ವಾಸ್ತವತೆ.....
 •    •  
ಗುರು ಬಬ್ಬಿಗದ್ದೆ

                                         -ಗುರು ಬಬ್ಬಿಗದ್ದೆ


ಹೊತ್ತು ಮೂಡುವ ಮೊದಲೇ ಹೊತ್ತಿ ಉರಿಯಿತು ಬೆಂಕಿ
ಹಚ್ಚ ಹಸುರಿನ ಹಸುಳೆ ಬಾಳದಾರಿಯ ಕನಸು
ಹಚ್ಚನೆಯ ಕೆಸರಿನಲಿ ನುಚ್ಚು ನೂರಾಯಿತು ೧

ನಿತ್ಯ ಬರುವ ಗಾಳಿ ಎತ್ತಿ ತಂದಿತು ಉರಿಯ
ನಗುವ ಮರೆಸುತ ಮನದಿ ವಿಷ ತುಂಬಿತು
ಜಾತಿ-ಜಾತಿಯ ನಡುವೆ ದ್ವೇಷಾಸೂಯೆಯ ಬೆಂಕಿ
ಜಾತ್ಯಾತೀತತೆ ನಮ್ಮ ಕನಸಾಯಿತು ೨

ಕಣ್ಣ ಬೆಳಗುವ ಬೆಳಕು ಕಣ್ಣನ್ನೇ ಕೊರೆದಿತ್ತು
ಹಣ್ಣ ಕೊಯ್ಯುವ ಕತ್ತಿ ಕತ್ತು ಕೊಯ್ದಿತ್ತು
ನಾ ಮೇಲು ನೀ ಮೇಲು ಎಂಬ ಒಣ ಭಾವನೆಯು
ಬಟ್ಟ ಬಯಲಲಿ ಬಿಟ್ಟ ಕರುವಾಯಿತು ೩

ಎಚ್ಚೆತ್ತ ಎಚ್ಚರಿಕೆ ಅಚ್ಚಳಿಯದೇ ಉಳಿದು
ಬಿತ್ತುತ್ತ ಪ್ರೇಮವನು ದ್ವೇಷವನು ತೊರೆದು‌
ಒಟ್ಟಿನಲಿ ಒಂದಾಗಿ ಬೆಚ್ಚನೆ ಹೊದಿಕೆಯ ಹೊದ್ದು
ಹೊತ್ತು ಇಳಿಯುವ ಮೊದಲೇ ಬೆಂಕಿ ಆರಿಸಿ ಜಗದಿ ೪

ಹತ್ತಾರು ಹಸುಳೆಗಳ ಭವ್ಯ ದೇಶದ ಕನಸು
ಹೊತ್ತಿ ಬೆಳಗಲಿ ಮನದಿ ನಮಗೂ ವಯಸಾಯಿತು ೫

Syndicate

Syndicate content