ಜಗತ್ತಿನ ಅತ್ಯಂತ ದುಬಾರಿ ಆಧುನಿಕ ಕೈಗಡಿಯಾರ
 •    •  
ದ ಟೂರ್ ಡೆ ಲಿಲ್ಲಿ ಕೈಗಡಿಯಾರ

 

                         -ಅರ್ಶದ್ ಹುಸೇನ್ ಎಂ. ಹೆಚ್.

(ಈ ಲೇಖನದ ಸಾರಾಂಶ ಕನ್ನಡ ವಾರಪತ್ರಿಕೆ-'ತರಂಗ'ದ ೨೪ನೇ ಏಪ್ರಿಲ್ ಸಂಚಿಕೆಯಲ್ಲಿ ಪ್ರಕಟವಾಗಿದೆ)

 ಕೈಗಡಿಯಾರ ನಮ್ಮೆಲ್ಲರ ಬಳಿ ಇದೆ. ಹಿಂದಿನವರಿಗೆ ಹೋಲಿಸಿದರೆ ನಮ್ಮ ಬಳಿ ಇರುವ ಕೈಗಡಿಯಾರಗಳು ಹೆಚ್ಚು ಕರಾರುವಾಕ್ಕಾಗಿಯೂ ಸುಂದರವಾಗಿಯೂ ಇದೆ. ಕೈಗಡಿಯಾರದ ವಿನ್ಯಾಸ, ಬಿಡಿಭಾಗ, ವೈಶಿಷ್ಟ್ಯತೆ, ತಯಾರಿಸುವ ಸಂಸ್ಥೆ ಇತ್ಯಾದಿಗಳನ್ನವಲಂಬಿಸಿ ನೂರು ರೂಪಾಯಿಯಿಂದ ಲಕ್ಷ ರೂಪಾಯಿ ಬೆಲೆಬಾಳುವ ಕೈಗಡಿಯಾರ ಮಾರುಕಟ್ಟೆಯಲ್ಲಿ ಲಭ್ಯವಿವೆ.  ಆದರೆ ಇವು ಯಾವುವೂ ಇಂದು ಲಭ್ಯವಿರುವ ಅತ್ಯಂತ ದುಬಾರಿ ಕೈಗಡಿಯಾರದ ಒಂದು ಭಾಗಕ್ಕೂ ಸಮನಾಗುವುದಿಲ್ಲವೆಂದರೆ ನಂಬುತ್ತೀರಾ?

 ನಂಬಲೇಬೇಕು.  ಶೀರ್ಷಿಕೆಯಲ್ಲಿ ಅತ್ಯಂತ ದುಬಾರಿ ಕೈಗಡಿಯಾರ ಎನ್ನುವ ಬದಲು ಆಧುನಿಕ ಕೈಗಡಿಯಾರವೆಂದು ಕರೆದದ್ದೇಕೆ ಗೊತ್ತೇ? ಜಗತ್ತಿನ ಅತ್ಯಂತ ದುಬಾರಿ ಕೈಗಡಿಯಾರ ಎಂದ ಕೂಡಲೇ ಹಳೆಯ ಹಾಗೂ ಅಪರೂಪದ ಕೈಗಡಿಯಾರಗಳು ಎದುರಿಗೆ ನಿಲ್ಲುತ್ತವೆ. ಇಂದು ಲಭ್ಯವಿಲ್ಲದ ಅಥವಾ ಪ್ರಸಿದ್ಧ ವ್ಯಕ್ತಿಗಳು ಧರಿಸಿದ್ದರೆಂದು ಪ್ರಖ್ಯಾತವಾದವು ಹರಾಜಿಗೆ ಬಂದೊಡನೆ ವಿಪರೀತ ಪ್ರಾಮುಖ್ಯತೆ ಪಡೆಯುತ್ತವೆ.  ಹರಾಜಿಗೆ ಬಂದವರ ಕೂಗಿಗನುಸಾರವಾಗಿ ಬೆಲೆ ಏರಿ ಅದಕ್ಕೆ ಕಟ್ಟಿದ್ದ ಬೆಲೆ ಬಿದ್ದುಹೋಗುತ್ತದೆ. ಬೆಲೆ ಕಟ್ಟಲಾಗದ ಇವುಗಳನ್ನು ಆಧುನಿಕ ಕೈಗಡಿಯಾರಗಳೊಂದಿಗೆ ಹೋಲಿಸಲು ಸಾಧ್ಯವಿಲ್ಲ.  ಹಾಗಾಗಿ ಇಂದಿನ ದಿನ ಉಳ್ಳವರು ಕೊಳ್ಳಬಹುದಾದ ದುಬಾರಿ ಕೈಗಡಿಯಾರ ಎಂದರೆ ಮಾತ್ರ ಶೀರ್ಷಿಕೆ ಸರಿಹೋಗುತ್ತದೆ.

