ಆಗಸದ ಅಂಚಿನಲ್ಲಿ ಕನ್ನಡ ಪದಗಳ ಲಹರಿ ಹರಿಸಲೇಬೇಕು
bengaluru airport logo.jpg

                                          -ಸುನಿಲ್ ಮಲ್ಲೇನಹಳ್ಳಿ

ಸ್ನೇಹಿತರೇ, ಇನ್ನು ಬೆರೆಳೆಣಿಕೆಯ ದಿನಗಳಲ್ಲಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂಬುದು ನಮಗೆ ತಿಳಿದಿರುವ ವಿಚಾರ. ಅದರಂತೆ ಮುಂದಿನ ದಿನಗಳಲ್ಲಿ ನಮ್ಮ ಈ ವಿಮಾನ ನಿಲ್ದಾಣದಿಂದ ನಾನಾ ದೇಶಗಳ ನಾನಾ ನಗರಗಳಿಗೆ ದಿನನಿತ್ಯ ಒಂದರ ಹಿಂದೆ ಒಂದರಂತೆ ವಿಮಾನಗಳು ಹಾರಾಡುತ್ತಲೇ ಇರುತ್ತವೆ. ಇದು ಕನ್ನಡಿಗರಿಗಂತೂ ಸಂತಸ ತರುವ ವಿಷಯವೇನೋ ಸರಿ. ಆದರೆ ದಿನನಿತ್ಯ ಹಾರಾಡುವ ಈ ವಿಮಾನಗಳಲ್ಲಿ ಕನ್ನಡದವರ ಆಚಾರ-ವಿಚಾರಗಳಿಗೆ, ಕನ್ನಡ ಬಾಷೆಗೆ ಯಾವ ರೀತಿಯ ಸ್ಥಾನಮಾನ ಕೊಟ್ಟು ಗೌರವಿಸುತ್ತಾರೆಂಬುದು ನಮ್ಮ ಎದುರಿಗಿರುವ ಬೆಲೆ ಕಟ್ಟಲಾರದ ಪ್ರಶ್ನೆ! “ಗಿಡವಾಗಿ ಬಗ್ಗದ್ದು  -  ಮರವಾಗಿ ಬಗ್ಗೀತೇ”ಎನ್ನುವಂತೆ ಈ ಆರಂಭದ ದಿನಗಳಲ್ಲೇ ಕೆಲವೊಂದು ನಿರ್ಣಯದ ವಿಚಾರಗಳನ್ನು BIAL(ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ) ಆಡಳಿತ ಮಂಡಳಿಯವರೊಂದಿಗೆ ಹಾಗೂ ವಿಮಾನಗಳ ಸಂಸ್ಥೆಗಳೊಂದಿಗೆ (ಉದಾ: ಏರ್ ಇಂಡಿಯಾ, ಬ್ರಿಟಿಷ್ ಏರವೇಸ್, ಸಿಂಗಾಪೂರ್ ಏರಲೈನ್ಸ್, ಇತ್ಯಾದಿ) ನೀತಿ ನಿಯಮಗಳ ಚೌಕಟ್ಟಿನಲ್ಲಿ ಕುಳಿತು ಪ್ರಸ್ತಾವನೆಯನ್ನು ನಾವುಗಳು ಮಾಡಲೇಬೇಕಿದೆ, ಆಗಸದಂಚಿನಲ್ಲಿ ಕನ್ನಡ ಪದಗಳ ಲಹರಿ ಹರಿಸಲೇಬೇಕಿದೆ.


