-ಇರ್ಶಾದ್ ಮೂಡಬಿದ್ರಿ, ದುಬೈ
ನಾನು ಮೂಡಬಿದ್ರಿಯ ಡಿ.ಜೆ (ದಿಗಂಬರ ಜೈನ್) ಒಂದು ವರುಷ ಮಾತ್ರ ಕಲಿತರೂ ಅಲ್ಲಿಯ ನೆನಪುಗಳು ಸದಾ ಹಸಿರು. ಆ ಶಾಲೆಗೆ ಇದೀಗ (೨೦೦೮) ನೂರು ವರ್ಷಗಳ ಸಂಭ್ರಮ. ಇವತ್ತು ಈ ಶಾಲೆ ತೊರೆದು ಇಪ್ಪತ್ತೈದು ವರ್ಷಗಳು ಕಳೆದರೂ ಆ ಬಾಲ್ಯ, ಆ ದಿನಗಳು ನೆನಪಾಗಿ ಕಾಡುತ್ತವೆ.
ನಾನು ದುಬೈಯಿಂದ ಊರಿಗೆ ಹೋದಾಗ ಸಂಬಂಧಿಕರ, ಸ್ನೇಹಿತರ ಮನೆಗಳಿಗೆ ಮಾತ್ರವಲ್ಲದೇ ಕಲಿತ ಶಾಲಾ ಕಾಲೇಜುಗಳಿಗೂ ಭೇಟಿ ನೀಡುವ ಪರಿಪಾಠ ಇಟ್ಟುಕೊಂಡಿದ್ದೇನೆ. ಎರೆಡು ವರ್ಷಗಳ ಹಿಂದೆ ಇದೇ ಡಿ.ಜೆ ಶಾಲೆಗೆ ಹೋದಾಗ ಅಲ್ಲಿ ಮರುದಿನ ಜರುಗಲಿರುವ ಒಂದು ವಸ್ತುಪ್ರದರ್ಶನಕ್ಕೆ ತಯಾರಿ ನಡೆದಿತ್ತು. ನನ್ನ ಗಣಿತದ ಮೇಷ್ಟರಾಗಿದ್ದ ಹರಿವರ್ಮ ಮತ್ತು ಹಿಂದಿ ಟೀಚರ್ ಸುಮತಿ ಅಲ್ಲಿದ್ದರು. ಉಳಿದವರು ಹೊಸಬರಾಗಿದ್ದು ನನಗೆ ಅಪರಿಚಿತರಾಗಿದ್ದರು. ನಾನು ಅವರೊಂದಿಗೆ ಒಂದಿಷ್ಟು ಸಮಯ ಕಳೆದು ಹಳೆಯ ನೆನಪುಗಳನ್ನು ಮತ್ತೆ ಬಿಚ್ಚಿಕೊಂಡೆ. ನನ್ನ ಮೇಲಿನ ವಿಶ್ವಾಸಕ್ಕೆ ಅವರು ಪಕ್ಕದ ಹೋಟೆಲಿನಿಂದ ಕಾಫಿ ತಿಂಡಿ ತರಿಸಿ ಉಪಚರಿಸಿದರು. ಏಕವಚನ ಬಿಟ್ಟು ಬಹುವಚನದಲ್ಲಿಯೇ "ನೀವು ದೂರದಲ್ಲಿದ್ದೂ ಪತ್ರಿಕೆಗಳಲ್ಲಿ, ನಿಮ್ಮ ಲೇಖನಗಳು ಪ್ರಕಟವಾದಾಗ ನೆನಪು ಮಾಡಿಕೊಳ್ಳುತ್ತೇವೆ" ಎಂದು ತಮ್ಮ ವಿಶ್ವಾಸ ಪ್ರಕಟಿಸಿದ್ದರು. ನಿಮ್ಮ ಆಶೀರ್ವಾದ ಹೀಗೇ ಇರಲಿ ಎಂದು ಅವರಿಗೆ ವಂದಿಸಿ ಹಿಂದಿರುಗಿದ್ದೆ.