 ವಿಶ್ವದಲ್ಲಿ ಕೈಗಡಿಯಾರಗಳನ್ನು ತಯಾರಿಸುವವರ ಪಟ್ಟಿಯಲ್ಲಿ ಸ್ವಿಟ್ಜರ್ಲ್ಯಾಂಡ್ ಮುಂಚೂಣಿಯಲ್ಲಿದ್ದು ಸುಮಾರು ಇನ್ನೂರೈವತ್ತಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಹೊಂದಿದೆ.  ವಿಶ್ವದ ದುಬಾರಿ ಕೈಗಡಿಯಾರಗಳನ್ನು ತಯಾರಿಸುವಲ್ಲಿ ಸಹಾ ಸ್ವಿಸ್ ಹೆಸರು ಸದಾ ಮುಂದು.  ದುಬಾರಿ ವಾಚುಗಳನ್ನು ತಯಾರಿಸುವ ಸಂಸ್ಥೆಗಳಲ್ಲಿ ವ್ಯಾಕೆರಾನ್ ಕಾನ್ಸ್ಟಾಟಿನ್, ಪಾಟೆಕ್ ಫಿಲಿಪ್, ಆಡೆಮಾರ್ಸ್ ಪಿಗ್ವೆಟ್, ಜಿರಾರ್ಡ್ ಪೆರ್ರೆಗಾಕ್ಸ್, ಒಮೆಗಾ ಮೊದಲಾದವು ತಯಾರಿಸುವ ವಾಚುಗಳ ಪ್ರಾರಂಭಿಕ ಬೆಲೆಯೇ ಸುಮಾರು ೨ ಲಕ್ಷ ಡಾಲರ್ (ಸುಮಾರು ಎಂಭತ್ತು ಲಕ್ಷ ರೂಪಾಯಿಗಳು).

 ಪರಸ್ಪರ ಪೈಪೋಟಿಯಲ್ಲಿ ಒಂದಕ್ಕಿಂತ ಒಂದು ದುಬಾರಿ ಕೈಗಡಿಯಾರಗಳನ್ನು ತಯಾರಿಸುವ ಈ ಸಂಸ್ಥೆಗಳು ಆಗಾಗ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ.  ಸಂಗ್ರಹಕಾರರು ಮತ್ತು ವಿಶ್ವದ ಅತಿಗಣ್ಯ ಹಾಗೂ ಅತಿಶ್ರೀಮಂತ ವ್ಯಕ್ತಿಗಳನ್ನೇ ಗುರಿಯಾಗಿಟ್ಟುಕೊಂಡು ತಯಾರಿಸಲಾಗುವ ಈ ಕೈಗಡಿಯಾರಗಳನ್ನು ಬೆರಳೆಣಿಕೆಯಷ್ಟು ಸಂಖ್ಯೆಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. ಅಪರೂಪದ ವೈಶಿಷ್ಟ್ಯತೆಗಳನ್ನು ಹೊಂದಿರುವ ಇವು ವಿಶ್ವದಲ್ಲಿಯೇ ಅತ್ಯಂತ ಅನುರೂಪವಾಗಿ ತಮ್ಮ ಬೆಲೆ ಹಲವು ಪಟ್ಟು ಹೆಚ್ಚಿಸಿಕೊಳ್ಳುತ್ತವೆ.

