡು ಮೂರು ಗಂಟೆ ನಿದ್ದೆ ಬಂದಿರಬೇಕು. ಟೆಲಿಫೋನ್ ಬಾರಿಸಿದಾಗ ಎಚ್ಚೆತ್ತರು ಶ್ರೀಧರ್. "ಸರ್, ನಿಮ್ಮ ಮಗಳು" ಅಂತ ಕ್ರಿಸ್ಟಿನಾ ಹೇಳಿದಾಗ ಗಡಿಬಿಡಿಯಲ್ಲಿ ಫೋನೆತ್ತಿದರು ಶ್ರೀಧರ್.
"ಡ್ಯಾಡ್.. ಕಂಗ್ರಾಜುಲೇಶನ್ಸ್.. ನಿಮ್ಮ ಸಮಸ್ಯೆ ಪರಿಹಾರವಾಯಿತು. ತಾತ್ಕಾಲಿಕ ಒಪ್ಪಿಗೆ ಕೊಟ್ಟು ನಿಮ್ಮಲ್ಲಿ ಕೇಳಿ ಅಂತಿಮ ನಿರ್ಧಾರ ಅಂತ ಹೇಳಿದ್ದೇನೆ" ಅಂದಳು ಅನಿತಾ.
"ಗುಡ್... ಏನು ನಿರ್ಧಾರ ಮಾಡಿದಿರಿ?" ಆತುರ ತೋರಿಸಿದರು ಶ್ರೀಧರ್.
"ನೀವು ಮನೆಗೆ ಬನ್ನಿ. ಸಮಸ್ಯೆ ಪರಿಹಾರವಾದ ಸಂತೋಷ ಆಚರಿಸೋಣ" ಸಂಭ್ರಮದಲ್ಲಿ ಹೇಳಿದಳು ಮಗಳು.
ಶ್ರೀಧರರಿಗೆ ಮನಸ್ಸು ನಿರಾಳವಾಯಿತು. ಮಗಳು ಜಾಣೆ... ಇಷ್ಟು ದೊಡ್ಡ ಸಮಸ್ಯೆ ಪರಿಹಾರ ಮಾಡಿದಳೆಂದರೆ!
ಉತ್ಸಾಹದಲ್ಲಿ ಮನೆಗೆ ಬಂದರು ಶ್ರೀಧರ್.
"ಡ್ಯಾಡ್, ಪಾಪ ಹುಡುಗಿ. ಅವಳ ಬೇಡಿಕೆ ಇದ್ದದ್ದು ಮೂರು.. ಒಂದು - 'ಯಾರ್‍ಯಾರ ಜೊತೆ ಮಲಗಿದ್ದೀಯಾ ಏನೋ' ಅಂತ ಹೇಳಿದ್ದಕ್ಕೆ ಸತೀಶ ಅವಳಲ್ಲಿ ರಿಟನ್ ಅಪಾಲಜಿ ಕೇಳಬೇಕು, ಎರಡು- 'ಅಬಾರ್ಶನ್ ಮಾಡಿಕೊಂಡಿದ್ದಾಳೆ' ಅಂತ ಮುಂದಕ್ಕೆ ಸತೀಶ ಇನ್ನೆಲ್ಲೂ ತಪ್ಪಿಯೂ ಹೇಳುವುದಿಲ್ಲ ಅಂತ ಅಂಡರ್‍ಟೇಕಿಂಗ್ ಬರೆದುಕೊಡಬೇಕು ಮತ್ತು ಮೂರು - ಅಬಾರ್ಶನ್ ಮತ್ತು ಆಸ್ಪತ್ರೆ ಖರ್ಚು ನಾವು ಕೊಡಬೇಕು" ವಿವರಿಸಿದಳು ಅನಿತಾ.
"ಅಷ್ಟೆಯಾ...? ಒಪ್ಪಿಕೊಳ್ಳಬೇಕಿತ್ತು" ಶ್ರೀಧರ್ ನಿಟ್ಟುಸಿರು ಬಿಡುತ್ತ ನುಡಿದರು.