ಒಮ್ಮೆ ಜ್ಞಾನಚಂದ್ರ ಮೇಷ್ಟ್ರು ನಮ್ಮ ಸ್ಕೌಟ್ ತಂಡವನ್ನು ಕನ್ಯಾನಕ್ಕೆ ಕರೆದುಕೊಂಡು ಹೋಗಿದ್ದರು. ಆಲಿ ನಾವು ಕಳೆದ ಐದು ದಿನಗಳೂ ನೆನಪಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಜೈನರು ರಾತ್ರಿ ಸೂರ್ಯಾಸ್ತದ ಬಳಿಕ ಊಟ ಮಾಡುವಂತಿರದ ಕಾರಣ ಸೂರ್ಯಾಸ್ತದ ಮೊದಲೇ ಊಟವಾಗಿ ನಮಗೆ ಪೀಕಲಾಟಕ್ಕಿಟ್ಟುಕೊಳ್ಳುತ್ತಿತ್ತು. ಅಭ್ಯಾಸವಿಲ್ಲದ ನಮಗೆ ರಾತ್ರಿಯಾಗುತ್ತಲೂ ಮತ್ತೆ ಹೊಟ್ಟೆ ತಾಳಹಾಕತೊಡಗುತ್ತಿತ್ತು. ಸ್ಕೌಟಿನ ಇತರ ಮನರಂಜನಾ ಕಾರ್ಯಕ್ರಮಗಳು ಮುಗಿಯುವ ಹೊತ್ತಿಗೆ ರಾತ್ರಿ ಹತ್ತು ಘಂಟೆಯಾಗುತ್ತಿತ್ತು. ಅಲ್ಲಿಯವರೆಗೆ ಒಡಲಲ್ಲಿ ಸುಪ್ತವಾಗಿದ್ದ ಹಸಿವು ಬಳಿಕ ಭುಗಿಲ್ಲೇಳುತ್ತಿತ್ತು. ಸುಮಾರು ಹದಿನಾಲ್ಕು ತಂಡಗಳೊಂದಿಗೆ ಸೆಣಸಾಡಿ ಹಲವು ಪ್ರಶಸ್ತಿಗಳನ್ನು ಗೆದ್ದು ತಂದಿದ್ದೆವು. ಮೋಜಿನ ಸಂಗತಿಯೆಂದರೆ ಹಿಂತಿರುಗುವ ಹೊತ್ತಿನಲ್ಲಿ ನಮ್ಮ ಹಣ ಸರಿಸುಮಾರು ಖರ್ಚಾಗಿ ಬಸ್ಸಿಗೂ ಹಣವಿಲ್ಲದೆ ಸರಕು ಸಾಗಾಣಿಕ ಟೆಂಪೋವೊಂದರಲ್ಲಿ ಸರಕಿಗೆ ಸರಿಯಾಗಿ ತುಂಬಿಕೊಂಡು ಬಂದಿದ್ದೆವು. ಅಂದಿನ ಮಟ್ಟಿಗೆ ಅದೇ ನಮ್ಮ ಲಕ್ಶುರಿ ಬಸ್ಸು. ಆ ಬಾಲ್ಯದ ದಿನಗಳಿಗೆ, ತುಂಟಾಟಕ್ಕೆ, ಉಲ್ಲಾಸಕ್ಕೆ ಆ ನಮ್ಮ ಪ್ರಯಾಣ ನೀಡಿದ ಅನುಭವ ಅನನ್ಯ
ನಮ್ಮ ಶಾಲೆಯ ಮುಂದೆ ಜೈನ ಪದವಿಪೂರ್ವ ಕಾಲೇಜು ಇತ್ತು. ನಾನು ಅಲ್ಲಿ ಪಳಕಳ ಸೀತಾರಾಮಭಟ್ಟರು ಉಪನ್ಯಾಸಕರಾಗಿದ್ದ ವಿಷಯ ಕೇಳಿದ್ದೆ. ನಾನು ಒಂದನೇ ತರಗತಿಯಲ್ಲಿದ್ದಾಗ "ಅಪ್ಪನಿಗೆ ಆಫೀಸ್ ಕೆಲಸ, ಅಮ್ಮನಿಗೆ ಅಡುಗೆ ಕೆಲಸ, ನನಗೆ ಮಾತ್ರ ಶಾಲೆ ಕೆಲಸ ಯಾಕೋ ಗೊತ್ತಿಲ್ಲ" ಎಂಬ ಪದ್ಯ ಬಾಯಿಪಾಠವಾಗಿತ್ತು. ಅವರನ್ನೊಮ್ಮೆ ಭೇಟಿಯಾಗುವ ಆಸೆಯಿದ್ದಿದ್ದರೂ ಹೈಸ್ಕೂಲಿನ ಗುರು, ದೊಡ್ಡ ಕವಿ ಎಂಬ ಅಳುಕು ಕೂಡಾ ಇತ್ತು. ಆದ ಬಿ.ಎಮ್. ಇಚ್ಛಂಗೋಡರು 'ತವನಿಧಿ' ಎಂಬ ಮಾಸಿಕವನ್ನು ಪ್ರಕಟಿಸುತ್ತಿದ್ದರು. ನಾನು ಅದರ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ವಿಜಯಿಯಾಗಿದ್ದೆ. ಪಳಕಳರಂತೆಯೇ ಬರೆಯುವ ಪ್ರಯತ್ನವನ್ನೂ ಮಾಡಿದ್ದೆ. ಫಲಿತಾಂಶವಾಗಿ ರಚಿಸಿದ ಪುಟ್ಟ ಗೀತೆಯನ್ನೇ ಭೇಟಿಯಾಗುವ ಸಂದರ್ಭಕ್ಕೆ ಕಾರಣವನ್ನಾಗಿಸಿ ಅವರನ್ನು ಭೇಟಿಯಾದೆ. ತುಂಬಾ ಮೆಚ್ಚುಗೆ ತೋರಿಸಿದ ಅವರು ಹೀಗೇ ಬರವಣಿಗೆ ಮುಂದುವರೆಸು ಎಂದು ಹರಸಿ ಕೆಲವು ತಿದ್ದುಪಡಿಗಳನ್ನೂ ಮಾಡಿಕೊಟ್ಟರು. ಅವರು ನಾವಂದುಕೊಂಡಿದ್ದಕ್ಕಿಂತಲೂ ತುಂಬಾ ಸರಳ ಎಂದು ಅರಿವಾದಾಗ ಇನ್ನಷ್ಟು ಆಪ್ತರಾದರು. ಮುಂದೆ ಇವರಿಂದ, ಶಾಲೆಯ ಉಳಿದ ಅಧ್ಯಾಪಕರಿಂದ ದೊರೆತ ಪ್ರೋತ್ಸಾಹ, ಬೆಂಬಲ ನನಗೆ ಸಾಹಿತ್ಯದತ್ತ ಆಸಕ್ತಿ ಬೆಳೆಯಲು ಕಾರಣವಾಯಿತು.