 ಇಂದಿನ ದಿನ ವ್ಯಾಕೆರಾನ್ ಕಾನ್ಸ್ಟಾಟಿನ್ ಸಂಸ್ಥೆ ತನ್ನ ೨೫೦ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಸ್ತುತಪಡಿಸಿದ 'ದ ಟೂರ್ ಡೆ ಲಿಲ್ಲಿ' ಎಂಬ ಹೆಸರಿನ ಕೈಗಡಿಯಾರವೇ ವಿಶ್ವದ ಅತ್ಯಂತ ದುಬಾರಿ ಕೈಗಡಿಯಾರವಾಗಿದೆ.
     

ಈ ಕೈಗಡಿಯಾರದಲ್ಲಿ ೮೩೪ ಬಿಡಿಭಾಗಗಳಿದ್ದು ೧೬ ವಿಭಿನ್ನ ವಿಷಯಗಳನ್ನು ಸೂಚಿಸುತ್ತದೆ.  ಟೂರ್ಬಲ್ಲಾನ್ ಎಂಬ ವಿಶೇಷ ತಂತ್ರಜ್ಞಾನ ಹೊಂದಿರುವ ಈ ಕೈಗಡಿಯಾರದಲ್ಲಿ ಗಂಟೆ ಹೊಡೆಯುವ, ಚಂದ್ರನ ಚಲನೆ ಸೂಚಿಸುವ, ಸೂರ್ಯೋದಯ ಹಾಗೂ ಸೂರ್ಯಾಸ್ತ ಸಮಯ ಸೂಚಿಸುವ, ನಿರಂತರ ಕ್ಯಾಲೆಂಡರ್, ಸಕ್ಷಮ ನಕ್ಷತ್ರ ಪಟ ಹಾಗೂ ಇನ್ನಿತರ ಅಪರೂಪದ ವೈಶಿಷ್ಟ್ಯಗಳಿವೆ.  ಇದುವರೆಗೆ ಈ ವಿನ್ಯಾಸದ ಕೇವಲ ಏಳು ವಾಚುಗಳನ್ನು ತಯಾರಿಸಲಾಗಿದ್ದು ಪ್ರತಿ ಕೈಗಡಿಯಾರದ ಬೆಲೆ ಕೇವಲ ೧.೫ ಮಿಲಿಯನ್ ಡಾಲರ್ (ಸುಮಾರು ಆರು ಮುಕ್ಕಾಲು ಕೋಟಿ ರೂಪಾಯಿ) ಬೆಲೆ ಪ್ರಕಟಿಸಲಾಗಿದೆ. ಅದೂ ಅಲ್ಲದೆ ಈ ಬೆಲೆ ಸಂಸ್ಥೆಯ ೨೫೦ನೆಯ ವಾರ್ಷಿಕೋತ್ಸವದ ಅಂಗವಾಗಿ ಚೌಕಾಶಿ ಬೆಲೆ ಎಂದೂ ಸಂಸ್ಥೆ ಹೇಳಿಕೊಂಡಿದೆ. ನಿಖರ ಬೆಲೆ ತಿಳಿಯಬೇಕಿದ್ದರೆ (http://tromboni.twoday.net/stories/4520138/)  ಅಂತರ್ಜಾಲ ತಾಣಕ್ಕೆ ಹೋಗಿ ಧೃಢಪಡಿಸಿಕೊಳ್ಳಬಹುದಾಗಿದೆ.