"ಆಸ್ಪತ್ರೆ ಖರ್ಚು ಹತ್ತು ಸಾವಿರ ಡಾಲರ್ ಆಗುತ್ತಂತೆ. ಅಬಾರ್ಶನ್ನಿಗೆ ಎಂಟು, ಇತರ ಖರ್ಚು ಎರಡು.. ಆಕೆಯದೂ ತಪ್ಪಿದೆ ತಾನೇ? 'ಆರು ನಾವು ಕೊಡುತ್ತೇವೆ, ನಾಲ್ಕು ನೀವೇ ಹಾಕಿಕೊಳ್ಳಬೇಕು' ಅಂದೆ ನಾನು. ಆಕೆ ಕೇಳಲಿಲ್ಲ. ಹತ್ತೂ ನಾವೇ ಕೊಡಬೇಕಂತೆ" ನುಡಿದಳು ಅನಿತಾ.
"ಈಗಲೇ ಫೋನ್ ಮಾಡು" ಆತುರ ತೋರಿದರು ಶ್ರೀಧರ್. "ನಮಗೆ ಒಪ್ಪಿಗೆ ಅನ್ನು"
"ತಾಳಿ ಡ್ಯಾಡ್... ಪೂರ್ತಿ ಕೇಳಿ.... ಚೌಕಾಶಿ ಮಾಡಿ ಕೊನೆಗೆ ನಾನು ಎಂಟು ಸಾವಿರಕ್ಕೆ ಒಪ್ಪಿದೆ. ಈಗ ಹಣ ನೀವು ಕೊಡಬೇಕು. ಸತೀಶನಿಗೆ ಇನ್ನು ಮೂರು ವರ್ಷಕ್ಕೆ ಪಾಕೆಟ್ ಮನಿ ಬಂದ್- ಇದಕ್ಕೆ ಅವನೂ ಒಪ್ಪಿದ್ದಾನೆ" ಬೀಗುವ ದನಿಯಲ್ಲಿ ನುಡಿದಳು ಅನಿತಾ.
"ಈಡಿಯಟ್. ಅವನೇನು ಒಪ್ಪಿಕೊಳ್ಳೋದು? ಅವನನ್ನೇನು ಕೇಳೋದು? ಮಾನ ಮರ್ಯಾದೆ ಏನು ಅಂತ ಗೊತ್ತಿಲ್ಲದವ" ಅಬ್ಬರಿಸಿದರು ಶ್ರೀಧರ್.
"ಸತೀಶನದ್ದು ಮಾತ್ರ ತಪ್ಪು ಅಂತೀರಲ್ಲ ನೀವು, ಅವಳದ್ದೂ ತಪ್ಪು ಇದೆ ತಾನೆ" ಗೊಣಗಿದಳು ಸೀಮಾ.
"ಹೌದು ಡ್ಯಾಡ್... ಇಬ್ಬರೂ ಈಡಿಯಟ್ಸ್... ಸಾಮಾನ್ಯ ವಿವೇಕವೂ ಇಲ್ಲ. ಎಲ್ಲರಿಗೂ ಟೆನ್‍ಶನ್ ಮಾಡಿ ಹಾಕಿದ್ರು. ವೃಥಾ ಖರ್ಚು ಬೇರೆ. ನಾನು ಸತೀಶನಿಗೆ ಹೇಳಿದ್ದೇನೆ - ಇನ್ನೊಮ್ಮೆ ಇಂತಹ ಕಂಪ್ಲೇಂಟ್ ಬಂದರೆ ನಾವ್ಯಾರೂ ಸಹಾಯಕ್ಕೆ ಬರೋದಿಲ್ಲ, ಅವನೇ ನಿಭಾಯಿಸಬೇಕು... ಅಲ್ವಾ ಡ್ಯಾಡ್?" ಅನಿತಾ ಇನ್ನೂ ಬೀಗುತ್ತಿದ್ದಳು.
ತಲೆ ತಗ್ಗಿಸಿ ಕುಳಿತಿದ್ದ ಸತೀಶ.