ಡಿ.ಜಿ. ಶಾಲೆಯಲ್ಲಿ ನನಗೆ ತುಂಬಾ ಆನಂದ ನೀಡಿದ ಸಂಗತಿಯೆಂದರೆ ನಾಟಕವೊಂದರಲ್ಲಿ ಬ್ರಿಟಿಶ್ ಅರಸನ ಅಭಿನಯ. 'ಸ್ವಾತಂತ್ರ್ಯ ಯೋಧ' ಎಂಬ ಆ ನಾಟಕದಲ್ಲಿ ನಾನು ಖಳನಾಯಕನ ಪಾತ್ರ ವಹಿಸಿದ್ದೆ. "ನಾಯಿ ಕುನ್ನಿಗಳಿಗೆ ಕತ್ತಿ ಕೊಡುತ್ತಾರೆಯೇ" ಎಂಬ ಹತ್ತಾರು ಡೈಲಾಗುಗಳು ಇನ್ನೂ ನನಗೆ ನೆನಪಿವೆ. ಈ ನಾಟಕವನ್ನು ವಾರ್ಷಿಕೋತ್ಸವದಲ್ಲಿ ಹತ್ತಿರದಿಂದ ಕಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎನ್. ದಿವಾಕರ್ ತುಂಬಾ ಪ್ರಶಂಸಿಸಿದ್ದರು.
ಹಾಗೇ ಈ ಶಾಲೆಯಲ್ಲಿ ಕಾಡಿದ್ದ ದುಃಖಕರ ಘಟನೆಯೂ ಇನ್ನೂ ಹಸಿರಾಗಿದೆ. ಅಂದು ನಾವೆಲ್ಲರೂ ದಸರಾ ರಜಾದಿನಗಳನ್ನು ಕಳೆದು ಶಾಲೆಗೆ ಹಾಜರಾಗಿದ್ದೆವು. ಎಲ್ಲರೂ ಬಂದಿದ್ದರೂ ಮಿತ್ರ ಭಾಸ್ಕರ ಮಾತ್ರ ಬಂದಿರಲಿಲ್ಲ. ಸುಮಾರು ಹತ್ತು ಘಂಟೆಗೆ ಆತನ ತಂದೆ ಬಂದು ಭಾಸ್ಕರ ಹಾವು ಕಚ್ಚಿ ತೀರಿಹೋದ ವಿಷಯ ಗದ್ಗದಿತರಾಗಿ ತಿಳಿಸಿದರು. ಸಂತಾಪಸೂಚಕವಾಗಿ ಅಂದು ಶಾಲೆಗೆ ರಜೆ ಘೋಷಿಸಲಾಯ್ತು. ನಾನಂತೂ ಕೆಲವು ತಾಸು ಶಾಲೆಯಿಂದ ಕದಲಲೇ ಇಲ್ಲ. ಡೆಸ್ಕಿಗೆ ಮುಖವಿಟ್ಟು ಬಿಕ್ಕಿಬಿಕ್ಕಿ ಅತ್ತಿದ್ದೆ.
ಈ ವರ್ಷ ಈ ಶಾಲೆಯ ಶತಮಾನೋತ್ಸವ. ನಾಲ್ಕು ಗೋಡೆಗಳ ಆವರಣದಲ್ಲಿ ಭವಿಷ್ಯದ ಬೆಳಕಿಗೆ ಪಾದಾರ್ಪಣೆಗೊಳಿಸಲು ತಕ್ಕ ಶಿಕ್ಷಣ ನೀಡಿದ ಈ ಶಾಲೆಯ ಜ್ಞಾನದ ದೀಪ ಸದಾ ಬೆಳಗುತ್ತಿರಲಿ, ಅದರ ಕಿರಣಗಳು ಮುಂದಿನ ಪೀಳಿಗೆಗೂ ದಾರಿದೀಪವಾಗಲಿ. ನನ್ನ ಭವಿಷ್ಯ ರೂಪಿಸಿದ ಈ ಶಾಲೆಗೆ ಸಾವಿರ ಸಾವಿರ ನಮನಗಳು.