 ದುಬಾರಿ ಕೈಗಡಿಯಾರಗಳನ್ನು ತಯಾರಿಸುವ ಇನ್ನೊಂದು ಸಂಸ್ಥೆಯಾದ ಜೀನ್ ಡ್ಯುನಾಂಡ್ ವಜ್ರಖಚಿತ ಕೈಗಡಿಯಾರಗಳನ್ನು 'ಗ್ರಾಂಡೆ ಕಾಂಪ್ಲಿಕೇಶನ್' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದ್ದು ಸುಮಾರು ೭ ಲಕ್ಷದಿಂದ ೮ ಲಕ್ಷ ಡಾಲರು ಬೆಲೆ ಬಾಳುತ್ತವೆ. ಈ ವರ್ಗದಲ್ಲಿ ಅದು ಇದುವರೆಗೆ ಕೇವಲ ಆರು ಕೈಗಡಿಯಾರಗಳನ್ನು ತಯಾರಿಸಿದೆ.  ಮೂರು ಕೈಗಡಿಯಾರಗಳು ೧೮-ಕ್ಯಾರೆಟ್ ರೋಸ್ ಗೋಲ್ಡ್, ಎರೆಡು ಕೈಗಡಿಯಾರಗಳು ೧೮-ಕ್ಯಾರೆಟ್ ವೈಟ್ ಗೋಲ್ಡ್ ಹಾಗೂ ಒಂದು ಕೈಗಡಿಯಾರವನ್ನು ಪ್ಲಾಟಿನಂ ಲೋಹದಿಂದ ತಯಾರಿಸಲಾಗಿದೆ.  ಈ ಕೈಗಡಿಯಾರಗಳಲ್ಲಿ ಸೆಕೆಂಡಿನ (ಕ್ಷಣದ) ಒಂದು ಭಾಗವನ್ನೂ ಪಡೆಯಬಹುದಾದ ಅತ್ಯಂತ ಕ್ಲಿಷ್ಟ ಸ್ಪ್ಲಿಟ್ ಸೆಕೆಂಡ್ ಕ್ರೋನೋಗ್ರಾಫ್, ಸ್ಪ್ಲಿಟ್ ಸೆಕೆಂಡ್ ಹ್ಯಾಂಡ್ ಐಸೋಲೇಟರ್, ಮೊನೋ ಪುಶರ್, ಮಿನಟ್ ರಿಪೀಟರ್, ಬೈ-ರೆಟ್ರೋಗ್ರೇಡ್, ಟೂರ್ಬಿಲಾನ್, ನಿರಂತರ ಕ್ಯಾಲೆಂಡರ್ ಗಳಂತಹ ವೈಶಿಷ್ಟ್ಯಗಳಿವೆ  ಹಾಗೂ ಇದರ ವಿನ್ಯಾಸಗಾರ ಕ್ರಿಸ್ಟೋಫರ್ ಕ್ಲಾರೆಟ್ ಅವರ ಸಹಿಯಿರುವ ಸಫೈರ್ ಗಾಜಿನ ಪಾರದರ್ಶಕ ಹಿಂಬದಿಯ ಮುಚ್ಚಳವೂ ಇದೆ.