"ಡ್ಯಾಡ್‍ನ ಎದುರಲ್ಲಿ ಇನ್ನೊಮ್ಮೆ ಹೇಳುತ್ತಿದ್ದೇನೆ.." ಅನಿತಾ ಸತೀಶನ ಕಿವಿ ಹಿಂಡಿ ಹಿಡಿದು ಹೇಳಿದಳು " ಚೆನ್ನಾಗಿ ಕೇಳಿಸಿಕೋ... ಇನ್ನು ಹೀಗೆಲ್ಲ ಸಿಕ್ಕಿ ಹಾಕಿಕೊಳ್ಳಬೇಡ. ಕಾಂಡಮ್ ಎಲ್ಲೆಲ್ಲೂ ಸಿಗುತ್ತೆ. ಬೇಕಿದ್ರೆ ನನ್ನ ಡ್ರೆಸ್ಸಿಂಗ್ ಟೇಬಲ್ಲಿನ ಡ್ರಾವರಿನಲ್ಲೂ ಇದೆ. ಯಾವಾಗ ಬೇಕಾದ್ರೂ ತೆಗೆದುಕೋ, ನಿನ್ನ ಜಾಗ್ರತೆ ನೀನು ನೋಡಿಕೋ. ಅಲ್ಲವಾ ಡ್ಯಾಡ್?" ಯಾವುದೇ ಅಪರಾಧ ಪ್ರಜ್ಞೆಯಿಲ್ಲದೆ ಹೇಳಿದ ಮಗಳ ಜಾಗ್ರತೆಯ ಮಾತು ಕೇಳಿ ಶ್ರೀಧರ್ ಎದೆ ಬಡಿತ ನಿಂತ ಹಾಗಾಗಿ ಅಲ್ಲೆ ಕುಸಿದು ಕುಳಿತರು. ಕೇಳಿಸಿಕೊಂಡ ಸೀಮಾ ಮತ್ತೂ ಅಲ್ಲಿರಲಾರದೆ ಬ್ಲಡ್ ಪ್ರೆಶರ್ ಮಾತ್ರೆ ತರುವ ನೆವ ಹೇಳಿ ಒಳಗೋಡಿದ್ದಳು.
ಮಕ್ಕಳಿಬ್ಬರೂ ಗ್ಲಾಸುಗಳಲ್ಲಿ ಬಿಯರ್ ತುಂಬಿಸಿ, ಚಿಪ್ಸ್‍ನೊಂದಿಗೆ ಚಪ್ಪರಿಸಿ ತಿನ್ನುತ್ತಾ ಚಿಯರ್ಸ್ ಅನ್ನುತ್ತ ಸಮಸ್ಯೆ ಪರಿಹಾರವಾದ ಸಂತಸವನ್ನು ಶುದ್ಧ ಅಮೆರಿಕನ್ ಶೈಲಿಯಲ್ಲಿ ಅಚರಿಸುತ್ತಿದ್ದರು.
ಸಾವರಿಸಿ ಕಣ್ಣು ತೆರೆದು, ಮಕ್ಕಳನ್ನೇ ನೋಡುತ್ತ ಕುಳಿತಿದ್ದ ಶ್ರೀಧರರು ತಾನೂ ಅವರನ್ನು ಸೇರಿಕೊಳ್ಳಬೇಕೇ ಬೇಡವೇ ಅನ್ನುವುದನ್ನು ನಿರ್ಧರಿಸಲಾಗದೆ 'ಯಾವುದಕ್ಕೂ ಸೀಮಾ ಬರಲಿ' ಎಂದು ಯೋಚಿಸಿ ತನ್ನ ಪಾಡಿಗೆ ಹನುಮಾನ್ ಚಾಲೀಸು ಹೇಳುತ್ತ ಅಲ್ಲೇ ಕುಳಿತಿದ್ದರು.
***









HAHAHAHA... This is So Much
HAHAHAHA... This is So Much into Reality... very very good story (may be true in many families). Every NRI(Kannadiga) should read this story... Congratz to the Writer
The story is very good and
The story is very good and very near to real life.
The new format is attractive. Good job everyone