-ಶ್ರೀನಾಥ್ ಭಲ್ಲೆ
ದ್ವಾಪರ ಯುಗದ ಹಲವರಿಗೆ ಸ್ವರ್ಗಲೋಕದಲ್ಲಿದ್ದು ಬಹಳ ಬೋರಾಯಿತು. ದಿನವೂ ಅದೇ ಮುಖಗಳು. ಭೂಲೋಕದಲ್ಲಿ ಪಾಪ ಹೆಚ್ಚಾಗಿರೋದ್ರಿಂದ ಸ್ವರ್ಗಲೋಕದಲ್ಲಿ ಹೊಸ ಮುಖಗಳೇ ಕಾಣಿಸಿಕೊಳ್ಳುತ್ತಿಲ್ಲ. ನರಕಲೋಕದ ಕಾಲ್ ಸೆಂಟರ್’ಗಳು ಇತ್ತೀಚೆಗೆ ತಮಗೆ ವಿಪರೀತ ಕೆಲಸವಾಗಿದೆ ಅಂತ ಗೊಣಗುತ್ತಿದ್ದಾರೆ. ಪ್ರತಿ ಸಾವಿಗೂ ಇವರಿಗೆ ಫೋನ್ ಬರುತ್ತೆ. ಈಚೆಗಂತೂ ಮಿಯಾಮ್ನಾರ್, ಚೈನಾ, ಜೈಪುರ್’ಗಳಲ್ಲಿ ಆದ ದುರಂತದಿಂದ ಇವರಿಗೆ ದಿನಕ್ಕೆ ಇಪ್ಪತ್ತುನಾಲ್ಕು ಘಂಟೆ ಕೆಲಸ. ಹೊಸದಾಗಿ ಬಂದ ಎಂಟ್ರಿಗಳನ್ನು ವಿಚಾರಣೆ ಆಗುವ ತನಕ ಇರಿಸಿಕೊಳ್ಳಲು ವಿಶಾಲವಾದ ಜಾಗ ಬೇಕು ಎಂದು ಯಮಧರ್ಮ ಅರ್ಜಿ ಸಲ್ಲಿಸಿ ಬಹಳ ದಿನವಾಯಿತು. ಇನ್ನೂ ಪೇಪರ್ ಮುಂದಕ್ಕೆ ಹೋಗುತ್ತಿಲ್ಲ.
ವಿಚಾರಣೆ ನೆಡೆಸಿ ಸ್ವರ್ಗವೋ ನರಕವೋ ಅಂತ ಸೀಟು ಅಲಾಟ್ ಆಗೋವರೆಗೂ ಅವರುಗಳು ಅಲ್ಲಿ ಕಾಯಬೇಕು. ಒಂದು ರೀತಿ ಗ್ರೀನ್ ಕಾರ್ಡ್ ಪಡೆಯೋದಕ್ಕೆ ಇರೋ waiting period ತರಹ. Approve ಆದರೆ ಸ್ವರ್ಗ, Reject ಆದರೆ ನರಕ. ಅಪ್ಪಿ ತಪ್ಪಿ ಸ್ವರ್ಗಲೋಕಕ್ಕೆ ಹೋಗುವವರು ಅಂತ ಗ್ಯಾರಂಟಿ ಇದ್ದಲ್ಲಿ ದೇವಾನುದೇವತೆಗಳ ಸ್ಪೆಶಲ್ ರೆಕಮೆಂಡೇಷನ್ ಇಂದ ಸ್ವಲ್ಪ ಬೇಗ ಮುಂದುವರೆಯಬಹುದು. ಸ್ವರ್ಗಲೋಕದಲ್ಲಿ ಹೊಸ ಮುಖಗಳು ಕಾಣದಿರುವುದಕ್ಕೆ ಇದೂ ಒಂದು ಕಾರಣ.