 ಇನ್ನೊಂದು ಪ್ರಮುಖ ತಯಾರಕ ಸಂಸ್ಥೆಯಾದ ಜಾಕೋಬ್ ಅಂಡ್ ಕಂಪನಿ ಪ್ರಸ್ತುತಪಡಿಸಿದ ವಜ್ರಖಚಿತ ಕೈಗಡಿಯಾರ ೧.೧ ಮಿಲಿಯನ್ ಡಾಲರ್ (ಸುಮಾರು ನಾಲ್ಕು ಮುಕ್ಕಾಲು ಕೋಟಿ ರೂಪಾಯಿಗಳು) ಬೆಲೆಬಾಳುತ್ತವೆ. ರಾಯಲ್ ಬಾಗ್ವೆಟ್ ಎಂಬ ಹೆಸರಿನಲ್ಲಿ ಪ್ರಸ್ತುತಪಡಿಸಲಾಗಿರುವ ಈ ಕೈಗಡಿಯಾರದಲ್ಲಿ ಐದು ವಿವಿಧ ಪ್ರಾಂತಗಳ ಸಮಯವನ್ನು ಏಕಕಾಲದಲ್ಲಿ ಸೂಚಿಸುವಂತೆ ರಚಿಸಲಾಗಿದ್ದು ಇತರ ವೈಶಿಷ್ಟ್ಯಗಳಿಗಿಂತ ರತ್ನಖಚಿತತೆಗೆ ಪ್ರಾಮುಖ್ಯತೆ ನೀಡಲಾಗಿದೆ. ೧೮-ಕ್ಯಾರೆಟ್ ವೈಟ್ ಗೋಲ್ಡ್ ಲೋಹದಿಂದ ತಯಾರಿಸಲ್ಪಟ್ಟ ಈ ಕೈಗಡಿಯಾರದ ಡಯಲ್ ಭಾಗದಲ್ಲಿ ೩೨೯ ಬಾಗ್ವೆಟ್ ವಜ್ರಗಳನ್ನು ಹಾಗೂ ಐದು ತಿರುಗಣೆಗಳ ಮೇಲೆ ಐದು ರೋಸ್ ಕಟ್ ವಜ್ರಗಳನ್ನು ಅಳವಡಿಸಲಾಗಿದೆ. ಕೈಗಡಿಯಾರದ ಪಟ್ಟಿಯಲ್ಲಿ ೨೨೪ ಬಾಗ್ವೆಟ್ ವಜ್ರಗಳನ್ನು ಅಳವಡಿಸಲಾಗಿದೆ.


ಇದೇ ಸಂಸ್ಥೆ ಪ್ರಸ್ತುತಪಡಿಸಿರುವ ಕ್ವೆಂಟಿನ್ ಎಂಬ ಹೆಸರಿನ ಇನ್ನೊಂದು ವಿಧದ ಕೈಗಡಿಯಾರ ಒಮ್ಮೆ ಚಾಲನೆ ನೀಡಿದರೆ ಸತತ ೩೧ ದಿನಗಳವರೆಗೆ (೭೪೪ ಘಂಟೆಗಳು)ನಡೆಯಬಲ್ಲದ್ದಾಗಿದ್ದು ಏಳು ವಿಶೇಷ ಬ್ಯಾರೆಲ್ ಗಳಲ್ಲಿ ಊರ್ಜಿತ ಶಕ್ತಿಯನ್ನು ಸಂಗ್ರಹಿಸುತ್ತದೆ. ಇದರಲ್ಲಿ ಸಮಯವನ್ನು ಸಾಂಪ್ರಾದಾಯಿಕ ಮುಳ್ಳುಗಳಲ್ಲಿ ಪ್ರಸ್ತುತಪಡಿಸದೇ ನಮ್ಮಲ್ಲಿ ಹಳೆಯ ಪೆಟ್ರೋಲ್ ಬಂಕ್ ಗಳಲ್ಲಿ ಬಳಸುತ್ತಿದ್ದ ರಿವಾಲ್ವಿಂಗ್ ಕೌಂಟರುಗಳನ್ನು ಹೋಲುವ ವರ್ಟಿಕಲ್ ರೋಲ್‌ಗಳ ಮೂಲಕ ಸಮಯ ನೋಡಿಕೊಳ್ಳಬೇಕಾಗುತ್ತದೆ.  ಈ ಕೈಗಡಿಯಾರದ ಬೆಲೆ ಹೆಚ್ಚೇನಿಲ್ಲ ಬಿಡಿ, ಕೇವಲ ಒಂದೂ ಮುಕ್ಕಾಲು ಕೋಟಿ ರೂಪಾಯಿಗಳು ಅಷ್ಟೇ. ರೋಸ್ ಗೋಲ್ಡ್ ಲೋಹದಿಂದ ತಯಾರಿಸಿದ ಕೇವಲ ಹದಿನೆಂಟು  ಕೈಗಡಿಯಾರಗಳಲ್ಲಿ ಎರೆಡು ಈಗಾಗಲೇ ಮಾರಾಟವಾಗಿದೆ. 