ನಮಗೆ ತಿಳಿದ ಹಾಗೆ ಚೆನ್ನೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರುವ ಬಹುತೇಕ ವಿಮಾನಗಳಲ್ಲಿ ತಮಿಳು ಸಿನಿಮಾಗಳನ್ನು ಹಾಕುವುದು ಸರ್ವೇಸಾಮಾನ್ಯದ ಸಂಗತಿ. ಈಗ ನಮ್ಮ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರುವ ವಿಮಾನಗಳಲ್ಲಿ ಕರುನಾಡಿನ ಕಲೆ, ಸಾಹಿತ್ಯ, ಆಚಾರ ವಿಚಾರಗಳನ್ನು ಹಾಗೂ ಕನ್ನಡದ ಸಿನಿಮಾಗಳನ್ನು ಮನಃಪೂರ್ವಕವಾಗಿ ಒಪ್ಪಿ ಹಾಕುತ್ತಾರೋ ಇಲ್ಲವೋ ಅದು ಅವರಿಗೆ ಬಿಟ್ಟ ವಿಚಾರ. ಆದರೆ ಹಾಕುವಂತೆ ನ್ಯಾಯ ಸಮ್ಮತವಾದ ಒತ್ತಡ ತರುವುದು ನಮಗೆ ಬಿಟ್ಟ ವಿಚಾರ. ಗೆಳೆಯರೇ, ಈಗ ಮೈ ಮರೆತು ಅನಂತರ ಕನ್ನಡಕ್ಕೆ ಹೀಗಾಗೋಯಿತು..ಹಾಗಾಗೋಯಿತು ಎಂದು ಪರಿತಾಪಿಸುವುದರಲ್ಲಿ ಎಳ್ಳಷ್ಟೂ ಅರ್ಥವಿರುವುದಿಲ್ಲ. ಅದಕ್ಕೇ ಎಲ್ಲರೂ ಚರ್ಚೆಮಾಡಿ ಕನ್ನಡ ಭಾಷೆಗೆ ಬೆಲೆತರುವ ಒಂದು ನಿರ್ಧಾರವನ್ನು ಕೈಗೊಳ್ಳೋಣ.
ಯಾರಿಗೊತ್ತು? ಎಲ್ಲಾ ನಾವು ಅಂದುಕೊಂಡಂತಾದರೆ ಮುಂದೊಂದು ದಿನ ಅಮೇರಿಕೆಯ ಯಾವುದೋ ಒಂದು ನಗರದ ಪುಟ್‌ಪಾತ್‌ನಲ್ಲಿ ಅಥವಾ ಇನ್ಯಾವುದೋ ದೇಶದ ಇನ್ಯಾವುದೋ ಒಂದು ನಗರದ ಪುಟ್‌ಪಾತ್‌ನಲ್ಲಿ ನೀವು ನೆಡೆದು ಹೋಗುತ್ತಿರುವಾಗ ಅಲ್ಲಿಯವನೊಬ್ಬ ನಿಮ್ಮ ಎದುರಿಗೆ ಬಂದು, ನೀವು ಬೇಂಗಳೂರಿನವರೇ? ನಿಮಗೆ Golden Man (ಬಂಗಾರದ ಮನುಷ್ಯ) ರಾಜ್‌ಕುಮಾರವರು ಗೊತ್ತಾ? ಕುವೆಂಪುರವರ ಓ ನನ್ನ ಚೇತನ..ಆಗು ನೀ ಅನೀಕೆತನ ಎನ್ನುವ ಕವನದ ಸಾರಾಂಶವನ್ನು ಇಂಗ್ಲಿಷಿನಲ್ಲಿ ತಿಳಿಸುತ್ತಿರಾ? ಅನಿಸುತಿದೆ ಯಾಕೋ ಇಂದು..ನೀನೇನೆ ನನ್ನವಳೆಂದು..ಈ ಹಾಡನ್ನು ಹಾಡಲು ಬರುತ್ತಾ? ಎಂದು ನಿಮ್ಮನ್ನು ಪ್ರಶ್ನಿಸಿದರೂ ಪ್ರಶ್ನಿಸಬಹುದು! ಆಗ ನಿಮ್ಮ ಕಣ್ಣಂಚಲ್ಲಿ ಮನೆಮಾಡುವ ಆನಂದ ಭಾಷ್ಪಕ್ಕೆ ಮಿಲಿಯನ್ ಡಾಲರ್ ಕೂಡ ಸಮವಾದೀತೇ?

      ಇನ್ನು ವಿಮಾನಗಳಲ್ಲಿ ಊಟೋಪಚಾರಕ್ಕೆ ಸಂಬಂಧಿಸಿದಂತೆ, ನಮ್ಮ ಕರ್ನಾಟಕದ ಊಟಗಳೆಂದು ಪ್ರಸಿದ್ಧಿ ಪಡೆದಿರುವ ಮುದ್ದೆ, ಸೊಪ್ಪಿನ ಸಾರು, ಜೋಳದ ರೊಟ್ಟಿ ಹಾಗೂ ನಾನಾ ವಿಧದ ಪಲ್ಯ..ಇತ್ಯಾದಿಗಳ ಊಟ ಸಿಗುವ ಹಾಗೆ ಮತ್ತು ವಿವಿಧ ರೀತಿಯ ತಿಂಡಿ, ತಿನಿಸುಗಳನ್ನು ಮೆನುವಿನಲ್ಲಿ (Menu) ಕನ್ನಡದಲ್ಲಿ ಮುದ್ರಿಸುವಂತೆ ವಿಮಾನಗಳ ಸಂಸ್ಥೆಯವರಿಗೆ (ಉದಾ: ಏರ್ ಇಂಡಿಯಾ, ಬ್ರಿಟಿಷ್ ಏರವೇಸ್, ಸಿಂಗಾಪೂರ್ ಏರಲೈನ್ಸ್, ಇತ್ಯಾದಿ)ಮನದಟ್ಟು ಮಾಡಿಕೊಡಬೇಕು.
    

