-ಶ್ರೀನಾಥ್ ಭಲ್ಲೆ
ಮನುಷ್ಯ ಕ್ರೂರ ಪ್ರಾಣಿ. ತನ್ನ ಸ್ವಾರ್ಥಕ್ಕಾಗಿ ಯಾರನ್ನಾದರೂ ವಂಚಿಸುತ್ತಾನೆ. ತನ್ನ ಮಾತು, ಕ್ರಿಯೆಗಳಿಂದಲೇ ಇನ್ನೊಬ್ಬರನ್ನು ಕೊಲ್ಲುತ್ತಾನೆ. ಕೆಲವೊಮ್ಮೆ ಕೊನೆಗೊಂದು ದಿನ ಕೆಟ್ಟ ಮನಸ್ಸಿಗೆ ಬುದ್ದಿ ಬರಬಹುದು. ಈ ಕವಿತೆಯೊಲ್ಲಬ್ಬ ಕೊನೆಗಾಲದಲ್ಲಿ ತನ್ನ ತಪ್ಪುಗಳನ್ನು ತಾಯಿಯಲ್ಲಿ ನಿವೇದಿಸಿಕೊಂಡು ಕಣ್ಣೀರಿಡುತ್ತಾನೆ. ಆದರೆ ಸಾಂತ್ವನ ನೀಡಲು ಆಕೆ ಇರುವುದಿಲ್ಲ. ತಪ್ಪನ್ನು ನಿವೇದಿಸಿಕೊಂಡ ಸಮಾಧಾನವಷ್ಟೇ ಅವನಲ್ಲಿ ಉಳಿಯುತ್ತದೆ.
ಎನ್ನ ಮನ್ನಿಸು ತಾಯೇ
ಎನ್ನ ಲಾಲಿಸಿ ಪಾಲಿಸಿ ಬೆಳಸಿದ ನಿನ್ನ
ಪಾಲಿಸಿ ಹಣ ನುಂಗು ಹಾಕಿದ ನನ್ನ
ಮನ್ನಿಸು ತಾಯೇ
ಎನ್ನ ಮೇಲೆ ಭರವಸೆಗಳ ಮನೆ ಕಟ್ಟಿಕೊಂಡಿದ್ದ ನಿನ್ನ
ಸ್ವಂತ ಸುಖಕ್ಕೆ ಮನೆ ಕಟ್ಟಿಕೊಂಡು ದೂರ ಹೋದ ನನ್ನ
ಮನ್ನಿಸು ತಾಯೇ
ಮಾತನಾಡಲು ಕಲಿಸಿದ ನಿನ್ನ
ದಿನಕ್ಕೊಮ್ಮೆ ಮಾತನಾಡಿಸದ ನನ್ನ
ಮನ್ನಿಸು ತಾಯೇ
ಎನ್ನ ನಂಬಿ ಗಾಳಿಗೋಪುರ ಕಟ್ಟಿದ ನಿನ್ನ
ಆಸೆಗಳನು ಗಾಳಿಗೆ ತೂರಿದ ನನ್ನ
ಮನ್ನಿಸು ತಾಯೇ
ಎನ್ನ ಮನ್ನಿಸು ತಾಯೇ