 ಇವರಲ್ಲದೇ ಇತರ ಪ್ರಮುಖ ಸಂಸ್ಥೆಗಳಾದ ಯೂಲಿಸ್ಸೆ ನಾರ್ಡೈನ್, ಕೋರಮ್, ಒಮೆಗಾ, ಗ್ರಾಹಕನ ಬೇಡಿಕೆಗನುಗುಣವಾಗಿ ಕೈಗಡಿಯಾರ ತಯಾರಿಸಿ ಕೊಡುವ ಡಿಸೈನರ್ ಸಂಸ್ಥೆಗಳಾದ ಮೊಂಟೆಗಾ, ಟ್ಯಾಗ್ ಹ್ಯೂಯೆರ್, ಚಾನೆಲ್ ಇತ್ಯಾದಿ ಸಂಸ್ತೆಗಳು ಪ್ರಸ್ತುತಪಡಿಸುವ ಕೈಗಡಿಯಾರಗಳು  ಐವತ್ತು ಸಾವಿರ ರೂಪಾಯಿಯಿಂದ ಎರೆಡೂವರೆ ಕೋಟಿ ರೂಪಾಯಿಗಳವರೆಗೂ ಬೆಲೆಬಾಳುತ್ತವೆ.

 ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಕೈಗಡಿಯಾರಗಳ ಪ್ರತಿ ಬಿಡಿಭಾಗವನ್ನೂ ಪ್ರತ್ಯೇಕವಾಗಿ ತಯಾರಿಸಲಾಗಿದ್ದು ಒಂದು ಕೂದಲಳತೆಯ ನ್ಯೂನ್ಯತೆಯೂ ಇರದಂತೆ ನೋಡಿಕೊಳ್ಳಲಾಗುತ್ತದೆ.  ಅತಿಶ್ರೀಮಂತ ಕೈಗಡಿಯಾರ ಸಂಗ್ರಹಕಾರ ಹಾಗೂ ಇವನ್ನು ಖರೀದಿಸುವ ತಾಕತ್ತಿರುವ ರಾಜಮನೆತನ ಅಥವಾ ಹಾಲಿವುಡ್ ನಟರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸುವ ಈ ಕೈಗಡಿಯಾರಗಳ ಪ್ರಚಾರಕ್ಕೂ ಅವರನ್ನೇ ಬಳಸಲಾಗುತ್ತದೆ.