     ಗಗನ ಸಖಿಯೊಬ್ಬಳು ನಿಮ್ಮ ಬಳಿಬಂದು, ಸಾರ್ ನಿಮಗೆ ಕುಡಿಯುವುದಕ್ಕೆ ಲಿಂಬೆಹಣ್ಣಿನ ಪಾನಕ ಬೇಕೋ..? ಅಥವಾ ಮಸಾಲ ಮಜ್ಜಿಗೆ ಬೇಕೋ..? ಹಾಗೂ ಊಟಕ್ಕೆ ಸೊಪ್ಪಿನ ಸಾರು ಮುದ್ದೆ ಬೇಕೋ..? ಅಥವಾ ಜೋಳದ ರೊಟ್ಟಿ ಎಣ್ಣೆಗಾಯಿ ಪಲ್ಯ ಬೇಕೋ..? ಎಂದೂ ಅಚ್ಚಕನ್ನಡ ಭಾಷೆಯಲ್ಲಿ ಆಕೆ ನಿಮ್ಮನ್ನು ಕೇಳಿದಾಗ, ನಿಮ್ಮ ಮನದಲ್ಲಿ ಉದಯಿಸುವ ಮುಗಿಲೆತ್ತರದ ಸಂತಸದ ಅಲೆಗಳಿಗೆ ಅಣ್ಣೆಕಟ್ಟು ಕಟ್ಟಲಾದಿತೇ..? ಎಲ್ಲಾ ಕನ್ನಡಮಯವಾಗಿದ್ದರೆ ಎಷ್ಟು ಸೊಗಸು ಅಲ್ಲವೇ?

ಗೆಳೆಯರೇ, ನಾ ಇವರೆಗೂ ಹೇಳಿದ್ದು ಕನಸಿನ ವಿಚಾರವೆಂದು ತಿಳಿಯದಿರಿ, ಏಕೆಂದರೆ ನಾವು ಕನ್ನಡಿಗರು ಐದು ಕೋಟಿ ಜನರಿದ್ದೇವೆ. ಬದಲಾವಣೆ ತರಲೇಬೇಕೆಂದು ಒಂದು ಅತಿಸಣ್ಣ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ. ಈಗಾಲೇ ಸಿದ್ಧರಾಗಿ ಜನ್ಮಭೂಮಿಗೆ..ಮಾತೃ ಭಾಷೆಗೆ ಅಲ್ಪವಾದರೂ ಒಳಿತು ಮಾಡೋಣ. ಜೈ ಕರ್ನಾಟಕ ಮಾತೆ..ಜೈ ಕನ್ನಡಿಗರ ದಾತೆ

ಸಮಯೋಚಿತ

ಸಮಯೋಚಿತ ಲೇಖನ. ಈ ಲೇಖನದೊ೦ದಿಗೆ ಸಹಿ-ಸ೦ಗ್ರಹಣೆಯನ್ನೂ ಮಾಡಿ ಸ೦ಬ೦ಧ ಪಟ್ಟ ಅಧಿಕಾರಿಗಳಿಗೆ ಕಳುಹಿಸಿದಲ್ಲಿ, ಆರ೦ಭದಲ್ಲೆ ಈ ಸಲಹೆಗಳನ್ನು ಅಳವಡಿಸಿಕೊಳ್ಳಬಹುದು. ಮುದ್ದೆ-ಸೊಪ್ಪಿನ ಸಾರು ಸಿಗದಿದ್ದರೂ ಮಸಾಲೆದೋಸೆ, ಇಡ್ಲಿ-ವಡೆಯಾದರೂ ಸಿಗಬಹುದೇನೋ.ಸದಭಿರುಚಿಯ ಕನ್ನಡ ಸಿನಿಮಾಗಳು ಹಾಗೂ ಹಾಡುಗಳು ಸಿಕ್ಕಿದಲ್ಲಿ, ಬೆ೦ಗಳೂರಿನಿ೦ದ ಪ್ರಯಾಣಿಸುವವರ ಸ೦ಖ್ಯೆಯೂ ಜಾಸ್ತಿಯಾಗಬಹುದು.

ಮೃಣಾಲಿನಿ ಉದಯ ಕುಮಾರ್

Syndicate

Syndicate content