ಹೀಗಾಗಿ ಸ್ವರ್ಗಲೋಕದಲ್ಲಿನ ಕೆಲವರಿಗೆ ಭೂಲೋಕ ಸುತ್ತಿ ಬರುವ ಆಸೆಯಾಯಿತು. ಮೂರೂ ಲೋಕಕ್ಕೂ ವೀಸಾ ಇಲ್ಲದೆ ಎಂಟ್ರಿ ಮಾಡಬಹುದಾದ ನಾರದ ಮಹರ್ಷಿಗಳು ಒಮ್ಮೆ ಹಾಗೇ ಹಾದುಹೋಗುತ್ತಿದ್ದಾಗ ಲಬಕ್ಕನೆ ಹಿಡಿದುಕೊಂಡರು. ನಾರದರಿಗೆ ವಿಧಿ ಇರಲಿಲ್ಲ. ವಿಷ್ಣುವಿನ ಬಳಿ ಇವರ ಬೇಡಿಕೆಯನ್ನು ತೆಗೆದುಕೊಂಡು ಹೋದರು. ವಿಷ್ಣುವಿಗೂ ಬೇರೆ ದಾರಿ ಇರಲಿಲ್ಲ. Employee Retention ಮುಖ್ಯ ಎಂದು ಅನ್ನಿಸಿ 'Appreciation Day' ಎಂದು ಘೋಷಿಸಿ ಯಾರು ಬೇಕಾದರೂ ಒಂದು ದಿನದ ಮಟ್ಟಿಗೆ ನಾರದರ ಜೊತೆ ಹೋಗಿಬರಬಹುದು ಎಂದು ಕ್ಷೀಣವಾಗಿ ಅಶರೀರವಾಣಿ ನುಡಿಸಿದ. ಸಿಗ್ನಲ್ ಕ್ಯಾಚ್ ಆಗದ ಕಿವಿಗಳಿಗೆ ಅದು ತಲುಪಲಿಲ್ಲ. ವಿಷಯ ತಿಳಿದುಕೊಂಡವರು ಮತ್ತು ಮಾಡಲಿಕ್ಕೆ ಬೇರೆ ಕೆಲಸವಿಲ್ಲದೇ ಇರುವವರು ನಾರದರ ಹಿಂದೆ ಹೊರಟರು.
ಅವರುಗಳಲ್ಲಿ ಕೆಲವರ ಅನುಭವ ಹೀಗಿದೆ:
ವಿವೇಕಿ ವಿದುರ: "ಒಂದು ಯುಗ ಕಳೆದು ಬಂದರೂ ಈ ಜಾತಿಯ ಪೀಡೆ ಇನ್ನೂ ತೊಲಗಿಲ್ಲವೇ? "
ಸದಾ ಗೊಣಗುವ ಧೃತರಾಷ್ಟ್ರ: "ನಾರದ, ಸುಮ್ಮನೆ ನನ್ನ ಸಮಯ ವ್ಯರ್ಥ ಮಾಡಿದೆ ನೀನು. ಕಣ್ಣಿನ ವೈದ್ಯ ಮೋದಿ ನಮ್ಮಲ್ಲೇ ಬಂದಿದ್ದಾರಂತೆ. ಇಂದ್ರನಿಗೆ ಮೈಯೆಲ್ಲ ಕಣ್ಣು. ನನಗೊಂದೆರಡು ಈ ಕಡೆ ತಳ್ಳು ಅಂತ ಕೇಳಿಕೊಂಡು ಮೋದಿಯವರ ಕೈಯಲ್ಲಿ ಆಪರೇಶನ್ ಮಾಡಿಸಿಕೊಂಡು ಆಮೇಲೆ ಇಲ್ಲಿ ಬರಬಹುದಿತ್ತು"
ಯಮನಿಗೇ ಮೋಸ ಮಾಡಿ ಸ್ವರ್ಗ ಸೇರಿದ ಶಕುನಿ: "ನನ್ನವರು ಯಾರೂ ಇಲ್ಲ ಅಂತ ಮಾಡಿದ್ದೆ. ವಿಧಾನಸೌಧ ತುಂಬ ನನ್ನ ನೆಂಟರೇ ತುಂಬಿಕೊಂಡಿದ್ದಾರೆ. ಅವರನ್ನೆಲ್ಲ ನೋಡಿ ನನ್ನ ಕಣ್ಣು, ಹೃದಯ ತುಂಬಿ ಬಂತು. ಗೌಡ್ರ ಹತ್ತಿರ ಮಾತನಾಡಿ ನಿಮಗೊಂದು ಚಿನ್ನದ ತಂಬೂರಿ ಕೊಡಿಸ್ತೀನಿ ನಾರದರೇ...."
ಗಾಂಧಾರಿ: "ನಿಮ್ಮ ನಂಬಿ ಬಂದದ್ದಕ್ಕೆ ಸರಿಯಾದ ಶಾಸ್ತಿಯಾಯ್ತು. ಹಣೆ ಮೇಲಿರೋ ಪಟ್ಟಿ ಜಾರಿ ಕೆಳಗೆ ಬಂದಿದೆ, ಈಕೆ ಫೂಲನ್ ದೇವಿ ಕಡೆಯವಳು ಅಂತ ಹೇಳಿ ಜೈಲಿಗೆ ಹಾಕಿದ್ದಾರೆ ಈ ಖಾಕಿ ಬಟ್ಟೆಯವರು. ಈ ಫೂಲನ್ ದೇವಿ ಯಾರು ನಾರದರೇ?"