 ಇತರ ಪ್ರಖ್ಯಾತ ಸಂಸ್ಥೆಗಳಾದ ಫಿಲಿಪ್ ಪೆರ್ಸಿಯೋ, ಟಿಸಾಟ್, ಸೀಕೋ, ಜಾಕ್ವೆಟ್ ಡ್ರೋಝರ್, ರಾಡೋ, ಬ್ಲೇಡ್, ಅಪ್ಪೆಲ್ಲಾ ಜಿನೇವ್, ಕಾರ್ಟಿಯರ್, ಪರ್ಮಿಜಿಯಾನಿ, ಪೆರೆಲೆಟ್, ವರೋಟ್ಟಿ, ಟ್ಯಾಗ್ ಹ್ಯೂಯೆರ್, ಡಿ ಅಂಡ್ ಜಿ, ಮೌರೀಸ್ ಎಂ. ಲಾಕ್ರೋಯಿಕ್ಸ್, ಕ್ರೋನೋಸ್ವಿಸ್, ರೋಜರ್ ಡೂಬಿಸ್, ಪಾರ್ಶೆ ಮೊದಲಾದ ಸಂಸ್ಥೆಗಳು ಪ್ರಸ್ತುತಪಡಿಸುವ ಕೈಗಡಿಯಾರಗಳು ಹೆಚ್ಚಾಗಿ ಅಮೂಲ್ಯ ರತ್ನ ಹಾಗೂ ವಜ್ರಗಳನ್ನೊಳಗೊಂಡಿದ್ದು ಸುಮಾರು ಹತ್ತು ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿಗಳವರೆಗೆ ಬೆಲೆಬಾಳುತ್ತವೆ. ಪಾರ್ಶೆ ಪ್ರಸ್ತುತಪಡಿಸಿದ ಸ್ಪೋರ್ಟ್ಸ್ ಮಾದರಿಯ ಪಾರ್ಶೆ ವರ್ಲ್ಡ್ ಟೈಮರ್ ಕೈಗಡಿಯಾರ ವಿಶ್ವದ ಅತ್ಯಂತ ದುಬಾರಿ ಸ್ಪೋರ್ಟ್ಸ್ ಕೈಗಡಿಯಾರವಾಗಿದ್ದು ಸುಮಾರು ಐವತ್ತು ಲಕ್ಷ ರೂಪಾಯಿಗಳ ಬೆಲೆ ಹೊಂದಿದೆ. ರೋಲೆಕ್ಸ್, ವಲ್ಕೈನ್, ಯೂ-ಬೋಟ್, ವಿಲ್ಲೆಮಾಂಟ್, ಕೋಲ್ಬರ್ ಜಿನೀವ್ ಇತ್ಯಾದಿ ಸಂಸ್ಥೆಗಳು ಕೈಗಡಿಯಾರದ ನಿಖರತೆಗೆ ಒತ್ತುಕೊಟ್ಟು ಯಾವುದೇ ರತ್ನ, ವಜ್ರ ಹಾಗೂ ದುಬಾರಿ ಲೋಹಗಳ ಪ್ರಭಾವ ಬಳಸದೇ ಅತ್ಯಂತ ನಿಖರ ಹಾಗೂ ವಿನ್ಯಾಸ ಹೊಂದಿರುವ ಕೈಗಡಿಯಾರಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತವೆ. ಈ ಕೈಗಡಿಯಾರಗಳನ್ನು ನೋಡಿದರೆ ಸಾಮಾನ್ಯ ಕೈಗಡಿಯಾರಗಳಿಗಿಂತ ಹೆಚ್ಚು ಭಿನ್ನವಾಗಿಯೇನೂ ಕಾಣುವುದಿಲ್ಲ.   ಜನಪ್ರಿಯ ಕೈಗಡಿಯಾರಗಳಾದ ಸೀಕೋ, ಆಕ್ಯುರೇಟ್, ಸೆಕ್ಯುಲಸ್, ಎವರ್ ಸ್ವಿಸ್, ಸ್ಯಾಂಸಂಗ್, ಟೈಟಾನ್, ಇತ್ಯಾದಿಗಳು ಮಧ್ಯಮವರ್ಗದ ಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತಪಡಿಸುವ ಕೈಗಡಿಯಾರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸುವುದರಿಂದ ಪ್ರತಿ ಕೈಗಡಿಯಾರದ ಬೆಲೆ ಸಾಮಾನ್ಯರೂ ಭರಿಸುವಂತಿದೆ. ಹಾಗಾಗಿ ಇವುಗಳು ಉತ್ತಮ ಗುಣಮಟ್ಟ ಕಾಯ್ದುಕೊಂಡು ಜನಪ್ರಿಯತೆ ಪಡೆದಿವೆ.