ದುಶ್ಯಾಸನ: "ಈ ಮಹಾತ್ಮಾ ಗಾಂಧೀ ರೋಡ್’ನಲ್ಲಿರೋ ಸೀರೇ ಅಂಗಡಿ ನೋಡಿದ ಮೇಲೆ ಅರ್ಥ ಆಯಿತು. ದ್ರೌಪದಿಗೆ ಕೊಡ್ಲಿಕ್ಕೆ ಕೃಷ್ಣನಿಗೆ ಎಲ್ಲಿಂದ ಸೀರೆ ಬಂತು ಅಂತ "
ಭೀಷ್ಮ: "ನನ್ನ ಪಾಡಿಗೆ ನಾನು ಬಾಣದ ಮಂಚದ ಮೇಲೆ ಮಲಗಿದ್ದೆ. ಈ ನಾರದರು ನನ್ನ ನಿದ್ದೆ ಕೆಡಿಸಿ ಇಲ್ಲಿಗೆ ಕರೆದು ತಂದರು. ಇಲ್ಲೋ, ನನ್ನ ಕಂಡ ಕೂಡಲೇ, ನಮ್ಮ ಹಾಸಿಗೆ ತೊಗೊಳ್ಳಿ ನಮ್ಮ ಹಾಸಿಗೆ ತೊಗೊಳ್ಳಿ ಅಂತ ಒಂದೇ ಸಮನೆ ಈ ಸೇಲ್ಸ್ ಮ್ಯಾನ್’ಗಳು ಕಾಡಿಸ್ತಾ ಇದ್ದಾರೆ"
ತನ್ನ ಹಿಂದೆಯೆ ಬರುತ್ತಿದ್ದ ನಾಯಿಯನ್ನು ತೋರಿಸಿ ಧರ್ಮರಾಯ ನುಡಿದ "ನಾರದರೇ, ಅಂದು ನಾನು ಸ್ವರ್ಗಕ್ಕೆ ಹೋದಾಗಲೂ ನನ್ನ ಹಿಂದೆ ಒಂದು ನಾಯಿ ಹಿಂಬಾಲಿಸಿತ್ತು... ನೋಡಿ ಈಗಲೂ ಒಂದು ನಾಯಿ ನನ್ನ ಹಿಂದೆಯೇ ಬರುತ್ತಿದೆ" ಎಂದು. ನಾರದರು ಇಂತೆಂದರು "ಧರ್ಮರಾಯ, ಅದೊಂದು ಕಂತ್ರಿ ನಾಯಿ ಅಷ್ಟೇ! ನೀನೇನಾದ್ರೂ ಬಿಸ್ಕೇಟ್ ಎಸೆಯುತ್ತೀಯೇನೋ ಅಂತ ನಿನ್ನ ಹಿಂದೆ ಬರುತ್ತಿದೆ. ಏನೂ ಇಲ್ಲ ಅಂತ ಒಮ್ಮೆ ಹೇಳಿನೋಡು, ಆಮೇಲೆ ಈ ನಾಯಿಯೇನು ಬೆಂಗಳೂರಿನಲ್ಲಿ ಯಾರೂ ನಿನ್ನನ್ನು ಮೂಸಿ ನೋಡುವುದಿಲ್ಲ" ಎಂದು ಸತ್ಯವನ್ನು ಬಿಚ್ಚಿಟ್ಟರು.
ದ್ರೋಣ: "ಎಲ್ರೂ ಕಂಪ್ಯೂಟರನ್ನೇ ಹೆಚ್ಚಾಗಿ ಬಳಸೋದ್ರಿಂದ ನಾನು ಆನ್-ಲೈನಿನಲ್ಲೇ ಬಿಲ್ಲುಗಾರಿಕೆ ಹೇಳಿಕೊಡೋದು ಉತ್ತಮ ಅನ್ನಿಸುತ್ತೆ. ವ್ಯಾಸರ ಕೈಯಲ್ಲಿ ಡಿಸೈನ್ ಮಾಡಿಸಿ ಗಣಪತಿಯ ಕೈಯಲ್ಲಿ ಕೋಡ್ ಬರೆಸಬೇಕು." {ಶ್ರೀಘ್ರದಲ್ಲೇ ನಿರೀಕ್ಷಿಸಿ www.dronaonline.com}
ದುರ್ಯೋಧನ: "ನಾರದರೇ, ನನಗೆ ಸೀಟಿನ ಮೇಲೆ ಆಸೆ, ಪಾಂಡವರಿಗೆ ರಾಜ್ಯ ಕೊಡ್ತೀನಿ ಅಂತ ಹೇಳಿ ಮೋಸ ಮಾಡಿದೆ, ನಾನು ಯಾರಿಗೂ ಆದರ್ಶ ಆಗಲಿಲ್ಲ ಅಂತೆಲ್ಲಾ ಅಂದುಕೊಂಡಿದ್ದೆ. ಇಲ್ಲಿ ನೋಡ್ರೀ, ನನ್ನ followerಉ. ಹೆಸರು ಕುಮಾರಣ್ಣ ಅಂತೆ. ಅವರಪ್ಪನೂ ನಮ್ಮಪ್ಪನಂತೇ ಆಡ್ತಾನಂತೇ? ಮಗ ರಾಜ್ಯಭಾರ ಮಾಡೋದನ್ನ ನಾ ನೋಡಬೇಕೂ, ಅದೇ ನನ್ನ ಕಡೇ ಆಸೇ ಅಂತಾ?"
ಭೀಮ: "ಸೈಜಿನಲ್ಲಿ ನಾನೇ ಭಾರಿ ಅಂತಿದ್ದೆ. ತಿನ್ನೋದ್ರಲ್ಲಿ ನನ್ನೆ ಬಿಟ್ರೆ ಇಲ್ಲ ಅಂದುಕೊಂಡಿದ್ದೆ. ಈ ಅರಮನೆಯಲ್ಲಿ, ಬಿಳೀ ಬಟ್ಟೆ ತೊಟ್ಟಿರೋ ಎಷ್ಟೋ ಜನ ನನಗಿಂತ ಜೋರಾಗಿ ಇದ್ದಾರೆ. ಅದೇನೋ ಲಂಚ ತಿಂತಾರಂತೆ. ನಾನು ಯಾವತ್ತೂ ಅದನ್ನು ನನ್ನ ಅಡಿಗೆ ಮನೆಯಲ್ಲಿ ಮಾಡೇ ಇಲ್ಲ. ಹೇಗೆ ಮಾಡೋದು ಅಂತ ರೆಸಿಪಿ ತಿಳಿದುಕೊಳ್ಳಬೇಕು.
ವೀರಾಧಿವೀರ ಅರ್ಜುನ ಅಂದು ಕುರುಕ್ಷೇತ್ರ ಯುದ್ದದಲ್ಲಿ ರಣರಂಗಕ್ಕೆ ಬಂದು ನಿಂತು ಸುಮ್ಮನೆ ಹೆದೆಯೇರಿಸಿದ್ದ ಗಾಂಡೀವವನ್ನು ಮೀಟಿದ್ದ. ಅದರಿಂದ ಹೊರಹೊಮ್ಮಿದ್ದ ಶಬ್ದಕ್ಕೆ ಇಡೀ ರಣರಂಗವೇ ನಿಶಬ್ದವಾಗಿತ್ತು. ಇಂದು ಅದೇ ಅರ್ಜುನ "ನಾರದರೇ, ನಾನು ಇಲ್ಲಿ ಬಂದಿದ್ದೇನೆ ಎಂದು ತಿಳಿಸಲು ಗಾಂಡೀವಕ್ಕೆ ದಾರ ಬಿಗಿದು ಒಮ್ಮೆ ಎಳೆದ. ಶಬ್ದಕ್ಕೆ ಯಾರು ತಿರುಗಲಿಲ್ಲ, ಛೇ!" ನಾರದ "ಈ ಟ್ರಾಫಿಕ್ ಶಬ್ದದಲ್ಲಿ ನೀನು ಏನೇ ಸೌಂಡ್ ಎಫೆಕ್ಟ್ ಕೊಟ್ರೂ ಯಾರಿಗೂ ಕೇಳಿಸುವುದಿಲ್ಲ, ಸುಮ್ಮನೆ ಎನರ್ಜಿ ವೇಸ್ಟ್ ಮಾಡಿಕೊಳ್ಳಬೇಡ".