 ಡಿಜಿಟಲ್ ವಾಚುಗಳಲ್ಲಿ ಕ್ಯಾಸಿಯೋ ಸಿಂಹಪಾಲು ಹೊಂದಿದ್ದರೂ ದುಬಾರಿ ವಾಚುಗಳನ್ನು ಪ್ರಸ್ತುತಪಡಿಸುವಲ್ಲಿ ಸಧ್ಯಕ್ಕೆ ನಾರ್ವೆ ದೇಶದ ಸ್ಯೂನ್‌ಟೋ (Suunto) ಮುಂಚೂಣಿಯಲ್ಲಿದೆ. ಸುಮಾರು ಐವತ್ತು ವರ್ಷ ಇತಿಹಾಸವಿರುವ ಈ ಸಂಸ್ಥೆ ಹೊಸತಾಗಿ ಪ್ರಸ್ತುತಪಡಿಸಿದ ಸ್ಯೂನ್‌ಟೋ ಡಿ-೬ ಎಂಬ ಕಂಪ್ಯೂಟರ್ ಆಧಾರಿತ ಕೈಗಡಿಯಾರ ಹಲವಾರು ಲಕ್ಷಣಗಳನ್ನು ಹೊಂದಿದ್ದು ಎಲೆಕ್ಟ್ರಾನಿಕ್ ದಿಕ್ಸೂಚಿ ಅದರಲ್ಲೊಂದು. ಸ್ಯೂನ್‌ಟೋ ಎಕ್ಸ್-೯-ಐ ಎಂಬ ಹೆಸರಿನ ಮಿಲಿಟರಿ ಕೈಗಡಿಯಾರ ಬ್ಯಾರೋಮೀಟರ್, ಅಲ್ಟಿಟ್ಯೂಡ್ ಅಲಾರಾಮ್, ಜಿಪಿ‌ಎಸ್ ನ್ಯಾವಿಗೇಶನ್ ಸಿಸ್ಟಮ್ ಇತ್ಯಾದಿ ಇತ್ಯಾದಿ ಒಬ್ಬ ಮಿಲಿಟರಿ ಅಧಿಕಾರಿಗೆ ಅಗತ್ಯವಾದ ಎಲ್ಲಾ ಲಕ್ಷಣಗಳನ್ನು ಹೊಂದಿದೆ.  ಬೆಲೆಯನ್ನು ಅರಿಯಬೇಕಾದರೆ  suuntosports.com ತಾಣಕ್ಕೆ ಭೇಟಿಕೊಡಬಹುದು.


ಪ್ರತಿವರ್ಷ ಇಂತಹ ವಿಶೇಷ ಕೈಗಡಿಯಾರಗಳಿಗೆಂದೇ ಮೀಸಲಾದ ಪ್ರದರ್ಶನವೊಂದನ್ನು ಸ್ವಿಟ್ಜರ್ಲ್ಯಾಂಡ್ ಆಯೋಜಿಸಿಸುತ್ತಿದೆ.  ಬಾಸೆಲ್ ವರ್ಲ್ಡ್ ಶೋ ಎಂಬ ಈ ಪ್ರದರ್ಶನದ ೩೭ನೇ ಮಹೋತ್ಸವ ಕಳೆದ ಏಪ್ರಿಲ್ ೧೨ ರಿಂದ ೧೯ರ ವರೆಗೆ  ನಡೆದು ಸುಮಾರು ೧ ಲಕ್ಷ ಸಂದರ್ಶಕರು ಭೇಟಿ ನೀಡಿದ್ದರು. ಕೈಗಡಿಯಾರ ಹಾಗೂ ಆಭರಣಗಳ ಪ್ರದರ್ಶನದಲ್ಲಿ ಬಾಸೆಲ್ ವರ್ಲ್ಡ್ ಶೋ ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾಗಿದೆ. ಈ ವರ್ಷ ಏಪ್ರಿಲ್ ೩ ರಿಂದ ೧೦ರ ವರೆಗೆ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಜರುಗಿದೆ. ಸುಮಾರು ೨ ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ತಮ್ಮ ಹೊಸ ಹಾಗೂ ವಿಶೇಷ ಉತ್ಪನ್ನಗಳನ್ನು ಪ್ರದರ್ಶಿಸಿವೆ.

 ನಾಳೆ ಇನ್ನಾವುದೋ ಸಂಸ್ಥೆ ಇನ್ನೈದು ವಜ್ರಗಳನ್ನು ಹೆಚ್ಚಿಸಿ ಹತ್ತು ಕೋಟಿ ರೂಪಾಯಿಯ ಕೈಗಡಿಯಾರವನ್ನು ಹೊರತಂದರೂ ಆಶ್ಚರ್ಯವಿಲ್ಲ.

Syndicate

Syndicate content