ಸುಧಾರಿಸಿಕೊಂಡ ಅರ್ಜುನ ಮತ್ತೆ ಪ್ರಶ್ನೆ ಮಾಡಿದ ’ಅದಿರಲೀ ನಮ್ಮ ಜೊತೆ ಕೃಷ್ಣನನ್ನು ಏಕೆ ಕರೆದು ತರಲಿಲ್ಲ ?". ನಾರದರು ನುಡಿದರು "ಈವರೆಗೆ ಮೂರು ಬಾರಿ ಕರೆದುಕೊಂಡು ಬಂದಿದ್ದೇನೆ. ಏನಪ್ಪ ಮಜಾ ಅಂದರೆ ಮೂರು ಬಾರಿಯೂ ಈ ಮಾನವರ ಕೈಗೆ ಸಿಕ್ಕಿ ಮೋಸ ಹೋಗಿದ್ದಾನೆ. ಒಮ್ಮೆ ಕೃಷ್ಣನ ಗೆಟಪ್’ನಲ್ಲೇ ಕೊಳಲು, ಹಸು, ಕರು ಜೊತೆ ಬಂದಿದ್ದ. ಈ ದೇಶದ ರಾಜಧಾನಿಯಲ್ಲಿದ್ದ ಇಂದಿರಮ್ಮ ಅವನ ಹಸು-ಕರು ಕಿತ್ತುಕೊಂಡು ತಮ್ಮ ಪಕ್ಷದ ಲಾಂಛನ ಮಾಡಿಕೊಂಡರು. ಇನ್ನೊಮ್ಮೆ ಮಹಾವಿಷ್ಣುವಿನ ಗೆಟಪ್’ನಲ್ಲಿ ಬಂದ. ಗಗನಚುಂಬಿ ಕಟ್ಟಡಗಳನ್ನು ನೋಡುತ್ತ ನಿಂತಿದ್ದಾಗ ಯಾವುದೋ ಒಂದು ಪಕ್ಷದವರು ಹೂವ ಕಿತ್ತುಕೊಂಡರೆ ಮತ್ತೊಬ್ಬರು ಕೈಯನ್ನೇ ಕಿತ್ತುಕೊಂಡರು. ಬ್ರಹ್ಮ ಅದನ್ನು ರಿಪೇರಿ ಮಾಡಿ ಕೈಯಲ್ಲೊಂದು ಕಮಲ ಕೊಟ್ಟ ಅಂತ ಇಟ್ಟುಕೋ. ಇತ್ತೀಚೆಗೆ ಇನ್ನೊಮ್ಮೆ ಬಂದಾಗ ಸೊಂಟದ ಮೇಲೆ ಕೈಟ್ಟುಕೊಂಡು ಮೇಲೇನೋ ನೋಡುತ್ತಿದ್ದ ಮನಮೋಹನಸಿಂಗ್ ಎಂಬ ಆಳುವ ದೊರೆಯನ್ನು ಕಂಡು ಮಹೇಶ್ವರ ಎಂದು ಭ್ರಮಿಸಿ ನಮಸ್ಕಾರ ಮಾಡಿದ. ಸದ್ಯಕ್ಕಂತೂ ಇನ್ನೂಮೆ ವಿಸಿಟ್ ಮಾಡುವುದು ನನಗೇನೋ ಅನುಮಾನ."
ಪಕ ಪಕ ನಕ್ಕ ರಾಮಣ್ಣಿಯನ್ನು ತಿವಿದು ಎಬ್ಬಿಸಿದಳು ವಿಶಾಲೂ. ಹಳ್ಳೀ ಬಸ್ಸಿನ ಗಮಟು ವಾಸನೆ ಮಧ್ಯೆ ಅದೇನೋ ಸ್ವರ್ಗ ಅಂತ ಇದ್ದೀರಲ್ಲ ? ಮತ್ತೆ ಅದೇನು ಲಂಚ, ರೆಸಿಪಿ ? ನಾನು ಮೊದಲೇ ಹೇಳಿದೆ, ನೆತ್ತಿಗೇ ಬಿಸಿಲು ಬಿದ್ರೆ ನಿಮಗೆ ಆಗಲ್ಲ ಅಂತ ಕೇಳಿದ್ರಾ ? ಬಿಸಿಲಲ್ಲೇ ಹೊರಟ್ವಿ......
ಇನ್ನೂ ಏನೇನೋ ಹೇಳ್ತಿದ್ಲು ಪಾಪ.... ನನಗಿನ್ನೂ ಭಾರತ ಪ್ರವಾಸ ಮಾಡಿದ ಮಹಾಭಾರತೀಯರ ನೆನಪಿನಲ್ಲೇ ಇದ್ದೆ .....









ಮತ್ತೊಮ್ಮೆ
ಮತ್ತೊಮ್ಮೆ ಉತ್ತಮ ಹಾಸ್ಯಲೇಖನವನ್ನು ಬರೆದು ನಮ್ಮನ್ನು ನಕ್ಕು ಹಗುರಾಗುವ೦ತೆ ಮಾಡಿದ ಶ್ರೀನಾಥ್ ಭಲ್ಲೆಯವರಿಗೆ ಥ್ಯಾ೦ಕ್ಸ್.
ಮೃಣಾಲಿನಿ ಉದಯ ಕುಮಾರ್